ಅಪಘಾತ: ವಿದ್ಯಾರ್ಥಿ ಸಾವು, ಹೆದ್ದಾರಿಯಲ್ಲಿ ಪ್ರತಿಭಟನೆ

7

ಅಪಘಾತ: ವಿದ್ಯಾರ್ಥಿ ಸಾವು, ಹೆದ್ದಾರಿಯಲ್ಲಿ ಪ್ರತಿಭಟನೆ

Published:
Updated:
ಅಪಘಾತ: ವಿದ್ಯಾರ್ಥಿ ಸಾವು, ಹೆದ್ದಾರಿಯಲ್ಲಿ ಪ್ರತಿಭಟನೆ

ಮಂಡ್ಯ: ಮರಳು ಸಾಗಣೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ವಿದ್ಯಾರ್ಥಿಯೊರ್ವ ದಾರುಣವಾಗಿ ಮೃತಪಟ್ಟ ಘಟನೆ ಮಂಡ್ಯ-ಬೆಂಗಳೂರು ಹೆದ್ದಾರಿಯಲ್ಲಿ ಹನಕೆರೆ ಬಳಿ ನಡೆದಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದ ಪರಿಣಾಮ ಸುಮಾರು ಎರಡು ಗಂಟೆಗೂ ಅಧಿಕ ಕಾಲ ಹೆದ್ದಾರಿಯಲ್ಲಿ ಗುರುವಾರ ಸಂಜೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.ಸಂಜೆ ಸುಮಾರು ಐದು ಗಂಟೆಯ ವೇಳೆಗೆ ಅಪಘಾತ ಸಂಭವಿಸಿದ್ದು, ಹನಕೆರೆ ರೈತ ಶಿಕ್ಷಣ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಶಿವರಾಜು (13) ಅಪಘಾತದಲ್ಲಿ ಬಲಿಯಾದ ನತದೃಷ್ಟ ವಿದ್ಯಾರ್ಥಿ. ಈತ ಸಾದೊಳಲು ಗ್ರಾಮದ, ಬಡ ಕುಟುಂಬದ ರಾಜು ಎಂಬವರ ಪುತ್ರ ಎಂದು ಗೊತ್ತಾಗಿದೆ.ಎಂದಿನಂತೆ ಶಾಲೆಯಿಂದ ಸೈಕಲ್‌ನಲ್ಲಿ ನಿರ್ಗಮಿಸಿದ ಈತ ಹೆದ್ದಾರಿಯಲ್ಲಿ ರಸ್ತೆಯ ಇನ್ನೊಂದುಬದಿಗೆ ಹೋಗುವಾಗ ಮಂಡ್ಯದತ್ತ ಬರುತ್ತಿದ್ದ ಬರುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸೈಕಲ್ ತೀವ್ರ ಜಖಂಗೊಂಡಿದ್ದು, ಚಕ್ರಕ್ಕೆ ಸಿಲುಕಿದ ಬಾಲಕನು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಟ್ರ್ಯಾಕ್ಟರ್ ಚಾಲಕ ಬಳಿಕ ರಸ್ತೆ ಬದಿಯ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಗುಂಪುಗೂಡಿದ ಸಾರ್ವಜನಿಕರು, ಗ್ರಾಮಸ್ಥರು ರಸ್ತೆ ತಡೆ ನಡೆಸಿದ್ದು, ಟ್ರಾಕ್ಟರ್ ಚಾಲಕರ ನಿರ್ಲಕ್ಷ್ಯದ ಚಾಲನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು, ಈ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.ಅಲ್ಲದೆ, ಹೆದ್ದಾರಿಯಲ್ಲಿ ವಸತಿ ಪ್ರದೇಶ ಇರುವ ಕಡೆಯೂ ಲಾರಿ, ಟ್ರಾಕ್ಟರ್ ಮತ್ತಿತರ ವಾಹನಗಳು ಮಿತಿ ಮೀರಿದ ವೇಗದಲ್ಲಿ ತೆರಳಲಿದ್ದು, ರಸ್ತೆ ದಾಟುವುದೇ ದುಸ್ತರವಾಗಿದೆ. ಪೊಲೀಸ್ ಅಧಿಕಾರಿಗಳು ಇಲ್ಲಿ ವೇಗಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮವನ್ನು ತೆಗೆದು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ವಾಹನ ದಟ್ಟಣೆ, ಪ್ರಯಾಣಿಕರ ಪಡಿಪಾಟಲು: ಸಂಜೆ ಹೊತ್ತು ದಿಢೀರ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಬೆಂಗಳೂರು-ಮೈಸೂರಿನತ್ತ ತೆರಳುತ್ತಿದ್ದ ಪ್ರಯಾಣಿಕರು ಪ್ರಯಾಸ ಪಡಬೇಕಾಯಿತು. ಕಡೆಗೇ, ಪೊಲೀಸರು ವಾಹನಗಳ ಮಾರ್ಗ ಬದಲಾವಣೆಗೆ ಕ್ರಮಕೈಗೊಳ್ಳಬೇಕಾಯಿತು.ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಹನಕೆರೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯೂ ಆಗಿರುವ ಎಚ್. ಪಿ.ಮಹೇಶ್ ಅವರು ಭೇಟಿ ನೀಡಿದ್ದು, ಪರಿಸ್ಥಿತಿ ತಿಳಿಗೊಳಿಸಲು ಕ್ರಮ ಕೈಗೊಂಡರು.ಬಾಲಕನ ಕುಟುಂಬಕ್ಕೆ ತುರ್ತಾಗಿ ಪರಿಹಾರ ಒದಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನಾ ನಿರತ ಗುಂಪು ಸಮಾಧಾನಗೊಂಡಿತು.ಸುಮಾರು 3 ಗಂಟೆ ಕಾಲ ವಾಹನ ದಟ್ಟಣೆ ಇದ್ದು, ಸಂಜೆ 7 ಗಂಟೆ ವೇಳೆಗೆ ತೆರವುಗೊಂಡಿತು ಎಂದು ಸ್ಥಳದಲ್ಲಿದ್ದ ಮಹೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry