ಅಪರೂಪದ ವ್ಯಕ್ತಿಚಿತ್ರ

7

ಅಪರೂಪದ ವ್ಯಕ್ತಿಚಿತ್ರ

Published:
Updated:

ಚರಿತ್ರೆಯ ಕವಲುಗಳು ಸದಾ ರೋಚಕ. ಹೈದರಾಲಿ ಲಾಲ್‌ಬಾಗ್ ಕಟ್ಟಿಸಿದ ಎಂಬ ಒಂದು ಸಾಲಿನ ಪಾಠ ಕೇಳಿ ಸುಮ್ಮನಾಗುವ ಮನಸ್ಸುಗಳ ನಡುವೆಯೂ ಆ ವಿಶಾಲತೋಟದ ಹೂಗಳ ನಗುವಿನ ಹಿಂದಿನ ಕಥೆ ಕೆದಕುವ ಕುತೂಹಲಿಗಳು ನಮ್ಮ ನಡುವೆ ಇದ್ದಾರೆ. ಮರಗಳ ಕಾಂಡಭಾಗದ ಚಕ್ರಗಳಿಂದ ಕಾಲವನ್ನು ಅಳೆಯುತ್ತಾ ನಿಲ್ಲುವ ವಿಜ್ಞಾನಿಗಳಿದ್ದಾರೆ. ಅದೇ ಕೆಂಪುತೋಟದ ದೊಡ್ಡ ಆವರಣದ ಯಾವುದೋ ಮೂಲೆಯಲ್ಲಿ ಕಲ್ಲುಹಾಸಿನ ಅಡಿ ಶಾಶ್ವತವಾಗಿ ಮಲಗಿದ ಜೀವಗಳ ಬದುಕಿನ ಪುಟಗಳನ್ನು ಪತ್ತೆಹಚ್ಚ ಹೊರಟವರೂ ಉಂಟು. ಉತ್ಸಾಹಿಗಳ ಒಂದು ತಂಡದ ಇಂಥ ಹುಡುಕಾಟದ ಫಲವೇ ಈ ಇಂಗ್ಲಿಷ್ ಕೃತಿ.ಜಿ.ಎಚ್.ಕ್ರುಂಬಿಗಲ್ ಎಂಬ ಅಪರೂಪದ ವ್ಯಕ್ತಿಯ ಕುರಿತ ಸಾಕಷ್ಟು ಮಾಹಿತಿಯನ್ನು ಅಡಗಿಸಿಕೊಂಡ ಪುಸ್ತಕವಿದು. ಕ್ರುಂಬಿಗಲ್ ಏನನ್ನೆಲ್ಲಾ ಮುಟ್ಟಿದರೋ, ಅವನ್ನೆಲ್ಲಾ ಅಲಂಕರಿಸಿದರು ಶೀರ್ಷಿಕೆ ಕೂಡ ಅರ್ಥಪೂರ್ಣ. ಎಸ್.ನಾರಾಯಣ ಸ್ವಾಮಿ, ಅನುರಾಧಾ ಮಾಥುರ್, ದಿಲಿಪ್ ದಾ ಕುನ್ಹ, ಎಸ್.ವಿ.ಹಿತ್ತಲಮನಿ, ಸುರೇಶ್ ಜಯರಾಂ, ಚಂದನ್ ಗೌಡ, ರಾಘವೇಂದ್ರ ತೆಂಕಲಾಯ, ಟಿ.ಪಿ.ಇಸ್ಸಾರ್ ಇಂಥವರ ಉತ್ಸಾಹಿ ತಂಡ ಈ ಮಹತ್ವದ ಪುಸ್ತಕವನ್ನು ರೂಪಿಸಿದೆ. ‘ವಿಷುಯಲ್ ಆರ್ಟ್ ಕಲೆಕ್ಟಿವ್’ನ ಕ್ಯುರೇಟರ್ ಸುರೇಶ್ ಜಯರಾಂ ಈ ಕೃತಿ ಬರೆಯಲು ಕಾರಣವಾದ ಹುಡುಕಾಟವನ್ನು ಮುನ್ನುಡಿಯಂತೆ ಬರೆದಿದ್ದಾರೆ.ಗುಸ್ತವ್ ಹರ್ಮನ್ ಕ್ರುಂಬಿಗಲ್ 1865ರಲ್ಲಿ ಜರ್ಮನಿಯ ಡ್ರೆಸ್ಡನ್‌ನಲ್ಲಿ ಹುಟ್ಟಿದ್ದು. ಪಿಲ್ನಿಟ್ಜ್‌ನ ಕಿಂಗ್ಸ್ ಗಾರ್ಡನ್‌ನಲ್ಲಿ ತೋಟಗಾರಿಕೆ, ಉದ್ಯಾನ ವಿನ್ಯಾಸ ಕುರಿತು ಕಲಿತರು. ಲಂಡನ್‌ನ ‘ಕ್ಯೂ’ನಲ್ಲಿರುವ ರಾಯಲ್ ಬಟಾನಿಕಲ್ ಗಾರ್ಡನ್‌ನಲ್ಲಿ ಐದು ವರ್ಷ ಕೆಲಸ ಮಾಡಿದ ಅವರನ್ನು ಬರೋಡಾದ ಮಹಾರಾಜ ಸಯ್ಯಾಜಿ ರಾವ್ ಗಾಯಕವಾಡ್ ತಮ್ಮ ಖಾಸಗಿ ಉದ್ಯಾನವನ ರೂಪಿಸಲೆಂದು ಭಾರತಕ್ಕೆ ಕರೆತಂದರು. ಅವರನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದೇ ‘ಕ್ಯೂ’ ಗಾರ್ಡನ್. ಅಲಂಕಾರಿಕ ತೋಟಗಳನ್ನು ರೂಪಿಸುವುದರಲ್ಲಿ ಸಿದ್ಧಹಸ್ತರಾಗಿದ್ದ ಕ್ರುಂಬಿಗಲ್ ಬಾಂಬೆ, ಊಟಿಯಲ್ಲಿ ಕೂಡ ತೋಟಗಳನ್ನು ರೂಪಿಸಿದರು.ಸಯ್ಯಾಜಿರಾವ್ ಗಾಯಕವಾಡ್ ಗೆಳೆಯರಾಗಿದ್ದ ಕೃಷ್ಣರಾಜ ಒಡೆಯರು ಹುರಿದುಂಬಿತರಾಗಿ 1908ರಲ್ಲಿ ಮೈಸೂರಿಗೂ ಕ್ರುಂಬಿಗಲ್ ಅವರನ್ನು ಕರೆತಂದರು. ಅವರ ಕೈಚಳಕಕ್ಕೆ ‘ಸೂಪರಿಂಟೆಂಡೆಂಟ್ ಆಫ್ ಗೌರ್ನ್‌ಮೆಂಟ್ ಗಾರ್ಡನ್ಸ್’ನ ಹುದ್ದೆ ಸಿಕ್ಕಿತು. ಬೆಂಗಳೂರಿನ ಲಾಲ್‌ಬಾಗ್-ಕಬ್ಬನ್‌ಪಾರ್ಕ್ ಹಾಗೂ ಮೈಸೂರಿನ ಕರ್ಜನ್ ಪಾರ್ಕ್-ಮಧುವನ ಆರ್ಚರ್ಡ್, ಊಟಿಯ ಫರ್ನ್ ಹಿಲ್ ಪ್ಯಾಲೇಸ್ ಗಾರ್ಡನ್‌ಗಳಿಗೆ ಹೊಸ ಬಣ್ಣ ತಂದುಕೊಟ್ಟವರು ಇದೇ ಕ್ರುಂಬಿಗಲ್.ಇಪ್ಪತ್ತು ವರ್ಷ ಮೈಸೂರು ಪ್ರಾಂತದಲ್ಲಿ ಅವರು ತೋಟಗಳನ್ನು ಅರಳಿಸಿದರು. ಸೂಪರಿಂಟೆಂಡೆಂಟ್ ಆಫ್ ಗೌರ್ನಮೆಂಟ್ ಮ್ಯೂಸಿಯಂ, ಎಕನಾಮಿಕ್ ಬೊಟಾನಿಸ್ಟ್, ಕನ್ಸಲ್ಟಿಂಗ್ ಆರ್ಕಿಟೆಕ್ಟ್ ಹಾಗೂ ಮೈಸೂರು ಹಾರ್ಟಿಕಲ್ಚರ್ ಸೊಸೈಟಿಯ ಅಧ್ಯಕ್ಷರಾಗಿ ಕೆಲಸ ಮಾಡಿದರು. 1912ರಲ್ಲಿ ಲಾಲ್‌ಬಾಗ್‌ನಲ್ಲಿ ಹೈಡ್ರೋ ಸಯಾನಿಕ್ ಆಸಿಡ್ ಗ್ಯಾಸ್‌ನಿಂದ ಗಿಡಗಳಿಗೆ ಟ್ರೀಟ್‌ಮೆಂಟ್ ಕೊಡುವ ‘ಫ್ಯುಮಿಗೆಟೋರಿಯಮ್’ ಸ್ಥಾಪಿಸಿದ್ದೂ ಅವರೇ. ಅದೇ ವರ್ಷ ಹಾರ್ಟಿಕಲ್ಚರ್ ಸ್ಕೂಲ್‌ನ (ತೋಟಗಾರಿಕಾ ಶಾಲೆ) ಸ್ಥಾಪಿಸಿದರು. ಇದು ದೇಶದಲ್ಲೇ ಮೊದಲನೆಯದು ಎಂಬುದು ಮುಖ್ಯ. ಆ ಸ್ಕೂಲ್ ನೀಡುತ್ತಿದ್ದ ತೋಟಗಾರಿಕೆಯ ಡಿಪ್ಲೋಮಾ ಈಗಿನ ಡಾಕ್ಟೊರೇಟ್‌ಗೆ ಸಮ ಎಂದು ಹಿರಿಯರು ಹೇಳುತ್ತಾರೆ.ಲಾಲ್‌ಬಾಗ್‌ನ ಗ್ರಂಥಾಲಯ ಹಾಗೂ ‘ಹರ್ಬೇರಿಯಂ’ ಸುಧಾರಣೆ ಮಾಡಿದ ಕ್ರುಂಬಿಗಲ್, ಒಣಗಿಡಗಳಿಂದ ಹರ್ಬೇರಿಯಂಗೆ ಕಳೆತಂದುಕೊಟ್ಟರು. ಕೃಷಿಗೂ ತೋಟಗಾರಿಕೆಗೂ ನಡುವಿನ ವ್ಯತ್ಯಾಸ ಕುರಿತು 1920ರಲ್ಲಿ ಪುಸ್ತಕವನ್ನೂ ಬರೆದರು. ಸರ್ಕಾರಕ್ಕೆ ತೋಟಗಾರಿಕಾ ಕಾಲೇಜು ಸ್ಥಾಪಿಸಲು ಶಿಫಾರಸು ಮಾಡಿದ್ದೇ ಅಲ್ಲದೆ ಆ ಕಟ್ಟಡದ ಬ್ಲೂಪ್ರಿಂಟ್ ಕೂಡ ಸಿದ್ಧಪಡಿಸಿದ್ದರು. ಅರ್ಬರಿಕಲ್ಚರ್, ಅಲರಿಕಲ್ಚರ್, ಪಾಮಾಲಜಿ, ವಿಟಿಕಲ್ಚರ್, ಹಣ್ಣು ಸಂರಕ್ಷಣೆ ಹಾಗೂ ಸಂಸ್ಕರಣೆ, ಗ್ರೀನ್‌ಹೌಸ್ ಮಾದರಿ ಎಲ್ಲವುಗಳ ಹುಟ್ಟಿನಲ್ಲಿ ಕ್ರುಂಬಿಗಲ್ ಪಾತ್ರವಿದೆ. ಅನೇಕ ಆಸ್ಪತ್ರೆಗಳು, ಗೆಸ್ಟ್‌ಹೌಸ್‌ಗಳು, ಮಿಲಿಟರಿ ಕಚೇರಿಗಳಿಗೆ ಕ್ರುಂಬಿಯೆಜೆಲ್ ನೆರವು ನೀಡಿದರು. ಕನ್ನಂಬಾಡಿ ಕಟ್ಟೆಯ ಗಾರ್ಡನ್ ಅನ್ನು ಶ್ರೀನಗರದ ಶಾಲಿಮಾರ್ ಗಾರ್ಡನ್ ಮಾದರಿಯಲ್ಲಿ ರೂಪಿಸಿದ್ದೇ ಅವರು.ಬಿದಿರು, ಸುಗಂಧದ್ರವ್ಯಗಳು, ಆರ್ಥಿಕ ಲಾಭ ತರುವ ಹೂಗಳನ್ನು ಬೆಳೆಯುವ ‘ಆರ್ಥಿಕ ಸಸ್ಯವಿಜ್ಞಾನ’ವನ್ನು ಇಲ್ಲಿ ಪ್ರಯೋಗಕ್ಕೆ ಇಳಿಸಿದ ಕ್ರುಂಬಿಗಲ್, 1911ರಲ್ಲಿ ಲಾಲ್‌ಬಾಗ್‌ನಲ್ಲಿ ‘ಬ್ಯೂರೋ ಆಫ್ ಎಕನಾಮಿಕ್ ಬಾಟನಿ’ ಪ್ರಾರಂಭಿಸಿದರು.ತೋಟಗಳ ಶಿಲ್ಪಿಯಷ್ಟೇ ಅಲ್ಲದೆ ನಗರ ಯೋಜನೆಯ ರೂಪುರೇಷೆ ತಯಾರಿಸುವುದರಲ್ಲೂ ಕೈಪಳಗಿಸಿಕೊಂಡಿದ್ದ ಕ್ರುಂಬಿಗಲ್ ಉಳಿಸಿರುವ ನೆನಪುಗಳು ದೇಶದ ಉದ್ದಗಲಕ್ಕೂ ಹರಡಿವೆ.ಮೈಸೂರಿನ ಕರ್ಜನ್ ಪಾರ್ಕ್ ಸ್ಟ್ಯಾಚ್ಯೂ ಸ್ಕ್ವೇರ್, ಬೆಂಗಳೂರಿನ ಸಿಲ್ವರ್ ಜ್ಯುಬಿಲಿ ಪಾರ್ಕ್, ಎನ್‌ಆರ್ ಸ್ಕ್ವೇರ್, ಕೆಆರ್ ಸರ್ಕಲ್‌ಗಳ ಮರು ವಿನ್ಯಾಸಕ್ಕೂ ಅವರೇ ಕಾರಣ. ನಂದಿಬೆಟ್ಟದ ಗ್ರೇವಲ್ ಗಾರ್ಡನ್ಸ್, ಕಬ್ಬನ್ ಹೌಸ್ ಸುತ್ತಲಿನ ನಡೆಯುವ ದಾರಿ, ಓಕ್ ಲ್ಯಾಂಡ್ ಈಗ ನಳನಳಿಸುತ್ತಿರುವುದರಲ್ಲೂ ಅವರ ಕಾಣಿಕೆ ದೊಡ್ಡದು. ಜೈಪುರ, ಬಿಕನೇರ್, ಕೂಚ್ ಬೆಹಾರ್, ತಿರುವಾಂಕೂರು ಟೌನ್‌ಷಿಪ್ ಪ್ಲಾನಿಂಗ್‌ನಲ್ಲೂ ಕೈಹಚ್ಚಿದ್ದ ಕ್ರುಂಬಿಯೆಜೆಲ್ ಭಾರತದ ಬದುಕಿನ ಪುಟಗಳಲ್ಲಿ ಅರಳಿರುವ ಹೂಗಳಿಗೆ, ಬೇರಿಳಿಸಿರುವ ಮರಗಳಿಗೆ ಲೆಕ್ಕವಿಲ್ಲ.ಇಂಥ ಅಪರೂಪದ ವ್ಯಕ್ತಿಯ ಕುರಿತ ಮಾಹಿತಿಯನ್ನು ಓದಿಸಿಕೊಳ್ಳುವಂತೆ ದಾಖಲಿಸಲಾಗಿದ್ದು, ಹೊಳಪಿನ ಕಾಗದದ ಮೇಲೆ ಸುಂದರ ಚಿತ್ರಗಳ ಸಹಿತ ಮೂಡಿದೆ. ಕೊನೆಯಲ್ಲಿ ಕೆಲವು ಕಲಾವಿದರ ಕಲಾಕೃತಿಗಳೂ ಇರುವುದು ಕೃತಿಯ ಮೆರುಗನ್ನು ಹೆಚ್ಚಿಸಿದೆ.ಜಿ.ಎಚ್. ಕ್ರುಂಬಿಯೆಜೆಲ್

ವಾಟೆವರ್ ಹಿ ಟಚ್ಡ್, ಹಿ ಅಡೋರ್ನ್ಡ್‌

ಸಂಗ್ರಹ: ಸುರೇಶ್ ಜಯರಾಂ, ರಘು ತೆಂಕಲಾಯ; ಪುಟ: 118, ಬೆಲೆ: ನಮೂದಾಗಿಲ್ಲ; ಪ್ರ: ಕ್ರಿಯೇಟಿವ್ ಗ್ರೀಕ್ಸ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry