ಬುಧವಾರ, ಜನವರಿ 22, 2020
21 °C
ಎಡದಂಡೆ ನಾಲೆಯಲ್ಲಿ ರಂಧ್ರಗಳು

ಅಪಾಯದಂಚಿನಲ್ಲಿ ಕಣಿವೆ ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಹಾರಂಗಿ ಎಡದಂಡೆ ನಾಲೆಯಲ್ಲಿ ಹತ್ತಾರು ರಂಧ್ರಗಳು ಕಾಣಿಸಿಕೊಂಡಿದ್ದು ಕಣಿವೆ ಗ್ರಾಮಕ್ಕೆ ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯ ಎದುರಾಗಿವೆ.1,700 ಕ್ಯೂಸೆಕ್ ನೀರು ಹರಿಸಲಾಗುವ ಹಾರಂಗಿ ಮುಖ್ಯ ಕಾಲುವೆಯಲ್ಲಿ ಸದ್ಯ 1,700 ಕ್ಯೂಸೆಕ್ ನೀರು ಹರಿಯುತ್ತಿದೆ. ಹಾರಂಗಿ ಜಲಾಶಯದಿಂದ ಮುಖ್ಯ ಕಾಲುವೆಯಲ್ಲಿ ಹರಿಯುವ ನೀರು ಕಣಿವೆಯ ಅನತಿ ದೂರದಲ್ಲೇ ಇರುವ ಭುವನಗಿರಿ ಪ್ರದೇಶದಲ್ಲಿ ಎಡದಂಡೆ ಮತ್ತು ಬಲದಂಡೆ ನಾಲೆಗಳಾಗಿ ವಿಭಾಗವಾಗುತ್ತದೆ. ಅಲ್ಲಿಂದ ಎಡದಂಡೆ ನಾಲೆಯಲ್ಲಿ ಜನವರಿ ತಿಂಗಳ ಎರಡನೆ ವಾರದವರೆಗೆ ಪ್ರತಿನಿತ್ಯ 350 ಕ್ಯೂಸೆಕ್ ನೀರು ಹರಿಯುತ್ತಿರುತ್ತದೆ.ಭುವನಗಿರಿ ಪ್ರದೇಶದಲ್ಲಿ ಮುಖ್ಯ ಕಾಲುವೆಯಿಂದ ವಿಭಾಗವಾಗಿ ಹರಿಯುವ ಎಡದಂಡೆ ನಾಲೆಯು ಆರಂಭದಿಂದಲೇ ಸಾಕಷ್ಟು ಎತ್ತರ ಪ್ರದೇಶದಲ್ಲಿದೆ. ಅಂದರೆ ನಾಲೆಯ ಬಲಭಾಗವು ಸಾಕಷ್ಟು ತಗ್ಗಿನ ಪ್ರದೇಶವಾಗಿದ್ದು ಇಲ್ಲಿ ಅಂದಾಜು ನೂರು ಎಕರೆ ಭತ್ತದ ಗದ್ದೆಗಳಿವೆ. ಈ ಪ್ರದೇಶ ಬಿಟ್ಟು ತುಸು ಮುಂದೆ ಸಾಗಿದರೆ 60 ಕುಟುಂಬಗಳು 700 ಜನಸಂಖ್ಯೆ ಹೊಂದಿರುವ ಕಣಿವೆ ಗ್ರಾಮವಿದೆ.ಸಾಕಷ್ಟು ಎತ್ತರ ಪ್ರದೇಶದಲ್ಲಿ ಹರಿಯುತ್ತಿರುವ ಎಡದಂಡೆ ನಾಲೆಯಲ್ಲಿ ಹಲವು ರಂಧ್ರಗಳು ನಿರ್ಮಾಣವಾಗಿವೆ. ಇವುಗಳಿಂದ ಚಿಕ್ಕ ಕಾಲುವೆಯಲ್ಲಿ ಹರಿಯುವ ಪ್ರಮಾಣದ ನೀರು ಈ ರಂಧ್ರಗಳಿಂದ ಹೊರಸೂಸುತ್ತಿದೆ. ಇದು ಹೀಗೆ ನಿರಂತರವಾಗಿ ಹರಿದು ಆ ರಂಧ್ರಗಳು ದೊಡ್ಡವಾದರೆ ಎಡದಂಡೆ ನಾಲೆ ಒಡೆಯುವ ಅಪಾಯ ಇದೆ. ನೂರಾರು ಜೀವಹಾನಿ ಅಷ್ಟೇ ಅಲ್ಲದೇ, ನೂರಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ ಕೂಡ ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯ ಇದೆ.ಎಡದಂಡೆ ನಾಲೆಗೆ ಮೂರು ವರ್ಷಗಳ ಹಿಂದೆ ಕಾಂಕ್ರೀಟ್ ಅಳವಡಿಸುವ ಸಂದರ್ಭದಲ್ಲಿ ಬದಿಗಳಲ್ಲಿದ್ದ ಮರಗಳನ್ನು ಸರಿಯಾಗಿ ತೆರವುಗೊಳಿಸದೇ ಹಾಗೆಯೇ ಕಾಂಕ್ರೀಟ್ ಹಾಕಲಾಗಿದೆ. ಹೀಗಾಗಿ, ನಂತರದ ದಿನಗಳಲ್ಲಿ ಭೂಮಿಯೊಳಗೆ ಉಳಿದಿದ್ದ ಮರದ ಬೇರುಗಳು ಕರಗಿ ಈ ರಂಧ್ರಗಳು ನಿರ್ಮಾಣವಾಗಿವೆ.  ಇದಕ್ಕೆ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸುತ್ತಲಿನ ಜನತೆ ಆರೋಪಿಸಿದ್ದಾರೆ.ಒಟ್ಟಾರೆ ಎಡದಂಡೆ ನಾಲೆಯಲ್ಲಿ ಕಾಣಿಸಿಕೊಂಡಿರುವ ಈ ರಂಧ್ರಗಳನ್ನು ಸಂಬಂಧಿಸಿದ ಇಲಾಖೆಯು ತಕ್ಷಣವೇ ಮುಚ್ಚಿಸಿ ಸಂಭವಿಸಬಹುದಾದ ಭಾರಿ ಅಪಾಯವನ್ನು ತಪ್ಪಿಸಬೇಕಾಗಿದೆ.

ಪ್ರತಿಕ್ರಿಯಿಸಿ (+)