ಅನ್ಸಾರಿ ವಿರುದ್ಧ ಮಾಯಾವತಿ ಕಿಡಿ

7

ಅನ್ಸಾರಿ ವಿರುದ್ಧ ಮಾಯಾವತಿ ಕಿಡಿ

Published:
Updated:

ನವದೆಹಲಿ (ಪಿಟಿಐ):  ರಾಜ್ಯಸಭೆಯಲ್ಲಿ ಪದೇ ಪದೇ ಕಲಾಪಕ್ಕೆ ಅಡಚಣೆ ಆಗುತ್ತಿದ್ದರೂ ಸಭಾಧ್ಯಕ್ಷರು ಅಶಿಸ್ತನ್ನು ನಿಯಂತ್ರಿಸಿ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುತ್ತಿಲ್ಲ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ನೇರವಾಗಿ ಹಮೀದ್ ಅನ್ಸಾರಿ ವಿರುದ್ಧವೇ ಬುಧವಾರ ಕಿಡಿ ಕಾರಿದ್ದಾರೆ.ಸಂಸದೀಯ ಸಂಪ್ರದಾಯದಂತೆ ಸದಸ್ಯರು ಕಲಾಪ ನಡೆಸುವ ವಿಚಾರದಲ್ಲಿ ಸಭಾಧ್ಯಕ್ಷರನ್ನು ನೇರವಾಗಿ ಪ್ರಶ್ನಿಸಿದ ಉದಾಹರಣೆ ಇಲ್ಲ. ಇದಕ್ಕೆ ಸಭಾಧ್ಯಕ್ಷರು ಸದನದಲ್ಲಿ ಶಿಸ್ತು ರೂಢಿಸಲು ವಿಫಲರಾಗಿರುವುದೇ ಕಾರಣ ಎಂದು ಮಾಯಾವತಿ ಅಬ್ಬರಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಸಿಡಿದೆದ್ದ ಮಾಯಾವತಿ, ಉಪರಾಷ್ಟ್ರಪತಿಯೂ ಆಗಿರುವ ಅನ್ಸಾರಿ  ವಿರುದ್ಧ ಟೀಕಾ ಪ್ರಹಾರಕ್ಕೆ ಇಳಿದರು. `ನೀವು ಸದನದ ಅಧ್ಯಕ್ಷರಿದ್ದೀರಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವುದು ನಿಮ್ಮ ಜವಾಬ್ದಾರಿ' ಎಂದು ಕುಟುಕಿದರು.`ಕೆಲವು ದಿನಗಳಿಂದ ಮಧ್ಯಾಹ್ನದ ನಂತರ ಕಲಾಪ ನಡೆದಿಲ್ಲ. ನೀವು ಕೂಡ 12ಗಂಟೆ ನಂತರ ಕಾಣಿಸಿಯೇ ಇಲ್ಲ. ಇದೆಂತಹ ಸದನ' ಎಂದು ಖಾರವಾಗಿ ಪ್ರಶ್ನಿಸಿದರು. ಇದರಿಂದ ಕೊಂಚ ವಿಚಲಿತರಾದಂತೆ ಕಂಡ ಅನ್ಸಾರಿ, `ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಸದಸ್ಯರ ಹೊಣೆಯೂ ಆಗಿದೆ. ಎಲ್ಲರ ಸಹಕಾರ ಇದ್ದರೆ ಮಾತ್ರ ಕಲಾಪ ಶಾಂತವಾಗಿ ನಡೆಯಲು ಸಾಧ್ಯ. ಈಗ ಕಲಾಪ ನಡೆಯುತ್ತಿದೆ, ಮುಂದುವರಿಯಲು ಅವಕಾಶ ನೀಡಿ' ಎಂದರು.ಇದರಿಂದ ತೃಪ್ತರಾಗದ ಮಾಯಾವತಿ ಮತ್ತವರ ಪಕ್ಷದ ಸದಸ್ಯರು `ದಲಿತ ವಿರೋಧಿ ಸರ್ಕಾರವನ್ನು ಒಪ್ಪಲಾಗದು' ಎಂದು ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು.ಅನ್ಸಾರಿ ಅವರ ಬಗ್ಗೆ ಮಾಯಾವತಿ ಬಳಸಿದ ಪದಗಳನ್ನು ಕಡತದಿಂದ ತೆಗೆದುಹಾಕಲಾಗಿದೆ. ಈ ಮಧ್ಯೆ ಪ್ರಧಾನಿ ಸಿಂಗ್ ಅವರು ಅನ್ಸಾರಿ ಅವರನ್ನು ಸಂಪರ್ಕಿಸಿ ಮಾಯಾವತಿ ಅವರ ಕಟು ಟೀಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry