ಅಪರೂಪದ ಗೋಸುಂಬೆ

7

ಅಪರೂಪದ ಗೋಸುಂಬೆ

Published:
Updated:

ಶ್ರೀನಿವಾಸಪುರ: ಮತ್ತೆ ಮತ್ತೆ ಮನಸ್ಸು ಬದಲಾಯಿಸುವ ಅಥವಾ ಮಾತಿನಂತೆ ನಡೆದುಕೊಳ್ಳದ ವ್ಯಕ್ತಿಯನ್ನು ಗೋಸುಂಬೆ ಎಂದು ಕರೆಯುವುದು ರೂಢಿ. ಗೋಸುಂಬೆ ಬಣ್ಣ ಬದಲಿಸುವ ಹಲ್ಲಿ ಜಾತಿಗೆ ಸೇರಿದ ಒಂದು ಸರಿಸೃಪ. ಹಿಂದೆ ಕಾಡು ಮೇಡಲ್ಲಿ, ಬೇಲಿ, ಮರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಗೋಸುಂಬೆ ಇಂದು ಅಪರೂಪವಾಗಿದೆ.ಮರ ಅಥವಾ ನೆಲ ವಾಸಿಯಾದ ಗೋಸುಂಬೆ ಏಕ ಕಾಲದಲ್ಲಿ ವಿರುದ್ಧ ದಿಕ್ಕಿನ ಕಡೆ ದೃಷ್ಟಿ ಹಾಯಿಸಬಲ್ಲ ಏಕೈಕ ಸರಿಸೃಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಹಾವು, ಬೆಕ್ಕು, ಹದ್ದು ಮುಂತಾದ ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಹಾಗೂ ಆಹಾರವನ್ನು ಹುಡುಕಿಕೊಳ್ಳಲು ತನ್ನ ದೇಹದ ಬಣ್ಣವನ್ನು ಬದಲಿಸುತ್ತದೆ. ಹಳದಿ, ಹಸಿರು, ಕಂದು, ಕಪ್ಪು, ನೀಲಿ, ಬೂದು, ನೇರಳೆ ಬಣ್ಣಗಳನ್ನು ಹೊಂದಬಲ್ಲ ಈ ಪ್ರಾಣಿ, ತನ್ನ ದೇಹದ ಅರ್ಧ ಭಾಗದಷ್ಟು ಉದ್ದವಾದ ನಾಲಗೆಯಿಂದ ಕ್ರಿಮಿ ಕೀಟಗಳನ್ನು ಬೇಟೆಯಾಡಬಲ್ಲದು. ಇಂಥ ಅಪರೂಪದ ಜೀವಿ ಇಂದು ಅಳಿವಿನ ಅಂಚಿನಲ್ಲಿದೆ ಎಂಬುದು ನಿಷಾದದ ಸಂಗತಿ.ಗೋಸುಂಬೆ ಕಾಣಿಸುವುದು ಅಪರೂಪ. ಅದು ಹಸಿರು ಎಲೆಗಳ ಹಿಂದೆ ತನ್ನ ದೇಹದ ಬಣ್ಣವನ್ನು ಹಸಿರಾಗಿಸಿಕೊಂಡು ಇದ್ದುಬಿಡುತ್ತದೆ. ಅಗತ್ಯಕ್ಕೆ ತಕ್ಕಂತೆ ಬಣ್ಣ ಬದಲಿಸಿಕೊಂಡು ಬದುಕುತ್ತದೆ.ಕಾಡುಗಳು ಕರಗಿದಂತೆ ಗೋಸುಂಬೆ ನೆಲೆ ಕಳೆದುಕೊಂಡಿತು. ಅದು ವಿಷಕಾರಿ ಎಂದು ಭಾವಿಸುವ ಗ್ರಾಮೀಣ ಪ್ರದೇಶದ ಜನ ಗೋಸುಂಬೆ ಕಾಣಿಸಿಕೊಂಡರೆ ಹೊಡೆದು ಕೊಲ್ಲುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದರಿಂದ ಮನುಷ್ಯನ ಕಣ್ಣಿಗೆ ಬಿದ್ದ ಗೋಸುಂಬೆ ಜೀವ ಸಹಿತ ಉಳಿಯುವುದು ಅಪರೂಪ. ನಿಧಾನವಾಗಿ ನಡೆಯಬಲ್ಲ ಗೋಸುಂಬೆ ಸುಲಭವಾಗಿ ಶತ್ರುಗಳಿಗೆ ಸಿಕ್ಕಿಬೀಳುತ್ತದೆ. ಈ ಎಲ್ಲ ಕಾರಣಗಳಿಂದ ಅದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಪ್ರಾಣಿ ಲೋಕದ ವಿಸ್ಮಯಗಳಲ್ಲಿ ಒಂದಾದ ಗೋಸುಂಬೆ ಅಪರೂಪದ ಪ್ರಾಣಿ.

                             

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry