ಶುಕ್ರವಾರ, ನವೆಂಬರ್ 15, 2019
22 °C

ಅಪಘಾತ: ಶಾಲಾ ಬಾಲಕ ಸ್ಥಳದಲ್ಲೇ ಸಾವು

Published:
Updated:

ಬೆಂಗಳೂರು: ಫ್ರೇಜರ್‌ಟೌನ್ ಬಳಿಯ ಗೋವಿಂದಪುರ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಟ್ರ್ಯಾಕ್ಟರ್ ಮತ್ತು ಸೈಕಲ್ ನಡುವೆ ಸಂಭವಿಸಿದ ಅಪಘಾತದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ.ರಷಾದ್‌ನಗರ ನಿವಾಸಿ ಜಫ್ರುಲ್ಲಾ ಎಂಬುವರ ಪುತ್ರ ಮಹಮ್ಮದ್ ಅಜ್ಗರ್ (12) ಮೃತಪಟ್ಟ ಬಾಲಕ. ಗೋವಿಂದಪುರದ ಖಾಸಗಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ ಆತ ಪರೀಕ್ಷಾ ಫಲಿತಾಂಶ ನೋಡಲು ಸೈಕಲ್‌ನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಟ್ರ್ಯಾಕ್ಟರ್ ಚಾಲಕ, ಅಜ್ಗರ್‌ನ ಸೈಕಲ್‌ಗೆ ಎದುರುಗಡೆಯಿಂದ ವಾಹನ ಗುದ್ದಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬಾಲಕನ ಮೇಲೆ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಫ್ರೇಜರ್‌ಟೌನ್ ಸಂಚಾರ ಠಾಣೆ ಪೊಲೀಸರು ಟ್ರ್ಯಾಕ್ಟರ್ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.ಸರಗಳವು: ಪುಟ್ಟೇನಹಳ್ಳಿ ಸಮೀಪದ ನಟರಾಜ ಲೇಔಟ್‌ನಲ್ಲಿ ದುಷ್ಕರ್ಮಿಗಳು ಭಾನುವಾರ ರಾತ್ರಿ ಹೇಮಾ ಎಂಬುವರ ಚಿನ್ನದ ಸರವನ್ನು ದೋಚಿದ್ದಾರೆ.ನಟರಾಜ ಲೇಔಟ್ ನಿವಾಸಿಯಾದ ಹೇಮಾ ಅವರು ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆಯ ಸಮೀಪವೇ ವಾಯುವಿಹಾರ ಮಾಡುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಬೈಕ್‌ನಲ್ಲಿ ಹಿಂಬಾಲಿಸಿ ಬಂದು ಈ ಕೃತ ಎಸಗಿದ್ದಾರೆ. ಸರದ ಮೌಲ್ಯ ರೂ 1.20 ಲಕ್ಷ  ಎಂದು ಪೊಲೀಸರು ಹೇಳಿದ್ದಾರೆ. ಹುಳಿಮಾವು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)