ಅಪಾಯದಲ್ಲಿವೆ ವಿದ್ಯುತ್ ಕಂಬಗಳು!
ಹುಬ್ಬಳ್ಳಿ: ನಗರ ಹಾಗೂ ಸುತ್ತಮುತ್ತ ಮತ್ತೆ ಮಳೆ ಆರ್ಭಟಿಸತೊಡಗಿದೆ. ಸಾಕಷ್ಟು ವಿದ್ಯುತ್ ಕಂಬಗಳು ಮುರಿದುಬೀಳುವ ಸ್ಥಿತಿಯಲ್ಲಿದ್ದು, ಮಳೆಗಾಳಿಗೆ ನೆಲಕ್ಕುರುಳಲು ಕಾಯುವಂತಿವೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಣಕಲ್ ಸಮೀಪ ವೈಷ್ಣವಿ ಚೇತನಾ ಕಾಲೇಜು ಕಟ್ಟಡದ ಎದುರೇ ವಿದ್ಯುತ್ ಕಂಬ ನೆಲದತ್ತ ಮುಖ ಮಾಡಿದೆ. ಸಾಕಷ್ಟು ತಿಂಗಳುಗಳಿಂದ ಈ ಕಂಬ ಇದೇ ಸ್ಥಿತಿಯಲ್ಲಿದೆ. ಆದಾಗ್ಯೂ ಹೆಸ್ಕಾಂ ಸಿಬ್ಬಂದಿ ಇತ್ತ ಗಮನ ಹರಿಸಿಲ್ಲ. ನಿತ್ಯ ಸಾವಿರಾರು ವಾಹನಗಳು, ವಿದ್ಯಾರ್ಥಿಗಳೂ ಇದೇ ಮಾರ್ಗದಲ್ಲಿ ಓಡಾಡುತ್ತಾರೆ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಹಳೆಯ ಕಂಬವನ್ನು ತೆಗೆದು ಹೊಸ ಕಂಬ ನೆಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
ಉಣಕಲ್ ಹಾಗೂ ಆಸುಪಾಸಿನ ಬಡಾವಣೆಗಳಲ್ಲಿ ಸಹ ಅನೇಕ ವಿದ್ಯುತ್ ಕಂಬಗಳು ಶೋಚನೀಯ ಸ್ಥಿತಿಯಲ್ಲಿವೆ. ಸಿದ್ದಪ್ಪಜ್ಜನ ಗುಡಿಯ ಹತ್ತಿರ, ಉಣಕಲ್-ಸಾಯಿ ನಗರ ಮುಖ್ಯರಸ್ತೆಯಲ್ಲಿ ಕಂಬದಲ್ಲಿನ ಟ್ಯೂಬ್ಲೈಟ್ ಕಿತ್ತುಬಂದಿದ್ದು, ಯಾವ ಕ್ಷಣದಲ್ಲಾದರೂ ಓಡಾಡುವವರ ತಲೆ ಮೇಲೆ ಬೀಳುವಂತಿದೆ. ಇದೇ ರಸ್ತೆಯ ಮತ್ತೊಂದು ಕಂಬ ಅರ್ಧಕ್ಕೆ ಮುರಿದಿದ್ದು, ಬೀಳುವ ಅಪಾಯದಲ್ಲಿದೆ.
ವಿದ್ಯಾನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ಗೆ ಹೊಂದಿಕೊಂಡಂತೆ ಇರುವ, ಕಿಮ್ಸನೆಡೆಗೆ ಸಾಗುವ ರಸ್ತೆಯಲ್ಲೂ ಕೆಲವು ಕಂಬಗಳು ಶಿಥಿಲ ಸ್ಥಿತಿಯಲ್ಲಿವೆ. ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.