ಅಪಾರ ತಾಳ್ಮೆ ಅಗತ್ಯ

7

ಅಪಾರ ತಾಳ್ಮೆ ಅಗತ್ಯ

Published:
Updated:

ಪರೀಕ್ಷೆಯ ಮತ್ತು ಶಾಲಾ ಶಿಕ್ಷಣದ ಒತ್ತಡಕ್ಕೆ ಮತ್ತಿಬ್ಬರು ಬಾಲೆಯರು ಬಲಿಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಶಾಲೆಯ ಎಸ್ಸೆಸ್ಸೆಲ್ಸಿ ಮತ್ತು ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಸ್ಯಾಂಕಿ ಕೆರೆಗೆ ಹಾರಿ ಆತ್ಮ­ಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ ಹಾಗೂ ಮನಕಲಕುವ ಘಟನೆ. ವಾರವೊಂದರಲ್ಲಿ ಬೆಂಗಳೂರಿನಲ್ಲಿ ಇದು ಇಂತಹ ಮೂರನೇ ಘಟನೆ.  ಕಳೆದ ವಾರ ಪರೀಕ್ಷೆಯ ಒತ್ತಡ ಎದುರಿಸಲಾಗದೆ ಇಬ್ಬರು ಹುಡುಗಿ­ಯರು ಆತ್ಮಹತ್ಯೆ ಮಾಡಿಕೊಂಡಿದ್ದರು.ಹದಿಹರೆಯದ ಹೆಣ್ಣುಮಕ್ಕಳಲ್ಲಿ ಸಹಜವಾಗಿರುವ ಮಾನಸಿಕ ಹಾಗೂ ಶಾರೀರಿಕ ಪರಿವರ್ತನೆಯ ಕಾಲದಲ್ಲಿ  ಮನಸ್ಸುಗಳು ಸೂಕ್ಷ್ಮವಾಗಿ ರುತ್ತವೆ. ಈ ಮನಸ್ಥಿತಿಯನ್ನು ನಿಭಾಯಿಸುವ  ಬದುಕಿನ ಕಲೆಯನ್ನು ನಮ್ಮ ಮಕ್ಕಳಿಗೆ  ಕಲಿಸುವುದು ಅಗತ್ಯ. ಶಾಲೆಯ ಆವ­ರಣ­ದಲ್ಲಿ ಹೋಳಿ ಆಡಿದ್ದಕ್ಕಾಗಿ ಮುಖ್ಯ ಶಿಕ್ಷಕಿಯರು ಬೈದು, ಬುದ್ಧಿ ಹೇಳಿದ­ರೆಂಬ ಕಾರಣಕ್ಕೆ ಈ ಇಬ್ಬರು ಹೆಣ್ಮಕ್ಕಳೂ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಂಡಿರುವುದು ಈ ಅಗತ್ಯವನ್ನು ಮತ್ತೊಮ್ಮೆ ಪ್ರತಿಪಾದಿಸು­ತ್ತದೆ.ಎಸ್ಸೆಸ್ಸೆಲ್ಸಿ ಮತ್ತು ಒಂಬತ್ತನೇ ತರಗತಿಯಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎನ್ನುವುದು ನಿಜ. ಈ ಹಂತದಲ್ಲಿ ಅವರು ಗಳಿಸುವ ಅಧಿಕ ಅಂಕಗಳು ಅವರ  ಭವಿಷ್ಯವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ­ವನ್ನು ವಹಿಸುವುದೂ ಹೌದು. ಮುಖ್ಯ ಶಿಕ್ಷಕಿಯರು ಈ ಮಕ್ಕಳನ್ನು ಬೈದಿ­­ದ್ದಕ್ಕೆ ಅವರ ಮೇಲೆಯೂ ಇರುವ ಅಧಿಕ ಫಲಿತಾಂಶದ ಶೈಕ್ಷಣಿಕ ಒತ್ತಡದ ಕಾರಣವೂ ಇರಬಹುದು. ಏಕೆಂದರೆ  ಶಿಕ್ಷಣದ ವ್ಯಾಪಾರೀಕ­ರಣ­ದಿಂದ ಪೈಪೋಟಿ ಇಂದು ಹೆಚ್ಚಾಗಿದ್ದು ಎಲ್ಲಾ ಮಕ್ಕಳೂ ಹೆಚ್ಚು ಅಂಕ ಗಳಿಸ­ಬೇಕು ಎಂಬಂಥ ಒತ್ತಡ ಇದೆ. ಹೀಗಾಗಿ ಕಡಿಮೆ ಪ್ರತಿಭೆ ಇರುವ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ವ್ಯವಸ್ಥೆ ಈ ಸಮಸ್ಯೆಯ ಮೂಲ. ಹೀಗಾಗಿ ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆ ಸಂವೇದನಾಶೀಲವಾಗಬೇಕಾದ ಅಗತ್ಯವನ್ನು ಈ ಪ್ರಕರಣ ಎತ್ತಿ ತೋರುತ್ತದೆ. 

ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಶಿಕ್ಷಕಿ­ಯರಿಗಿಂತ ಪೋಷಕರ ಪಾತ್ರವೇ ಇದರಲ್ಲಿ ಹೆಚ್ಚು ಮುಖ್ಯ. ತಪ್ಪು ಮಾಡಿದರೆ ಗದರುವಾಗಲೂ ಭಾಷೆಯನ್ನು ಸಂಯಮದಿಂದ ಬಳಸಬೇಕು. ಮಕ್ಕಳ ತಪ್ಪನ್ನು ಅವರಿಗೆ ಎತ್ತಿ ಹೇಳಿ, ತಿದ್ದುವ ಕೆಲಸವನ್ನು ತುಂಬಾ ಜಾಣ್ಮೆಯಿಂದ ನಿಭಾಯಿಸಬೇಕು. ಹದಿಹರೆಯದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುವ ಮಕ್ಕ­ಳನ್ನು ಸಂತೈಸುವ ಸಲುವಾಗಿಯೇ  ಅನೇಕ ಸಮಾಲೋಚನಾ ಕೇಂದ್ರಗಳೂ ಇವೆ. ಶಾಲೆಗಳಲ್ಲಿ ಶಿಕ್ಷಕರೂ ಈ ಮಾಹಿತಿಯನ್ನು ವಿದ್ಯಾರ್ಥಿಗಳ ಜತೆಗೆ ಹಂಚಿ­ಕೊಳ್ಳಬೇಕು.ನಗರ ಪ್ರದೇಶಗಳಲ್ಲಿ ಒತ್ತಡದ ಬದುಕಿನಿಂದಾಗಿ  ಹದಿ­ಹರೆಯದ ಮಕ್ಕಳ ಖಿನ್ನತೆಯ ಪ್ರಕರಣಗಳು ಇತ್ತೀಚೆಗೆ ಏರುತ್ತಲೇ ಇವೆ. ಗಂಡ-ಹೆಂಡತಿ ಇಬ್ಬರೂ ದುಡಿಯವ ಕುಟುಂಬಗಳಲ್ಲಂತೂ ಮಕ್ಕಳ ಸಮಸ್ಯೆ­ಗಳತ್ತ ಹೆಚ್ಚು ಗಮನ ಹರಿಸಲು ಪೋಷಕರಿಗೆ ಸಮಯ ಸಿಗುವುದಿಲ್ಲ. ಪ್ರೌಢಾ­ವಸ್ಥೆಯ ಸಮಸ್ಯೆಗಳ ನಿವಾರಣೆಯಲ್ಲಿ ಶಿಕ್ಷಕರ ಪಾತ್ರವೂ ಮುಖ್ಯವಾದದ್ದು.   ಪಠ್ಯ ವಿಧಾನ ಹಾಗೂ ಪರೀಕ್ಷಾ ವ್ಯವಸ್ಥೆಗಳಲ್ಲಿ ಸುಧಾರಣೆ ಆಗಬೇಕು.  ಅಂಕ ಗಳಿಕೆಗಿಂತ ಸೃಜನಾತ್ಮಕ ಕಲಿಕೆ ಹಾಗೂ ಜೀವನ ಕೌಶಲ ಕಲಿಕೆಗೆ ಪ್ರಾಶಸ್ತ್ಯ ಸಿಗುವುದು ಇಂದಿನ ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry