ಬುಧವಾರ, ಮೇ 19, 2021
24 °C
ಹೈಕೋರ್ಟ್‌ನಲ್ಲಿ ಸರ್ಕಾರದ ಹೇಳಿಕೆ

ಅಪರಾಧ ತನಿಖೆಗೆ ಪ್ರತ್ಯೇಕ ವಿಭಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕಾನೂನು - ಸುವ್ಯವಸ್ಥೆ ಮತ್ತು ಅಪರಾಧ ಪ್ರಕರಣಗಳ ತನಿಖೆಗೆ ಪ್ರತ್ಯೇಕ ವಿಭಾಗ ರಚಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ಗುರುವಾರ ತಿಳಿಸಿದೆ. ಅಲ್ಲದೆ, ಪ್ರಾಸಿಕ್ಯೂಟರ್‌ಗಳನ್ನು (ಅಭಿಯೋಜಕರು) ಗೃಹ ಇಲಾಖೆಯ ವ್ಯಾಪ್ತಿಯಿಂದ ಕಾನೂನು ಇಲಾಖೆಯ ವ್ಯಾಪ್ತಿಗೆ ತರುವ ಕುರಿತೂ ಪ್ರಯತ್ನ ನಡೆದಿದೆ ಎಂದು ಹೇಳಿದೆ.ರಾಜ್ಯದಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚನೆ ಆಗಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಎಂ.ಆರ್. ರಾಜಕುಮಾರ್ ಎಂಬುವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಗಿದ್ದ ಕೆ. ಶ್ರೀಧರ ರಾವ್ ಅವರಿಗೆ ಪತ್ರ ಬರೆದಿದ್ದರು. ಇದನ್ನು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, `ಈ ಪ್ರಕರಣದ ವಿಚಾರಣೆ ವೇಳೆ, ನ್ಯಾಯಪೀಠ ನೀಡಿದ್ದ ನಿರ್ದೇಶನಗಳನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ರಾಸಿಕ್ಯೂಟರ್‌ಗಳನ್ನು ಕಾನೂನು ಇಲಾಖೆಯ ವ್ಯಾಪ್ತಿಗೆ ತರುವ ಕುರಿತು ಮುಖ್ಯಮಂತ್ರಿಯವರ ಜೊತೆ ಮಾತುಕತೆ ನಡೆಸಲಾಗಿದೆ. ಹಲವು ದೇಶಗಳಲ್ಲಿ ಪ್ರಾಸಿಕ್ಯೂಟರ್‌ಗಳನ್ನು ಅಟಾರ್ನಿ ಜನರಲ್‌ಗಳು ನೇಮಕ ಮಾಡುತ್ತಾರೆ. ತನಿಖಾ ಅಧಿಕಾರಿಗಳನ್ನು ಅನ್ಯ ಒತ್ತಡಗಳಿಂದ ಮುಕ್ತಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದು ವಿವರಣೆ ನೀಡಿದರು.`ಸಾಧನೆಗಳಿಂದ ಏನು ಲಾಭ?': `ಜನ ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲ. ಇದರಿಂದ ನಿರಪರಾಧಿಗಳು ಸಾವನ್ನಪ್ಪುತ್ತಿದ್ದಾರೆ. ಜನಸಾಮಾನ್ಯರ ಬದುಕುವ ಹಕ್ಕನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಅನ್ಯ ಕ್ಷೇತ್ರಗಳಲ್ಲಿ ಸಾಧನೆ ಮೆರೆದು ಪ್ರಯೋಜನ ಏನು?' ಎಂದು ನ್ಯಾಯಪೀಠ ಸರ್ಕಾರವನ್ನು ಮೌಖಿಕವಾಗಿ ಪ್ರಶ್ನಿಸಿತು.`ಪ್ರಕರಣಗಳ ತನಿಖೆ ಸರಿಯಾಗಿ ನಡೆಯಬೇಕು. ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಕೆಲವು ಪ್ರಕರಣಗಳ ಕುರಿತು ತನಿಖೆ ಆಗಬೇಕೇ ಬೇಡವೇ ಎಂಬುದನ್ನು ಪೊಲೀಸರೇ ನಿರ್ಧರಿಸುತ್ತಿದ್ದಾರೆ. ಆರೋಪ ಪಟ್ಟಿ ಸಲ್ಲಿಸಬೇಕೇ ಬೇಡವೇ ಎಂಬುದನ್ನೂ ಕೆಲವು ಕಡೆ ತನಿಖಾಧಿಕಾರಿಗಳೇ ನಿರ್ಧರಿಸುತ್ತಿದ್ದಾರೆ. ಇಂಥ ವಿಚಾರಗಳ ಕುರಿತು ನಾವು ಸಂವೇದನೆ ಕಳೆದುಕೊಂಡಿದ್ದೇವೆ. ಅಪರಾಧ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲುವವರ ಪೈಕಿ ಕೇವಲ ಶೇಕಡ 6-7ರಷ್ಟು ಜನಕ್ಕೆ ಶಿಕ್ಷೆ ಆಗುತ್ತಿದೆ' ಎಂದು ಪೀಠ ಕಳವಳ ವ್ಯಕ್ತಪಡಿಸಿತು.ಜಪಾನ್‌ನಲ್ಲಿ ಆರೋಪಿ ಸ್ಥಾನದಲ್ಲಿ ನಿಂತ ಶೇಕಡ 99ರಷ್ಟು ಜನರಿಗೆ ಶಿಕ್ಷೆ ಆಗುತ್ತಿದೆ. ಅಲ್ಲಿ ಪ್ರಾಸಿಕ್ಯೂಷನ್ ನಿರ್ದೇಶಕರು ವಿವಿಧ ಪ್ರಕರಣಗಳ ತನಿಖೆ ಕುರಿತು ಸಂಸತ್ತಿಗೆ ಸಮಗ್ರ ವರದಿ ನೀಡುತ್ತಾರೆ. ಆದರೆ ಭಾರತದಲ್ಲಿ, ಆರೋಪಿ ದೋಷಮುಕ್ತಗೊಂಡರೆ ಪ್ರಾಸಿಕ್ಯೂಟರ್ ಹಾಗೂ ತನಿಖಾಧಿಕಾರಿಯನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ನಮ್ಮ ದೇಶದಲ್ಲೂ ವೈಜ್ಞಾನಿಕ ತನಿಖಾ ವಿಧಾನ ಜಾರಿಗೆ ಬರಬೇಕಲ್ಲವೇ ಎಂದು ಪ್ರಶ್ನಿಸಿತು.`ಪೊಲೀಸ್ ವ್ಯವಸ್ಥೆಯ ಸುಧಾರಣೆ ಕುರಿತು ಸುಪ್ರೀಂ ಕೋರ್ಟ್ ಸಾಕಷ್ಟು ಪ್ರಕರಣಗಳಲ್ಲಿ ನಿರ್ದೇಶನ ನೀಡಿದೆ. ಅವುಗಳ ಆಧಾರದಲ್ಲಿ ನಾವು-ನೀವು ಒಟ್ಟಾಗಿ ಕಾರ್ಯಕ್ರಮ ರೂಪಿಸೋಣ' ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೊ. ಕುಮಾರ್, `ಒಂದು ತಿಂಗಳ ಕಾಲಾವಕಾಶ ನೀಡಿ. ಈ ಕುರಿತು ಸಮಗ್ರ ವರದಿಯೊಂದನ್ನು ನಿಮ್ಮ ಮುಂದಿಡುತ್ತೇವೆ' ಎಂದು ವಾಗ್ದಾನ ನೀಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.