ಗುರುವಾರ , ಮೇ 13, 2021
24 °C

ಅಪಹರಣ ಪ್ರಕರಣ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಸಾಲ ಮರು ಪಾವತಿಸಲು ಸತಾಯಿಸಿದ ವ್ಯಕ್ತಿಯ ಹೆಂಡತಿ, ಮಗಳು ಹಾಗೂ ಪಕ್ಕದ ಮನೆಯ ಗೃಹಿಣಿಯನ್ನು ಅಪಹರಿಸಿದ್ದ ಮೂವರನ್ನು ಬಂಧಿಸಿರುವ ಪೊಲೀಸರು, ಅಪಹರಣಕ್ಕೆ ಒಳಗಾದವರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.ನಗರದ ಜನತಾನಗರ ನಿವಾಸಿಗಳಾಗಿರುವ ಆಟೋ ರಾಮು (25), ಚಂದ್ರ (22) ಮತ್ತು ನಬಿ ರಸೂಲ್ (21) ಎಂಬುವವರೇ ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ನಾಲ್ವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಶೋಧ ಕಾರ್ಯ ಮುಂದುವರಿದಿದೆ.ಘಟನೆಯ ಹಿನ್ನೆಲೆ: ಸ್ಥಳೀಯ ಕಪಗಲ್ಲು ರಸ್ತೆಯ ಕಾಕತೀಯ ಅಪಾ  ರ್ಟ್ ಮೆಂಟ್‌ನಲ್ಲಿ ವಾಸವಾಗಿರುವ ವಿಜಯಲಕ್ಷ್ಮಿ (35), ಅವರ ಪುತ್ರಿ ವಿಭವಶ್ರೀ (12) ಹಾಗೂ ಪಕ್ಕದ ಮನೆಯ ಲಕ್ಷ್ಮಿದೇವಿ (50) ಎಂಬುವವರೇ ಶನಿವಾರ ಸಂಜೆ ಅಪಹರಣಕ್ಕೆ ಒಳಗಾಗಿದ್ದರು.ವಿಜಯಲಕ್ಷ್ಮಿ ಅವರ ಪತಿ ಶ್ರೀಹರಿ ಅವರು ವ್ಯಾಪಾರಕ್ಕಾಗಿ ಅನಂತಪುರದ ಕೃಷ್ಣ ಎಂಬುವವರ ಬಳಿ ರೂ 40 ಲಕ್ಷ ಸಾಲ ಪಡೆದು, ಹಿಂತಿರುಗಿಸದೆ ಸತಾಯಿಸಿದ್ದರು.ಹಣ ವಾಪಸ್ ನೀಡದ್ದರಿಂದ ಸಿಟ್ಟಿಗೆದ್ದ ಕೃಷ್ಣ ತನ್ನ ಸ್ನೇಹಿತ ಪ್ರಕಾಶ ಅವರ ಮೂಲಕ ಶ್ರೀಹರಿಗೆ ಬೆದರಿಕೆ ಹಾಕಿದ್ದರು. ಅನೇಕ ಕಡೆ ಸಾಲ ಮಾಡಿರುವ ಶ್ರೀಹರಿ ಕಳೆದ ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದಾರೆ.ಸಾಲ ಹಿಂದಿರುಗಿಸದ್ದರಿಂದ ಶ್ರೀಹರಿಯ ಪತ್ನಿ, ಮಗಳನ್ನು ಶನಿವಾರ ಸಂಜೆ ಅವರ ಮನೆಯಿಂದ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಆಗಮಿಸಿದ ಲಕ್ಷ್ಮಿದೇವಿ ಅವರನ್ನು ವಿಜಯಲಕ್ಷ್ಮಿ ಅವರು ತಮ್ಮಂದಿಗೆ ಬರುವಂತೆ ಕೋರಿದ್ದರಿಂದ ಅಪಹರಣಕಾರರು ಅವರನ್ನೂ ಜತೆಗೆ ಕರೆದೊಯ್ದಿದ್ದರು.ಈ ಕುರಿತು ಶನಿವಾರ ರಾತ್ರಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಲಕ್ಷ್ಮಿದೇವಿಯ ಪತಿ ಕೃಷ್ಣಪ್ಪ ದೂರು ನೀಡಿದ್ದರು.ಪ್ರಕರಣದ ಜಾಡು ಹಿಡಿದ ಪೊಲೀಸರು ಅಪಹರಣಕಾರರ ತಂಡದ ಮೂವರು ಸದಸ್ಯರನ್ನು ಆಂಧ್ರದ ಅನಂತಪುರ ಜಿಲ್ಲೆಯ ರಾಯಲಚೆರುವು ಪಟ್ಟಣದ ಪೆಟ್ರೋಲ್ ಬಂಕ್‌ಬಳಿ ಭಾನುವಾರ ಬೆಳಿಗ್ಗೆ ಬಂಧಿಸಿ, ಅಪಹೃತರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ಅಪಹರಣಕ್ಕೆ ಬಳಸಲಾಗಿದ್ದ ಟಾಟಾ ಸಪಾರಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಗ್ರಾಮೀಣ ಠಾಣೆ ಸಿಪಿಐ ಎಸ್.ಎಸ್ ಹುಲ್ಲೂರ, ಗಾಂಧಿನಗರ ಪಿಎಸ್‌ಐ ವಾಸುಕುಮಾರ್, ಪವಾರ, ಆದಿನಾರಾಯಣ, ಸುರೇಶ ಎಂಬುವವರು ಆರೋಪಿಗಳನ್ನು ಪತ್ತೆ ಮಾಡಿದ ಸಿಬ್ಬಂದಿಯಾಗಿದ್ದು, ಇವರಿಗೆ ಸೂಕ್ತ ಬಹುಮಾನ ಘೋಷಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.