ಸೋಮವಾರ, ಮೇ 16, 2022
28 °C

ಅಪಘಾತದಲ್ಲಿ ಗ್ರಾಮದ ಆರು ಜನ ಸಾವು:ಸೂಳಿಕಟ್ಟಿಯ ತುಂಬ ಸೂತಕದ ವಾತಾವರಣ

ಪ್ರಜಾವಾಣಿ ವಾರ್ತೆ/ಮನೋಜ್‌ಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಸೂಳಿಕಟ್ಟಿ (ಧಾರವಾಡ ಜಿಲ್ಲೆ): ಈ ಗ್ರಾಮದಲ್ಲಿ ಮಂಗಳವಾರದ ಬೆಳಗು ಎಂದಿನಂತಿರಲಿಲ್ಲ. ಸಂತೆಗೆಂದು, ಆಸ್ಪತ್ರೆಗೆ ತೋರಿಸಲೆಂದು ಕಲಘಟಗಿಗೆ ಹೊರಡುವ ಮೊದಲ ಟೆಂಪೊಗೆ ಹೋದವರು ಮರಳಿದ್ದು ಹೆಣವಾಗಿ. ಕಲಕುಂಡಿ ಬಳಿಯ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀರಿಕೊಂಡವರಲ್ಲಿ ಆರು ಮಂದಿ ಇದೇ ಗ್ರಾಮಕ್ಕೆ ಸೇರಿದವರು. ಅವರೆಲ್ಲ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದವರು. ಊರ ಮಕ್ಕಳನ್ನು ಕಳೆದುಕೊಂಡ ಬಳಿಕ ಸೂಳಿಕಟ್ಟಿಯಲ್ಲಿ ಸ್ಮಶಾನ ಮೌನ ಆವರಿಸಿತ್ತು.ಒಂದೇ ಕುಟುಂಬಕ್ಕೆ ಸೇರಿದ ಚಂದ್ರಕಾಂತ ಹಾಗೂ ಶಾಂತಾರಾಮ ಕಸಲಕರ್ ಅವರು ತಂಗಿ ಸುಮಿತ್ರಾಗೆ ಆಸ್ಪತ್ರೆಗೆ ತೋರಿಸಲೆಂದು ಹೊರಟಿದ್ದರು. ಮೂರು ತಿಂಗಳ ಹಿಂದಷ್ಟೇ ಹಳಿಯಾಳ ತಾಲ್ಲೂಕಿನ ನಂದಿಗದ್ದಾದ ಯುವಕನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಇದೀಗ ಸುಮಿತ್ರಾ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.ಆದರೆ ತಮ್ಮ ಕುಟುಂಬದ ಮೂವರೂ ತೀರಿಕೊಂಡರು ಎಂದು ತಿಳಿದ ಕಸಲಕರ್ ಮನೆತನದ ಮಹಿಳೆಯರ ಆಕ್ರಂದನ ಹೃದಯ ವಿದ್ರಾವಕವಾಗಿತ್ತು. ಮೃತ ಶಾಂತಾರಾಮ ಅವರ ಪತ್ನಿ ಲಕ್ಷ್ಮಿ  ಹಾಗೂ ಚಂದ್ರಕಾಂತ ಪತ್ನಿ ಸವಿತಾ ಎದೆ ಬಡಿದುಕೊಂಡು ಅಳುತ್ತಿದ್ದ ದೃಶ್ಯ ಕಲ್ಲೂ ಹೃದಯದವರನ್ನೂ ಕರಗಿಸುವಂತಿತ್ತು. ಕೇವಲ 75ರಿಂದ 80 ಮನೆಗಳಿರುವ ಈ ಗ್ರಾಮದ ಆರು ಮಂದಿ ತೀರಿಹೋದದ್ದು ಗ್ರಾಮಸ್ಥರ ಜಂಘಾಬಲವನ್ನೇ ಉಡುಗಿಸುವಂತೆ ತೋರುತ್ತಿತ್ತು.ಅದರಲ್ಲೂ ಕಸಲಕರ್ ಮನೆತನದ ಇಬ್ಬರೂ ಮನೆಗೆ ಆಸರೆಯಾಗಿದ್ದವರು. `ನನ್ನ ಗಂಡನನ್ನು ಗಾಡಿ ಬಲಿ ತೆಗೆದುಕೊಂತಲ್ಲೋ, ಇನ್ನು ನನಗ, ನನ್ನ ಮಕ್ಕಳಿಗೆ ಯಾರು ದಿಕ್ಕೋ...` ಎಂಬ ಕವಿತಾರ ಆಕ್ರಂದನಕ್ಕೆ ಅಲ್ಲಿ ಸೇರಿದ್ದ ಹೆಣ್ಣುಮಕ್ಕಳ ದುಃಖವೂ ಸೇರಿಕೊಂಡು ಮಾರ್ದನಿಸುತ್ತಿತ್ತು. ತನ್ನ ತಂದೆ ಜಗತ್ತಿನಿಂದ ಮರೆಯಾದ ಎಂಬ ಸತ್ಯವನ್ನು ಅರಿಯದ ಚಂದ್ರಕಾಂತರ ಮೂರು ವರ್ಷದ ಪುತ್ರ ತಾಯಿಯಿಂದ ಆನತಿ ದೂರದಲ್ಲಿ ನಿಂತಿದ್ದ.ಫಕ್ಕೀರಪ್ಪ ನಾರ್ವೇಕರ್ ಅವರ ಮನೆಯಲ್ಲಿಯೂ ದುಃಖ ಮಡುಗಟ್ಟಿತ್ತು. ಅವರ ಪತ್ನಿ ಹಾಗೂ ಮಗಳ ಅಳು ತಡೆಯಲು ಯಾರಿಗೂ ಸಾಧ್ಯಾವಾಗದ ಸ್ಥಿತಿ ತಲೆದೋರಿತ್ತು. ಮೂವರು ಪುತ್ರರಲ್ಲಿ ಒಬ್ಬ ಪುತ್ರ ಸೈನ್ಯದಲ್ಲಿದ್ದು, ಉಳಿದ ಮಕ್ಕಳೂ ಬೇರೆಡೆ ಕೆಲಸಕ್ಕೆ ಹೋಗಿದ್ದನ್ನು ನೆನೆದು ತಾಯಿ ತಮಗೆ ಎಂಥ ಸ್ಥಿತಿ ಬಂದಿತೆಂದು ಗೋಗರೆಯುತ್ತಿದ್ದರು.ತಂದೆ ಸೈಯದ್‌ಸಾಬ್ ಅವರನ್ನು ಕಳೆದುಕೊಂಡ ಮಗಳು ರುಕ್ಸಾನಾ ದುರ್ಘಟನೆ ಹಿನ್ನೆಲೆಯಲ್ಲಿ ಶಾಲೆಗೆ ರಜೆ ನೀಡಿದ್ದರಿಂದ ಆಗಷ್ಟೇ ಮನೆಗೆ ಬಂದಿದ್ದಳು. ಮೊಮ್ಮಗಳ ದುಃಖಕ್ಕೆ ತಾತ ಹುಸೇನ್‌ಸಾಬ್‌ರ ಆಕ್ರಂದನ ಬತ್ತಿದ ಕಣ್ಣುಗಳಲ್ಲಿ ಇಣುಕುತ್ತಿತ್ತು.

 

ಹುಸೇನ್‌ಸಾಬ್‌ರಿಗೆ ಒಂದೆಡೆ ಹಿರಿಯ ಮಗನನ್ನು ಕಳೆದುಕೊಂಡ ನೋವು ಒಂದೆಡೆಯಿದ್ದರೆ ಮೊಮ್ಮಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಹಾಗೂ ಸಿಮ್ರನ್ ಎಂಬ ಮುದ್ದಾದ ಹೆಸರಿನ ಮೊಮ್ಮಗಳು ಅರಳುವ ಮೊದಲೇ ಬಾಡಿ ಹೋದ ನೋವು ಒಟ್ಟಿಗೆ ಬರಸಿಡಿಲಿನಂತೆ ಎರಗಿತ್ತು.

ಯಾರನ್ನು ಸಂತೈಸಬೇಕು ಎಂಬ ಗೊಂದಲದ ಮಧ್ಯೆಯೇ ಸೂಳಿಕಟ್ಟಿಯ ಗ್ರಾಮಸ್ಥರು ತೀರಿಹೋದ ಕುಟುಂಬಗಳ ಮನೆಯ ಬಳಿ ನಿಂತು ಸಾಂತ್ವನ ಹೇಳುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.