ಶನಿವಾರ, ಮೇ 21, 2022
25 °C

ಅಪರಾಧ, ಹಿಂಸೆ ಸುದ್ದಿಯಲ್ಲಿ ಎಚ್ಚರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಾಧ್ಯಮಗಳು ಇಂದು ಹದ ತಪ್ಪುತ್ತಿದ್ದು, ಹಿಂಸೆ, ಅಪರಾಧ, ಕೊಲೆ ಸುಲಿಗೆ ವಿಚಾರಗಳನ್ನೇ ವೈಭವೀಕರಿಸುತ್ತಿವೆ ಎಂಬ ಮಾತು ಜನಸಾಮಾನ್ಯರಿಂದ ಕೇಳಿಬರುತ್ತಿವೆ.ವಾಸ್ತವದಲ್ಲಿ ಮಾಧ್ಯಮಗಳು ಸಮಾಜದ ಬಿಂಬವಾಗಿರುತ್ತವೆ. ಅಪರಾಧ ಸುದ್ದಿಗಳನ್ನಷ್ಟೇ ವೈಭವೀಕರಿಸದೇ ಎಲ್ಲ ಸುದ್ದಿಗೂ ಆದ್ಯತೆ ನೀಡಿಯೇ ಪ್ರಕಟಿಸುತ್ತಿವೆ.ಹಾಗಿದ್ದೂ ಮಾಧ್ಯಮಗಳು ಇಂಥ ವಿಚಾರದಲ್ಲಿ ಎಚ್ಚರವಹಿಸಬೇಕು ಎಂದು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ನಿರ್ದೇಶಕ ಡಾ. ವರದೇಶ ಹಿರೆಗಂಗೆ ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಶುಕ್ರವಾರ ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ವತಿಯಿಂದ ಮಂಗಳೂರು ವಿವಿ ಮಟ್ಟದ ‘ಮಾಧ್ಯಮ-ಅಪರಾಧ-ಹಿಂಸೆ’ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಿವೆ. ಇತ್ತೀಚಿನ ಅಂಕಿ-ಅಂಶ ಪ್ರಕಾರ, ಪ್ರತಿ 26 ನಿಮಿಷಕ್ಕೊಮ್ಮೆ ಮಹಿಳೆ ಮೇಲೆ ದೌಜ್ಯನ್ಯ ನಡೆಯುತ್ತಿದೆ. 34 ನಿಮಿಷಕ್ಕೊಮ್ಮೆ ಒಂದು ಅತ್ಯಾಚಾರ ಪ್ರಕರಣ ವರದಿಯಾಗುತ್ತಿದೆ. 42 ನಿಮಿಷಕ್ಕೊಮ್ಮೆ ಲೈಂಗಿಕ ದೌರ್ಜ್ಯನ್ಯ ಪ್ರಕರಣ ಕಂಡು ಬರುತ್ತಿವೆ. 43 ನಿಮಿಷಕ್ಕೊಬ್ಬ ಮಹಿಳೆ ಅಪಹರಣ ನಡೆಯುತ್ತಿದೆ. ಪ್ರತಿ 93 ನಿಮಿಷಕ್ಕೆ ಮಹಿಳೆ ಕೊಲೆ ನಡೆಯುತ್ತಿದೆ. ಇಷ್ಟೊಂದು ಅಪರಾಧ ಪ್ರಕರಣ ನಡೆಯುವಾಗ ವರದಿ ಮಾಡದೇ ಇರುವುದಾದರೂ ಹೇಗೆ? ಮಾಧ್ಯಮಗಳು ಎಲ್ಲವನ್ನೂ ವರದಿ ಮಾಡಲೇಬೇಕಾಗುತ್ತದೆ. ಕೆಲವೊಮ್ಮೆ ಅಪರಾಧ ವಿಷಯ ಹೆಚ್ಚು ಸ್ಥಳ ಆಕ್ರಮಿಸುತ್ತದೆ ಎಂಬ ಆರೋಪ ಕೇಳಿಬರುತ್ತದೆ ಎಂದರು.ಅಪರಾಧ ಸುದ್ದಿ ಓದಿ, ಕೇಳಿ ಅಪರಾಧ ಕೃತ್ಯಗಳು ಹೆಚ್ಚಬಹುದು ಎಂಬ ಭಯ ಸಾರ್ವಜನಿಕರಲ್ಲಿದೆ. ಕೆಲವು ಸಲ ಸತ್ಯವೂ ಹೌದು. ಹೀಗಾಗಿ ಮಾಧ್ಯಮಗಳು ಎಚ್ಚರದಿಂದ ಅಪರಾಧ ಸುದ್ದಿ ಪ್ರಕಟಿಸಬೇಕಿದೆ ಎಂದು ಗಮನ ಸೆಳೆದರು.ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ರೋಟರಿ ಅಧ್ಯಕ್ಷ ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ ಉದ್ಯಮಿ ಪಾಂಗಾಳ ರವೀಂದ್ರ ನಾಯಕ್, ಕಿರಣ್ ಮಂಜನಬೈಲು, ಗಣೇಶ್ ಮುಖ್ಯ ಅತಿಥಿಯಾಗಿದ್ದರು. ಸಂಯೋಜಕ ಡೊಂಬಯ್ಯ ಇಡ್ಕಿದು ಇದ್ದರು. ವಿಚಾರಗೋಷ್ಠಿಯನ್ನೂ ಏರ್ಪಡಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.