ಭಾನುವಾರ, ಏಪ್ರಿಲ್ 18, 2021
33 °C

ಅಪಹೃತ ಯುವಕ ಸುರಕ್ಷಿತ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಹಣಕ್ಕಾಗಿ ಯುವಕನೊಬ್ಬನನ್ನು ಅಪಹರಿಸಿದ್ದ ನಾಲ್ವರು ದುಷ್ಕರ್ಮಿಗಳನ್ನು ಸ್ಥಳೀಯ ಪೊಲೀಸರು ಬುಧವಾರ ಬಂಧಿಸಿ  ಆ ಯುವಕನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ. ಚಿತ್ತೂರು ಜಿಲ್ಲೆ ಪಲಮನೇರು ಪಟ್ಟಣದ ಗಂಗಪ್ಪ (37), ರಾಜೇಂದ್ರ ರೆಡ್ಡಿ (20), ಸುಬ್ರಮಣಿ (31) ಹಾಗೂ ಹೊಸಕೋಟೆ ಸೂಲಿಬೆಲೆ ರಸ್ತೆಯ ವಾಸಿ ಯಶೋಧರ (25) ಬಂಧಿತ ಆರೋಪಿಗಳು.ಹೊಸಕೋಟೆ ಪಟ್ಟಣದ ಸೀತಾ ಬೀಡಿ ಕಂಪೆನಿಯ ಮಾಲೀಕ ಅಬ್ದುಲ್ ಖಾದರ್ ಅವರ ಪುತ್ರ ಮುಬಾರಕ್ ಷರೀಫ್‌ನನ್ನು (21) ಆರೋಪಿಗಳು ಫೆ.18 ರಂದು ಅಪಹರಿಸಿದ್ದರು. ಎರಡು ದಿನಗಳ ನಂತರ ಆರೋಪಿಗಳು ಅಬ್ದುಲ್ ಖಾದರ್ ಅವರಿಗೆ ಕರೆ ಮಾಡಿ 20 ಲಕ್ಷ ರೂ. ತಂದು ಕೊಡಬೇಕು, ಇಲ್ಲದಿದ್ದಲ್ಲಿ ಷರೀಫ್‌ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.ಅಬ್ದುಲ್ ಖಾದರ್ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡು ಆರೋಪಿಗಳು ಮಾಡಿದ ದೂರವಾಣಿ ಕರೆಯ ಜಾಡು ಹಿಡಿದು  ಜಾಲ ಬೀಸಿದರು. ಆರೋಪಿಗಳು ಆಂಧ್ರಪ್ರದೇಶದ ಕೊತ್ತಕೋಟ, ಮೊಲಕಾಲ್ಚೂರು, ಚಿತ್ತೂರು ಮುಂತಾದ ಕಡೆಗಳಿಂದ ಕರೆ ಮಾಡುತ್ತಿದ್ದರು.ಹಣ ತೆಗೆದುಕೊಂಡು ಅಲ್ಲಿಗೆ ಹೋದಾಗ ಅವರು ಮತ್ತೊಂದು ಕಡೆ ಬರುವಂತೆ ತಿಳಿಸುತ್ತಿದ್ದರು. ಕಡೆಗೆ ಆರೋಪಿಗಳನ್ನು ಪಲಮನೇರುವಿನಲ್ಲಿ ಪತ್ತೆ ಹಚ್ಚಿ ಬಂಧಿಸಿದ ಪೊಲೀಸರು ಮನೆಯೊಂದರಲ್ಲಿ ಬಚ್ಚಿಟ್ಟಿದ್ದ ಷರೀಫ್‌ನನ್ನು ವಶಕ್ಕೆ ತೆಗೆದುಕೊಂಡರು. ಆರೋಪಿ ಗಂಗಯ್ಯ ಈ ಹಿಂದೆ ಅಬ್ದುಲ್ ಖಾದರ್ ಅವರ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಅವರ ಮನೆಯ ವ್ಯವಹಾರ ಅರಿತಿದ್ದ. ಸುಲಭವಾಗಿ ಹಣ ಮಾಡಲು ಇತರರ ಜೊತೆ ಸೇರಿ ಅಪಹರಣದ ಸಂಚು ರೂಪಿಸಿದ್ದ. ಸ್ವಲ್ಪ ಬುದ್ದಿಮಾಂದ್ಯನಾಗಿದ್ದ ಷರೀಫ್ ಅಪ್ಪನಿಗೆ ಪ್ರೀತಿಪಾತ್ರನಾಗಿದ್ದ.ಆತನ ಅಪಹರಣದ ದುಃಖದಲ್ಲಿ ಅಬ್ದುಲ್ ಖಾದರ್ ಅವರು ಮೃತರಾದರು. ಈ ವಿಷಯವನ್ನು ಆರೋಪಿಗಳಿಗೆ ತಿಳಿಸಿದರೂ ಅವರು ಹಣದ ಬೇಡಿಕೆಯನ್ನು ನಿಲ್ಲಿಸಿರಲಿಲ್ಲ ಎಂದು ಎಸ್.ಪಿ. ಡಾ.ಮಹೇಶ್ ಸುದ್ದಿಗಾರರಿಗೆ ತಿಳಿಸಿದರು. ಡಿವೈಎಸ್‌ಪಿ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಮಲ್ಲೇಶ್, ಪಿಎಸ್‌ಐ ಶಿವರಾಜ್ ಸಿಬ್ಬಂದಿಗಳಾದ ದತ್ತ, ಪ್ರಭು, ಲಕ್ಷ್ಮಣ್, ಮಂಜು, ಮೌಲ ಮತ್ತು ಮಂಜುನಾಥ ರೆಡ್ಡಿ ಕಾರ್ಯಾಚರಣೆ ನಡೆಸಿದರು.ಚಿಕಿತ್ಸೆಗೆ ಬಂದ ವೃದ್ಧ ಸಾವು

ಅನಾರೋಗ್ಯದಿಂದ ಬಳಲುತ್ತಿದ್ದ  ಸುಮಾರು 65 ವರ್ಷ ವಯಸ್ಸಿನ ವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ  ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟರು. ಆ ವೃದ್ಧರು ಇಲ್ಲಿಯ ಸಹಕಾರಿ ಭವನದ ಬಳಿ ಮಾ.1 ರಂದು ಅಸ್ವಸ್ಥರಾಗಿ ಬಿದ್ದಿದ್ದರು. ತಾವು ನಾಟಿ ಔಷಧಿ ಪಡೆಯಲು ಹೊಸಕೋಟೆ ಬಂದಿರುವುದಾಗಿಯೂ, ತಮ್ಮ ಹೆಸರು ನಾಗವಾರ ದಾಸರಹಳ್ಳಿಯ ಮುನಿಆಂಜಿನಪ್ಪ ಎಂದು ತಿಳಿಸಿದ್ದರು ಎನ್ನಲಾಗಿದೆ. ಬಿಳಿ ಪಂಚೆ, ತಿಳಿ ಹಸಿರು ಬಣ್ಣದ ತುಂಬು ತೋಳಿನ ಅಂಗಿ ಧರಿಸಿದ್ದ ಅವರನ್ನು ದಾರಿಹೋಕರು ಆಸ್ಪತ್ರೆಗೆ ಸೇರಿಸಿದ್ದರು. ಅವರ ಶವವನ್ನು ಇಲ್ಲಿಯ ಎಂವಿಜೆ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಪೊಲೀಸರು ಅಸ್ವಾಭಾವಿಕ ಮರಣದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರಸುದಾರರು ಇದ್ದಲ್ಲಿ ಹೊಸಕೋಟೆ ಪೊಲೀಸರನ್ನು ಸಂಪರ್ಕಿಸಬಹುದು.ಪತ್ತೆಯಾಗದ ಮೃತದೇಹಗಳು

ರಾಮನಗರ: ಬಿಡದಿ ಬಳಿಯ ನೆಲ್ಲಿಗುಡ್ಡೆ ಕೆರೆಯಲ್ಲಿ ಈಜಾಡಲು ಬಂದು ಗುರುವಾರ ಅಸುನೀಗಿದ್ದ ನಾಲ್ವರ ಪೈಕಿ ಇಬ್ಬರು ಯುವಕರ ಶವಗಳು ಶುಕ್ರವಾರವೂ ಪತ್ತೆಯಾಗಲಿಲ್ಲ.ಅಗ್ನಿಶಾಮಕ ಪಡೆಯ ಸಿಬ್ಬಂದಿ, ಬಿಡದಿ ಪೊಲೀಸರು ಹಾಗೂ ಸ್ಥಳೀಯ ನುರಿತ ಈಜುಗಾರರು ಇಡೀ ದಿನ ನಡೆಸಿದ ಶೋಧ ಕಾರ್ಯ ಯಶಸ್ವಿಯಾಗಲಿಲ್ಲ. ಶೋಧ ಕಾರ್ಯ ಶನಿವಾರವೂ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಚೋಳರಪಾಳ್ಯದಿಂದ ಈಜಾಡಲು ಬಂದಿದ್ದ 11 ಜನರ ಪೈಕಿ ನಾಲ್ವರು ಜಲ ಸಮಾಧಿಯಾಗಿದ್ದರು. ಅವರಲ್ಲಿ ಮನೋಜ್ ಮತ್ತು ಯಶಸ್ವಿನಿ ಅವರ ಶವ ದೊರೆತಿದ್ದು, ಜಗನ್, ಪುನಿತ್ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.