ಅಪೂರ್ಣ ಕಾಮಗಾರಿ ಉದ್ಘಾಟನೆಗೆ ತರಾತುರಿ

7

ಅಪೂರ್ಣ ಕಾಮಗಾರಿ ಉದ್ಘಾಟನೆಗೆ ತರಾತುರಿ

Published:
Updated:
ಅಪೂರ್ಣ ಕಾಮಗಾರಿ ಉದ್ಘಾಟನೆಗೆ ತರಾತುರಿ

ಹುಬ್ಬಳ್ಳಿ: ಗುತ್ತಿಗೆದಾರರಿಗೆ ಬಿಲ್ ಪಾವತಿಯಲ್ಲಿ ನೈರುತ್ಯ ರೈಲ್ವೆ ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದಾಗಿ ಹುಬ್ಬಳ್ಳಿ ರೈಲು ನಿಲ್ದಾಣದ ಆಧುನೀಕರಣ ಕೆಲಸ ಮಂದಗತಿಯಲ್ಲಿ ಸಾಗಿದೆ. ಕಾಮಗಾರಿ ಪೂರ್ಣವಾಗಿಲ್ಲದಿದ್ದರೂ ತರಾತುರಿಯಲ್ಲಿ ನಿಲ್ದಾಣದ ಉದ್ಘಾಟನೆಗೆ ನೈರುತ್ಯ ರೈಲ್ವೆ ಮುಂದಾಗಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶನಿವಾರ ಈ ರೈಲ್ವೆ ನಿಲ್ದಾಣಉದ್ಘಾಟಿಸಲಿದ್ದಾರೆ.ರೈಲು ನಿಲ್ದಾಣದ ನವೀಕರಣ ಕಾಮಗಾರಿಯನ್ನು ಎ, ಬಿ, ಸಿ ಹಾಗೂ ಡಿ ಬ್ಲಾಕ್‌ಗಳೆಂದು ವಿಂಗಡಿಸಲಾಗಿದೆ. ಅದರಲ್ಲಿ ಈಗಾಗಲೇ ಬಿ, ಸಿ ಮತ್ತು ಡಿ ಬ್ಲಾಕ್ ಕೆಲಸಗಳು ಮುಕ್ತಾಯಗೊಂಡಿವೆ. ಆದರೆ, ಮುಖ್ಯ ಕಾಮಗಾರಿಗಳನ್ನು ಒಳಗೊಂಡಿರುವ `ಎ~ ಬ್ಲಾಕ್‌ನ ಕೆಲಸವೇ ಆಮೆಗತಿಯಲ್ಲಿ ಸಾಗಿದೆ. `ಎ~ ಬ್ಲಾಕ್‌ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ಲಿಫ್ಟ್, ಎಲಿವೇಟರ್, ಪ್ಲಾಟ್‌ಫಾರಂ ಫ್ಲೋರಿಂಗ್, ಮೇಲ್ಛಾವಣಿ ಹಾಗೂ ಬೆಳಕಿಗಾಗಿ ಪಾರದರ್ಶಕ ಗಾಜು ಅಳವಡಿಕೆ ಕಾರ್ಯ ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣ ಮತ್ತು ಗೋಡೆಗಳಿಗೆ ಸಿಮೆಂಟ್ ಪ್ಲಾಸ್ಟರಿಂಗ್ ಕೆಲಸ ಬಾಕಿ ಉಳಿದಿದೆ.ರೈಲು ನಿಲ್ದಾಣದ ನವೀಕರಣ ಕಾಮಗಾರಿಯನ್ನು 2007-08ರಲ್ಲಿ ರೂ 29.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ನೈರುತ್ಯ ರೈಲ್ವೆ, ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿಲ್ ಪಾವತಿ ಮಾಡದ ಕಾರಣ ನವೀಕರಣ ಕಾರ್ಯ ಆರು ವರ್ಷಗಳಷ್ಟು ಸುದೀರ್ಘ ಅವಧಿಯ ನಂತರವೂ ಮುಂದುವರಿದಿದೆ. ಈ ಹಿಂದೆ 2010ರ ಡಿಸೆಂಬರ್‌ನಿಂದ 2011ರ ಏಪ್ರಿಲ್‌ವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು.`ಎ~ ಬ್ಲಾಕ್‌ನಲ್ಲಿ ಗುತ್ತಿಗೆ ಹೊಣೆ ಹೊತ್ತಿರುವ ಜಯಂತ್ ಕನಸ್ಟ್ರಕ್ಷನ್ಸ್, ಮೈಕಾನ್ ಕನ್‌ಸ್ಟ್ರಕ್ಷನ್ಸ್ ಕಂಪೆನಿಗಳಿಗೆ ತಲಾ ಒಂದು ಕೋಟಿ ಹಾಗೂ ಸಿಸ್ಸೇ ಕನ್‌ಸ್ಟ್ರಕ್ಷನ್ಸ್ ಕಂಪೆನಿಗೆ ರೂ 50 ಲಕ್ಷ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಅಳವಡಿಕೆ ಜವಾಬ್ದಾರಿ ಹೊತ್ತಿರುವ ಕಂಪೆನಿಯೊಂದಕ್ಕೆ ಒಂದು ಕೋಟಿ ರೂಪಾಯಿ ಬಾಕಿ ಪಾವತಿಸಬೇಕಿದೆ.`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕನಸ್ಟ್ರಕ್ಷನ್ಸ್ ಕಂಪೆನಿಯೊಂದರ ಅಧಿಕಾರಿಯೊಬ್ಬರು, `ರೈಲ್ವೆಯ ಈ ಧೋರಣೆಯಿಂದ ವಿವಿಧ ನಿರ್ಮಾಣ ಕಂಪೆನಿಗಳು ಸಂಕಷ್ಟಕ್ಕೆ ತುತ್ತಾಗಿವೆ. ಸಂಪನ್ಮೂಲ ಕೊರತೆ ಕಾರಣ ನೀಡಿ ಕಳೆದ ಒಂದೂವರೆ ತಿಂಗಳಿನಿಂದ ನಮಗೆ ಹಣ ಪಾವತಿಸಿಲ್ಲ. ಇದರಿಂದಾಗಿ  ಸಿಬ್ಬಂದಿಗೆ ಸಂಬಳ ಪಾವತಿಸಲೂ ನಾವು ಹೆಣಗಾಡುವಂತಾಗಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ~ ಎಂದು ಬೇಸರ ವ್ಯಕ್ತಪಡಿಸಿದರು.

`ಬಾಕಿ ಇರುವ ಕೆಲಸಗಳನ್ನು ಪೂರೈಸಲು ಇನ್ನೂ ಎಂಟು ಕೋಟಿ ರೂಪಾಯಿ ಬೇಕಿದೆ. ಈಗ ಕೆಲಸ ಮಾಡಿರುವ ಹಣವನ್ನೇ ಬಿಡುಗಡೆ ಮಾಡಿಲ್ಲ.`ಎ~ ಬ್ಲಾಕ್‌ನಲ್ಲಿ ಅರೆ-ಬರೆ ಕೆಲಸದಿಂದಾಗಿ ಮಳೆ ಬಂದರೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ~ ಎಂದು ಹೇಳುತ್ತಾರೆ.ಬಾಕಿ ಪಾವತಿ ಶೀಘ್ರ

`ನಾನು ಹುಬ್ಬಳ್ಳಿಗೆ ವರ್ಗಾವಣೆಯಾಗಿ ಬಂದಾಗ ಬಹುತೇಕ ರೈಲು ನಿಲ್ದಾಣ ಕಾಮಗಾರಿ ಸ್ಥಗಿತಗೊಂಡಿತ್ತು. ಸಂಬಂಧಿಸಿದ ಇಲಾಖೆಯೊಂದಿಗೆ ವ್ಯವಹರಿಸಿ ಕೆಲಸಕ್ಕೆ ಚಾಲನೆ ನೀಡಿದ್ದೇನೆ~ ಎನ್ನುತ್ತಾರೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ. ಮಿತ್ತಲ್.`ಆಡಳಿತಾತ್ಮಕ ಕಾರಣಗಳಿಂದಾಗಿ ಕೆಲವೊಮ್ಮೆ ಹಣ ಪಾವತಿ ವಿಳಂಬವಾಗುತ್ತದೆ. ಯಾವ ಕಾರಣದಿಂದ ಹಣ ಪಾವತಿಸಿಲ್ಲ ಎಂಬುದು ತಿಳಿದಿಲ್ಲ. ಮುಂದಿನ ಆರು ತಿಂಗಳ ಒಳಗಾಗಿ `ಎ~ಬ್ಲಾಕಿನ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಗುತ್ತಿಗೆದಾರರಿಗೂ ಶೀಘ್ರವೇ ಬಾಕಿ ಹಣ ಕೊಡಿಸುತ್ತೇನೆ~ ಎಂದೂ ಅವರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry