ಅಪಘಾತ: ಮೂವರು ವಿದ್ಯಾರ್ಥಿಗಳು ಬಲಿ

7

ಅಪಘಾತ: ಮೂವರು ವಿದ್ಯಾರ್ಥಿಗಳು ಬಲಿ

Published:
Updated:

ಬೆಂಗಳೂರು: ಹೊಸಕೋಟೆ - ಕೋಲಾರ ರಸ್ತೆಯ ದಾಸರಹಳ್ಳಿ ಗೇಟ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಗರದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.ರಸ್ತೆ ಬದಿ ನಿಂತಿದ್ದ ಲಾರಿಯೊಂದಕ್ಕೆ ವೇಗವಾಗಿ ಬಂದ ಹೊಂಡಾಸಿಟಿ ಕಾರು ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.ಮೃತರನ್ನು ಬೆಂಗಳೂರು ಕ್ರೈಸ್ಟ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಿರಣ್ ಜೋಸೆಫ್, ಅದೇ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಕೇಶವ್ ನಂದನ್ ಹಾಗು ಕಾರನ್ನು ಚಾಲನೆ ಮಾಡುತ್ತಿದ್ದ ಜೈನ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿ ಅಸ್ಲಾನ್ ಎಂದು ಗುರುತಿಸಲಾಗಿದೆ.ಗಾಯಗೊಂಡ ರಾಹುಲ್ ಪೀಟರ್‌ನನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ಸ್ನೇಹಿತರಾಗಿದ್ದ ಇವರೆಲ್ಲರೂ 17 ರಿಂದ 20 ವರ್ಷ ವಯಸ್ಸಿನವರಾಗಿದ್ದು ಬೆಂಗಳೂರು ವಾಸಿಗಳಾಗಿದ್ದರು ಎಂದು ತಿಳಿದುಬಂದಿದೆ.ಓದಲು ಹೋಗಿ ಪ್ರಾಣ ತೆತ್ತ: `ಕಿರಣ್ ಪಿಯುಸಿ ವಿದ್ಯಾರ್ಥಿಯಾಗಿದ್ದು ಮುಂಬರುವ ಪರೀಕ್ಷೆಗಳಿಗಾಗಿ ತಡ ರಾತ್ರಿಯ ವರೆಗೂ ಓದುತ್ತಿದ್ದ. ಸೋಮವಾರ ರಾತ್ರಿ 11.30 ಯವರೆಗೂ ಓದುತ್ತಿದ್ದ ಕಿರಣ್ ಓದಿನ ಬಿಡುವಿಗಾಗಿ ಸ್ನೇಹಿತರೊಂದಿಗೆ ಹೊರಗೆ ಹೋಗಿ ಬೇಗಬರುವುದಾಗಿ ತನ್ನ ಪೋಷಕರಿಗೆ ಹೇಳಿಹೋಗಿದ್ದ.ಆದರೆ ಕೊನೆಗೂ ಅವನು ಜೀವಂತವಾಗಿ ಮರಳಲಿಲ್ಲ~ ಎಂಬುದು ದುಃಖ ಮಡುಗಟ್ಟಿದ್ದ ಆತನ ಸಂಬಂಧಿಗಳ ಆಕ್ರಂದನವಾಗಿತ್ತು.ಗಾಯಗೊಂಡಿರುವ ಪೀಟರ್ ಜೋಸೆಫ್ ಜೀವಾಪಾಯದಿಂದ ಪಾರಾಗಿದ್ದಾನೆ ಎಂದು ನಿಮ್ಹಾನ್ಸ್‌ನ ವೈದ್ಯರು ತಿಳಿಸಿದ್ದಾರೆ. ಕೇಶವ್ ನಂದನ್ ಹಾಗೂ ಅಸ್ಲಾನ್ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಮೃತರೆಲ್ಲರೂ ನಗರದ ಉದ್ಯಮಿಗಳ ಮಕ್ಕಳಾಗಿದ್ದು ಹೆಚ್ಚಿನ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡದಂತೆ ಮನವಿ ಮಾಡಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ನರಸಾಪುರದ ಬಳಿ ಇರುವ ಕಾಫಿಡೇಯಲ್ಲಿ ಕಾಫಿ ಕುಡಿಯಲು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೊಸಕೋಟೆ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry