ಅಪರೂಪದ ಜುಟ್ಟು ಕಾಜಾಣ, ಚಿತ್ರಪಕ್ಷಿ ಪತ್ತೆ

7

ಅಪರೂಪದ ಜುಟ್ಟು ಕಾಜಾಣ, ಚಿತ್ರಪಕ್ಷಿ ಪತ್ತೆ

Published:
Updated:

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ (ಬಿಆರ್‌ಟಿ)ದಲ್ಲಿ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಕ್ಷಿ ಗಣತಿ ಭಾನುವಾರ ಅಂತ್ಯಗೊಂಡಿತು.

ಗಣತಿ ವೇಳೆ ಕಂದು ಬಾಲದ ನೊಣ ಹಿಡುಕ (ರುಸ್ಟಿ ಟೈಲ್ಡ್ ಫ್ಲೆಕ್ಯಾಚರ್), ಬಿಳಿ ಹೊಟ್ಟೆಯ ಚಿತ್ರಪಕ್ಷಿ (ವೈಟ್ ಬೆಲ್ಲೆಡ್ ಮಿನಿವೆಟ್) ನಂತಹ ಅಪರೂಪ ಪಕ್ಷಿಗಳು ಪತ್ತೆಯಾಗಿವೆ. ವಿಶ್ವದಲ್ಲಿ 21 ಪ್ರಭೇದದ ಕಾಜಾಣಗಳಿವೆ.ಬಿಳಿಗಿರಿರಂಗನಬೆಟ್ಟದಲ್ಲಿ 6 ಪ್ರಭೇದಕ್ಕೆ ಸೇರಿದ ಕಾಜಾಣಗಳಿವೆ. ಬೆಳಿಗ್ಗೆ ಗಣತಿಗೆ ತೆರಳಿದ್ದವರಿಗೆ ಅಪರೂಪದ ಜುಟ್ಟು ಕಾಜಾಣ (ಹೇರ್ ಕ್ರೆಸ್ಟೆಡ್ ಡೋಂಗ್ರೊ) ಕಾಣಿಸಿಕೊಂಡಿದೆ.  ರಕ್ಷಿತಾರಣ್ಯದ ವಾಪ್ತಿಯ ಚಾಮರಾಜನಗರ, ಕೊಳ್ಳೇಗಾಲ, ಪುಣಜನೂರು, ಕೆ.ಗುಡಿ, ಬೈಲೂರು ಹಾಗೂ ಯಳಂದೂರು ವಲಯದಲ್ಲಿ ಗಣತಿ ನಡೆಯಿತು.

`ರಾಜ್ಯದಲ್ಲಿ ಪ್ರಥಮ ಬಾರಿಗೆ ವೈಜ್ಞಾನಿಕ ವಿಧಾನದಡಿ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಪಕ್ಷಿ ಗಣತಿ ಮುಗಿದಿದೆ. ಗಣತಿಗೆ ರಚಿಸಿದ್ದ 11 ತಂಡದ ಸದಸ್ಯರಿಗೆ ಅಪರೂಪದ ಪಕ್ಷಿಗಳು ಕಾಣಿಸಿಕೊಂಡಿವೆ. ಆದರೆ, ಸದಸ್ಯರಿಗೆ ನೀಡಿದ್ದ ಗಣತಿ ಪಟ್ಟಿಗಳನ್ನು ಕ್ರೋಡೀಕರಿಸಿ ಪರಿಶೀಲಿಸಿದ ನಂತರವೇ ಪತ್ತೆಯಾಗಿರುವ ಪಕ್ಷಿಗಳ ಸಂಪೂರ್ಣ ವಿವರ ಲಭಿಸಲಿದೆ' ಎಂದು ಬಿಆರ್‌ಟಿ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ವಿಜಯ್ ಮೋಹನ್‌ರಾಜ್ `ಪ್ರಜಾವಾಣಿ'ಗೆ ತಿಳಿಸಿದರು.

`ಅರಣ್ಯದ ವಿವಿಧೆಡೆ ಕೆಲವು ಪಕ್ಷಿಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಕೆಲವು ಪಕ್ಷಿಗಳ ವಾಸ ನಿತ್ಯಹರಿದ್ವರ್ಣ ಪ್ರದೇಶಕ್ಕೆ ಸೀಮಿತವಾಗಿರುತ್ತದೆ.

ಹೀಗಾಗಿ, ವಿವಿಧ ಸೀಳುದಾರಿಯಲ್ಲಿ ಒಂದೇ ಪ್ರಭೇದದ ಪಕ್ಷಿ ಕಾಣಿಸಿಕೊಂಡಿರುವುದು ಸಹಜ. ಇನ್ನೆರಡು ದಿನದಲ್ಲಿ ಗಣತಿ ಪಟ್ಟಿ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಅಂತಿಮವಾಗಿ ಗಣತಿಯಲ್ಲಿ ಪತ್ತೆಯಾಗಿರುವ ಪಕ್ಷಿಗಳ ಮಾಹಿತಿಯನ್ನು ಪ್ರಕಟಿಸಲಾಗುವುದು' ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry