ಶುಕ್ರವಾರ, ಜೂನ್ 18, 2021
21 °C

ಅಪಾಯಕಾರಿ ಬೆಳವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಡಿಶಾದ ಕಾಡುಗಳಲ್ಲಿ ಈಗ ನಡೆಯುತ್ತಿರುವುದು ಖಂಡಿತ ವರ್ಗ ಹೋರಾಟ ಅಲ್ಲ, ಅದು ಮಾವೋವಾದಿ ಸಂಘಟನೆಯೊಳಗಿನ ಆಂತರಿಕ ಕಚ್ಚಾಟದ ವಿಧ್ವಂಸಕ ರೂಪ.ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬಂದ ಮಾವೋವಾದಿ ಸಂಘಟನೆ ಈಗ ಅದೇ ವ್ಯವಸ್ಥೆಯೊಳಗಿನ ಕಾಯಿಲೆಗಳಾದ ಭಿನ್ನಮತ ಮತ್ತು ನಾಯಕತ್ವದ ಪೈಪೋಟಿಗೆ ಬಲಿಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ನಾಯಕತ್ವದ ಬಿಕ್ಕಟ್ಟು ಇಬ್ಬರು ಇಟಲಿ ಪ್ರಜೆಗಳ ಅಪಹರಣದ ನಂತರ ಸ್ಫೋಟಗೊಂಡಿದೆ.

 

ಅಪಹೃತರ ಬಿಡುಗಡೆಗಾಗಿ ಮಾತುಕತೆ ನಡೆಯುತ್ತಿದ್ದಾಗಲೇ ನಕ್ಸಲೀಯರು ಒಬ್ಬ ಗುತ್ತಿಗೆದಾರರ ಹತ್ಯೆ ನಡೆಸಿದ್ದಾರೆ. ನೆಲಬಾಂಬುಗಳನ್ನಿಟ್ಟು ಇಬ್ಬರು ಪೊಲೀಸರನ್ನು ಸಾಯಿಸಿದ್ದಾರೆ. ಅದರ ಬೆನ್ನಲ್ಲೇ ಬಿಜು ಜನತಾದಳದ ಶಾಸಕನ ಅಪಹರಣವಾಗಿದೆ. ಈ ಎಲ್ಲ ಕೃತ್ಯಗಳನ್ನು ಮಾವೋವಾದಿಗಳು ಒಂದೇ ನಾಯಕತ್ವದ ಮಾರ್ಗದರ್ಶನದಲ್ಲಿ ನಡೆಸಿದ್ದಲ್ಲ ಎನ್ನುವುದು ನಿಧಾನವಾಗಿ ಬಯಲಾಗುತ್ತಿದೆ.ಒಡಿಶಾದ ಗುಡ್ಡಗಾಡು ಪ್ರದೇಶದ ಜಿಲ್ಲೆಗಳಲ್ಲಿ ಮಾವೋವಾದಿ ಸಂಘಟನೆ ವ್ಯಾಪಕವಾಗಿ ಹರಡಿದ್ದರೂ ಅಲ್ಲಿರುವ ಹೆಚ್ಚಿನ ಕಾರ್ಯಕರ್ತರು ಆಂಧ್ರಪ್ರದೇಶ ಮತ್ತು ಚತ್ತೀಸ್‌ಘಡ ರಾಜ್ಯಗಳಿಗೆ ಸೇರಿದವರು. ಇತ್ತೀಚಿನ ವರ್ಷಗಳವರೆಗೂ ನಾಯಕತ್ವ ಕೂಡಾ ಆ ಎರಡು ರಾಜ್ಯಗಳಿಗೆ ಸೇರಿದವರ ಕೈಯಲ್ಲಿಯೇ ಇತ್ತು.ಐದು ವರ್ಷಗಳ ಹಿಂದೆ ಮಾವೋವಾದಿ ಸಂಘಟನೆಯ ಕೇಂದ್ರ ನಾಯಕತ್ವ ಒಡಿಶಾ ಸಂಘಟನೆಯ ಮುಖ್ಯಸ್ಥರಾಗಿ ಅದೇ ರಾಜ್ಯದ ಸವ್ಯಸಾಚಿ ಪಾಂಡಾನನ್ನು ನೇಮಿಸಿತ್ತು.

 

ನಾಯಕತ್ವ ವಹಿಸಿಕೊಂಡ ಮೇಲೆ ಪಾಂಡಾ ಸಂಘಟನೆಯ ಆಯಕಟ್ಟಿನ ಜಾಗದಲ್ಲಿ ಒಡಿಶಾದವರನ್ನು ನೇಮಿಸುವ ಮೂಲಕ ಆಂಧ್ರಪ್ರದೇಶದ ಪ್ರಾಬಲ್ಯವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಸಂಘಟನೆಯೊಳಗೆ ಭಿನ್ನಮತ ಭುಗಿಲೆದ್ದಿದೆ.

`ರಾಜ್ಯ ಸರ್ಕಾರದ ಜತೆಯಲ್ಲಿ ಪಾಂಡಾ ಹೊಂದಾಣಿಕೆ ಮಾಡಿಕೊಂಡಿದ್ದಾರೆ.

 

ಇತ್ತೀಚೆಗೆ ಆಡಳಿತಾರೂಢ ಬಿಜು ಜನತಾದಳ ಕೋರಾಪಟ್ ಜಿಲ್ಲೆಯ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಲು ಈ ಹೊಂದಾಣಿಕೆಯೇ ಕಾರಣ~ ಎನ್ನುವುದು ಭಿನ್ನಮತೀಯ ಮಾವೋವಾದಿಗಳ ಆರೋಪ. ಇಟಲಿ ಪ್ರಜೆಗಳ ಬಿಡುಗಡೆಗಾಗಿ ಸರ್ಕಾರದ ಜತೆ ನಡೆಸುತ್ತಿರುವ ಸಂಧಾನ ಸಫಲವಾದರೆ ಪಾಂಡಾನ ಕೈ ಬಲಗೊಳ್ಳಬಹುದು ಎಂಬ ಆತಂಕಕ್ಕೀಡಾಗಿರುವ ಅದೇ ಭಿನ್ನಮತೀಯರು ಅಪಹರಣ ಮತ್ತು ಹತ್ಯೆಗಳಲ್ಲಿ ತೊಡಗಿದ್ದಾರೆಂದು ಹೇಳಲಾಗುತ್ತಿದೆ. ಈ ಭಿನ್ನಮತದ ಲಾಭ ಪಡೆಯಲು ಒಡಿಶಾ ಸರ್ಕಾರ ಹವಣಿಸುತ್ತಿರುವುದೇ ಈಗಿನ ಅಪಾಯಕಾರಿ ಬೆಳವಣಿಗೆ. ಇದನ್ನು ಹಿಂದೆ ಆಂಧ್ರಪ್ರದೇಶದಲ್ಲಿ ವೈ.ಎಸ್.ರಾಜಶೇಖರ ರೆಡ್ಡಿ ಮಾಡಿದ್ದರು, ಇತ್ತೀಚೆಗೆ ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಎಡಪಕ್ಷಗಳ ವಿರುದ್ದದ ಹೋರಾಟದಲ್ಲಿಯೂ ಮಾವೋವಾದಿಗಳನ್ನು ಬಳಸಿಕೊಂಡಿದ್ದರು.ಇದೊಂದು ರೀತಿಯ ಹುಲಿಯ ಮೇಲಿನ ಸವಾರಿ. ನಕ್ಸಲೀಯರ ನಿಯಂತ್ರಣಕ್ಕೆ ಇದು ಶಾಶ್ವತ ಪರಿಹಾರ ಕ್ರಮ ಅಲ್ಲ. ಚುನಾಯಿತ ಸರ್ಕಾರವೊಂದು ತಕ್ಷಣ ರಾಜಕೀಯ ಲಾಭಕ್ಕಾಗಿ ಇಂತಹ ಅಡ್ಡದಾರಿಗಳನ್ನು ಹಿಡಿಯಬಾರದು.  ನೆಲದ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ನಿರ್ಭೀತಿಯಿಂದ ಕ್ರಮಕೈಗೊಳ್ಳುವುದರ ಜತೆಯಲ್ಲಿ ನಕ್ಸಲೀಯ ಪೀಡಿತ ಪ್ರದೇಶದ ಅಭಿವೃದ್ಧಿಗೆ ಶಾಶ್ವತ ಸ್ವರೂಪದ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ನಡೆಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.