ಶುಕ್ರವಾರ, ಏಪ್ರಿಲ್ 16, 2021
31 °C

ಅನ್ವೇಷಣೆಯಷ್ಟೇ ಕ್ಲಿಷ್ಟ, ಸಮಾಜ ಸುಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿಯ ಜಟಿಲತೆ ಅತಿ ಭೀಕರ. ಜಾತಿ ವ್ಯವಸ್ಥೆಗೆ ಜೋತು ಬಿದ್ದಾಗಲೇ ಮತೀಯ ಭಾವನೆಗೆ ಅವಕಾಶ. ಶ್ರೇಣೀಕೃತ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ವ್ಯವಸ್ಥೆಯನ್ನು ರೂಪಿಸಿದವರಿಗೆ, ಮೇಲರಿಮೆ ಮತ್ತು ಕೀಳರಿಮೆ ಕಾಡಿರಬಹುದು. ಇಂಥ ಶಕ್ತಿಗಳೇ ವರ್ಣಾಶ್ರಮ ವ್ಯವಸ್ಥೆಯ ಪ್ರತಿಪಾದಕರಾಗಿದ್ದಾರೆ.ದೇಶವನ್ನು ಕಟ್ಟಬೇಕು; ಭಾರತದ ಸಮಗ್ರತೆಯನ್ನು ಕಾಪಾಡಬೇಕೆನ್ನುವ ಭಾವನೆ ಉದಯವಾಗದಿದ್ದುದು ಮುಂದಿನ ಎಲ್ಲ ಕೇಡುಗಳಿಗೆ ಕಾರಣವಾಗಿದೆ. ಅದನ್ನು ಸರಿಪಡಿಸಲೆಂದೇ 12ನೇ ಶತಮಾನದಲ್ಲಿ ಒಂದು ಆಂದೋಲನ. ಕಾಯಕ ಸಂಸ್ಕೃತಿಯ ಆಧಾರದ ಮೇಲೆ ಒಂದು ಸ್ವಾಭಿಮಾನಪೂರ್ಣ ಸಮಾಜದ ಕಲ್ಪನೆ ಮೂಡಿದ್ದು, ಪರಿವರ್ತನೆಗೆ ಪ್ರೇರಣೆ.ಶರಣ ಚಳವಳಿಯ ಶಕ್ತಿಯೇ ಸ್ವಾಭಿಮಾನ. ಆಯ್ದಕ್ಕಿ ಲಕ್ಕಮ್ಮ ತನ್ನ ಗಂಡನನ್ನು ಇಷ್ಟೊಂದು ಅಕ್ಕಿಯನ್ನು ಇಂದೇಕೆ ತಂದೆ ಎಂದು ಪ್ರಶ್ನಿಸುತ್ತಾಳೆ. ತನ್ಮೂಲಕ ಇಲ್ಲಿ ಸತಿಯೇ ಪತಿಗೆ ಮಾರ್ಗದರ್ಶಕ ಮತ್ತು ಗುರು. ಮೋಳಿಗೆ ಮಾರಯ್ಯನ ಪ್ರಕರಣದಲ್ಲಿ ಬಸವಣ್ಣ ಮಾರುವೇಷಧಾರಿಯಾಗಿ, ಅವರ ಮನೆಯಲ್ಲಿ ಹೊನ್ನಿನ ಜಾಳಿಗೆಯನ್ನು ಬಿಟ್ಟು ಬರುತ್ತಾರೆ. ಕಾಯಕಕ್ಕೆ ಹೋಗಿ ಮನೆಗೆ ಬಂದಾಕ್ಷಣವೇ, ಮಾರಯ್ಯ ‘ಮನೆಯಲ್ಲೇನೋ ದುರ್ನಾತ ಬರುತ್ತಿದೆ’ ಎನ್ನುತ್ತಾನೆ. ಕೊಡುವವರಲ್ಲಿ ದುರಹಂಕಾರ ಇರಬಾರದು; ಪಡೆಯುವವರಲ್ಲಿ (ಫಲಾನುಭವಿಗಳು) ದೈನ್ಯತೆ ಇರಬಾರದು. ಅದಕ್ಕೆ ತಕ್ಕನಾಗಿ ಮೋಳಿಗೆ ಮಾರಯ್ಯನವರ ಪ್ರತಿಕ್ರಿಯೆ. ಇದು ಸ್ವಾಭಿಮಾನದ ಸಂಕೇತ.ಅಲ್ಲಮ ಶೂನ್ಯಪೀಠದ ಅಥವಾ ಅನುಭವ ಮಂಟಪದ ಅಧ್ಯಕ್ಷ. ಅಲ್ಲಮ ಮತ್ತು ಅಕ್ಕನಿಗೆ ಮುಖಾಮುಖಿ. ಅಲ್ಲಮನಿಗೆ ತನ್ನ ತಪ್ಪಿನ ಅರಿವಾಗಿ, ಅಕ್ಕನ ನಿಲುವಿಗೆ ನಮೋ ನಮೋ ಅನ್ನುತ್ತಾನೆ.ಪರಿವರ್ತನೆಯ ಪ್ರಭಾವಕ್ಕೆ ಒಳಗಾದವರಲ್ಲಿ ಮಧುವರಸನೂ ಒಬ್ಬ. ಜಾತಿಯ ಅಹಮಿಕೆಯಿಂದ ಹೊರಬರಲು, ಆತ ಇಟ್ಟದ್ದು ನಿಜಕ್ಕೂ ದಿಟ್ಟ ಹೆಜ್ಜೆ.ಈ ದಿಟ್ಟ ಹೆಜ್ಜೆಗೆ ಕಾರಣ ಬಸವಣ್ಣ. ಸಮ ಸಮಾಜದ ನಿರ್ಮಾಣಕ್ಕೆ ಏನೆಲ್ಲ ಹೋರಾಟ. ಸ್ತ್ರೀಪರವಾದ ಧೋರಣೆ; ದಮನಿತ ಸಮುದಾಯಗಳ ಪೋಷಣೆಯು ಬಸವ ಕ್ರಾಂತಿಯ ಮಂತ್ರವಾಗಿತ್ತು. ಶರಣ ಕ್ರಾಂತಿಯನ್ನು ಒಪ್ಪಿಕೊಂಡು, ಮಧುವರಸ, ಮಧುವಯ್ಯನಾದ. ತನ್ಮೂಲಕ ಹೊಸ ಇತಿಹಾಸ ಬರೆಯಲು ಸಿದ್ಧನಾದ. ಪರಿಣಾಮ ಮಧುವಯ್ಯ ತನ್ನ ಮಗಳಾದ ಲಾವಣ್ಯವತಿಯನ್ನು ತಳಮಟ್ಟದಿಂದ ಬಂದರೂ ಮೇಲ್ಮಟ್ಟದ ಬದುಕನ್ನು ನಡೆಸುತ್ತಿದ್ದ ಹರಳಯ್ಯನ ಮಗನಾದ ಶೀಲವಂತನಿಗೆ ಕೊಡಲು ಮುಂದಾದ. ಜಾತಿಯ ಜಟಿಲತೆಯನ್ನು ಸಡಿಲಗೊಳಿಸುವಲ್ಲಿ ಆ ನಿರ್ಧಾರಕ್ಕೆ ಬಂದದ್ದು ಸಾಮಾನ್ಯವೇನಲ್ಲ!ಮಧುವಯ್ಯನವರದು ಒಂದು ಜಾತಿ; ಹರಳಯ್ಯನದು ಬೇರೊಂದು ಜಾತಿ. ಮೂಲತಃ ಇಬ್ಬರೂ ಸ್ವಜಾತಿಯವರಲ್ಲ. ಸಂಪ್ರದಾಯಬದ್ಧ ಸಮಾಜದ ಕಡುಕೋಪಕ್ಕೆ ಒಳಗಾಗುವ ಸಾಧ್ಯತೆ. ಅಲ್ಲಿಯವರೆಗೂ ಬಸವಣ್ಣನವರು ಮತ್ತು ಸಮಕಾಲೀನರು ಎಸಗಿದ ಪರಿವರ್ತನೆಗಳನ್ನು ಸಹಿಸಿಕೊಳ್ಳುತ್ತ ಬಂದಿದ್ದು, ಈ ಮದುವೆಯು ನೆರವೇರಿದ ಹಂತದಲ್ಲಿ, ರಾಜ ಬಿಜ್ಜಳನು ಹರಳಯ್ಯ ಮತ್ತು ಮಧುವಯ್ಯ ಮತ್ತವರ ಮಕ್ಕಳಿಗೆ ಎಳೆಮೂಟೆ (ಆನೆ ಕಾಲಿಗೆ ಕಟ್ಟಿ ಎಳೆಸಿ, ಕಣ್ಣನ್ನು ಕಿತ್ತದ್ದು) ಶಿಕ್ಷೆಯನ್ನು ವಿಧಿಸುತ್ತಾನೆ. ಮುಂದೆ ಶರಣರಿಗೂ ಮೂಲಭೂತವಾದಿಗಳಿಗೂ ಸಂಘರ್ಷವೇರ್ಪಟ್ಟು, ಅರಾಜಕತೆ ಉಂಟಾಗುತ್ತದೆ.

 

ಇದೇ ಸಂದರ್ಭವನ್ನು ಕಾಯುತ್ತಿದ್ದ ಸೋವಿದೇವನು ಗದ್ದುಗೆಯ ಆಸೆಗಾಗಿ ಬಿಜ್ಜಳನನ್ನು ಕೊಲ್ಲಿಸುತ್ತಾನೆ. ಬಸವ ಕ್ರಾಂತಿ ಅಥವಾ ಶರಣ ಕ್ರಾಂತಿಗಿಂತ ಮುನ್ನ ಎಂಥ ವಾತಾವರಣ ಇತ್ತು? ಒಬ್ಬ ದಲಿತ ಯಾವುದೇ ಕಾರಣಕ್ಕೂ ರಾಜಬೀದಿಯಲ್ಲಿ ನಡೆಯುವಂತಿರಲಿಲ್ಲ. ಅವನ ಹೆಜ್ಜೆಯ ಗುರುತು ಮೂಡುವಂತಿರಲಿಲ್ಲ. ಅದಕ್ಕಾಗಿ ಆತ ಸೊಂಟಕ್ಕೆ ಮುಳ್ಳಿನ ಕಂಟಿಯನ್ನು ಕಟ್ಟಿಕೊಂಡು ನಡೆಯಬೇಕಾಗುತ್ತಿತ್ತು. ಅಕಸ್ಮಾತ್ ಬಾಯಲ್ಲಿ ಕೆಮ್ಮು ಕಫ ಬಂದರೆ, ಉಗುಳುವಂತಿರಲಿಲ್ಲ. ತನ್ನ ಕೊರಳಿಗೆ ಮಡಕೆಯೊಂದನ್ನು ಕಟ್ಟಿಕೊಂಡು ಅದರಲ್ಲಿಯೇ ಉಗುಳಬೇಕಾಗುತ್ತಿತ್ತು. ಅವನ ನೆರಳೂ ಬೀಳುವಂತಿರಲಿಲ್ಲ.ಆದ್ದರಿಂದ ಆತ ಸಂಭೋಳಿ..... ಸಂಭೋಳಿ.... ಎಂದು ಕೂಗುತ್ತ ಹೋಗಬೇಕಾಗುತ್ತಿತ್ತು. ಈ ಧ್ವನಿ ಕೇಳಿದಾಕ್ಷಣ ಸವರ್ಣೀಯರೆಲ್ಲ ಬಾಗಿಲು ಮುಚ್ಚಿಕೊಳ್ಳುತ್ತಿದ್ದರು. ಇಲ್ಲವೆ ಅವನು ಹೋಗುವವರೆಗೂ ಮರೆಯಲ್ಲಿ ನಿಂತುಕೊಳ್ಳುತ್ತಿದ್ದರು. ಇಂಥ ಕಠಿಣವಾದ ಅಷ್ಟೇ ಕಠೋರವಾದ ಸ್ಥಿತಿ.ನಾಗರಿಕತೆಯನ್ನು ಅಣಕಿಸುವಂತಹ ಅನಾಗರಿಕ ಪದ್ಧತಿಗಳು. ಮೇಲು ಕೀಳು ಭಾವನೆಗಳು. ಆ ದೃಷ್ಟಿಯಿಂದ ಹರಳಯ್ಯ ಮಧುವಯ್ಯಗಳ ತ್ಯಾಗ ಮತ್ತು ಬಲಿದಾನ ಇಂದಿಗೂ ಅನುಕರಣೀಯ. ಇಂದು ನಾವುಗಳೆಲ್ಲ ತಲೆಯೆತ್ತಿ ಬದುಕಲು ಅವರು ಅಂದು ತಲೆಯನ್ನು ಕೊಟ್ಟಿದ್ದಾರೆ. ಅವರ ನೆನಪು ಸದಾ ಸ್ಫೂರ್ತಿ.ಇಂಥ ತ್ಯಾಗಮೂರ್ತಿಗಳ ನೆನಪನ್ನು ಯಾವಾಗ ಬೇಕಾದರೂ ಮಾಡಬಹುದು. ಅದು ಸ್ಫೂರ್ತಿದಾಯಕವಾದುದು. ಕೇವಲ ಸ್ವಜಾತಿಯವರು ಮಾಡುವುದಲ್ಲ, ಎಲ್ಲ ಜಾತಿಯವರೂ ಆಚರಿಸಬಹುದಾದ ಒಂದು ಘಟನೆ. ಏಸುಕ್ರಿಸ್ತನಿಗೆ ಶಿಲಬೇಗೇರಿಸಿ, ಮೊಳೆ ಬಡಿದ ಪ್ರಸಂಗವು ಒಂದು ಜಾಗತಿಕ ಘಟನೆ. ಇದು ಅಮಾನವೀಯ ಘಟನೆಯಾಗಿದ್ದು, ಇದರಿಂದ ಏಸುಕ್ರಿಸ್ತನ ಮಾನವೀಯತೆ ಜಗತ್ತಿನಾದ್ಯಂತ ಬೆಳಕಿಗೆ ಬಂದಿತು. ಅಂತಹದೇ ಒಂದು ಘಟನೆ 12ನೆ ಶತಮಾನದಲ್ಲಿ ಜರುಗಿತು. ಇಲ್ಲಿ ಎಳೆಯೂಟೆ ಶಿಕ್ಷೆ ವಿಧಿಸಲಾಯಿತು. ಅಲ್ಲಿ ಶಿಲುಬೆಗೇರಿಸಲಾಯಿತು. ಎರಡೂ ಘಟನೆಯಲ್ಲೂ ಚಿತ್ರಹಿಂಸೆ, ಬಲಿದಾನ; ಪ್ರಾಣಾರ್ಪಣ. ಏಸುಕ್ರಿಸ್ತರು ಯಾವುದಕ್ಕೆ ಬಲಿಯಾದರೋ, ಹರಳಯ್ಯ-ಮಧುವಯ್ಯಗಳೂ ಅದೇ ಉದ್ದೇಶಕ್ಕಾಗಿ ಬಲಿಯಾದರು. ಸಾಮಾಜಿಕ ಸಮಾನತೆಗೆ ಹೋರಾಡಿದವರನ್ನು ಸಂಪ್ರದಾಯಬದ್ಧ ಸಮಾಜವು ಚಿತ್ರಹಿಂಸೆಗೆ ಗುರಿಪಡಿಸಿತು. ಎರಡೂ ಘಟನೆಯಲ್ಲಿ ಅಜ್ಞರ ಪಾತ್ರವಿದೆ.ಹರಳಯ್ಯ-ಮಧುವಯ್ಯಗಳದು ವೀರ ಮರಣ; ಸ್ಫೂರ್ತಿಯ ಜೀವನ. ಇಂಥ ಪಟ್ಟದಿಂದ ಪ್ರಭಾವಿತರಾದವರೆಷ್ಟೊ! ಅದರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯು ಒಂದು. ಇದೇ ಮಾರ್ಚ್ 5 ಮತ್ತು 6 ರಂದು ಆ ಮಹಾನ್ ಶರಣರ ಸ್ಮರಣ ದಿನವನ್ನು ಬಸವಕಲ್ಯಾಣದಲ್ಲಿ ಆಚರಿಸಬೇಕೆಂಬುದು ಮಹಾಸಭೆಯ ನಿರ್ಧಾರ. ಅದು 12ನೆ ಶತಮಾನ; ಇದು 21ನೇ ಶತಮಾನ. ಸಮಾರಂಭವು ಸರ್ವಾಂಗ ಸುಂದರವಾಗಿ ನಡೆಯಬೇಕಾಗಿದೆ. ಇಡೀ ಮಹಾಸಭೆಯು ಪರಿವರ್ತನೆಯ ಪಥದೊಂದಿಗೆ ಇದೆಯೆಂಬುದನ್ನು ಸಾಬೀತುಗೊಳಿಸಬೇಕಾಗಿದೆ. ಇಂಥ ಅವಿಸ್ಮರಣೀಯ ಸಂದರ್ಭವನ್ನು ಆಚರಿಸಲು ಮುಂದೆ ಬಂದಿರುವ ಮಹಾಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಅಭಿನಂದಿಸಲೇಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.