ಅಪರಾಧ ಸಾಬೀತು

7
ದೆಹಲಿ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ

ಅಪರಾಧ ಸಾಬೀತು

Published:
Updated:

ನವದೆಹಲಿ (ಪಿಟಿಐ): ದೇಶದಾದ್ಯಂತ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದೆಹಲಿಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಅಮಾನುಷ ರೀತಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ. ಒಬ್ಬ ಆರೋಪಿ ಜೈಲಿನಲ್ಲಿ­ದ್ದಾಗಲೇ ಆತ್ಮಹತ್ಯೆ ಮಾಡಿಕೊಂಡ ಕಾರಣ ನಾಲ್ವರನ್ನು ಅಪರಾಧಿಗಳು ಎಂದು ತ್ವರಿತಗತಿ ನ್ಯಾಯಾಲಯ ಮಂಗಳವಾರ ಘೋಷಿಸಿದೆ.ಶಿಕ್ಷೆಯ ಪ್ರಮಾಣ ಕುರಿತಂತೆ ನ್ಯಾಯಾ­ಲಯವು ಬುಧವಾರ (ಸೆ.11) ವಾದ ಮತ್ತು ಪ್ರತಿವಾದ ಆಲಿಸಲಿದೆ.  ಆರನೇ ಆರೋಪಿಗೆ ಈಗಾಗಲೇ ಬಾಲ ನ್ಯಾಯಮಂಡಳಿ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಮುಕೇಶ್‌ (26), ವಿನಯ್‌ ಶರ್ಮಾ, (20), ಪವನ್‌ ಗುಪ್ತಾ (19), ಅಕ್ಷಯ್‌ ಸಿಂಗ್‌ ಠಾಕೂರ್‌ (28) ವಿರುದ್ಧ ಸಾಮೂಹಿಕ ಅತ್ಯಾಚಾರ,   ಕೊಲೆ ಯತ್ನ, ಒಳಸಂಚು, ಅಸಹಜ ಲೈಂಗಿಕ ಕ್ರಿಯೆ, ದರೋಡೆ, ಸಾಕ್ಷಾ್ಯಧಾರ ನಾಶ, ಅಪಹರಣದ ಆರೋಪಗಳು ಋಜುವಾತುಗೊಂಡಿವೆ. ಆದರೆ, ಡಕಾಯಿತಿಗಾಗಿ ಕೊಲೆ ಆಪಾ­ದನೆ­ಯಿಂದ ಆರೋಪಿಗಳನ್ನು ನ್ಯಾಯಾ­ಲಯ ಮುಕ್ತಗೊಳಿಸಿದೆ.ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಯೋಗೇಶ್‌ ಖನ್ನಾ ಅವರು ನಾಲ್ವರನ್ನು ಅಪರಾಧಿಗಳು ಎಂದು ಘೋಷಿಸು­ತ್ತಿದ್ದಂತೆಯೇ ಪವನ್‌ ಕುಸಿದು ಬಿದ್ದ. ವಿನಯ್‌ ದಿಗ್ಭ್ರಾಂತನಾದ.  ‘ಪಾಪಕ್ಕೆ ತಕ್ಕ ಶಾಸ್ತಿ’ ಎಂದು ಮುಕೇಶ್‌ ಗೊಣಗಿದ. ಅಕ್ಷಯ್‌ನಲ್ಲಿ ಯಾವುದೇ ಆತಂಕದ ಭಾವ ಕಾಣಲಿಲ್ಲ.ನ್ಯಾಯಾಧೀಶರು ಹೇಳಿದ್ದು: ‘ಆರೋಪಿಗಳ ಈ ಹೇಯ ಕೃತ್ಯವನ್ನು ಯಾವುದೇ ವಿಧದಲ್ಲೂ ಸಮರ್ಥಿಸಿ­ಕೊಳ್ಳಲು ಆಗದು. ಆರೋಪಿಗಳು ಪೂರ್ವ ನಿರ್ಧರಿತವಾಗಿಯೇ ಸಂಚು ನಡೆಸಿ ಈ ಕೃತ್ಯ ಎಸಗಿದ್ದಾರೆ. ಬಲವಂತದ ಸಂಭೋಗಕ್ಕಾಗಿ ಯುವತಿಯನ್ನು ಉಪಾ­ಯ­­ದಿಂದ ಅಪಹರಿಸಿ, ಚಲಿ­ಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಅಮಾನುಷ ರೀತಿಯಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಕೊಲೆ ಮಾಡಿದ್ದಾರೆ.ಯುವತಿಯ ಸ್ನೇಹಿತನ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಲು ಯತ್ನಿಸಿದ್ದಾರೆ. ಅವರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದಾರೆ ಕಡೆಗೆ ಅವರಿಬ್ಬರನ್ನು ಬಸ್‌ನಿಂದ ಹೊರಗೆ ಎಸೆದಿದ್ದಾರೆ. ಇಷ್ಟು ಮಾತ್ರವಲ್ಲದೆ, ಸಾಕ್ಷ್ಯ ನಾಶಕ್ಕೂ ಪ್ರಯತ್ನಿಸಿದ್ದಾರೆ’  ಅವರ ಅಪರಾಧಗಳು ಭಾರತೀಯ ದಂಡ ಸಂಹಿತೆಯ (ಐಪಿಸಿ) ಬೇರೆ ಬೇರೆ ಕಲಂ ಅನ್ವಯ ಋಜುವಾತು ಆಗಿದೆ’ ಎಂದು ನ್ಯಾಯಾಧೀಶ ಖನ್ನಾ ಅವರು 237 ಪುಟಗಳ ತೀರ್ಪಿನಲ್ಲಿ ಹೇಳಿದರು.ಯುವತಿ ಸಾವನ್ನಪ್ಪಲು ಸಕಾ­ಲಕ್ಕೆ ವೈದ್ಯೋ­ಪಚಾರ ದೊರಕದಿರು­ವುದು ಮತ್ತು ಚಿಕಿತ್ಸೆ ಸಂದರ್ಭದಲ್ಲಿ ಸೋಂಕು ತಗುಲಿದ್ದು ಕಾರಣ ಎಂಬ ಆರೋಪಿಗಳ ಪರ ವಕೀಲರ ವಾದವನ್ನು ನ್ಯಾಯಾ­ಧೀಶರು ಒಪ್ಪಲಿಲ್ಲ. ‘ಯುವ­ತಿಯ ಗುಪ್ತಾಂಗಕ್ಕೆ ಕಬ್ಬಿಣದ ಸಲಾಕೆ ಮತ್ತು ಕೈ ಹಾಕಿ ಅಂಗಾಂಗಳಿಗೆ  ಹಾನಿ ಮಾಡಲಾಗಿದೆ ಎಂಬ ಅಂಶ­ವನ್ನು ವಿಚಾರಣೆ ವೇಳೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಇದು ಕೊಲೆ ಮಾಡುವ ಉದ್ದೇಶ­ದಿಂದಲೇ ಮಾಡಿ­ದ ಕೃತ್ಯ ಎನ್ನುವುದರಲ್ಲಿ  ಸಂಶಯ­ವಿಲ್ಲ’ ಎಂದರು.‘ಘಟನೆ ನಡೆದಾಗ ಮುಕೇಶ್‌ ಬಸ್‌ ಚಾಲನೆ ಮಾಡುತ್ತಿದ್ದನಷ್ಟೆ. ಆತ ನೇರವಾಗಿ ಅತ್ಯಾಚಾರ ಮತ್ತು ಕೊಲೆಗೆ ಪ್ರಯತ್ನಿಸದಿದ್ದರೂ ಅಪರಾಧದ ಹೊಣೆ­ಯಲ್ಲಿ ಆತನೂ ಸಮಾನ ಭಾಗಿದಾರ’ ಎಂದು ನ್ಯಾಯಾಧೀಶರು ಹೇಳಿದರು.ರಾಮ್‌ ಸಿಂಗ್‌ ಮೇಲಿನ ಪ್ರಕರಣ ವಜಾ: ತಿಹಾರ್‌ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಈ ಪ್ರಕರಣದ ಮತ್ತೊಬ್ಬ ಆರೋಪಿ ರಾಮ್‌ ಸಿಂಗ್ ಕಳೆದ ಮಾರ್ಚ್‌ 11ರಂದು ಆತ್ಮಹತ್ಯೆ ಮಾಡಿ­ಕೊಂಡ ಹಿನ್ನೆಲೆಯಲ್ಲಿ ಆತನ ಮೇಲಿದ್ದ ಪ್ರಕರಣ­ವನ್ನು ನ್ಯಾಯಾಧೀಶರು ವಜಾ ಮಾಡಿದರು.ಈ ಘಟನೆ ಬಗ್ಗೆ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂಬ ಆಕ್ರೋಶದ ಕೂಗು ಕೇಳಿ­ಬಂದಿತ್ತು. ಇದರಿಂದ ತೀವ್ರ ಒತ್ತಡದಲ್ಲಿ ಸಿಲುಕಿದ ಕೇಂದ್ರ ಸರ್ಕಾರ ಅತ್ಯಾಚಾರ ಪ್ರಕರಣ­ಗಳನ್ನು ತಡೆಗಟ್ಟಲು ಕಠಿಣ ಶಿಕ್ಷೆ ವಿಧಿಸಲು ಅವಕಾಶವಾಗು­ವಂತಹ ತಿದ್ದುಪಡಿ­ಯನ್ನು ತಿಂದಿದೆ.ಆದರೆ, ಸದ್ಯ ಈ ಪ್ರಕರಣವನ್ನು ತಿದ್ದುಪಡಿ ಪೂರ್ವದಲ್ಲಿದ್ದ ಕಾನೂನಿನ್ವ­ಯವೇ ವಿಚಾರಣೆ ನಡೆಸ­ಲಾಗಿದೆ. ಹೀಗಾಗಿ ಅತ್ಯಾಚಾರದ ಅಪರಾಧಕ್ಕೆ ಗರಿಷ್ಠವೆಂದರೆ ಜೀವಾವಧಿ ಶಿಕ್ಷೆ ವಿಧಿಸಲು ಸಾಧ್ಯ. ಆದರೆ, ಕೊಲೆ ಅಪರಾಧಕ್ಕಾಗಿ ಗಲ್ಲು ಶಿಕ್ಷೆ ವಿಧಿಸಲು ಅವಕಾಶ ಇದೆ.ಬಾಲಕನಿಗೆ 3 ವರ್ಷ ಶಿಕ್ಷೆ: ಪ್ರಕರಣದ ಆರನೇ ಆರೋಪಿಯು ಘಟನೆ ನಡೆದ ಸಂದರ್ಭ­ದಲ್ಲಿ ವಯಸ್ಕ­ನಲ್ಲದ ಕಾರಣ ಆತನ ವಿಚಾರಣೆ­ಯನ್ನು ನಡೆಸಿದ್ದ ಬಾಲ ನ್ಯಾಯಮಂಡಳಿ, 3 ವರ್ಷದ ಸೆರೆವಾಸ ವಿಧಿಸಿ ಬಾಲಮಂದಿರಕ್ಕೆ ಒಪ್ಪಿಸಿದೆ.ಘಟನೆ ಹಿನ್ನೆಲೆ: ಡಿಸೆಂಬರ್‌ 16ರಂದು ಪ್ಯಾರಾ ಮೆಡಿಕಲ್‌  ವಿದ್ಯಾರ್ಥಿನಿ ಮೇಲೆ ಬಾಲಕನೊಬ್ಬ ಸೇರಿದಂತೆ ಐವರು ಆರೋಪಿಗಳು ಚಲಿಸುತ್ತಿದ್ದ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.  ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಡಿಸೆಂಬರ್‌ 29ರಂದು ಸಿಂಗ­ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.ಆ ರಾಕ್ಷಸರನ್ನು ಸುಡಬೇಕು

ಆ ರಾಕ್ಷಸರನ್ನು ನೇಣಿಗೆ ಹಾಕಬೇಕು. ಮುಂದೆ ಯಾವ ಕಾಮುಕರೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವುದಿರಲಿ, ತೊಂದರೆಯನ್ನೂ ನೀಡಬಾರದು. ಅಂತಹ ಎಚ್ಚರಿಕೆಯನ್ನು ಈ ಕ್ರಿಮಿನಲ್‌ಗಳಿಗೆ ಗರಿಷ್ಠ ಶಿಕ್ಷೆ ನೀಡುವ ಮೂಲಕ ನೀಡಬೇಕು. ನಿಜವಾಗಿಯೂ ಅವರನ್ನು ಸುಡಬೇಕು

– ಅತ್ಯಾಚಾರಕ್ಕೀಡಾದ 23 ವರ್ಷದ ಯುವತಿ ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ ಉಪವಿಭಾಗಾಧಿಕಾರಿಗೆ ಡಿ. 23ರಂದು ನೀಡಿದ್ದ ಕೊನೆ ಹೇಳಿಕೆ.‘ಕೊಲೆ ಯತ್ನ ಸ್ಪಷ್ಟ’

ಪ್ರಕರಣದ ಸಂದರ್ಭ, ಕೃತ್ಯ, ಮತ್ತು ಈ ಕೃತ್ಯವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿರುವ ರೀತಿಯನ್ನು ನೋಡಿದರೆ ಆರೋಪಿಗಳು ಆಕೆಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದರು ಎಂಬುದು ಸುಸ್ಪಷ್ಟ

– ಯೋಗೇಶ್‌ ಖನ್ನಾ, ಸೆಷನ್ಸ್‌ ನ್ಯಾಯಾಧೀಶ‘ಗಲ್ಲು ಶಿಕ್ಷೆ ನೀಡಿ’

ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಿದ ದಿನ  ನ್ಯಾಯ ಸಿಕ್ಕಿತೆಂದು ನಾವು ಭಾವಿಸುತ್ತೇವೆ. ಅಂದು ನಮಗೆ ಶಾಂತಿ ದೊರೆಯುತ್ತದೆ... ಆ ದುರುಳರಿಗೆ ಜೀವಿಸುವ ಹಕ್ಕಿಲ್ಲ...

-ಅತ್ಯಾಚಾರಕ್ಕೊಳಗಾದ ಯುವತಿಯ ತಾಯಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry