ಅಪಘಾತ: ಸಿಟ್ಟಿಗೆದ್ದ ಜನರಿಂದ ರಸ್ತೆ ತಡೆ

7

ಅಪಘಾತ: ಸಿಟ್ಟಿಗೆದ್ದ ಜನರಿಂದ ರಸ್ತೆ ತಡೆ

Published:
Updated:

ಬೆಂಗಳೂರು: ಕಾರು ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆಯಿಂದ ಆಕ್ರೋಶಗೊಂಡ ಜನರು ರಸ್ತೆ ತಡೆ ನಡೆಸಿ ಎರಡು ಕಾರುಗಳನ್ನು ಜಖಂ ಮಾಡಿದ ಘಟನೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಗೋನಹಳ್ಳಿಯಲ್ಲಿ ಗುರುವಾರ ನಡೆದಿದೆ.

ಗ್ರಾಮಸ್ತರು ರಸ್ತೆ ತಡೆ ನಡೆಸಿದ್ದರಿಂದ ಸುಮಾರು ಅರ್ಧ ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯವಸ್ತವಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಅಪಘಾತದಲ್ಲಿ ಬುವನಹಳ್ಳಿಯ ಜಯಮ್ಮ (45) ಮತ್ತು ಅವರ ಮಗಳು ನಯನಾ (9) ಗಾಯಗೊಂಡಿದ್ದಾರೆ. ಜಯಮ್ಮನವರ ತಲೆಗೆ ತೀವ್ರ ಪೆಟ್ಟಾಗಿದ್ದು ಅವರನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ. ನಯನಾಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತ ಮಾಡಿದ ಕಾರಿನಲ್ಲಿ ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ಸದಸ್ಯರು ಪ್ರಯಾಣಿಸುತ್ತಿದ್ದರು. ಕುಮಾರಕೃಪಾ ಅತಿಥಿ ಗೃಹಕ್ಕೆ ಸೇರಿದ ಎರಡು ಕಾರನ್ನು ಪಡೆದುಕೊಂಡಿದ್ದ ಅವರು 2 ದಿನಗಳ ಹಿಂದೆ ಚಿತ್ರದುರ್ಗಕ್ಕೆ ಹೋಗಿದ್ದರು. ಗುರುವಾರ ನಗರಕ್ಕೆ ಬಂದ ಅವರು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದವರಿಗೆ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಬಂದ ಜಯಮ್ಮ ಮತ್ತು ನಯನಾ ಅವರು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿ ಜಮಾಯಿಸಿದ ಜನರು ಎರಡೂ ಕಾರುಗಳ ಗಾಜುಗಳನ್ನು ಪುಡಿ ಮಾಡಿ ಜಖಂಗೊಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದೇವನಹಳ್ಳಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೊಬೈಲ್ ದೋಚಿ ಪರಾರಿ

ನಗರದಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಮೊಬೈಲ್ ಫೋನ್ ದೋಚಿರುವ ಘಟನೆ ಆರ್.ಟಿ. ನಗರದಲ್ಲಿ ಗುರವಾರ ಬೆಳಗಿನ ಜಾವ ನಡೆದಿದೆ.

ಹರೀಶ್ ದರೋಡೆಗೊಳಗಾದವರು. ಕೇಟರಿಂಗ್ ಕೆಲಸ ಮಾಡುವ ಅವರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ದರೋಡೆ ಮಾಡಲಾಗಿದೆ. ವಾಣಿ ಶಾಲೆ ಬಳಿ ಹರೀಶ್ ನಡೆದುಕೊಂಡು ಹೋಗುವಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮಾಡಿ ಮೊಬೈಲ್ ದರೋಡೆ ಮಾಡಿದ್ದಾರೆ.

ಕಾರಿನಲ್ಲಿ ಹಲವು ಮಂದಿ ಇದ್ದರು. ಅದರಲ್ಲಿ ಮೂರು ಮಂದಿ ಮಾತ್ರ ಕೆಳಗೆ ಇಳಿದು ಹಲ್ಲೆ ಮಾಡಿದರು ಎಂದು ಹರೀಶ್ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್.ಟಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚಕಿಯ ಸೆರೆ

ಎಂಫಸಿಸ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕಿ ಎಂದು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಹೊಸಕೋಟೆಯ ಪಾರ್ವತಿಪುರದ ಭುವನಪ್ರಿಯ (20) ಎಂಬುವರನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಂಪೆನಿ ಹೆಸರನ್ನು ದುರುಪಯೋಗಪಡಿಸಿಕೊಂಡು ಯುವತಿಯೊಬ್ಬಳು ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿ ಭುವನಪ್ರಿಯ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

`ಎಂಫಸಿಸ್ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕಿ ಎಂದು ನಕಲಿ ಗುರುತಿನ ಚೀಟಿಯನ್ನು ಭುವನಪ್ರಿಯ ಮಾಡಿಸಿಕೊಂಡಿದ್ದರು. ಬಿಎಂಎಸ್, ವಿಜಯಾ, ಪಿವಿಪಿ, ಎಸ್‌ಜೆಆರ್‌ಸಿ ಕಾಲೇಜಿಗೆ ಹೋಗಿದ್ದ ಅವರು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದರು~ ಎಂದು ಇನ್‌ಸ್ಪೆಕ್ಟರ್ ಡಿ. ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

`ಹಣ ಪಡೆಯುತ್ತಿದ್ದ ಅವರು ಹೋಟೆಲ್ ಮುಂತಾದೆಡೆ ಸಂದರ್ಶನವನ್ನೂ ನಡೆಸುತ್ತಿದ್ದರು. ಕೆಲವರಿಗೆ ಆಫರ್ ಲೆಟರ್ ಸಹ ನೀಡಿದ್ದಾರೆ. ಜಯನಗರದ ಕಾಲೇಜಿನಲ್ಲಿ ಬಿ.ಇ ಓದುತ್ತಿದ್ದ ಭುವನಪ್ರಿಯ ವಿಧ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ವಂಚನೆಗಿಳಿದಿದ್ದರು. ಅವರಿಂದ ನಲವತ್ತು ಸಾವಿರ ರೂ, ಮೊಬೈಲ್ ಫೋನ್, 2 ಸಿಮ್ ಕಾರ್ಡ್, ನಕಲಿ ಗುರುತಿನ ಚೀಟಿ, ಏಳು ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ~ ಎಂದರು.

ವೇಶ್ಯಾವಾಟಿಕೆ: ಬಂಧನ

ಕೆಲಸ ಕೊಡಿಸುವುದಾಗಿ ಹೇಳಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆದುಕೊಂಡು ಬಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂರು ಮಂದಿಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಏಳು ಯುವತಿಯರನ್ನು ಬಂಧಮುಕ್ತಗೊಳಿಸಿದ್ದಾರೆ. ಬನಶಂಕರಿಯ ಸುಬ್ರಹ್ಮಣ್ಯ (31), ಕೋಣನಕುಂಟೆಯ ಸದಾಶಿವ (30) ಮತ್ತು ಸರಾಯಿಪಾಳ್ಯದ ಬಾಬು ಪೀರ್ (32) ಬಂಧಿತರು.

ಕೆಲಸ ಕೊಡಿಸುವುದಾಗಿ ಹೇಳಿ ಕೋಲ್ಕತ್ತ, ದೆಹಲಿ ಮುಂತಾದ ರಾಜ್ಯಗಳಿಂದ ಯುವತಿಯರನ್ನು ಕರೆದುಕೊಂಡು ಬಂದಿದ್ದ ಆರೋಪಿಗಳು ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು. ಬಂಧಿತರಿಂದ 8 ಸಾವಿರ ರೂ, 7 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಆರೋಪಿಗಳಾದ ಶಾಮ್‌ಸುಂದರ್, ರವಿರಾಜ ಮತ್ತು ಭರತ್ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ಸುಗಂಧ ದ್ರವ್ಯ ಮಾರಾಟ: ಬಂಧನ

ನೀವಿಯಾ ಕಂಪೆನಿಯ ಹೆಸರಿನಲ್ಲಿ ನಕಲಿ ಉತ್ಪನ್ನ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಬ್ಬನ್‌ಪೇಟೆಯ ಲಲಿತ್ ಚಗ್ಗನ್ (28), ನಗರ್ತಪೇಟೆಯ ಮಂಗಲ್‌ಸಿಂಗ್ (47), ಸಹಕಾರನಗರದ ಆನಂದ (30) ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 3 ಲಕ್ಷ ರೂ. ಮೌಲ್ಯದ ಸುಗಂಧ ದ್ರವ್ಯ, ಬಾಡಿ ಸ್ಪ್ರೇ, ಡಿಯೋಡ್ರೆಂಟ್, ಶಾಂಪೂ, ಬಾಡಿಲೋಷನ್ ವಶಪಡಿಸಿಕೊಳ್ಳಲಾಗಿದೆ. ಕಂಪೆನಿ ಹೆಸರಿನಲ್ಲಿ ನಕಲಿ ಸುಗಂಧ ದ್ರವ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಗ್ಗೆ ನಿವಿಯದ ಅಧಿಕೃತ ಮಾರಾಟ ಪ್ರತಿನಿಧಿ ಸಂತೋಷ್ ರಾಮಾನುಜಂ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry