ಅನ್ಯಾಯದ ವಿರುದ್ಧ ರೊಚ್ಚಿಗೇಳಿ

7

ಅನ್ಯಾಯದ ವಿರುದ್ಧ ರೊಚ್ಚಿಗೇಳಿ

Published:
Updated:

ವಿಜಯಪುರ: ಸಮಾಜದ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಧೈರ್ಯವನ್ನು ಮೈಗೂಡಿಸಿಕೊಂಡ ದಿನವೇ ಜನಜಾಗೃತಿ ಎಂಬ ಪದಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಹೇಳಿದರು.ಇಲ್ಲಿನ ಬಿಎಂಎಸ್ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಭಾರತ ಜನಜಾಗೃತಿ ಸೇನೆಯ ರಾಷ್ಟ್ರೀಯ ಜಿಲ್ಲಾ ಪದಾಧಿಕಾರಿಗಳ ಪದವಿ ಸ್ವೀಕಾರ ಹಾಗೂ ನೇತ್ರದಾನ ನೋಂದಣಿಯ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜನತೆ ಮಾನವ ಹಕ್ಕುಗಳ ಬಗ್ಗೆ ಮಾತ್ರವೇ ಜಾಗೃತರಾದರೆ ಸಾಲದು. ಕರ್ತವ್ಯಗಳ ಬಗ್ಗೆಯೂ ಜಾಗೃತರಾಗಬೇಕು. ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟತೆ, ಜಾತಿಭೇದ, ಕೀಳರಿಮೆಯಂತಹ ದುಷ್ಟ ಶಕ್ತಿಗಳನ್ನು ಹೊಡೆದೋಡಿಸಿ ಅನ್ಯಾಯದ ವಿರುದ್ಧ ರೊಚ್ಚಿಗೇಳುವ ಪ್ರವೃತ್ತಿಯನ್ನು, ಹೋರಾಟದ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದಲಿತ ವರ್ಗದ ಎಷ್ಟೋ ಜನರು  ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇದು ನಾವಿನ್ನೂ ಜಾಗೃತರಾಗಿಲ್ಲ ಎನ್ನುವುದರ ಸಂಕೇತ. ಭಾರತೀಯರಿಗೆ ಸಮಯಪ್ರಜ್ಞೆ ಇಲ್ಲದಂತಾಗಿರುವುದರಿಂದಲೇ ಭ್ರಷ್ಟರ ಕೈಯ್ಯಲ್ಲಿ ಆಡಳಿತ ಸೇರಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.ಜನಜಾಗೃತಿ ಸೇನೆ ಕಾರ್ಯಕರ್ತರು ಅಂಬೇಡ್ಕರ್ ಮತ್ತು ಗಾಂಧೀಜಿಯವರ ಬಡವರ ಕಲ್ಯಾಣ ಕಾರ್ಯ ಹಾಗೂ ಹೋರಾಟಗಳನ್ನು ಮನದಟ್ಟು ಮಾಡಿಕೊಂಡು ಸಮಾಜ ಸೇವೆ ಸಲ್ಲಿಸಬೇಕು ಎಂದರು.ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡುವುದರ ಮೂಲಕ ನೇತ್ರದಾನ ನೋಂದಣಿಗೆ ಚಾಲನೆ ನೀಡಿದ ಚಿತ್ರ ನಟ ಮದನ್ ಪಟೇಲ್ ಮಾತನಾಡಿ, ಹುಟ್ಟು ಸಾವಿನ ನಡುವೆ ನಾವು ಮಾಡುವಂತಹ ಜನೋಪಕಾರಿ ಸೇವೆಯೇ ಶಾಶ್ವತ ಎಂದರು.ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಚಿ.ನಾ. ರಾಮು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಕ್ರೂರಿಗಳಾಗಿ ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದರು. ಆದರೆ ಅವರಿಗಿಂತ ಕ್ರೂರಿಗಳಾಗಿ ಇಂದಿನ ನಮ್ಮ ರಾಜಕಾರಣಿಗಳು ನಮ್ಮ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಇಂತಹ ದುರುಳರಿಗೆ ತಕ್ಕ ಪಾಠ ಕಲಿಸಲು ಜನತೆ ಮುಂದಾಗಬೇಕು ಎಂದರು.ನಿವೃತ್ತ ಪೊಲೀಸ್ ಅಧಿಕಾರಿ ಡಾ. ಸುಭಾಷ್ ಭರಣಿ ಮಾತನಾಡಿ, ಯಾವುದೂ ಶಾಶ್ವತವಲ್ಲದ ಈ ಜೀವನದಲ್ಲಿ ನಮ್ಮ ನಂತರವೂ ಉಳಿಯುವುದೆಂದರೆ ಸಮಾಜಕ್ಕೆ ಮಾಡಿದ ಒಳ್ಳೆಯ ಸೇವೆ ಮಾತ್ರ ಎಂದರು.ಜಿ.ಪಂ. ಮಜಿ ಸದಸ್ಯ ಪಿಳ್ಳ ಮುನಿಶಾಮಪ್ಪ, ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಸುಶೀಲಮ್ಮ ಮಾನಾಡಿದರು. ಭಾರತ ಜನಜಾಗೃತಿ ಸೇನೆಯ ಪದಾಧಿಕಾರಿಗಳು ಗಣ್ಯರಿಂದ ಪದಾಧಿಕಾರ ಸ್ವೀಕರಿಸಿದರು.ಸೇನೆಯ ಜಿಲ್ಲಾಧ್ಯಕ್ಷ ಅಶ್ವತ್ಥಪ್ಪ ಸ್ವಾಗತಿಸಿದರು. ಮಹಾತ್ಮಾಂಜನೇಯ ಪ್ರಾರ್ಥಿಸಿದರು. ಕೆ.ಎಚ್.ಚಂದ್ರಶೇಖರ್ ನಿರೂಪಿಸಿದರು. ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಿ. ಮುನಿಯಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಹಾರೋಹಳ್ಳಿಯ ವಿದ್ಯಾಗಣಪತಿ ಯುವಕ ಸಂಘದ ವತಿಯಿಂದ ಡೊಳ್ಳು ಕುಣಿತ , ನಾಯ್ಡು ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮವಿತ್ತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಲ್.ಸಿ. ನಾಗರಾಜು, ಪುರಸಭಾ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ, ಮುಖ್ಯಾಧಿಕಾರಿ ಎಂ.ಆರ್. ಮಂಜುನಾಥ್, ಕಿರುತೆರೆ ಹಾಸ್ಯ ಕಲಾವಿದ ಮುತ್ತುರಾಜ್, ವಿಜಯಪುರ ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ಸತ್ಯಪಾಲ್, ಸಹಾಯಕ ನಿರ್ದೇಶಕ ಕುಮಾರ್, ವಿಸ್ತರಣಾಧಿಕಾರಿ ನಾಗರಾಜ್ ರಾವ್, ಶಿಡ್ಲಘಟ್ಟದ ರೇಷ್ಮೆ ಸಹಾಯಕ ನಿರ್ದೇಶಕ ಶಂಕರಪ್ಪ, ವಿಸ್ತರಣಾಧಿಕಾರಿ ಚಂದ್ರಪ್ಪ, ಎಸ್.ಎಲ್.ಎನ್. ಗೆಳೆಯರ ಬಳಗದ ಅಧ್ಯಕ್ಷ ನರಸಿಂಹಮೂರ್ತಿ,ನಾರಾಯಣ ನೇತ್ರಾಲಯದ ವೈದ್ಯರಾದ ಪ್ರಿಯಾಂಕ ಸೋಲಂಕಿ, ಸೇನೆಯ ರಾಜ್ಯ ಮಹಿಳಾ ಉಪಾಧ್ಯಕ್ಷೆ ಅಕ್ಕಯಮ್ಮ ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry