ಶುಕ್ರವಾರ, ಜೂನ್ 25, 2021
22 °C

ಅಪೌಷ್ಟಿಕತೆ ತೊಲಗಿಸಲು ಸಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೇಶವನ್ನು ಕಾಡುತ್ತಿರುವ ಅಪೌಷ್ಟಿಕ ಸಮಸ್ಯೆಯನ್ನು ನಿವಾರಿಸುವುದರತ್ತ ಸರ್ಕಾರ ಗಮನಹರಿಸಲು ಇದು ಸಕಾಲ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಗುರುವಾರ ಇಲ್ಲಿ ಅಭಿಪ್ರಾಯಪಟ್ಟರು.ನಗರದ ಲಲಿತ್ ಅಶೋಕ ಹೋಟೆಲ್‌ನಲ್ಲಿ ಆರಂಭವಾದ ಮೂರು ದಿನಗಳ ಏಳನೇ `ನ್ಯೂಟ್ರಾ ಇಂಡಿಯಾ~ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಇಡೀ ವಿಶ್ವವೇ ಇಂದು ಅಪೌಷ್ಟಿಕತೆಯಿಂದ ನರಳುತ್ತಿದೆ. ಅದರಲ್ಲೂ ಆಫ್ರಿಕಾದಂತಹ ರಾಷ್ಟ್ರಗಳಲ್ಲಿ ಈ ಸಮಸ್ಯೆ ಗಂಭೀರವಾಗಿದೆ. ಭಾರತದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಹಾಗೂ ಮಕ್ಕಳನ್ನು ಈ ಸಮಸ್ಯೆಯಿಂದ ಪಾರು ಮಾಡಬೇಕಾಗಿದೆ~ ಎಂದರು.`ಭಾರತದಲ್ಲಿ ಸಂಪನ್ಮೂಲಗಳಿಗೆ ಯಾವುದೇ ರೀತಿಯಲ್ಲಿ ಕೊರತೆಯಿಲ್ಲ. ದೇಶವು ಎದುರಿಸುತ್ತಿರುವ ಸಮಸ್ಯೆಗಳಿಗೆ ಆಂತರಿಕವಾಗಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಬೇಕಾಗಿದೆ. ಇದರಲ್ಲಿ ಸರ್ಕಾರಕ್ಕಿಂತ ಖಾಸಗಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಿಕ್ಷಣ ಹಾಗೂ ಆರೋಗ್ಯಕ್ಕೆ ಒತ್ತು ನೀಡಬೇಕು: `ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನಾವು ಪ್ರಸ್ತುತ ಹೆಚ್ಚಿನ ಒತ್ತು ನೀಡುವ ಅನಿವಾರ್ಯತೆಯಿದೆ. ಗ್ರಾಮೀಣ ಪ್ರದೇಶಗಳ ಬಡ ಜನರು ಇಂದಿಗೂ ಟೂತ್ ಪೇಸ್ಟ್ ಬಳಸಲು ಸಾಧ್ಯವಾಗುತ್ತಿಲ್ಲದಿರುವ ಬಗ್ಗೆ ಸರ್ಕಾರಗಳು ಗಮನಹರಿಸಬೇಕಾಗಿದೆ~ ಎಂದರು.`ಬಡ ಜನರಿಗೆ ಕಳಪೆ ಗುಣಮಟ್ಟದ ಔಷಧಿಗಳನ್ನು ಪೂರೈಸುವುದನ್ನು ನಿಲ್ಲಿಸುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಆದ್ಯ ಕರ್ತವ್ಯ. ಇದರ ಜತೆಗೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಬಡವರಿಗೆ ಕೆಲ ಗಂಟೆಗಳ ಕಾಲ ಉಚಿತ ಚಿಕಿತ್ಸೆ ನೀಡಲು ಮುಂದಾಗಬೇಕು. ಬಹುರಾಷ್ಟ್ರೀಯ ಔಷಧೀಯ ಕಂಪೆನಿಗಳು ಕೂಡ ರಿಯಾಯಿತಿ ದರದಲ್ಲಿ ಬಡ ಜನರಿಗೆ ಔಷಧಿ ಪೂರೈಸಲು ಮುಂದಾಗಬೇಕು~ ಎಂದು ರಾಜ್ಯಪಾಲರು ಮನವಿ ಮಾಡಿದರು.ದೇಶೀಯ ಔಷಧಿ ಕಂಪೆನಿಗಳ ಬಗ್ಗೆ ಮೆಚ್ಚುಗೆ: ದೇಶೀಯ ಔಷಧಿ ಕಂಪೆನಿಗಳು ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಿಗಳನ್ನು ತಯಾರಿಸುತ್ತಿವೆ. ಪರಿಣಾಮ, ಆಫ್ರಿಕಾದಂತಹ ರಾಷ್ಟ್ರಗಳಿಗೆ ಭಾರತದಿಂದ 10 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಔಷಧಿಗಳನ್ನು ರಫ್ತು ಮಾಡಲಾಗುತ್ತಿದೆ.ಔಷಧೀಯ ಕಂಪೆನಿಗಳು ಆದಾಯದಲ್ಲಿ ಶೇ 30ರಿಂದ 40ರಷ್ಟು ಮೊತ್ತವನ್ನು ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶಕ್ಕೆ ಬಳಸಿದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಸ್ಪರ್ಧೆ ಎದುರಿಸಲು ಸಹಕಾರಿಯಾಗಲಿದೆ ಎಂದು ಸಲಹೆ ಮಾಡಿದರು.ಚೀನಾದ ಫುಜೌ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಪಿಂಗ್‌ಫಾನ್ ರಾವ್ ಮಾತನಾಡಿದರು. ಕೇಂದ್ರದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಪ್ರೊ. ಸಮೀರ್ ಕೆ. ಬ್ರಹ್ಮಚಾರಿ, ರಾಜ್ಯ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್, ಫಾರ್ಮೆಕ್ಸಿಲ್‌ನ ಹೆಚ್ಚುವರಿ ಕಾರ್ಯನಿರ್ವಾಹಕ ನಿರ್ದೇಶಕ ರಘುವೀರ್ ಕಿಣಿ ಮತ್ತಿತರರು ಮಾತನಾಡಿದರು.

8 ಕಡೆ ಡೋಪ್ಲರ್ ರೇಡಾರ್ ಸ್ಥಾಪನೆ


ಹವಾಮಾನ ಮುನ್ಸೂಚನೆ ಬಗ್ಗೆ ನಿಖರ ಮಾಹಿತಿ ಪಡೆಯುವ ಉದ್ದೇಶದಿಂದ `ಇಸ್ರೋ~ ಸಹಕಾರದಿಂದ ರಾಜ್ಯದ ಎಂಟು ಕಡೆಗಳಲ್ಲಿ ಡೋಪ್ಲರ್ ರೇಡಾರ್‌ಗಳನ್ನು ಸ್ಥಾಪಿಸಲಾಗುತ್ತದೆ ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.    ಎನ್. ವಿದ್ಯಾಶಂಕರ್ ತಿಳಿಸಿದರು.ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಇದಕ್ಕಾಗಿ ಸುಮಾರು 128 ಕೋಟಿ ರೂಪಾಯಿ ಖರ್ಚಾಗಲಿದೆ. ಎಲ್ಲೆಲ್ಲಿ ಈ ಡೋಪ್ಲರ್ ರೇಡಾರ್‌ಗಳನ್ನು ಸ್ಥಾಪಿಸಬೇಕು ಎಂಬುದರ ಬಗ್ಗೆ ಇಸ್ರೋ ನಿರ್ಧರಿಸಲಿದೆ~ ಎಂದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಲಾ ಶೇ 50ರಷ್ಟು ಅನುದಾನದಲ್ಲಿ ಈ ಡೋಪ್ಲರ್ ರೇಡಾರ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ತಿಂಗಳ 21ರಂದು ಮಂಡಿಸಲಿರುವ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಇದರ ಸಂಪೂರ್ಣ ವಿವರ ಪ್ರಕಟಿಸಲಿದ್ದಾರೆ~ ಎಂದರು.`ಒಂದು ವೇಳೆ ಕೇಂದ್ರ ಸರ್ಕಾರ ನೆರವು ನೀಡದಿದ್ದಲ್ಲಿ ರಾಜ್ಯ ಸರ್ಕಾರವೇ ಹಂತ-ಹಂತವಾಗಿ ನಾಲ್ಕು ವರ್ಷಗಳಲ್ಲಿ ಈ ಡೋಪ್ಲರ್ ರೇಡಾರ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಿದೆ~ ಎಂದರು.`ಕಳೆದ ವರ್ಷದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ವಿಜ್ಞಾನ ಕ್ಷೇತ್ರಕ್ಕೆ 36 ಕೋಟಿ ರೂಪಾಯಿ ಅನುದಾನ ಒದಗಿಸಿತ್ತು. ಈ ವರ್ಷ 100 ಕೋಟಿ ರೂಪಾಯಿ ನೆರವು ಕೋರಲಾಗಿದೆ~ ಎಂದು ವಿದ್ಯಾಶಂಕರ್ ತಿಳಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.