ಅಪರೂಪದ ಶಸ್ತ್ರಚಿಕಿತ್ಸೆ ಉಳಿಸಿತು ಜೀವ...

7
ಕರಡಿ ಕಚ್ಚಿದರೂ ಕಮರದ ಬದುಕು

ಅಪರೂಪದ ಶಸ್ತ್ರಚಿಕಿತ್ಸೆ ಉಳಿಸಿತು ಜೀವ...

Published:
Updated:
ಅಪರೂಪದ ಶಸ್ತ್ರಚಿಕಿತ್ಸೆ ಉಳಿಸಿತು ಜೀವ...

ಬಳ್ಳಾರಿ: ಆ ಗಾಯ ಮತ್ತು ಅದರ ಸ್ವರೂಪವನ್ನು ಕಣ್ಣಾರೆ ಕಂಡವರ  ಝಂಗಾಬಲವೇ ಉಡುಗುತ್ತದೆ. ಕಣ್ಣುಗುಡ್ಡೆ, ಮಾಂಸ ಮತ್ತು ನರಗಳೆಲ್ಲ ಹೊರಗೆ ಬಂದಿರುವ ಆ ದೃಶ್ಯ ಎಂಥಾ ಗಟ್ಟಿಗರಲ್ಲೂ ಅರೆಕ್ಷಣ ಭಯ ಹುಟ್ಟಿಸುತ್ತದೆ. ಆ ರೀತಿ ಗಾಯಗೊಂಡವರು ಬದುಕಿ ಉಳಿಯುವುದೇ ಕಷ್ಟ ಎಂಬ ಭಾವನೆ ಕಂಡೊಡನೆಯೇ ಮೂಡುತ್ತದೆ.ಅದು, `ವೈದ್ಯಕೀಯ ಲೋಕಕ್ಕೆ ಸವಾಲು' ಎಂಬಂತಹ ಗಾಯ. ಕಣ್ಣಿನ ಗುಡ್ಡೆ ಹೊರಬಂದು, ಮುಂದಲೆಯ ಬುರುಡೆಯೊಳಗಿನ ಕೆಲವು ಅವಯವಗಳು ಹೊರಗೆ ಚಾಚಿಕೊಂಡಿರುವ ಅಂತಹ ಮಾರಣಾಂತಿಕ ಗಾಯಕ್ಕೆ ಚಿಕಿತ್ಸೆ ನೀಡಿ ಪ್ರಾಣ ರಕ್ಷಿಸುವುದು ಖಂಡಿತ ಸವಾಲಿನ ವಿಷಯ. ಅದು ಗಟ್ಟಿ ಹಾಗೂ ಛಲ ಹೊಂದಿದ ಹೃದಯಗಳಿಗೆ ಮಾತ್ರ ಸಾಧ್ಯವಾದ ಶಸ್ತ್ರಚಿಕಿತ್ಸೆ.ಯಶಸ್ವಿ ಶಸ್ತ್ರಚಿಕಿತ್ಸೆ ನೀಡುವುದರಲ್ಲಿ `ಸಿದ್ಧಹಸ್ತ'ರಾಗಿರುವ ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ) ಆಸ್ಪತ್ರೆಯ ಮೆದುಳು ಮತ್ತು ನರರೋಗ ವಿಭಾಗದ ಶಸ್ತ್ರಚಿಕಿತ್ಸಾ ತಜ್ಞ ಡಾ. ಎಸ್. ವಿಶ್ವನಾಥ ಅವರಿಗೆ ಸವಾಲೆಂದರೆ ಅಚ್ಚುಮೆಚ್ಚು,

ಸವಾಲು ಎಸೆಯುವ ಕೆಲವು ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸುವುದೇ ಇವರಿಗೆ ಎಲ್ಲಿಲ್ಲದ ಖುಷಿ ನೀಡುವ ಸಂಗತಿ. ಅನೇಕ ವಿಸ್ಮಯಕಾರಕ ಚಿಕಿತ್ಸೆ ನೀಡಿರುವ ಇವರು ಇತ್ತೀಚೆಗೆ ಅಂಥದ್ದೇ ಯಶಸ್ವೀ ಚಿಕಿತ್ಸೆ ನೀಡಿ ವ್ಯಕ್ತಿಯೊಬ್ಬರಿಗೆ ಮರುಜೀವ ನೀಡಿದ್ದಾರೆ.ಕರಡಿಯೊಂದರ ಮಾರಾಣಾಂತಿಕ ದಾಳಿಯಿಂದ ತಲೆ ಬುರುಡೆ, ಮೆದುಳು, ಎಡಗಣ್ಣಿನ ಮೇಲಿನ ಬುರುಡೆ, ಅರ್ಧ ಮೂಗು, ಅರ್ಧ ಮುಖ ವಿರೂಪಗೊಂಡಿದ್ದ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಸಮೀಪದ ಲಿಂಗನಹಳ್ಳಿ ತಾಂಡಾದ ಕೂಲಿಕಾರ್ಮಿಕ ರೂಪಲ ನಾಯ್ಕ ಎಂಬ ಕೂಲಿ ಕಾರ್ಮಿಕನಿಗೆ ಚಿಕಿತ್ಸೆ ನೀಡಿ ಉಳಿಸಿದ ಹೆಗ್ಗಳಿಕೆ ಇವರದು.ನವೆಂಬರ್ 21ರಂದು ರಾತ್ರಿ ಹೊಲ ಕಾಯಲು ಹೋಗಿದ್ದ ವೇಳೆ ಕರಡಿ ದಾಳಿಯಿಂದ ತೀವ್ರ ಗಾಯಗೊಂಡು, ಜೀವನ್ಮರಣದ ಹೋರಾಟ ನಡೆಸಿದ್ದ ರೂಪಲ ನಾಯ್ಕನಿಗೆ ತೀವ್ರ ರಕ್ತ ಸ್ರಾವವಾಗಿ ಗುರುತು ಹತ್ತದ ಸ್ಥಿತಿ ತಲುಪಿದ್ದ.ತಕ್ಷಣವೇ ವಿಮ್ಸ ಆಸ್ಪತ್ರೆಗೆ ದಾಖಲಾದ ಈತನನ್ನು ತುರ್ತು ಚಿಕಿತ್ಸಾ ಘಟಕದಲ್ಲಿರಿಸಿ, ಮೊದಲು ರಕ್ತಸ್ರಾವ ನಿಯಂತ್ರಿಸಿದ ಡಾ.ವಿಶ್ವನಾಥ, ನಂತರ ತಲೆಬುರುಡೆ ಮತ್ತು ಮುಖದ ಸ್ಕ್ಯಾನ್ ಮೂಡಿ ಗಾಯ ಸ್ವರೂಪವನ್ನು ಗುರುತಿಸಿ ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.ಕರಡಿಯ ದಾಳಿಯಿಂದಾಗಿ ರಕ್ತಸ್ರಾವ ಮತ್ತು ಆಘಾತದಿಂದ 4 ದಿನ ಪ್ರಜ್ಞಾಹೀನನಾಗಿಯೂ, ಸತತ 25 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿಯೂ ದಾಖಲಾಗಿದ್ದ ರೂಪಲ ನಾಯ್ಕ, ಶಸ್ತ್ರಚಿಕಿತ್ಸೆಯಿಂದ ಮರಳಿ ಜೀವ ಪಡೆದಿದ್ದಾನೆ. ಅಷ್ಟೇ ಅಲ್ಲದೆ, ಈತನ ಮುಖಭಾವ ಮೊದಲಿನಂತೆಯೇ ಆಗಿದ್ದು, ಎಡಗಣ್ಣಿನ ದೃಷ್ಟಿಯನ್ನು ಮಾತ್ರ ಕಳೆದುಕೊಂಡಿದ್ದಾನೆ.ಬಿಪಿಎಲ್ ಕಾರ್ಡ್ ಹೊಂದಿರುವ ಈ ವ್ಯಕ್ತಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲಾಗಿದ್ದು, ಇದೀಗ ಅಂಗವಿಕಲರಿಗೆ ದೊರೆಯುವ ಮಾಸಾಶನಕ್ಕೂ ಅರ್ಹನಾಗಿದ್ದಾನೆ.ಕರಡಿ ದಾಳಿ, ಪಾರ್ಶ್ವವಾಯು, ಗಂಭೀರ ಸ್ವರೂಪದ ಅಪಘಾತ ಮತ್ತಿತರ ಪ್ರಕರಣಗಳಲ್ಲಿ ಗಾಯಗೊಂಡು ಮೆದುಳು ಮತ್ತು ನರದೋಷಕ್ಕೆ ಒಳಗಾದ ಇಂತಹ ಅನೇಕರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿರುವ ಡಾ.ವಿಶ್ವನಾಥ್, ಕೂಡಲೇ ಶಸ್ತ್ರಚಿಕಿತ್ಸೆ ನೀಡಿ, ಜೀವ ಉಳಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.`ವೈದ್ಯರಿಂದಾಗಿ ನನಗೆ ಮತ್ತೆ ಜೀವ ಬಂದಂತಾಗಿದೆ. ದುಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಶ್ರೀಮಂತರು ಮಾತ್ರ ಬದುಕುಳಿಯುವ ಇಂತಹ ಚಿಕಿತ್ಸೆ ಬಡವರಿಗೂ ದೊರೆ ಯುವಂತಾಗಿರುವುದು ಅಭಿನಂದನೀಯ' ಎಂದು ಜೀವ ಉಳಿಸಿಕೊಂಡಿರುವ ರೂಪಲ ನಾಯ್ಕ `ಪ್ರಜಾವಾಣಿ' ಎದುರು ಸಂತಸ ವ್ಯಕ್ತಪಡಿಸಿದ್ದಾನೆ.ಇಂತಹ ಅಪಾಯಕ್ಕೆ ಸಿಲುಕಿರುವ ಬಡವರು ಕೂಡಲೇ ವಿಮ್ಸ ಆಸ್ಪತ್ರೆ ಸಂಪರ್ಕಿಸಿದರೆ ಯಶಸ್ವಿಯಾಗಿ ಸವಾಲಿನ ಶಸ್ತ್ರಚಿಕಿತ್ಸೆ ನೀಡಿ ಜೀವ ಉಳಿಸಬಹುದಾಗಿದೆ ಎಂದು ಡಾ. ವಿಶ್ವನಾಥ ತಿಳಿಸಿದ್ದಾರೆ. ಇಂತಹ ಅಪಾಯ ಎದುರಿಸುತ್ತಿರುವ ಸಾರ್ವಜನಿಕರು ಯಾವುದೇ ವೇಳೆಯಲ್ಲಾದರೂ ತಮ್ಮ ಮೊಬೈಲ್ ದೂರ ವಾಣಿ ಸಂಖ್ಯೆ 90191- 63674  ಸಂಪರ್ಕಿಸಬಹುದು ಎಂದು ಅವರು ಕೋರಿದ್ದಾರೆ.ಅರವಳಿಕೆ ತಜ್ಞ ಡಾ. ಬಾಲಬಾಸ್ಕರ, ಡಾ. ಚಂದ್ರಕುಮಾರ್, ಡಾ. ಪ್ರಭು ಹುಬ್ಬಳ್ಳಿ,  ಶುಶ್ರೂಷಕಿ ಕುಮಾರಿ ಶಸ್ತ್ರಚಿಕಿತ್ಸೆಗೆ ನೆರವು ನೀಡಿದ್ದಾರೆ. ವಿಮ್ಸನ ನಿರ್ದೇಶಕ ಡಾ. ಗಂಗಾಧರಗೌಡ, ಪ್ರಾಚಾರ್ಯ ಡಾ. ವಿದ್ಯಾಧರ ಕಿನ್ನಾಳ್, ಅಧೀಕ್ಷಕ ಡಾ. ಲಕ್ಷ್ಮಿನಾರಾಯಣ ವಿಮ್ಸಗೆ ಹೆಮ್ಮೆ ತರುವಂತಹ ಶಸ್ತ್ರಚಿಕಿತ್ಸೆ ನೀಡಿರುವ ತಂಡವನ್ನು  ಅಭಿನಂದಿಸಿದ್ದಾರೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry