ಅಪಘಾತ: ಹೆದ್ದಾರಿ ಬಂದ್

7

ಅಪಘಾತ: ಹೆದ್ದಾರಿ ಬಂದ್

Published:
Updated:

ಚನ್ನಮ್ಮನ ಕಿತ್ತೂರು: ಇಲ್ಲಿಗೆ ಸಮೀಪದ ಇಟಗಿ ಕ್ರಾಸ್ ಬಳಿ ಶುಕ್ರವಾರ ಖಾಸಗಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಹಿಂಬದಿ ಕುಳಿತಿದ್ದ ಮಹಿಳೆಯ ತಲೆಗೆ ತೀವ್ರ ಗಾಯವಾಗಿದೆ.ಗಾಯಗೊಂಡ ಮಹಿಳೆಯನ್ನು ಬೆಳಗಾವಿ ತಾಲ್ಲೂಕಿನ ಬೆಂಡಿಗೇರಿ ಗ್ರಾಮದ ಸಂತೋಷಿನಿ ಅರವಿಂದ ಪಾಟೀಲ (28) ಎಂದು ಗುರುತಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಅಲ್ಲಿದ್ದ ಸಾರ್ವಜನಿಕರು ಆಕ್ರೋಶಗೊಂಡು ಒಂದೂವರೆ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದರು. ಕೆಲ ಕಿಡಿಗೇಡಿಗಳು ಖಾಸಗಿ ಬಸ್ಸಿಗೆ ಕಲ್ಲು ಹೊಡೆದಿದ್ದರಿಂದ ಅದರ ಮುಂದಿನ ಗಾಜು ಜಖಂಗೊಂಡಿದೆ.ಸುದ್ದಿ ತಿಳಿದು ಡಿಎಸ್‌ಪಿ ಎಸ್. ಬಿ. ಪಾಟೀಲ, ಸಿಪಿಐ ಸುನಿಲ್ ಕಾಂಬ್ಳೆ ಹಾಗೂ ಎಸ್‌ಐ ರಮೇಶ ಹೂಗಾರ ಸ್ಥಳಕ್ಕೆ ಧಾವಿಸಿ ಬಂದು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಪ್ರಯತ್ನಿಸಿದರು. `ಪದೇ, ಪದೇ ಈ ಸ್ಥಳದಲ್ಲಿ ಸಂಭವಿಸುತ್ತಿರುವ ಅಪಘಾತ ತಪ್ಪಿಸಲು ಸೂಕ್ತಕ್ರಮ ಕೈಗೊಳ್ಳಬೇಕು~ ಎಂದು ಸಾರ್ವಜನಿಕರು ಆಗ್ರಹಿಸಿದರು.ಹೆದ್ದಾರಿ ಮೇಲೆ ನಿಲುಗಡೆ ಬೇಡ: ಅನಂತರ ಕಿತ್ತೂರು ಪೊಲೀಸ್ ವೃತ್ತ ಕಚೇರಿಯಲ್ಲಿ ಡಿಎಸ್‌ಪಿ ಎಸ್. ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಇಟಗಿ ರಸ್ತೆ, ಎಂ. ಕೆ. ಹುಬ್ಬಳ್ಳಿ ಗ್ರಾಮದಲ್ಲಿ ನಿಲುಗಡೆ ಮಾಡಿ ಸಾಗುವ ಮಾಕ್ಸಿಕ್ಯಾಬ್, ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಹೆದ್ದಾರಿ ಮೇಲೆ ನಿಲ್ಲಿಸದೆ  ನಿಗದಿತ ಸ್ಥಳದಲ್ಲಿ ಪ್ರಯಾಣಿಕರನ್ನು ಇಳಿಸಿ ಹೋಗುವಂತೆ ಅಧಿಕಾರಿಗಳು ಸೂಚಿಸಿದರು. ಹೆದ್ದಾರಿ ಮೇಲೆ ನಿಲುಗಡೆ ಮಾಡಿದರೆ ಚಾಲಕರ ಮೇಲೆ ಸೂಕ್ತಕ್ರಮ ಜರುಗಿಸುವುದಾಗಿಯೂ ಅವರು ಎಚ್ಚರಿಸಿದರು.`ಇಟಗಿ ಕ್ರಾಸ್ ಬಳಿ ದಿನಪೂರ್ತಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸ ಲಾಗುವುದು. ಸಾರ್ವಜನಿಕರು ರಸ್ತೆ ದಾಟುವಾಗ ಮೊಬೈಲ್ ಫೋನಿನಲ್ಲಿ ಮಾತನಾಡುತ್ತ ಸಾಗಬಾರದು. ವಾಹನ ಬರುತ್ತಿರುವುದನ್ನು ಗಮನಿಸಿ ದಾಟಬೇಕು. ಮಕ್ಕಳ ಕೈ ಹಿಡಿದುಕೊಂಡು ಪಾಲಕರು ರಸ್ತೆ ದಾಟಿಸಬೇಕು.ಪ್ರಯಾಣಿಕರು ಹೆದ್ದಾರಿ ಮೇಲೆಯೇ ಬಸ್ ಹತ್ತುವ ಮತ್ತು ಇಳಿಯುವ ಸಾಹಸಕ್ಕೆ ಮುಂದಾಗಬಾರದು. ರಸ್ತೆ ದಾಟುವಾಗ ಸ್ಥಳದಲ್ಲಿ ನಿಯೋಜಿಸಲಾಗಿರುವ ಪೊಲೀಸ್ ಸಿಬ್ಬಂದಿಯ ಸಹಾಯ ಪಡೆಯಬೇಕು~ ಎಂದು ಪಾಟೀಲ ಸೂಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry