ಭಾನುವಾರ, ಅಕ್ಟೋಬರ್ 20, 2019
27 °C

ಅಪಘಾತ: ಬೈಕ್ ಸವಾರನ ಸಾವು

Published:
Updated:

ಬೀದರ್:  ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಮೃತಪಟ್ಟಿದ್ದರಿಂದ ಸಿಟ್ಟಿಗೆದ್ದ ಜನ ಕಲ್ಲು ತೂರಾಟ ನಡೆಸಿ ಹಲವು ಲಾರಿಗಳನ್ನು ಜಖಂಗೊಳಿಸಿದ ಘಟನೆ ನಗರದ ಮೈಲೂರಿನಲ್ಲಿ ಶನಿವಾರ ನಡೆದಿದೆ.ಬೈಕ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಡಿಕ್ಕಿಯಲ್ಲಿ ಬಡಾವಣೆಯ ತುಕಾರಾಮ ಮಾಣಿಕಪ್ಪ ಯದಲಾಪುರೆ (28) ಎಂಬ ಯವಕ ಮೃತಪಟ್ಟಿದ್ದ. ಲಾರಿಯ ಚಕ್ರ ಆತನ ತಲೆಯ ಮೇಲಿಂದ ಹಾದು ಹೋಗಿತ್ತು.ಇದರಿಂದ ಉದ್ರಿಕ್ತಗೊಂಡ ಜನ ಆಹಾರ ನಿಗಮದ ಗೋದಾಮು ಎದುರಿನ ರಸ್ತೆಯಲ್ಲಿ ನಿಂತಿದ್ದ ಲಾರಿಗಳ ಮೇಲೆ ಕಲ್ಲು ತೂರಲಾರಂಭಿಸಿದರು. ಅನೇಕ ಲಾರಿಗಳ ಗಾಜುಗಳನ್ನು ಪುಡಿಗೊಳಿಸಿದರು. ಗೋದಾಮು ಒಳಗಡೆ ನಿಂತಿದ್ದ ಲಾರಿಗಳು ಸಹ ಜಖಂಗೊಂಡವು. ಸಿಬ್ಬಂದಿ ಮೇಲೂ ನಡೆಸಿದರು. ಡಿಕ್ಕಿ ಹೊಡೆದಿದ್ದ ಲಾರಿಯನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರಿಂದ ಉದ್ರಿಕ್ತರು ಸ್ಥಳದಲ್ಲಿದ್ದ ಮತ್ತೊಂದು ಲಾರಿಗೆ ಬೆಂಕಿ ಹಚ್ಚಲು ಯತ್ನಿಸಿದರು. ತಕ್ಷಣ ಅದನ್ನು ನಂದಿಸಲಾಯಿತು.ನೂರಾರು ಜನ ರಸ್ತೆಯ ಮೇಲೆ ಜಮಾಯಿಸಿ ಪ್ರತಿಭಟನೆ ನಡೆಸಲಾರಂಭಿಸಿದರು. ಉಗ್ರಾಣಕ್ಕೆ ಬರುವ ಲಾರಿಗಳು ಕಚೇರಿ ಹಿಂದಿನಿಂದಲೇ ತೆರಳಬೇಕು. ಯಾವುದೇ ಕಾರಣಕ್ಕೂ ಮೈಲೂರು ರಸ್ತೆಯ ಮೂಲಕ ಹೋಗಬಾರದು. ರಸ್ತೆಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.ಅಪಘಾತದಲ್ಲಿ ನುಜ್ಜು ಗುಜ್ಜಾದ ಬೈಕ್‌ನ್ನು ಬೇರೆಡೆಗೆ ಸಾಗಿಸಲು ಅವಕಾಶ ಕೊಡಲಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಶವವನ್ನು ಆಟೋದಲ್ಲಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.ಮೃತ ಯುವಕ ಬೈಕ್ ಸ್ಕೀಮ್ ನಡೆಸುತ್ತಿದ್ದ. ಶವದ ಸುತ್ತ ಜಮಾಯಿಸಿದ ಕುಟುಂಬ ವರ್ಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ತಹಸೀಲ್ದಾರ್ ಮಲ್ಲಿಕಾರ್ಜುನ, ಡಿ.ವೈ.ಎಸ್.ಪಿ. ವಿ.ಎಂ. ಜ್ಯೋತಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Post Comments (+)