ಅಪರೂಪದ ವನ್ಯಜೀವಿ ಛಾಯಾಗ್ರಾಹಕ ಎಂ.ವೈ.ಘೋರ್ಪಡೆ

7

ಅಪರೂಪದ ವನ್ಯಜೀವಿ ಛಾಯಾಗ್ರಾಹಕ ಎಂ.ವೈ.ಘೋರ್ಪಡೆ

Published:
Updated:

ಹುಬ್ಬಳ್ಳಿ: ಸಮಯ ಬೆಳಿಗ್ಗೆ 6 ಗಂಟೆ. ಅದು ಬಳ್ಳಾರಿ ಜಿಲ್ಲೆಯ ಕಮಲಾಪುರ ಸಮೀಪದ ದರೋಜಿ ಕರಡಿ ಅರಣ್ಯಧಾಮ. ದರೋಜಿ ಅರಣ್ಯಧಾಮದಲ್ಲಿ ಇರುವ ಕರಡಿಗಳ ಚಿತ್ರಗಳನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಸುಮಾರು 60ರಿಂದ 65 ವರ್ಷದ ವ್ಯಕ್ತಿಯೊಬ್ಬರು ಕಾದು ಕುಳಿತಿದ್ದಾರೆ.ಇಲ್ಲಿ ಒಂದು ವಿಷಯ ಹೇಳಬೇಕು. ಕರಡಿ ಬಹಳ ಸೂಕ್ಷ್ಮಮತಿ ಮತ್ತು ಚುರುಕು ಪ್ರಾಣಿ. ಸ್ವಲ್ಪ ಸದ್ದಾದರೂ ಅದು ಓಡಿ ಹೋಗುತ್ತದೆ ಅಥವಾ `ಶತ್ರು~ವಿನ ಮೇಲೆಯೇ ತಿರುಗಿ ಬೀಳುತ್ತದೆ.ಇಂಥ ಚಾಲಾಕಿ ಪ್ರಾಣಿಯ ಚಲನವಲನಗಳನ್ನು ಸೆರೆ ಹಿಡಿಯಲು ಹೋದ ವ್ಯಕ್ತಿ ತಮ್ಮ ವಾಹನದ ಮೇಲೆಲ್ಲ ಹಸಿರು ಗಿಡದ ತೊಪ್ಪಲು ಹರಡಿ ಕ್ಯಾಮೆರಾಗೆ ಅನುಕೂಲವಾಗುವಷ್ಟು ಮಾತ್ರ ಜಾಗ ಬಿಟ್ಟುಕೊಂಡು ಸುಮಾರು ಮೂರ‌್ನಾಲ್ಕು ಗಂಟೆಗಳ ಕಾಲ ಕಾದು ಕುಳಿತು ಚಿತ್ರ ತೆಗೆದಿದ್ದರು. ಅವರು ಸೆರೆ ಹಿಡಿದ ಚಿತ್ರಗಳನ್ನು ನೋಡಿದರೆ ಛಾಯಾಗ್ರಾಹಕನ ಛಾಯಾಚಿತ್ರ ಕೌಶಲ್ಯ, ಅವರ ಕೈಚಳಕ ಎಲ್ಲವೂ ಕಾಣಸಿಗುತ್ತದೆ.ಹೀಗೆ ತಮ್ಮ ಜೀವದ ಹಂಗು ತೊರೆದು ವನ್ಯಜೀವಿಗಳ ಚಿತ್ರ ತೆಗೆಯುತ್ತಿದ್ದ ವ್ಯಕ್ತಿ ಬೇರಾರೂ ಅಲ್ಲ. ರಾಜ್ಯದ ಮಾಜಿ ಸಚಿವರಾದ ಮುರಾರಿರಾವ್ ಯಶವಂತರಾವ್ ಘೋರ್ಪಡೆ.ರಾಜ ಮನೆತನಕ್ಕೆ ಸೇರಿದವರಾದರೂ ಸರಳ, ಸಜ್ಜನಿಕೆಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಎಂ.ವೈ. ಘೋರ್ಪಡೆಗೆ ಗ್ರಾಮೀಣ ಅಭಿವೃದ್ಧಿ, ವನ್ಯಜೀವಿ ಛಾಯಾಗ್ರಹಣ ಎಂದರೆ ಅಚ್ಚು ಮೆಚ್ಚು. ಸದಾ ಖಾದಿಧಾರಿ ಆಗಿರುತ್ತಿದ್ದ ಎಂ.ವೈ.ಜಿ. ತಮ್ಮ ಐದು ದಶಕಗಳ ರಾಜಕೀಯ ಜೀವನದಲ್ಲಿ ಎಂದೂ ಕ್ಷುಲ್ಲಕ ರಾಜಕಾರಣ ಮಾಡಿದವರಲ್ಲ.ಸಚಿವರಾಗಿದ್ದ ಸಂದರ್ಭದಲ್ಲೂ ಬಿಡುವಿಲ್ಲದ ಕೆಲಸದ ಮಧ್ಯೆಯೂ ಬಿಡುವು ಮಾಡಿಕೊಂಡು ವನ್ಯಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಮುಂದಾಗುತ್ತಿದ್ದ ಅಪರೂಪದ ಹವ್ಯಾಸ ಅವರದು. ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆಗೆ ಬರುವ ಬಾನಾಡಿಗಳನ್ನು ಸೆರೆ ಹಿಡಿಯಲು ಒಂದು ವಾರ ಕಾಲ ಗದಗದಲ್ಲಿ ತಂಗಿದ್ದು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮಾಗಡಿ ಕೆರೆಗೆ ಹೋಗಿ ಹಕ್ಕಿಗಳ ಹಾರಾಟದ ಸುಂದರ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಬಂಧಿಸುತ್ತಿದ್ದರು.ನಾಗರಹೊಳೆಯಲ್ಲೂ ಹಲವು ದಿನಗಳ ಕಾಲ ತಂಗಿ ಕಾಡಾನೆ ಮತ್ತಿತರ ಕಾಡು ಪ್ರಾಣಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಬಂಧಿಸಿದ ವ್ಯಕ್ತಿ ಅವರು. ವನ್ಯಜೀವಿ ಛಾಯಾಚಿತ್ರಗ್ರಹಣದ ಬಗೆಗಿನ ತಮ್ಮ ಅನುಭವಗಳನ್ನು ಘೋರ್ಪಡೆ ಅವರು `ಸನ್‌ಲೈಟ್ ಆ್ಯಂಡ್ ಶ್ಯಾಡೋಸ್~, `ಆ್ಯನ್ ಇಂಡಿಯನ್ ವೈಲ್ಡ್‌ಲೈಫ್ ಫೋಟೋಗ್ರಾಫರ್ಸ್‌ ಡೈರಿ~ ಎಂಬ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ.ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕರ ಸಾಲಿನಲ್ಲಿ ಅಗ್ರಗಣ್ಯರಾಗಿದ್ದ ಘೋರ್ಪಡೆ ಅವರಿಗೆ ವನ್ಯಜೀವಿ ಛಾಯಾಗ್ರಹಣಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿಯೂ ಸಂದಿದೆ.ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರು ಸಂವಿಧಾನದ 73ನೇ ವಿಧಿಗೆ ತಿದ್ದುಪಡಿ ತಂದು ಪಂಚಾಯತ್ ರಾಜ್ ವ್ಯವಸ್ಥೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಅದನ್ನು ಯಥಾವತ್ತಾಗಿ ದೇಶದಲ್ಲಿ ಮೊಟ್ಟಮೊದಲು ಕರ್ನಾಟಕದಲ್ಲಿ ಜಾರಿಗೆ ತಂದ ಕೀರ್ತಿ ಘೋರ್ಪಡೆ ಅವರಿಗೆ ಸಲ್ಲುತ್ತದೆ. ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದ ಸಂದರ್ಭದಲ್ಲೇ ಬೇಲೂರು ಘೋಷಣೆ ಜಾರಿಗೆ ಬಂತು.

 

ಈ ಕಾರ್ಯಕ್ರಮ ಧಾರವಾಡದಲ್ಲಿ ನಡೆದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇದಕ್ಕೆ ಚಾಲನೆ ನೀಡಿದ್ದರು. ಧಾರವಾಡ ತಾಲ್ಲೂಕಿನ ಬೇಲೂರು ಗ್ರಾಮ ಪಂಚಾಯಿತಿಯ ಆಗಿನ ಅಧ್ಯಕ್ಷೆ ಕರಿಯವ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪತ್ರಿಕಾಗೋಷ್ಠಿಯಲ್ಲಿ ತಮ್ಮ ಖಾತೆಗೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಬಿಟ್ಟು ಇತರ ಪ್ರಶ್ನೆಗಳಿಗೆ ಎಂದೂ ಅವರು ಉತ್ತರಿಸುತ್ತಿರಲಿಲ್ಲ.

ತಮ್ಮ ಪಕ್ಷದ ಆಂತರಿಕ ವಿಚಾರ ಅಥವಾ ವಿರೋಧ ಪಕ್ಷಗಳ ಬಗ್ಗೆ ಟೀಕೆ ಟಿಪ್ಪಣೆ ಮಾಡುವ ಇತರ ರಾಜಕಾರಣಿಗಳಿಗೆ ಸಹಜವೇ ಎನ್ನಿಸಿದರೂ ಎಂ.ವೈ. ಘೋರ್ಪಡೆ ಇದಕ್ಕೆ ಅಪವಾದ ಎಂಬಂತಿದ್ದರು. ಪತ್ರಿಕಾಗೋಷ್ಠಿಯಲ್ಲಿ ತಮಗೆ ಇರಿಸುಮುರಿಸಾದ ಪ್ರಶ್ನೆಗಳು ತೂರಿಬಂದರೂ ಅದಕ್ಕೆ ಉತ್ತರ ನೀಡದೇ ಮೌನಕ್ಕೆ ಶರಣಾಗುತ್ತಿದ್ದರು.2004ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಸ್ವತಃ ತಮ್ಮ ಸಹೋದರ ವೆಂಕಟರಾವ್ ಘೋರ್ಪಡೆ ಅವರೇ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದರೂ ಪ್ರಚಾರಕ್ಕಿಳಿಯದೇ ನಿವೃತ್ತಿಯ ಘೋಷಣೆಗೆ ಅಂಟಿಕೊಂಡಿದ್ದರು.ನಿವೃತ್ತಿಯ ಬಳಿಕ ಸಂಡೂರಿನ ಎಸ್.ಆರ್.ಎಸ್. ಪ್ರೌಢಶಾಲೆಯಲ್ಲಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಇಂಗ್ಲಿಷ್ ಪಾಠ ಮಾಡುವ ಮೂಲಕ ತಮ್ಮ ಶಿಕ್ಷಕ ವೃತ್ತಿ ಪ್ರೇಮವನ್ನೂ ಮೆರೆದವರು ಘೋರ್ಪಡೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry