ಬುಧವಾರ, ಮೇ 12, 2021
19 °C

ಅಪರಾಧ ತಡೆಗೆ `ಸಮುದಾಯ ಪೊಲೀಸ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಸ್ಥಳೀಯ ಮಟ್ಟದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ `ಸಮುದಾಯ ಪೊಲೀಸ್' (ಕಮ್ಯುನಿಟಿ ಪೊಲೀಸಿಂಗ್) ಎಂಬ ವಿನೂತನ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪೊಲೀಸ್ ಇಲಾಖೆ ಮತ್ತು ಜನಾಗ್ರಹ ಸಂಸ್ಥೆಯ ಸಹಭಾಗಿತ್ವದ ಈ `ಸಮುದಾಯ ಪೊಲೀಸ್' ಯೋಜನೆಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಅಧಿಕೃತ ಚಾಲನೆ ನೀಡಿದರು.ಆರಂಭಿಕ ಹಂತದಲ್ಲಿ ನಗರದ ಏಳೂ ವಿಭಾಗಗಳ ಒಂದೊಂದು ಠಾಣೆಯಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಅದರ ಯಶಸ್ಸಿನ ಮುಂದುವರಿದ ಭಾಗವಾಗಿ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಚಿಂತನೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯದ್ದಾಗಿದೆ. ಜ್ಞಾನಭಾರತಿ, ಮಡಿವಾಳ, ಜೆ.ಪಿ.ನಗರ, ಬಾಣಸವಾಡಿ, ರಾಜಗೋಪಾಲನಗರ, ಅಶೋಕನಗರ ಮತ್ತು ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ.

ಈ ಏಳೂ ಠಾಣೆಗಳಿಗೆ ಈಗಾಗಲೇ ಒಟ್ಟು 186 ಮಂದಿ ಸಮುದಾಯ ಪೊಲೀಸರಾಗಿ ಆಯ್ಕೆಯಾಗಿದ್ದಾರೆ. ಆಯಾ ಠಾಣೆ ವ್ಯಾಪ್ತಿಯಲ್ಲಿ `ವಲಯ ಸುರಕ್ಷಾ ಮಿತ್ರರು' (ಎಎಸ್‌ಎಂ) ಎಂಬ ಸ್ವಯಂಸೇವಾ ಸಮಿತಿ ಚಾಲ್ತಿಯಲ್ಲಿರುತ್ತದೆ. ಈ ಸಮಿತಿಯ ಸದಸ್ಯರು ಪೊಲೀಸರೊಂದಿಗೆ ಸಕ್ರೀಯವಾಗಿ ಕಾರ್ಯನಿರ್ವಹಿಸಿ ಸ್ಥಳೀಯ ಮಟ್ಟದಲ್ಲಿ ನಡೆಯುವ ಅಕ್ರಮ ಚಟುವಟಿಕೆ, ಗಲಭೆ, ಕಳ್ಳತನ ಸೇರಿದಂತೆ ಮುಂತಾದ ಅಪರಾಧ ಕೃತ್ಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ವಾಹಕರಾಗಿ ಕೆಲಸ ಮಾಡುತ್ತಾರೆ.ಪೊಲೀಸ್ ಇಲಾಖೆ ಮತ್ತು ಜನಾಗ್ರಹ ಸಂಸ್ಥೆಯ ಸಹಭಾಗಿತ್ವದಲ್ಲಿ ತಯಾರಿಸಲಾದ ಗುರುತಿನ ಚೀಟಿಯನ್ನು ಈ ಸಮುದಾಯದ ಸದಸ್ಯರಿಗೆ ನೀಡಲಾಗುವುದು. ಪೊಲೀಸ್ ಬಾತ್ಮಿದಾರರಂತೆ ಕೆಲಸ ಮಾಡುವುದು ಮಾತ್ರ ಇವರ ಕೆಲಸ. ಪೊಲೀಸರಿಗಿರುವಂತಹ ಅಧಿಕಾರವಾಗಲೀ, ಸೌಲಭ್ಯವಾಗಲೀ ಇರುವುದಿಲ್ಲ.ಆಯ್ಕೆ ಪ್ರಕ್ರಿಯೆ: 25 ವರ್ಷಕ್ಕಿಂತ ಅಧಿಕ ಪ್ರಾಯದವರು ಸಮುದಾಯ ಪೊಲೀಸ್ ಆಗಬಹುದು. ಠಾಣೆ ಹೊಂದಿರುವ ವ್ಯಾಪ್ತಿ ಮೇರೆಗೆ, 30 ರಿಂದ 45 ಮಂದಿಯನ್ನು ಆಯ್ಕೆ ಮಾಡಲಾಗುವುದು. ಸ್ಥಳೀಯರ ಪೂರ್ವಾಪರ ಪರಿಶೀಲಿಸಿದ ನಂತರ ಅಪರಾಧ ಹಿನ್ನೆಲೆ, ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗದ ವ್ಯಕ್ತಿಗಳನ್ನು ಮಾತ್ರ ಸಮುದಾಯ ಪೊಲೀಸರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಪೊಲೀಸರಿಗೆ ಒತ್ತಡ ಕಡಿಮೆ

`ಸಮದಾಯ ಪೊಲೀಸ್' ವ್ಯವಸ್ಥೆಯಲ್ಲಿ ನಾಗರಿಕರು ಪ್ರಮುಖ ಪಾತ್ರ ವಹಿಸುತ್ತಾರೆ. ಸ್ಥಳೀಯ ಮಟ್ಟದ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ನೆರವಾಗುವ ಮೂಲಕ ಸಾರ್ವಜನಿಕರು ಪೊಲೀಸ್ ಸ್ನೇಹಿಯಾಗಿ ಕೆಲಸ ಮಾಡುತ್ತಾರೆ. ಇದರಿಂದ ಪೊಲೀಸರು ಮತ್ತು ನಾಗರಿಕರ ನಡುವಿನ ಅಂತರ ಕಡಿಮೆಯಾಗುತ್ತದೆ.

- ಎಸ್.ಟಿ.ರಮೇಶ್, ನಿವೃತ್ತ ಡಿಜಿಪಿ

ದುರುಪಯೋಗವಾಗಬಾರದು

`ನಾಗರಿಕರನ್ನು ಸಮುದಾಯ ಪೊಲೀಸರನ್ನಾಗಿ ಬಳಸಿಕೊಳ್ಳುತ್ತಿರುವುದು ಒಳ್ಳೆಯ ಪ್ರಯತ್ನ. ಆದರೆ, ಈ ಯೋಜನೆ ಕಾನೂನುಬದ್ಧವಾಗಿರದ ಕಾರಣ ಸಿಬ್ಬಂದಿಯಲ್ಲಿ ನಿರ್ಲಕ್ಷ್ಯ ಭಾವನೆ ಮೂಡಬಹುದು. ಜತೆಗೆ, ಸಮುದಾಯ ಪೊಲೀಸರು ವೈಯಕ್ತಿಕ ಕಾರ್ಯ ಸಾಧನೆಗೂ ಮುಂದಾಗುವ ಸಾಧ್ಯತೆ ಇದೆ. ಪೊಲೀಸರು ಠಾಣೆಯಲ್ಲೇ ಕುಳಿತು ನಾಗರಿಕರಿಂದ ಕೆಲಸ ಮಾಡಿಸಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಬಾರದು' ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಜ್ಞರೊಬ್ಬರು ಅಭಿಪ್ರಾಯಪಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.