ಭಾನುವಾರ, ಆಗಸ್ಟ್ 25, 2019
24 °C

ಅಪರೂಪದ ಕಾಮಗಾರಿಗೆ ಮೂಹೂರ್ತ!

Published:
Updated:

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಕಡ್ಲಬಾಳು ಗ್ರಾಮದಿಂದ ಕೂಗಳತೆ ಯಲ್ಲಿರವ ಸೊಟ್ಟೆಪ್ಪನವರಬಂಡಿ ಬಳಿ ಹಗರಿ ಹಳ್ಳಕ್ಕೆ ಅಡ್ಡವಾಗಿ ನಿರ್ಮಿಸಿರುವ ಚೆಕ್ ಡ್ಯಾಂ ಮೂಲಕ ಹಗರಿ ಹಳ್ಳದುದ್ದಕ್ಕೂ ಕಾಲುವೆ ತೋಡಿ, ತುಂಗಭದ್ರ ಜಲಾಶಯದ ಹಿನ್ನೀರನ್ನು ಹಿಮ್ಮುಖವಾಗಿ ಹರಿಸಿ ಸುತ್ತಮುತ್ತಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟವನ್ನು ಏರಿಸುವ ಅಪರೂಪದ ಕಾಮಗಾರಿ ಭರದಿಂದ ಸಾಗಿದೆ. ಕ್ಷೇತ್ರದ ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ಕಾಮಗಾರಿ ಕುರಿತಂತೆ ವಿಶೇಷ ಆಸಕ್ತಿ ವಹಿಸುವ ಜೊತೆಗೆ ಅಗತ್ಯ ಅನುದಾನ ಪೂರೈಸಿ ಕಾಮಗಾರಿಗೆ ಚಾಲನೆ ನೀಡಿರುವ ಪರಿಣಾಮವಾಗಿ ಹಳ್ಳದ ಎರಡೂ ದಂಡೆಗಳ ಕೊಳವೆ ಬಾವಿಗಳ ಅಂತರ್ಜಲ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಭಾಗದ ನೀರಾವರಿ ಕೃಷಿ ಚಟುವಟಿಕೆಗಳಿಗೆ ರೆಕ್ಕೆ ಪುಕ್ಕ ಮೂಡಿರುವ ಜೊತೆಗೆ ಕಾಮಗಾರಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಗ್ರಾಮದ ಬಳಿ ಇರುವ ಹಗರಿ ಹಳ್ಳದಲ್ಲಿ ಕಾಲುವೆ ತೋಡುವ ಮೂಲಕ ಜಲಾಶಯದ ಹಿನ್ನೀರನ್ನು ಹಿಮ್ಮುಖವಾಗಿ ಹರಿಸಿ ಆ ಮೂಲಕ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮದ ರೈತರು ಕಳೆದ ಹಲವಾರು ವರ್ಷಗಳಿಂದ ಸಮುದಾಯದ ಸಹಭಾಗಿತ್ವದ ಜೊತೆಗೆ ವಂತಿಗೆ ರೂಪದಲ್ಲಿ ಸಂಗ್ರಹಿಸುವ ಹಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದರು.ಅಗತ್ಯ ಅನುದಾನದ ಕೊರತೆಯಿಂದಾಗಿ ಕಾಮಗಾರಿಯ ಸಮರ್ಪಕ ಅನುಷ್ಠಾನ ಸಾಧ್ಯವಾಗದೇ ಯೋಜನೆ ಅತಂತ್ರವಾಗುತ್ತಿದ್ದ ಹಿನ್ನೆಲೆಯಲ್ಲಿ ರೈತರು ಗ್ರಾಮದ ಸುತ್ತ ಬಂದು ನಿಲ್ಲುವ ಅಗಾಧ ಪ್ರಮಾಣದ ಜಲಾಶಯದ ಹಿನ್ನೀರನ್ನು ನಿಟ್ಟುಸಿರು ಬಿಡುತ್ತಾ ನೋಡುವುದರಲ್ಲಿ ಪರ್ಯಾವಸನಗೊಳ್ಳುತ್ತಿತ್ತು.ಯೋಜನೆ ಕುರಿತಂತೆ ಜಾರಿಕೊಳ್ಳುವ ಮನೋಭಾವದರೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ ಸೆಪ್ಟೆಂಬರ್‌ನಲ್ಲಿ ತಿಂಗಳಲ್ಲಿ ಸಂಡೂರು ತಾಲ್ಲೂಕಿನ ಜಿ.ಪಂ.ಸದಸ್ಯ ಎಲ್.ಬಿ.ಪಿ.ಭೀಮಾನಾಯ್ಕ ಈ ಭಾಗದ ಮಹತ್ವದ ನೀರಾವರಿ ಪುನಶ್ಚೇತನ ಕಾಮಗಾರಿಗೆ ಜಿ.ಪಂ.ಯ ಡಿಡಿಪಿ ಅನುದಾನದದಲ್ಲಿ ರೂ 2ಲಕ್ಷ ಒದಗಿಸಿ ರೈತರ ನೆರವಿಗೆ ಧಾವಿಸಿದ್ದರು.ಈಗ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆಯೇ ಕ್ಷೇತ್ರ ವ್ಯಾಪ್ತಿಯ ಏತ ನೀರಾವರಿ ಸಹಿತ ಅನೇಕ ನೀರಾವರಿ ಯೋಜನೆಗಳ ಪುನಶ್ಚೇತನ ಕಾಮಗಾರಿಗಳಿಗೆ ಆದ್ಯತೆ ನೀಡಿ ಪೂರೈಸುತ್ತಿರುವ ಎಲ್.ಬಿ.ಪಿ.ಭೀಮಾನಾಯ್ಕ, ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಚರ್ಚಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.ಕಡ್ಲಬಾಳು ಗ್ರಾಮದಿಂದ ಬ್ಯಾಲಾಳು ಗ್ರಾಮದವರೆಗೆ ಹಗರಿ ಹಳ್ಳದಲ್ಲಿ 3ಕಿಮೀ ಉದ್ದ ಕಾಲುವೆ ತೋಡುವ ಯೋಜನೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯದ ಹಿನ್ನೀರು ಹಳ್ಳದಲ್ಲಿ ಹಿಮ್ಮುಖವಾಗಿ ಹರಿದು ಕಡ್ಲಬಾಳು ಗ್ರಾಮ ಸಹಿತ ಬ್ಯಾಲಾಳು, ಓಬಳಾಪುರ, ಕಾತ್ಯಾಯನಮರಡಿ, ನಂದೀಪುರ, ಚಿಲಗೋಡು, ಅನಂದದೇವನಹಳ್ಳಿ ಗ್ರಾಮಗಳ 5000ಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮರುಪೂರಣವಾಗಿರುವುದು ರೈತರಲ್ಲಿ ಸಂಚಲನ ಮೂಡಿಸಿದೆ.ಪ್ರತಿ ವರ್ಷ ಕಾಲುವೆ ತೋಡುವ ಬದಲಾಗಿ ಹಗರಿ ಹಳ್ಳದಲ್ಲಿ ಶಾಶ್ವತವಾಗಿ ಕಾಲುವೆ ನಿರ್ಮಿಸುವ ಜೊತೆಗೆ ಹಳ್ಳದುದ್ದಕ್ಕೂ ಸಂಗ್ರಹವಾಗಿರುವ ನೀರು ಮತ್ತೆ ಜಲಾಶಯದ ಪಾತ್ರದತ್ತ ಹರಿಯದಂತೆ ಸೊಟ್ಟೆಪ್ಪನವರಬಂಡೆ ಬಳಿಯ ಚೆಕ್‌ಡ್ಯಾಂಗೆ ಗೇಟ್ ನಿರ್ಮಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.

Post Comments (+)