ಅಪಾಯದ ಭೀತಿಯಲ್ಲಿ ಎಡದಂಡೆ ಕಾಲುವೆ

ಮಸ್ಕಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಕೊನೆಯ ಹಂತದ ಶಾಶ್ವತ ದುರಸ್ತಿ ಈ ವರ್ಷ ಅನಿಶ್ಚಿತಗೊಂಡಿದೆ. ಅಧಿಕಾರಿಗಳ ಉದಾಸಿನತೆ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಈ ಭಾರಿಯ ದುರಸ್ತಿ ಕೆಲಸಕ್ಕೆ ಕೊಕ್ಕೆ ಬಿದ್ದಿದೆ.
ಮಸ್ಕಿ ಸಮೀಪದ ಮೈಲ್ 69ರಲ್ಲಿ 10 ವರ್ಷಗಳ ಹಿಂದೆ ಮಾಡಿದ್ದ ದುರಸ್ತಿ ಕೆಲಸ ಇದೀಗ ಕುಸಿಯುವ ಹಂತಕ್ಕೆ ಬಂದಿದೆ. ಈ ಭಾಗದಲ್ಲಿ ಅತಿ ಎತ್ತರದ ಒಡ್ಡಿನ ಏರಿ ಇದ್ದು, (ಹೈ ಬ್ಯಾಂಕಿಂಗ್) ಇದರ ಒಳಮೈ ಕುಸಿದಿದೆ. ಕಬ್ಬಿಣದ ರಾಡುಗಳು ಹೊರಬಂದಿದ್ದು ಯಾವುದೇ ಕ್ಷಣದಲ್ಲಿ ಇದು ಹೊಡೆಯುವ ಸಂಭವ ಇದೆ.
ಕಳೆದ ಮೂರು ವರ್ಷಗಳಿಂದ ಮುಖ್ಯ ಕಾಲುವೆಯ ಶಾಶ್ವತ ದುರಸ್ತಿ ಕಾರ್ಯ ಡಿ.ವೈ. ಉಪ್ಪಾರ ಕಂಪನಿಗೆ ನೀಡಿತ್ತು. ನಾಲ್ಕು ವರ್ಷಗಳಲ್ಲಿ ಮಖ್ಯ ಕಾಲುವೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು. ಇದಕ್ಕಾಗಿ ಸರ್ಕಾರ 900 ಕೋಟಿ ರೂಪಾಯಿ ಮೀಸಲಿಟ್ಟಿತ್ತು.
ಈಗಾಗಲೇ ಕಾಲುವೆಯ ಬಹುತೇಖ ದುರಸ್ತಿ ಪೂರ್ಣಗೊಂಡಿದೆ. ಆದರೆ, ಅಪಾಯದಲ್ಲಿ ಇರುವ ಮಸ್ಕಿ ಸಮೀಪದ ಮೈಲ್ 69 ರಲ್ಲಿ ಈ ವರ್ಷ ಕಾಮಗಾರಿ ಕೈಗೊಳ್ಳಬೇಕಾಗಿತ್ತು. ಆದರೆ, ಕಾಲುವೆಯಲ್ಲಿ ನೀರು ಸ್ಥಗಿತಗೊಳಿಸಿ ಎರಡು ತಿಂಗಳು ಕಳೆದಿದ್ದರೂ ಕಾಮಗಾರಿಯ ಪ್ರಾರಂಭಿಸುವ ಸುಳಿವು ಇಲ್ಲ.
ಈಗಾಗಲೇ ಕೊನೆಯ ಹಂತದ ಕಾಮಗಾರಿಯನ್ನು ಕೂಡಾ ಅದೇ ಡಿ.ವೈ. ಉಪ್ಪಾರ ಕಂಪೆನಿ ಪಡೆದುಕೊಂಡಿದೆ. ಈ ಕಂಪನಿಗೆ ಕಾಮಗಾರಿ ಆದೇಶ ನೀಡಬೇಕಾದ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜನಿಯರ್ ಅವರು ವಿಳಂಬ ಮಾಡುತ್ತಿದ್ದಾರೆಂಬ ಆರೋಪ ಇದೆ.
ಕಾಮಗಾರಿ ಆದೇಶ ದೊರೆಯದ ಹೊರತು ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದ ಈ ವರ್ಷ ಕಾಲುವೆಯ ಶಾಶ್ವತ ದುರಸ್ತಿ ನೆನೆಗುದಿಗೆ ಬಿದ್ದಿದೆ.
ಕಾಮಗಾರಿಗೆ ಕೊಕ್ಕೆ ಬಿದ್ದಿರುವ ಹಿನ್ನಲೆಯಲ್ಲಿ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಸೃಷ್ಠಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.