ಗುರುವಾರ , ಜುಲೈ 29, 2021
23 °C

ಅಪರೂಪದ ಕಂಡಕ್ಟರ್, ಚಾಲಕ

-ಸಂಗಮೇಶ,ಚಿಕ್ಕಬಾಣಾವರ Updated:

ಅಕ್ಷರ ಗಾತ್ರ : | |

ಫುಟ್‌ಬೋರ್ಡ್‌ನಿಂದ ಮೇಲೆ ಬನ್ನಿ ಎಂದು ಎಷ್ಟು ಕರೆದರೂ ಜನ ಬರುತ್ತಿರಲಿಲ್ಲ. ಆ ಕಂಡಕ್ಟರ್, ಚಾಲಕರ ಬಳಿಗೆ ಹೋಗಿ ಅಲ್ಲಿದ್ದ ದೊಡ್ಡ ಕೋಲೊಂದನ್ನು ತಂದರು. ನಿಲುಗಡೆ ಬಂದಾಗ ಮುಂದಿನ ಬಾಗಿಲಿನಿಂದ ಕೆಳಗಿಳಿದು ಹಿಂದಿನ ಬಾಗಿಲಿಗೆ ಬಂದು, ಫುಟ್‌ಬೋರ್ಡ್ ಮೇಲೆ ನಿಂತಿದ್ದವರಿಗೆಲ್ಲಾ ಚುರುಕು ಮುಟ್ಟಿಸುವುದಾಗಿ ಹೆದರಿಸಿದರು.ಕೆಲವು ಹುಡುಗರು ಭಂಡರು. ಅಲ್ಲಿಂದ ಕದಲಲೇ ಇಲ್ಲ. ಕಂಡಕ್ಟರ್ ಪದೇಪದೇ ಹೊಡೆಯುವುದಾಗಿ ಹೆದರಿಸಿದರೇ ಹೊರತು ಹೊಡೆಯಲಿಲ್ಲ. ಕೆಲವು ಹುಡುಗರು ಅವಾಚ್ಯ ಶಬ್ದಗಳನ್ನು ಬಳಸಿ ಗೇಲಿ ಮಾಡಲು ಆರಂಭಿಸಿದರು. ಆ ಹುಡುಗರಲ್ಲೇ ಒಬ್ಬ, `ನಿಮ್ಮದು ಅತಿಯಾಯಿತು. ಹೀಗೆಲ್ಲಾ ಮಾತಾಡಬಾರದು' ಎಂದ. ಅಚ್ಚರಿಯೆಂದರೆ, ಅವರಲ್ಲೇ ಮಾತು ಬೆಳೆದು, ಪರಸ್ಪರ ಕೈಮಿಲಾಯಿಸುವ ಮಟ್ಟಿಗೆ ಜಗಳವಾಡಿದರು. ಜಗಳದಲ್ಲಿ ಒಬ್ಬನನ್ನು ಜೋರಾಗಿ ತಳ್ಳಿದ್ದೇ ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದ. ಕಂಡಕ್ಟರ್ ಈಗ ನಿಜಕ್ಕೂ ತಳ್ಳಿದ ಹುಡುಗರಿಗೆ ಬೆತ್ತದ ರುಚಿ ಮುಟ್ಟಿಸಿದರು. ಕೆಳಗೆ ಬಿದ್ದಿದ್ದ ಹುಡುಗನ ತಲೆಗೆ ಪೆಟ್ಟು ಬಿದ್ದು, ರಕ್ತ ಸುರಿಯುತ್ತಿತ್ತು. ಪ್ರಜ್ಞೆ ಏನೂ ತಪ್ಪಿರಲಿಲ್ಲ. ತಕ್ಷಣ ಅದೇ ಬಸ್‌ನಲ್ಲಿ ಹತ್ತಿಸಿಕೊಂಡು, ಬಸ್ ರೂಟನ್ನು ಸ್ವಲ್ಪ ತಿರುಗಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಅಷ್ಟೇ ಅಲ್ಲ, ಜನರನ್ನು ವಿನಂತಿಸಿಕೊಂಡು ಹದಿನೈದು ನಿಮಿಷ ಆಸ್ಪತ್ರೆ ಎದುರಲ್ಲೇ ಬಸ್ ನಿಲ್ಲಿಸಿದರು. ಹುಡುಗನಿಗೆ ಯಾವುದೇ ಅಪಾಯವಿಲ್ಲ ಎಂಬುದು ಖಾತರಿಯಾದ ಮೇಲಷ್ಟೇ ಬಸ್ ಮುಂದಕ್ಕೆ ಹೋಗಿದ್ದು.ಕಂಡಕ್ಟರ್ ಹಾಗೂ ಚಾಲಕ ತುಂಬಾ ವಿಭಿನ್ನ ಎನ್ನುವಂತಿದ್ದರು. ಬಸ್‌ನಲ್ಲಿದ್ದ ಪ್ರಯಾಣಿಕರು ಯಾರೋ ಕಿತ್ತಾಡಿದರೆ ಇವರೇಕೆ ಬಸ್ಸನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು ಎಂದೆಲ್ಲಾ ಮಾತನಾಡಿದರು. `ಏಟು ತಿಂದ ಹುಡುಗ ನಿಮ್ಮ ಮಗನೇ ಆಗಿದ್ದರೆ ನೀವು ಹೀಗೆ ಮಾತನಾಡುತ್ತಿದ್ದಿರಾ?' ಎಂದು ಚಾಲಕ ಕೇಳಿದಾಗ ಅವರು ನಿರುತ್ತರರಾದರು.ಮರುದಿನ ಅದೇ ಬಸ್. ಹಿಂದಿನ ದಿನ ಗಲಾಟೆ ಮಾಡಿದ ಹುಡುಗರು ಇರಲಿಲ್ಲ. ಅವರ ಜಾಗದಲ್ಲಿ ಬೇರೆ ಹುಡುಗರಿದ್ದರು. ಕಂಡಕ್ಟರ್ ಅದೇ ರೀತಿ ಬೆತ್ತದ ರುಚಿ ಮುಟ್ಟಿಸುವುದಾಗಿ ಹೆದರಿಸಿದರು. ಹಿಂದಿನ ದಿನ ನಡೆದ ಘಟನೆಯನ್ನು ನೆನಪಿಸಿದರು. ಫುಟ್‌ಬೋರ್ಡ್ ಮೇಲಿದ್ದ ಹುಡುಗರು ಮಾತೇ ಆಡದೆ ಒಳಗೆ ಬಂದರು. ಬಿಎಂಟಿಸಿ ಬಸ್‌ನಲ್ಲಿ ನಾನು ಕಂಡ ಚಾಲಕ, ಕಂಡಕ್ಟರ್ ತೋರಿದ ಅಪರೂಪದ ಮಾನವೀಯ ಮುಖ ಇದು.

ಬಸ್‌ನಲ್ಲಿ ನಿಮಗೂ ಮಾನವೀಯ ಘಟನೆಗಳು ಅನುಭವಕ್ಕೆ ಬಂದಿರಬಹುದು. ಅಂಥ ಕತೆಗಳನ್ನು `ಮೆಟ್ರೊ' ಮೂಲಕ ಹಂಚಿಕೊಳ್ಳಿ. ಆಯ್ದ ಬರಹಗಳನ್ನು ಪ್ರಕಟಿಸಲಾಗುವುದು. ಬರಹ ಸಂಕ್ಷಿಪ್ತವಾಗಿರಲಿ. ಸಂಪೂರ್ಣ ವಿಳಾಸ ಬರೆಯಿರಿ. ಬರಹ ಅಥವಾ ನುಡಿ ತಂತ್ರಾಂಶದಲ್ಲಿ ಬರೆಯುವವರು metropv@prajavani.co.in   ಇ-ಮೇಲ್‌ಗೆ ಕಳುಹಿಸಿ. ಅಂಚೆ ವಿಳಾಸ: `ಬಸ್ ಕತೆ', ಮೆಟ್ರೊ, ಪ್ರಜಾವಾಣಿ, ನಂ. 75, ಎಂ.ಜಿ.ರಸ್ತೆ, ಬೆಂಗಳೂರು- 560 001.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.