ಅಪೌಷ್ಟಿಕತೆ ಕೂಪದಲ್ಲಿ ಮೈಸೂರು!

7

ಅಪೌಷ್ಟಿಕತೆ ಕೂಪದಲ್ಲಿ ಮೈಸೂರು!

Published:
Updated:

ಮೈಸೂರು: ಆ ಬಾಲಕಿಯ ಹೆಸರು ಚಂದ್ರಿಕಾ. ವಯಸ್ಸು 11. ಆಕೆಯ ತೂಕ 9 ಕೆ.ಜಿ. ಆಕೆಗೆ ಸರಿಯಾಗಿ ಎದ್ದು ನಿಲ್ಲಲೂ ಸಾಧ್ಯವಿಲ್ಲ. ಆಕೆ ವಾಸ ಮಾಡುತ್ತಿರುವ ಕಾಲೊನಿಯ ಒಳಹೊಕ್ಕರೆ ಗಬ್ಬು ನಾತ ಮೂಗಿಗೆ ಬಡಿಯುತ್ತದೆ. ಸ್ವಚ್ಛತೆ ಎನ್ನುವುದು ಅಲ್ಲಿನವರಿಗೆ ಗೊತ್ತೇ ಇಲ್ಲ. ಮನೆಯ ಮುಂದೆ ಕೊಳಚೆ ಹೊಳೆಯಾಗಿ ಹರಿಯುತ್ತದೆ. ಮಕ್ಕಳು ಅದರಲ್ಲಿಯೇ ಆಟವಾಡುತ್ತಾರೆ. ದೊಡ್ಡವರು ಅಲ್ಲಿಯೇ ಊಟ, ತಿಂಡಿ ಮಾಡುತ್ತಾರೆ.ಇದು ನಗರದ ದೇವರಾಜ ಅರಸು ಕಾಲೊನಿ ಪರಿಸ್ಥಿತಿ. ಹಗಲು ಹೊತ್ತಿನಲ್ಲಿ ಕೊಂಚವಾದರೂ ಸಹಿಸಿಕೊಳ್ಳಬಹುದು. ಆದರೆ ರಾತ್ರಿಯ ವೇಳೆ ಈ ಕಾಲೊನಿ ಪಕ್ಕದಲ್ಲಿಯೇ ಇರುವ ಸೂಯೇಜ್ (ತ್ಯಾಜ್ಯ ಶುದ್ಧೀಕರಣಘಟಕ) ಫಾರಂನಿಂದ ಬರುವ ಕೆಟ್ಟ ವಾಸನೆ ತಡೆದುಕೊಳ್ಳುವುದು ಅಸಾಧ್ಯ. ನಗರದ ಎಲ್ಲ ತ್ಯಾಜ್ಯಗಳೂ ಈ ಸೂಯೇಜ್ ಫಾರಂನಲ್ಲಿಯೇ ಶೇಖರಣೆಯಾಗುವುದರಿಂದ ಸುತ್ತಮುತ್ತಲಿನ ಪ್ರದೇಶ ಅಪ್ಪಟ ನರಕ.ಚಂದ್ರಿಕಾಳ ತಂದೆ, ತಾಯಿ ಇಬ್ಬರೂ ಗುತ್ತಿಗೆ ಪೌರ ಕಾರ್ಮಿಕರು. ಬೆಳಗಿನ ಜಾವವೇ ಕೆಲಸಕ್ಕೆ ಹೋಗುತ್ತಾರೆ. ಇವರ ಬಳಿ ಬಿಪಿಎಲ್ ಕಾರ್ಡ್ ಇದೆ. ಆದರೂ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಗುತ್ತಿಗೆದಾರ ನಿಗದಿತ ವೇಳೆಯಲ್ಲಿ ವೇತನ ನೀಡದೆ ಇರುವುದರಿಂದ ನ್ಯಾಯಬೆಲೆ ಅಂಗಡಿಯ  ಆಹಾರ ಧಾನ್ಯಗಳು ಇವರ ಪಾಲಿಗೆ ಗಗನ ಕುಸುಮ.ಇದೇ ಕಾಲೊನಿಯ ಲೋಕನಾಥನಿಗೆ 9 ವರ್ಷ. ಈತ 7 ಕೆ.ಜಿ. ತೂಗುತ್ತಾನೆ. ಈತನ ತಂದೆ ತಾಯಿ ಕೂಡ ಗುತ್ತಿಗೆ ಪೌರಕಾರ್ಮಿಕರು. ಇವರಿಗೆ ಇನ್ನೂ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ. `ನ್ಯಾಯ~ ಬೆಲೆಗೆ ಆಹಾರ ಧಾನ್ಯ ಕೊಳ್ಳುವುದು ಇವರಿಗೆ ಸಾಧ್ಯವೇ ಇಲ್ಲ.ಇದು ಕೇವಲ ದೇವರಾಜ ಅರಸು ಕಾಲೊನಿಯ ಕತೆಯಲ್ಲ. ಮೈಸೂರು ನಗರದ ಅಶೋಕಪುರಂ ನೆಲ್ಲೂರು ಶೆಡ್, ಗಾಂಧಿನಗರ, ಕ್ಯಾತಮಾರನಹಳ್ಳಿ, ಕೆಸರೆ, ಬಿ.ಬಿ.ಕೆರೆ, ಉಸ್ಮಾನಿಯಾ ಬ್ಲಾಕ್, ಧರ್ಮಸಿಂಗ್ ಕಾಲೊನಿ ಮುಂತಾದ ಕಡೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ ಎಂದು ಅಂಗನವಾಡಿ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ.ಸರ್ಕಾರಿ ದಾಖಲೆಗಳ ಪ್ರಕಾರವೇ ಜಿಲ್ಲೆಯಲ್ಲಿ ಸುಮಾರು 1,032 ಮಕ್ಕಳು ಅತ್ಯಂತ ಕಡಿಮೆ ತೂಕವನ್ನು ಹೊಂದಿವೆ. ತೀರಾ ಅಪೌಷ್ಟಿಕತೆಯಿಂದ ನರಳುತ್ತಿವೆ. ಇದರಲ್ಲಿ 150ಕ್ಕೂ ಹೆಚ್ಚು ಮಕ್ಕಳು ಮೈಸೂರು ನಗರದಲ್ಲಿಯೇ ಇವೆ. ರಾಜಧಾನಿ ಬೆಂಗಳೂರಿನ ನಂತರ ಅಭಿವೃದ್ಧಿಯಲ್ಲಿ ಮುಂದೆ ಇದೆ ಎಂಬ ಖ್ಯಾತಿಗೆ ಒಳಗಾಗಿರುವ ಮೈಸೂರು ಜಿಲ್ಲೆಯ ಮಕ್ಕಳ ಕತೆ ಇದು.

ಇದಲ್ಲದೆ ಮೈಸೂರು ತಾಲ್ಲೂಕಿನ ಉದ್ಬೂರು, ರಮ್ಮನಹಳ್ಳಿ, ಮೆಲ್ಲಹಳ್ಳಿ, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿಯೂ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಇದೆ ಎಂಬ ವರದಿಯನ್ನೂ ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಇದು ಸರ್ಕಾರಿ ವರದಿ. ವಾಸ್ತವವಾಗಿ ಗ್ರಾಮಾಂತರ ಪ್ರದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರವವರ ಸಂಖ್ಯೆ ಇನ್ನೂ ಹೆಚ್ಚು ಇದೆ ಎಂದು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹೇಳುತ್ತಾರೆ.ಮೈಸೂರು ನಗರದಲ್ಲಿ 212 ಅಂಗನವಾಡಿ ಕೇಂದ್ರಗಳಿದ್ದು ಅಲ್ಲಿ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ನೀಡಲಾಗುತ್ತದೆ. ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಆಯಾ ಪ್ರದೇಶದಲ್ಲಿ ಇರುವ ಮಹಿಳೆಯರಲ್ಲಿ ಅರಿವನ್ನು ಮೂಡಿಸವ ಕೆಲಸ ಮಾಡುತ್ತಿದ್ದಾರೆ. ಆದರೂ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಇದೆ. ಬಿಸಿಯೂಟ, ಅಂತ್ಯೋದಯ, ರೂ. 3 ಗೆ ಕೆ.ಜಿ ಅಕ್ಕಿ, ಅಂಗನವಾಡಿಯಲ್ಲಿ ಔಷಧಿ ವಿತರಣೆ ಮುಂತಾದ ಯೋಜನೆಗಳು ಚಾಲ್ತಿಯಲ್ಲಿದ್ದರೂ ಮೈಸೂರಿನಂತಹ ಜಿಲ್ಲೆಯಲ್ಲಿಯೇ ಮಕ್ಕಳು ಅಪೌಷ್ಟಿಕಾಂಶದಿಂದ ನರಳುತ್ತಿವೆ.ಅಧಿಕಾರಿಗಳ ವಿವರಣೆ: ಜಿಲ್ಲೆಯಲ್ಲಿ 1032 ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರವುದನ್ನು ದೃಢಪಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕಡಿಮೆ ತೂಕ ಇರುವ ಮಕ್ಕಳಿಗೆ ಔಷಧೋಪಚಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಕಡಿಮೆ ತೂಕ ಇರುವ ಮಕ್ಕಳಿಗೆ 750 ರೂಪಾಯಿ ಮೌಲ್ಯದ ಔಷಧ ನೀಡಲಾಗುತ್ತಿದ್ದು ಪಾಲಕರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಅಲ್ಲದೆ ಇಂತಹ ಮಕ್ಕಳಿಗೆ ಚಿಕಿತ್ಸೆ ನೀಡಲು ಚೆಲುವಾಂಬ ಆಸ್ಪತ್ರೆಯನ್ನು ಗುರುತಿಸಲಾಗಿದ್ದು ಈ ಬಗ್ಗೆ ವಿಶೇಷ ಪ್ರಸ್ತಾವನೆಯೊಂದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.ಕೆಳವರ್ಗದವರ ಮಕ್ಕಳೇ ಹೆಚ್ಚಾಗಿ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿವೆ. ಪಡಿತರ ಚೀಟಿ ಸರಿಯಾಗಿ ವಿತರಣೆಯಾಗದೇ ಇರುವುದು, ಪಡಿತರ ಚೀಟಿಯನ್ನು ಕುಟುಂಬದ ಆರ್ಥಿಕ ತೊಂದರೆಗಾಗಿ ಅಡವು ಇಟ್ಟಿರುವುದು, ಪ್ರತಿ ದಿನ ಕೂಲಿ ಹಣವನ್ನೇ ನಂಬಿಕೊಂಡು ಬದುಕುವುದು, ತಂದೆ ತಾಯಿ ಇಬ್ಬರೂ ಕೂಲಿ ಕೆಲಸಕ್ಕೆ ಹೋಗುವುದರಿಂದ ಮಕ್ಕಳ ಕಡೆಗೆ ಗಮನವನ್ನೇ ನೀಡದಿರುವುದು, ಪಾಲಕರು ಮದ್ಯಪಾನದ ಚಟಕ್ಕೆ ಬಲಿಯಾಗಿರುವುದು ಅಪೌಷ್ಟಿಕತೆಗೆ ಪ್ರಮುಖ ಕಾರಣ ಎನ್ನಲಾಗಿದೆ.ಕೊಳೆಗೇರಿಯಲ್ಲಿರುವ ಕೆಲವು ಅಂಗನವಾಡಿಗಳಲ್ಲಿ ಆಯಾಗಳು ಮಕ್ಕಳನ್ನು ಮುಟ್ಟುವುದಿಲ್ಲ ಎಂಬ ದೂರುಗಳಿವೆ. ಅಂಗನವಾಡಿಯಲ್ಲಿ ಕೊಡುವ ಔಷಧಿ, ಆಹಾರವನ್ನೂ ಮಕ್ಕಳು ಸರಿಯಾಗಿ ತೆಗೆದುಕೊಳ್ಳುವುದಿಲ್ಲ. ಅಲ್ಲದೆ ಬಹಳಷ್ಟು ಮಹಿಳೆಯರಲ್ಲಿಯೂ ಪೌಷ್ಟಿಕಾಂಶದ ಕೊರತೆ ಇದೆ ಎಂದು ಅಂಗನವಾಡಿ ಕಾರ್ಯಕರ್ತರು ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry