ಗುರುವಾರ , ಮೇ 19, 2022
21 °C

ಅಪರೂಪದ ಶಿಲಾ ಸ್ಮಾರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ ಜಿಲ್ಲೆ ಮಲ್ಪೆ ಕಡಲ ತೀರದ ಸೇಂಟ್ ಮೇರಿ ದ್ವೀಪಗಳು ಮತ್ತೆ ಸುದ್ದಿಯಲ್ಲಿವೆ. ಆದರೆ ವೈಜ್ಞಾನಿಕ ಸಂಶೋಧನೆಗಾಗಿ ಅಲ್ಲ; ಕೆಲ ತಿಂಗಳ ಹಿಂದೆ ಅಲ್ಲಿ ನಡೆದ ರೇವ್ ಪಾರ್ಟಿಯಿಂದಾಗಿ (ಮೋಜು ಮಸ್ತಿ ಕೂಟ).ಕೆಲ ತಿಂಗಳ ಹಿಂದೆ ಅಲ್ಲಿ ಸಾರ್ವಜನಿಕವಾಗಿ ಅಶ್ಲೀಲತೆ ಮೆರೆಯಿತು. ವಿದೇಶಿ ಹಿಪ್ಪಿಗಳು ಕುಡಿದು ಕುಪ್ಪಳಿಸಿದರು. ಬಗೆಬಗೆಯ ಮದ್ಯದ ಹೊಳೆಯೇ ಹರಿಯಿತು. ಸ್ವಚ್ಛ ಸುಂದರ ವಾತಾವರಣದ ತೆಂಗಿನ ದ್ವೀಪ ಮಲಿನಗೊಂಡಿತು. ಇದಾದ ನಂತರ ಕೆಲ ಪುರೋಹಿತರು ಅಲ್ಲಿ ಹೋಮ ಮಾಡಿ ಶುದ್ಧೀಕರಣದ ಹೆಸರಲ್ಲಿ ಇನ್ನಷ್ಟು ವಾಯುಮಾಲಿನ್ಯಕ್ಕೆ ಕಾರಣರಾದರು. ರೇವ್ ಪಾರ್ಟಿ ಮೂರ್ಖತನವಾದರೆ, ಹೋಮ ಎನ್ನುವುದು ಮೂಢನಂಬಿಕೆ.ದುರ್ದೈವದ ಸಂಗತಿ ಎಂದರೆ ಕೇಂದ್ರ ಸರ್ಕಾರ 1978 ರಲ್ಲಿ ಘೋಷಿಸಿದ್ದ ಈ `ಸಂರಕ್ಷಿತ ಭೂವೈಜ್ಞಾನಿಕ ಸ್ಮಾರಕ~ ಎಲ್ಲಾ ಬಗೆಯ ಆಕ್ರಮಣಕ್ಕೆ ಒಳಗಾಯಿತು.ಪಂಚದ್ವೀಪಗಳ ಸಮೂಹ

ಸೇಂಟ್ ಮೇರಿ ದ್ವೀಪ ಎಂಬುದು ಪಂಚ ದ್ವೀಪಗಳ ಸಮೂಹಕ್ಕೆ ನೀಡಲಾದ ಹೆಸರು. ನಮ್ಮ ಪಶ್ಚಿಮ ಕರಾವಳಿಯ ಮಲ್ಪೆಯಿಂದ ಕೇವಲ 3 ಕಿ.ಮೀ. ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಇರುವ ಐದು ಚಿಕ್ಕ ದ್ವೀಪಗಳಿಗೆ ಈ ಹೆಸರನ್ನು ಯಾರಿಟ್ಟರೋ ತಿಳಿಯದು. ಇಲ್ಲಿ ಯಾವ ಚರ್ಚ್ ಅಥವಾ ಸಂತರ ಸಮಾಧಿ ಇಲ್ಲ. ಆದರೆ ಭೂವಿಜ್ಞಾನದ ದೃಷ್ಟಿಯಿಂದ ಇದೊಂದು ಅಪರೂಪದ ಶಿಲಾದ್ವೀಪ.ಈ ದ್ವೀಪ ಗುಚ್ಛಗಳ ಪೈಕಿ ತೆಂಗಿನ ದ್ವೀಪ ಮಾತ್ರ 27 ಎಕರೆಗಳಷ್ಟು ದೊಡ್ಡದು. ಉಳಿದವು ಚಿಕ್ಕ ಚಿಕ್ಕ ದ್ವೀಪಗಳು. ತೆಂಗಿನ ದ್ವೀಪದಲ್ಲಿ 6-7 ಎಕರೆಗಳಷ್ಟು ಜಾಗದಲ್ಲಿ ಶುದ್ಧ ಮರಳು. ಉಳಿದ ಕಡೆ ಶಿಲಾಸ್ತಂಭಗಳು ಮತ್ತು ತೆಂಗಿನ ಮರಗಳು. ಸುತ್ತ ನೀಲಿ ಬಣ್ಣದ ಸಾಗರ. ನಡುವೆ ಬಿಳಿ ನೊರೆ ಮತ್ತು ಅಲೆಗಳ ಅಬ್ಬರ. ಎಂಥ ಅರಸಿಕನನ್ನೂ ಕವಿಯಾಗಿಸುವ ವಾತಾವರಣ. ಮರಳಿನಲ್ಲಿ ತಿರುಗಾಡಿ ಸಾಗರದ ನೀರಿನಲ್ಲಿ ಕಾಲುಗಳನ್ನು ಇಟ್ಟುಕೊಂಡು ತೆರೆಗಳಿಗಾಗಿ ಕಾಯುವುದೊಂದು ಆನಂದ.ನಾನು ಅನೇಕ ಸಲ ಅಲ್ಲಿಗೆ ಭೇಟಿ ಕೊಟ್ಟಿದ್ದೇನೆ. ಪ್ರತಿ ಸಲವೂ ನನ್ನೊಳಗಿನ ಭೂವಿಜ್ಞಾನಿ ಈ ಅಪರೂಪದ ಸ್ತಂಭಾಕೃತಿಯ ಸಂದುಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಪ್ರೇರೇಪಿಸಿದ್ದಾನೆ.1963ಕ್ಕೆ ಮೊದಲು ಈ ದ್ವೀಪಗಳ ಬಗ್ಗೆ ಭೂವಿಜ್ಞಾನಿಗಳಿಗೆ ಪರಿಚಯ ಇರಲಿಲ್ಲ. 1963ರ ಸುಮಾರಿಗೆ ಪ್ರೊ. ಸಿ. ನಾಗಣ್ಣನವರು ನಾಡದೋಣಿಯಲ್ಲಿ ಸಾಹಸ ಯಾತ್ರೆ ಮಾಡಿ ಇವುಗಳ ಅಧ್ಯಯನ ಆರಂಭಿಸಿದರು.

 

ನಂತರ ಅವರು 1964 ಮತ್ತು 1966 ರಲ್ಲಿ ಇನ್ನಷ್ಟು ಸಂಶೋಧನೆ ನಡೆಸಿ ಅವುಗಳ ಭೂವೈಜ್ಞಾನಿಕ ಮಹತ್ವವನ್ನು ವಿಜ್ಞಾನ ಜಗತ್ತಿಗೆ ತಿಳಿಸಿದರು. `ಈ ದ್ವೀಪ ಸಮೂಹಗಳಲ್ಲಿ ಇರುವ ಶಿಲೆಗಳು ಜ್ವಾಲಾಮುಖಿಯಿಂದ ಹೊರಹೊಮ್ಮಿದ ಲಾವಾರಸವು ತಂಪುಗೊಂಡಾಗ ನಿರ್ಮಾಣವಾದದ್ದು. ಅವುಗಳ ವೈಜ್ಞಾನಿಕ ಹೆಸರು ಡೇನೈಟ್, ರೈಯೋಲೈಟ ಮತ್ತು ಗ್ರ್ಯಾನೋಫೈರ್~ ಎಂದು ಕಂಡುಕೊಂಡರು.ಈ ದ್ವೀಪಗಳಲ್ಲಿರುವ  ಸ್ತಂಭಾಕೃತಿಯ ನಿರ್ಮಾಣಕ್ಕೆ ಒಂದು ಕಾರಣವೂ ಇದೆ. ಲಾವಾರಸ ಜ್ವಾಲಾಮುಖಿಯಿಂದ ಹೊರಹೊಮ್ಮಿದಾಗ ಅಲ್ಲಲ್ಲಿ ವಿಶಿಷ್ಟ ರೀತಿಯ ತಂಪು ಕೇಂದ್ರಗಳು ನೈಸರ್ಗಿಕವಾಗಿ ಸೃಷ್ಟಿಯಾಗುತ್ತವೆ. ಒಂದೊಂದು ಕೇಂದ್ರದಿಂದ ಸುಮಾರು 20-25 ಸೆಂ.ಮೀ. ಅಂತರದಲ್ಲಿ ಷಟ್‌ಬಾಹುಗಳ ಸುಂದರ ಕಂಬಗಳು ಸಾವಕಾಶವಾಗಿ ಬಿಚ್ಚಿಕೊಳ್ಳುತ್ತವೆ. ಇವನ್ನು ಭೂವೈಜ್ಞಾನಿಕ ಭಾಷೆಯಲ್ಲಿ ಸ್ತಂಭಾಕೃತಿಯ ಸಂದುಗಳೆಂದು (columnor joints) ಎಂದು ಕರೆಯಲಾಗುತ್ತದೆ.ಇಂಥ ಅಪರೂಪದ ಶಿಲಾಸ್ತಂಭಗಳು ಭಾರತದಲ್ಲಿ ಇನ್ನೊಂದಿಲ್ಲ. ಹಿಂದೆ ಮುಂಬೈ ಬಳಿಯ ದ್ವೀಪಗಳಲ್ಲಿದ್ದವು. ಈಗ ಇಲ್ಲ. ಅವುಗಳನ್ನು ಜಲ್ಲಿ ಕಲ್ಲುಗಳನ್ನಾಗಿ ನಾಶಗೊಳಿಸಲಾಗಿದೆ.

ಈ ಎಲ್ಲ ಅಂಶ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಈ ದ್ವೀಪಗಳನ್ನು ಭೂವೈಜ್ಞಾನಿಕ ಸ್ಮಾರಕಗಳೆಂದು ಘೋಷಿಸಿತು. ಹೀಗಿರುವಾಗ ಇವನ್ನು ಯಾವುದೇ ರೀತಿಯಲ್ಲಿ ಮಲಿನಗೊಳಿಸಬಾರದು, ವಿರೂಪಗೊಳಿಸಬಾರದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.