ಶುಕ್ರವಾರ, ಮೇ 7, 2021
18 °C

ಅಪರಾಧ ಹಿನ್ನೆಲೆ: ಚುನಾವಣೆ ಸ್ಫರ್ಧೆಗೆ ಅವಕಾಶ ನಿರಾಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲವೆಂದು ಎಲ್ಲ ರಾಜಕೀಯ ಪಕ್ಷಗಳು ಸಾರ್ವತ್ರಿಕವಾಗಿ ಘೋಷಣೆ ಮಾಡುವ ಅಗತ್ಯವಿದೆ~ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್ ಇತ್ತೀಚೆಗೆ ಇಲ್ಲಿ ಅಭಿಪ್ರಾಯಪಟ್ಟರು.ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ಶಾಸಕರ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಚುನಾವಣಾ ಕಾಯ್ದೆ ಸಮಗ್ರ ಬದಲಾವಣೆ~ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.

`ಆರೋಪ ಪಟ್ಟಿ ದಾಖಲಾದಂತಹ ವ್ಯಕ್ತಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬಾರದು.ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಈ ನಿಯಮವನ್ನು ಕಡ್ಡಾಯವಾಗಿ ಅನುಸರಿಸಬೇಕು. ಟಿಕೆಟ್ ನೀಡುವಾಗ ಪ್ರಾಮಾಣಿಕ, ಸಚ್ಚಾರಿತ್ರ್ಯವುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷದ ವತಿಯಿಂದ ಪದಾಧಿಕಾರಿಗಳ ತಂಡವನ್ನು ರಚಿಸಬೇಕು. ಅದು ಪಕ್ಷಾತೀತವಾಗಿ ಕೆಲಸ ಮಾಡಬೇಕು.ಆದರೆ, ಪ್ರತಿಭಟನೆ- ಚಳವಳಿಗಳಲ್ಲಿ ಭಾಗವಹಿಸಿ ಹೋರಾಟ ನಡೆಸಿದವರ ವಿರುದ್ಧ ಆರೋಪ ಪಟ್ಟಿ ದಾಖಲಾದರೆ ಅದಕ್ಕೆ ವಿನಾಯಿತಿ ನೀಡುವುದನ್ನು ಕಾನೂನಿನಲ್ಲಿ ಸೇರಿಸಬೇಕು~ ಎಂದು ಸಲಹೆ ಮಾಡಿದರು.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ವಾಟಾಳ್ ನಾಗರಾಜ್, `ಭ್ರಷ್ಟರು, ಲೂಟಿ ಮಾಡಿದವರು, ಜಾತಿವಾದಿಗಳು, ಕ್ರಿಮಿನಲ್‌ಗಳಿಗೆ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು `ಬಿ~ ಫಾರಂ ನೀಡಬಾರದು.ಮತದಾರರಿಗೆ ಹಣ ಕೊಡುವುದು ಕೂಡ ಒಂದು ರೀತಿಯಲ್ಲಿ ಲಂಚ ನೀಡಿದಂತೆ. ಇದಕ್ಕೆ ಕಡಿವಾಣ ಹಾಕಲು ಚುನಾವಣೆ ಕಾಯ್ದೆಯಲ್ಲಿ ಸಮಗ್ರ ಬದಲಾವಣೆ ತರಬೇಕಾಗಿದೆ~ ಎಂದರು.ಹಿರಿಯ ಕಾರ್ಮಿಕ ಮುಖಂಡ ಎಂ.ಸಿ. ನರಸಿಂಹನ್, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಚಲನಚಿತ್ರ ನಿರ್ಮಾಪಕ ಶಿವಶಂಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್.ಮೂರ್ತಿ ಮಾತನಾಡಿದರು. ಕನ್ನಡ ಸೇನೆಯ ಅಧ್ಯಕ್ಷ ಕೆ.ಆರ್. ಕುಮಾರ್ ಸ್ವಾಗತಿಸಿ, ನಿರೂಪಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.