`ಅಪಾಯ ಹೊಂಡ'ಕ್ಕೆ ಡಾಂಬರು ಅಭಿಷೇಕ!

7

`ಅಪಾಯ ಹೊಂಡ'ಕ್ಕೆ ಡಾಂಬರು ಅಭಿಷೇಕ!

Published:
Updated:

ಬೆಳಗಾವಿ: ಈ ರಸ್ತೆಯಲ್ಲಿ ತಗ್ಗು- ದಿನ್ನೆಗಳದ್ದೇ ಕಾರುಬಾರು ಇತ್ತು. ವಾಹನ ಸಂಚಾರಕ್ಕೆ ಸರ್ಕಸ್ ಮಾಡಬೇಕಿತ್ತು. ಈ ಭಾಗದ ಜನರು ರಸ್ತೆ ಯಾವಾಗ ಸುಧಾರಿಸುವುದೋ ಎಂಬ ಚಿಂತೆಯಲ್ಲಿದ್ದರು. ಸಂಬಂಧಪಟ್ಟ ಇಲಾಖೆಗಳಂತೂ ಈ ಕಡೆಗೆ ಗಮನವನ್ನೇ ನೀಡಿರಲಿಲ್ಲ. ಆದರೆ ಯುವಕರ ಗುಂಪೊಂದು ಸ್ವ ಇಚ್ಛೆಯಿಂದ ರಸ್ತೆಯಲ್ಲಿ ಉದ್ಭವವಾಗಿದ್ದ ತಗ್ಗುಗಳನ್ನು ತುಂಬುವ ಕೆಲಸ ಮಾಡಿತು. ಅಪಾಯದ ಹೊಂಡಗಳಿಗೆ ಡಾಂಬರು `ಅಭಿಷೇಕ' ನಡೆಯಿತು.ಕುಂದಾನಗರಿಯ ಹೃದಯ ಭಾಗದಲ್ಲಿರುವ ರೈಲ್ವೆ ಮೇಲು ಸೇತುವೆ ರಸ್ತೆಯಲ್ಲಿ ನಾಯಿಕೊಡೆಗಳಂತೆ ತಗ್ಗುಗಳು  ಉದ್ಭವಿಸಿದ್ದವು. ರೈಲ್ವೆ ಮೇಲುಸೇತುವೆಯಿಂದ ಜಕ್ಕೇರಿ ಹೊಂಡದವರೆಗೆ ವಾಹನ ಸಂಚಾರ ಮಾಡುವುದು ನರಕಯಾತನೆಯಾಗಿತ್ತು. ಇದಕ್ಕೆ ತಾತ್ಕಾಲಿಕ ಪರಿಹಾರವಾದರೂ ಸಿಗಲಿ ಎಂದು ಕರ್ನಾಟಕ ಪ್ರದೇಶ ರಾಜೀವ್ ಗಾಂಧಿ ಬ್ರಿಗೇಡ್‌ನ ಕಾರ್ಯಕರ್ತರು ಶುಕ್ರವಾರ ತಗ್ಗುಗಳಿಗೆ ಡಾಂಬರ್ ಹಾಕಿ ಮುಚ್ಚುವ ಕೆಲಸ ಮಾಡಿದರು.`ಪ್ರಜಾವಾಣಿ' ಪತ್ರಿಕೆಯ ಕಳೆದ ನವೆಂಬರ್ 23 ರಂದು `ಸಂಚಾರಕ್ಕಾಗಿ ಇಲ್ಲಿ ನಿತ್ಯ ಸರ್ಕಸ್..!' ಎಂಬ ಶೀರ್ಷೆಕೆಯಡಿಯಲ್ಲಿ ಈ ರಸ್ತೆ ಕುರಿತು ವರದಿ ಸಹ ಪ್ರಕಟವಾಗಿತ್ತು. ಆದರೆ ಸಂಬಂಧಿಸಿದ ಇಲಾಖೆಗಳು ಮಾತ್ರ ಕಣ್ಣು ಮುಂಚಿಕೊಂಡಿದ್ದು, ತಗ್ಗುಗಳನ್ನು ಮುಚ್ಚುವ ಗೋಜಿಗೆ ಹೋಗಿರಲಿಲ್ಲ.`ಈ ರಸ್ತೆಯು ಧೂಳು ಎಬ್ಬಿಸುವುದರಲ್ಲೇ ಇತ್ತು. ಇಲ್ಲಿ ಆಟೋರಿಕ್ಷಾಗಳಲ್ಲಿ ಪ್ರಯಾಣಿಸುವುದೆಂದರೆ ಉಸಿರು ಬಿಗಿಹಿಡಿದುಕೊಂಡು ಹೋಗುವ ಪರಿಸ್ಥಿತಿ ಇತ್ತು. ಒಂದು ತಗ್ಗು ತಪ್ಪಿಸಲು ಪ್ರಯತ್ನಿಸಿದರೆ, ಮುಂದಿನ ತಗ್ಗಿನಲ್ಲಿ ವಾಹನ ಇಳಿಯುವುದು ಗ್ಯಾರಂಟಿಯಿತ್ತು. ಈ ಭಾಗದ ಜನರು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ನಾವು ತಗ್ಗುಗಳನ್ನು ಮುಚ್ಚುವ ಕೆಲಸ ಕೈಗೊಂಡೆವು' ಎಂದು ಬ್ರಿಗೇಡ್‌ನ ಅಧ್ಯಕ್ಷ ಮಹೇಶ ಕುಗಜಿ ಹೇಳುತ್ತಾರೆ.`ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಅಪಘಾತಗಳು ಈ ರಸ್ತೆಯಲ್ಲಿ ಸಾಮಾನ್ಯವಾಗಿದ್ದವು.  ಬಸವೇಶ್ವರ ವೃತ್ತ, ಗೋವಾ ವೇಸ್‌ದಿಂದ ಗೋಗಟೆ   ವೃತ್ತದ ಕಡೆಗೆ ಸಂಚರಿಸುವವರು ಈ ರಸ್ತೆಯನ್ನೇ ಬಳಸಬೇಕು. ಸೈಕಲ್ ಮೇಲೆ ಶಾಲಾ- ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ನಿತ್ಯ ಒಂದಿಲ್ಲೊಂದು ಅಪಘಾತ ನಡೆಯುತ್ತಲೇ ಇವೆ' ಎನ್ನುತ್ತಾರೆ ಅವರು.“ಈ ರಸ್ತೆಯಲ್ಲಿ ತಗ್ಗುಗಳು `ಸಾವಿನ ಹೊಂಡ'ಗಳಂತೆ ಕಾಣುತ್ತಿದ್ದವು. ನಾವು ಸಹ ಲೋಕೋಪಯೋಗಿ ಇಲಾಖೆ ಹಾಗೂ ಮಾಹನಗರ ಪಾಲಿಕೆಗೆ ಮನವಿ ಮಾಡಿದ್ದೆವು. ಅವರಿಂದ ಯಾವುದೇ ಸ್ಪಂದನೆ ಸಿಗದಿದ್ದರಿಂದ ನಮ್ಮ ಕಾರ್ಯಕರ್ತರೊಂದಿಗೆ ತಗ್ಗುಗಳನ್ನು ಮುಚ್ಚುವ ಕೆಲಸ ಮಾಡಬೇಕಾಯಿತು' ಎಂದು ಮಹೇಶ ಹೇಳುತ್ತಾರೆ.

ಬ್ರಿಗೇಡ್‌ನ ಕಾರ್ಯಕರ್ತರಾದ ಪ್ರಕಾಶ ಬಾಂದಿವಾಡೇಕರ, ಅಹಮ್ಮದ್ ರೇಶ್ಮಿ, ಇಮ್ತಿಯಾಜ್, ಪರಶುರಾಮ ತಂಗಂಕರ್ ಮತ್ತಿತರರು ತಗ್ಗು ಮುಚ್ಚವ ಕೆಲಸದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry