ಶುಕ್ರವಾರ, ಮಾರ್ಚ್ 5, 2021
16 °C
ಮೂರು ವರ್ಷದಿಂದ ಸಿದ್ಧೇಶ್ವರ ಜಾತ್ರೆಯಲ್ಲಿ ಹೊರ ಪೊಲೀಸ್‌ ಠಾಣೆ ಸ್ಥಾಪನೆ

ಅಪರಾಧ ನಿಯಂತ್ರಣ: ಭಕ್ತರು ನಿರುಮ್ಮ ಳ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಅಪರಾಧ ನಿಯಂತ್ರಣ: ಭಕ್ತರು ನಿರುಮ್ಮ ಳ

ವಿಜಯಪುರ: ಸಂಕ್ರಮಣದ ದಿನ ಸಮೀಪಿಸಿತು ಎಂದರೆ ನಗರದ ಆರಾಧ್ಯ ದೈವ ಸಿದ್ಧೇಶ್ವರನ ಭಕ್ತರಿಗೆ ಪುಣ್ಯದ ದಿನಗಳು ಎದುರಾದವು ಎಂಬ ಭಾವನೆ. ಈ ಸಂದರ್ಭವೇ ವಾರಕ್ಕೂ ಹೆಚ್ಚು ಅವಧಿ ಸಂಕ್ರಮಣ ಜಾತ್ರೆ, ನಮ್ಮೂರ ಜಾತ್ರೆ ಗುಡಿಯಲ್ಲಿ ನಡೆಯುತ್ತದೆ.ಜಾತ್ರೆಯ ದಿನಗಳಲ್ಲಿ, ಅದೂ ವಿಶೇಷವಾಗಿ ಮಕರ ಸಂಕ್ರಮಣದ ಸಂದರ್ಭ ಸಿದ್ಧೇಶ್ವರನ ದರ್ಶನ ಪಡೆಯಲು ಭಕ್ತ ಸಮೂಹ ಗುಡಿಗೆ ದಾಂಗುಡಿಯಿಡುತ್ತದೆ. ಜಾತ್ರಾ ಮಹೋತ್ಸವ ಆರಂಭಗೊಳ್ಳುತ್ತಿದ್ದಂತೆ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಸಹಸ್ರ, ಸಹಸ್ರ ದಾಟುತ್ತದೆ. ಮುಂಜಾನೆಯಿಂದ ಮುಸ್ಸಂಜೆವರೆಗೂ ಸರತಿ ಇರುತ್ತದೆ. ಒಂದು ಕಿ.ಮೀ.ಗೂ ಹೆಚ್ಚು ದೂರ ವ್ಯಾಪಿಸಿಕೊಳ್ಳುವ ಜಾತ್ರೆಯ ಪರಿ ಸರದಲ್ಲಂತೂ ಕಾಲಿಡಲು ಜಾಗ ಸಿಕ್ಕದು ಎಂಬಂಥ ಸ್ಥಿತಿ. ಮುಸ್ಸಂಜೆಯಿಂದ ತಡರಾತ್ರಿ 11ರವರೆಗೂ ಇದೇ ಚಿತ್ರಣ ಗುಡಿಯ ಆಸುಪಾಸು ಗೋಚರಿಸುತ್ತದೆ.ಜನಜಂಗುಳಿಯನ್ನೇ ನಿರೀಕ್ಷಿಸುವ ಕಿಸೆಗಳ್ಳರಿಗೆ ಇದು ‘ಸಂಕ್ರಾಂತಿ ಸುಗ್ಗಿ’ಯ ಕಾಲ. ಪ್ರತಿ ವರ್ಷದ ಜಾತ್ರೆಯಲ್ಲೂ ಇವರ ಉಪಟಳ ತಪ್ಪದು. ಗುಡಿಯ ಒಳಭಾಗದಲ್ಲಿ ಸಿದ್ಧೇಶ್ವರನ ದರ್ಶನ ಪಡೆಯಲು ಭಕ್ತರು ಧ್ಯಾನಾಸಕ್ತರಾಗಿದ್ದಾಗ, ಸರತಿಯಲ್ಲಿ ತಮ್ಮ ಸರದಿಗಾಗಿ ನಿಷ್ಕಲ್ಮಶ ಮನಸ್ಸಿನಿಂದ ಕಾತರದಿಂದ ಕಾಯುತ್ತಿದ್ದ ಸಂದರ್ಭಗಳಲ್ಲೇ ಕಳ್ಳರು ತಮ್ಮ ಕರಾಮತ್ತು ಪ್ರದರ್ಶಿಸುತ್ತಿದ್ದರು.ಪೊಲೀಸರು ಈ ಕುರಿತ ದೂರು ಸ್ವೀಕರಿಸಿ ಸುಮ್ಮನಾಗುತ್ತಿದ್ದರು. ಯಾರೆಂಬುದು ಪತ್ತೆಯಾಗುತ್ತಿರಲಿಲ್ಲ. ಕೆಲ ಭಕ್ತರು ನೆಮ್ಮದಿಯಿಂದ ದರ್ಶನ ಪಡೆಯಲು ತ್ರಾಸು ಪಡಬೇಕಿತ್ತು. ಆದರೆ ಮೂರು ವರ್ಷಗಳಿಂದ ಈ ಸಮಸ್ಯೆ ಭಕ್ತ ಸಮೂಹವನ್ನು ಬಾಧಿಸುತ್ತಿಲ್ಲ. ಗಾಂಧಿಚೌಕ್‌ ಪೊಲೀಸರು ಗುಡಿಯ ಎಡ ಬದಿಯಲ್ಲೇ ಹೊರಠಾಣೆ ಸ್ಥಾಪಿಸಿ, ಭದ್ರತೆ ಒದಗಿಸುವ ಕಾಯಕ ನಡೆಸುತ್ತಿದ್ದಾರೆ. ಜಾತ್ರೆ ಬೀದಿಯಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.‘ಗುಡಿಯೊಳಗೆ ಆರು ಸಿ.ಸಿ.  ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮುಂಭಾಗದಲ್ಲಿನ ಕ್ಯಾಮೆರಾ ಹೊರಗಿನ ಚಿತ್ರಣ ಬಿತ್ತರಿಸಿದರೆ, ಎಡ–ಬಲ ಬದಿಯ ಕ್ಯಾಮೆರಾಗಳು ಗುಡಿಯ ಸುತ್ತಲಿನ ಚಿತ್ರಣವನ್ನು ಸೆರೆ ಹಿಡಿದು, ಟಿವಿಗೆ ರವಾನಿಸುತ್ತವೆ.ಗುಡಿಯ ಒಳಭಾಗದಲ್ಲೂ ಎಡ–ಬಲ ಹಾಗೂ ಗರ್ಭಗುಡಿಯ ಒಳಗೆ ಕ್ಯಾಮೆರಾ ಅಳವಡಿಸಿದ್ದು, ಒಳಗೆ ನಡೆಯುವ ಎಲ್ಲ ಪ್ರಕ್ರಿಯೆಗಳನ್ನು ಸೆರೆ ಹಿಡಿದು ಸಿಸ್ಟಂಗೆ ರವಾನಿಸುತ್ತವೆ. ಗುಡಿ ಬದಿಯೇ ನಿರ್ಮಿಸಿರುವ ತಾತ್ಕಾಲಿಕ ಹೊರ ಪೊಲೀಸ್‌ ಠಾಣೆಯಲ್ಲಿ ಎಲ್‌ಇಡಿ ಟಿವಿಯಿಟ್ಟಿದ್ದು, ಇಲ್ಲಿ ಎಲ್ಲ ಚಿತ್ರಣ ಬಿತ್ತರಗೊಳ್ಳುತ್ತದೆ.ಇದುವರೆಗೂ ಯಾವುದೇ ಒಂದು ಕಿಸೆಗಳ್ಳತನದ ಪ್ರಕರಣ ದಾಖಲಾಗಿಲ್ಲ. ಇದು ನಮಗೂ–ಭಕ್ತ ಸಮೂಹಕ್ಕೂ ನೆಮ್ಮದಿ ನೀಡಿದೆ. ಇದರ ಜತೆಗೆ ಇನ್ನೊಂದು ಪ್ರಮುಖ ಅನುಕೂಲ ಏನೆಂದರೇ, ಜಾತ್ರೆ ಬೀದಿ, ಗುಡಿಯ ಆಸುಪಾಸು, ಒಳಗೆ ಪುಟ್ಟ ಮಕ್ಕಳು ತಪ್ಪಿಸಿಕೊಂಡ ಕ್ಷಣ ಮಾತ್ರದಲ್ಲೇ ಪೋಷಕರು ಇಲ್ಲಿಗೆ ಬಂದು ದೂರು ನೀಡುತ್ತಾರೆ.ಒಬ್ಬರು ಮಕ್ಕಳ ವಿವರ ಪಡೆಯಲು ಮುಂದಾಗುತ್ತಿದ್ದಂತೆ, ಠಾಣೆಯಲ್ಲಿರುವ ಮತ್ತೊಬ್ಬ ಸಿಬ್ಬಂದಿ ಧ್ವನಿವರ್ಧಕದ ಮೂಲಕ ನಾಪತ್ತೆಯಾಗಿರುವುದನ್ನು ಘೋಷಿಸುತ್ತಾರೆ. ಉಳಿದವರು ಎಲ್ಲಿಂದ ತಪ್ಪಿಸಿಕೊಂಡ ಎಂಬ ಮಾಹಿತಿ ಜಾಡು ಹಿಡಿದು ಹುಡುಕಾಟ ನಡೆಸುತ್ತಾರೆ. 5–10 ನಿಮಿಷಗಳಲ್ಲಿ ಮಕ್ಕಳು ಸಿಕ್ಕುತ್ತಾರೆ. ಸಿದ್ಧೇಶ್ವರ ಭಕ್ತರು ನಿರುಮ್ಮಳರಾಗಿ ಮತ್ತೊಮ್ಮೆ ದರ್ಶನ ಪಡೆದು ಮನೆಗೆ ಮರಳುತ್ತಾರೆ’ ಎಂದು ಕರ್ತವ್ಯ ನಿರ್ವಹಣೆಯಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ಗಳು ‘ಪ್ರಜಾವಾಣಿ’ಗೆ ತಿಳಿಸಿದರು.***

ನಾಲ್ಕು ವರ್ಷದಿಂದ ಸಿದ್ಧೇಶ್ವರರ ಜಾತ್ರೆಗೆ ಬಂದೋಬಸ್ತ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವೆ. ಈ ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಜಾತ್ರೆಯ ಖದರ್‌ ಕೊಂಚ ಕಮ್ಮಿ.

-ಎನ್‌.ಎಸ್‌.ಜನಗೌಡ,
ಜಲನಗರ ಪೊಲೀಸ್ ಠಾಣೆಯ ಪಿಎಸ್‌ಐ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.