ಅಪೌಷ್ಟಿಕತೆಯಿಂದ ಮಕ್ಕಳ ಸಾವು ಪ್ರಕರಣ: 17ರವರೆಗೆ ಕಾಲಾವಕಾಶ

7

ಅಪೌಷ್ಟಿಕತೆಯಿಂದ ಮಕ್ಕಳ ಸಾವು ಪ್ರಕರಣ: 17ರವರೆಗೆ ಕಾಲಾವಕಾಶ

Published:
Updated:

ಬೆಂಗಳೂರು: ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮಾರ್ಗೋಪಾಯ ಹುಡುಕಲು ಸರ್ಕಾರಕ್ಕೆ ಹೈಕೋರ್ಟ್ ಇದೇ 17ರವರೆಗೆ ಕಾಲಾವಕಾಶ ನೀಡಿದೆ.ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದಕ್ಕೆ ಸಂಬಂಧಿಸಿದಂತೆ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸುತ್ತಿದೆ.ಸಮಸ್ಯೆ ಪರಿಹರಿಸಲು ಏನು ಮಾಡಬಹುದು ಎಂಬ ಬಗ್ಗೆ ತಿಳಿಸುವಂತೆ ಕಳೆದ ಬಾರಿ ವಿಚಾರಣೆ ವೇಳೆ ಪೀಠ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಹಾಜರು ಇದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ. ನಟರಾಜ್ ಅವರು, `ಸಮಸ್ಯೆ ಕುರಿತು ಚರ್ಚಿಸಲು ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಸಮಸ್ಯೆ ಪರಿಹಾರಕ್ಕೆ 10 ಇಲಾಖೆಗಳ ಸಹಕಾರ ಕೋರಲಾಗುವುದು.ಇದಕ್ಕಾಗಿ ಸಮಿತಿ ರಚನೆ ಅಗತ್ಯ ಇದೆ. ನಿವೃತ್ತ ನ್ಯಾಯಾಧೀಶರು ಇದರ ಮೇಲ್ವಿಚಾರಣೆ ನಡೆಸಿದರೆ ಉತ್ತಮ~ ಎಂದು ತಿಳಿಸಿದರು.ಅದೇ ರೀತಿ, ಹಾಜರು ಇದ್ದ ಕಾನೂನು ಸೇವಾ ಸಮಿತಿಯ ತಜ್ಞರು ಸೇರಿದಂತೆ ಇತರರು ಕೂಡ ಕೆಲವೊಂದು ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಎಲ್ಲರೂ ಜೊತೆಗೆ ಕುಳಿತು ಅಂತಿಮ ತೀರ್ಮಾನಕ್ಕೆ ಬರುವಂತೆ ಪೀಠ ಆದೇಶಿಸಿದೆ.ಭಾಷಾಂತರ: ಅರ್ಜಿ ವಜಾ: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ವಿವಾದದ ಸುಳಿಯಲ್ಲಿ ಸಿಲುಕಿರುವ ಅವರ ಆಪ್ತೆ ಶಶಿಕಲಾ ವಿರುದ್ಧ ಸಿಬಿಐ ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಇವರು ಎರಡನೇ ಆರೋಪಿ. ಇಂಗ್ಲಿಷ್ ಭಾಷೆಯಲ್ಲಿ ವಿಚಾರಣೆ ನಡೆಯುತ್ತಿದ್ದು, ತಮಗೆ ಭಾಷೆ ಅರ್ಥ ಆಗುವುದಿಲ್ಲ. ಎಲ್ಲ ದಾಖಲೆಗಳನ್ನು ತಮಿಳಿಗೆ ತರ್ಜುಮೆ ಮಾಡಬೇಕು ಎನ್ನುವುದು ಶಶಿಕಲಾ ಅವರ ವಾದವಾಗಿತ್ತು. ಆದರೆ ಈ ವಾದವನ್ನು ನ್ಯಾಯಮೂರ್ತಿ ಎನ್.ಆನಂದ ಮಾನ್ಯ ಮಾಡಲಿಲ್ಲ. ಅವರ ಅರ್ಜಿಯನ್ನು ವಜಾ ಗೊಳಿಸಿದರು. `ಒಂದು ವೇಳೆ ಭಾಷೆ ಅರ್ಥ ಆಗದಿದ್ದರೆ ವಕೀಲರು ಅದಕ್ಕೆ ಸಹಕರಿಸುತ್ತಾರೆ. ಆದರೆ ಅದನ್ನೇ ಮುಖ್ಯವಾಗಿ ಇಟ್ಟುಕೊಂಡು ವಿಚಾರಣೆಯನ್ನು ಸ್ಥಗಿತಗೊಳಿಸುವುದು ಆಗದು~ ಎಂದು ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry