ಅಪಘಾತ: ಇಬ್ಬರ ದುರ್ಮರಣ

ಬುಧವಾರ, ಜೂಲೈ 24, 2019
24 °C

ಅಪಘಾತ: ಇಬ್ಬರ ದುರ್ಮರಣ

Published:
Updated:

ಬೆಂಗಳೂರು: ನಗರದ ಬನಶಂಕರಿ ಮತ್ತು ವಿಲ್ಸನ್‌ಗಾರ್ಡನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.ಕಾರು ಚಾಲಕ, ಹಿಂದೆ ಬರುತ್ತಿದ್ದ ಬೈಕ್ ಸವಾರನನ್ನು ಗಮನಿಸದೆ ವಾಹನದ ಬಾಗಿಲು ತೆರೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಶ್ರೀನಿವಾಸ್ (52) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತ್ಯಾಗರಾಜನಗರದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.ಕಬ್ಬನ್‌ಪೇಟೆ ನಿವಾಸಿಯಾದ ಶ್ರೀನಿವಾಸ್, ಮನೆಯ ಸಮೀಪವೇ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಅವರು ಬೈಕ್‌ನಲ್ಲಿ ತ್ಯಾಗರಾಜನಗರದಲ್ಲಿನ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ತ್ಯಾಗರಾಜನಗರ ಒಂದನೇ ಮುಖ್ಯರಸ್ತೆಯ ಪಕ್ಕದಲ್ಲಿ ಕಾರು ನಿಲ್ಲಿಸಿಕೊಂಡು ಒಳಗೆ ಕುಳಿತಿದ್ದ ಪ್ರಸಾದ್ ಎಂಬಾತ ಹಿಂದೆ ಬರುತ್ತಿದ್ದ ವಾಹನಗಳನ್ನು ಗಮನಿಸದೆ ವಾಹನದ ಬಲ ಭಾಗದ ಬಾಗಿಲನ್ನು ತೆರೆದಿದ್ದಾನೆ.ಅದೇ ವೇಳೆಗೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಶ್ರೀನಿವಾಸ್, ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬನಶಂಕರಿ ಸಂಚಾರ ಠಾಣೆ ಪೊಲೀಸರು ಪ್ರಸಾದ್‌ನನ್ನು ಬಂಧಿಸಿ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ದೂರು ದಾಖಲಾಗಿದೆ.ಮತ್ತೊಂದು ಪ್ರಕರಣ:


ಹೊಸೂರು ರಸ್ತೆಯ 13ನೇ ಅಡ್ಡರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಲಾರಿ ಡಿಕ್ಕಿ ಹೊಡೆದು ಶಂಕರ್‌ಪಾಂಡ್ಯನ್ (50) ಎಂಬುವರು ಮೃತಪಟ್ಟಿದ್ದಾರೆ.ಕಲ್ಯಾಣನಗರ ನಿವಾಸಿಯಾದ ಶಂಕರ್‌ಪಾಂಡ್ಯನ್, ಶಿವಾಜಿನಗರದ ಸಿಮೆಂಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸ್ನೇಹಿತನನ್ನು ಭೇಟಿ ಮಾಡಲು ಲಕ್ಕಸಂದ್ರಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಅವರು ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸಂಜೆ ವೇಳೆಗೆ ಅವರು ಸಾವನ್ನಪ್ಪಿದರು. ಘಟನೆ ನಂತರ ಲಾರಿ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ವಿಲ್ಸನ್‌ಗಾರ್ಡನ್ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry