ಮಂಗಳವಾರ, ಆಗಸ್ಟ್ 11, 2020
23 °C

ಅಪರೂಪದ ಔಷಧಿ ಸಸ್ಯ ಮರದ ಅರಿಶಿಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪರೂಪದ ಔಷಧಿ ಸಸ್ಯ ಮರದ ಅರಿಶಿಣ

ಮರದ ಅರಿಶಿಣ ಬಳ್ಳಿ ವಿನಾಶದ ಅಂಚಿನಲ್ಲಿರುವ ಅಪರೂಪದ ಸಸ್ಯ. ಕರ್ನಾಟಕದಲ್ಲಿ ವಿರಳವಾಗಿ ಲಭ್ಯವಾಗುವ ಈ ಬಳ್ಳಿ ಸಸ್ಯ ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆಗೆ ದಿವ್ಯ ಔಷಧಿಯಾಗಿದೆ. ಇದರ ವೈಜ್ಞಾನಿಕ ಹೆಸರು Coscinium Fenestratum.ಶಿರಸಿಯ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಆರ್.ವಾಸುದೇವ, ಅಪರೂಪದ ಸಸ್ಯವೊಂದನ್ನು ತೋರಿಸುತ್ತೇನೆ, ಈ ಮರಕ್ಕೆ ಹಬ್ಬಿರುವ ಬಳ್ಳಿ ಯಾವುದೆಂದು ಗುರುತಿಸಿ ಎಂದಾಗ ನಮ್ಮ ಸುತ್ತಲಿನ ಕಾಡಿನಲ್ಲಿ ನಡೆದಾಡುವಾಗ ಕಾಲಿಗೆ ತಾಕುವ ಬಳ್ಳಿ ಇದೇ ಅಲ್ಲವೇ ಅನ್ನಿಸಿತು. ಅದು ಹಾಗೆಲ್ಲ ಸುಲಭದಲ್ಲಿ ಲಭ್ಯವಾಗುವ ಬಳ್ಳಿಯಲ್ಲ, ಕರ್ನಾಟಕದ ನಾಲ್ಕು ಕಡೆಗಳಲ್ಲಿ ಮಾತ್ರ ಈ ಔಷಧಿ ಸಸ್ಯ ಕಾಣ ಸಿಗುತ್ತದೆ ಎಂದು ಅವರು ಹೇಳಿದಾಗ ವಿಸ್ಮಯವಾಯಿತು.ಕೊಡಗು, ಕೊಡಚಾದ್ರಿ, ಉತ್ತರ ಕನ್ನಡ ಜಿಲ್ಲೆಯ ಎರಡು ಅರಣ್ಯ ಪ್ರದೇಶಗಳಲ್ಲಿ ಮಾತ್ರ ಮರದ ಅರಿಶಿಣ ಬಳ್ಳಿಯನ್ನು ಅತಿ ವಿರಳ ಸಂಖ್ಯೆಯಲ್ಲಿ ನೋಡಬಹುದಂತೆ.ನಿಧಾನ ಬೆಳವಣಿಗೆಯ ಮರದ ಅರಿಶಿಣ ದ್ವಿಲಿಂಗಿ ಬಳ್ಳಿ. ಆದ್ದರಿಂದ ಪುನರುತ್ಪಾದನೆ ಪ್ರಮಾಣ ತೀರಾ ಕಡಿಮೆ. ಗಂಡು ಮತ್ತು ಹೆಣ್ಣು ಬಳ್ಳಿ ಎರಡೂ ಇದ್ದಾಗ ಮಾತ್ರ ಮರಿ ಬಳ್ಳಿ ಹುಟ್ಟಿಕೊಳ್ಳುತ್ತದೆ.ಕೇವಲ ಒಂದು ಜಾತಿಯ ಬಳ್ಳಿ ಇದ್ದರೆ ಪುನರುತ್ಪಾದನೆ ಸಾಧ್ಯವಾಗದು. ನೆಟ್ಟು ಬೆಳೆಸಿದ ಒಂದು ಬಳ್ಳಿಯ ಲಿಂಗ ಗುರುತಿಸಲು ಕನಿಷ್ಠ ಮೂರು ವರ್ಷಗಳಾದರೂ ಬೇಕು. ಮರದ ಅರಿಶಿಣದಲ್ಲಿರುವ `ಬರ್ಬೆರಿನ್~ ಔಷಧಿಗೆ ಬಳಕೆಯಾಗುತ್ತದೆ. ಕನಿಷ್ಠ ಒಂದು ಇಂಚು ಗಾತ್ರದ ಬಳ್ಳಿ ಮಾತ್ರ ಔಷಧಿಗೆ ಬಳಸಲು ಯೋಗ್ಯವಾಗಿದೆ. ಅತಿಯಾದ ಬಳಕೆ ಈ ಪ್ರಬೇಧ ವಿನಾಶದ ಅಂಚಿಗೆ ತಲುಪಲು ಕಾರಣವಾಗಿದೆಯಂತೆ. ಶಿರಸಿಯ ಅರಣ್ಯ ಕಾಲೇಜಿನಲ್ಲಿ ಮರದ ಅರಿಶಿಣ ಸಸ್ಯದ ವಂಶಾಭಿವೃದ್ಧಿಗೆ ಪ್ರಯತ್ನ ನಡೆದಿದೆ. ಪರಾವಲಂಬಿ ಆಗಿರುವ ಮರದ ಅರಿಶಿಣ ಬಳ್ಳಿಯನ್ನು ಅಲ್ಲಲ್ಲಿ ಎತ್ತರದ ಮರಗಳಿಗೆ ಹಬ್ಬಿಸಿ ಬೆಳೆಸಲಾಗಿದೆ.ಮರದ ಎತ್ತರ ಅವಲಂಬಿಸಿ ಬಳ್ಳಿ ಬೆಳವಣಿಗೆ ಹೊಂದುತ್ತದೆ. ಇದೇ ಸಸ್ಯದ ಒಂದು ಪುಟ್ಟ ನರ್ಸರಿಯನ್ನು ಸಹ ಇಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಆದರೆ ಇದು ಗಂಡೋ ಅಥವಾ ಹೆಣ್ಣೋ ಎಂದು ನೋಡಲು ಇನ್ನಷ್ಟು ದಿನ ಕಾಯಬೇಕು. ಲಿಂಗ ಗುರುತಿಸುವಿಕೆ ಕುರಿತಂತೆ ಕಾಲೇಜಿನಲ್ಲಿ ಸಂಶೋಧನೆ ನಡೆಯುತ್ತಿದೆ.ಮರದ ಅರಿಶಿಣ ಸಸ್ಯ ಬೆಳೆಸಲು ಇಳಿಜಾರು ಪ್ರದೇಶ, ನೆರಳಿನ ಆಸರೆ ಅಗತ್ಯ.

ಕೇರಳ ಮತ್ತು ಉಡುಪಿಯಲ್ಲಿ ಮರದ ಅರಿಶಿಣ ಬಳ್ಳಿಯ ತಳಿಯನ್ನು ನರ್ಸರಿ ಮಾಡಿ ಪೋಷಿಸಲಾಗುತ್ತಿದೆ. ಅರಣ್ಯ ಇಲಾಖೆ ತಳಿ ಅಭಿವೃದ್ಧಿಗೆ ಪ್ರಯತ್ನ ನಡೆಸಿ ಕೈ ಸುಟ್ಟು ಕೊಂಡಿದೆಯಾದರೂ ಇಲಾಖೆಯಿಂದ ಅಪರೂಪದ ಸಸ್ಯದ ಉಳಿವಿಗೆ ಹೆಚ್ಚಿನ ಕಾಳಜಿವಹಿಸಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.