ಶನಿವಾರ, ಮೇ 15, 2021
25 °C

ಅಪೌಷ್ಟಿಕತೆ ತೊಲಗಿಸುವ `ಅಮೃತ' ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಶಾಲಾ ಮಕ್ಕಳು ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಿದ್ದರು. ಹೆಚ್ಚಿನವರು ಹಸು-ಕರುವನ್ನು ಹತ್ತಿರದಿಂದ ನೋಡುತ್ತಿದ್ದುದು ಇದೇ ಪ್ರಥಮ ಎಂಬುದು ಗೊತ್ತಾಗುತ್ತಿತ್ತು. ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಅಮ್ಮನ ಕೆಚ್ಚಲಿಗೆ ಬಾಯಿ ಹಾಕಿದ ಕರುವನ್ನು ಕಂಡಾಗ ಅಲ್ಲಿ ಅಕ್ಕರೆಯೇ ಮೈವೆತ್ತಿ ನಿಂತಿತ್ತು. ಕರುವನ್ನು ಎಳೆದು ಕಟ್ಟಿ ಹಾಲು ಕರೆಯತೊಡಗಿದಾಗ ಮಕ್ಕಳ ಅಚ್ಚರಿ ಮೇರೆ ಮೀರಿತ್ತು. ನೋಡ ನೋಡುತ್ತಿದ್ದಂತೆಯೇ ಹಾಲಿನ ಪಾತ್ರೆ ನೊರೆ ಹಾಲಿನೊಂದಿಗೆ ತುಂಬಿಬಿಟ್ಟಿತ್ತು...!ಇದೆಲ್ಲ ನಡೆದುದು ಮಂಗಳವಾರ ಇಲ್ಲಿನ ಕುಲಶೇಖರದಲ್ಲಿರುವ ನಂದಿನಿ ಹಾಲಿನ ಡೇರಿಯಲ್ಲಿ. 13ನೇ ವಿಶ್ವ ಹಾಲು ದಿನಾಚರಣೆ ಪ್ರಯುಕ್ತ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹೈನುಗಾರಿಕೆ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಹಾಲು ಕರೆಯುವ, ದನಗಳ ಪೋಷಣೆಯ ಹತ್ತಿರದ ದರ್ಶನ ಮಾಡಿಸಿಬಿಟ್ಟರೆ, ಅತ್ಯುತ್ತಮ ರೀತಿಯಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಿದ ಡೀಲರ್‌ಗಳನ್ನು, ಮಾರಾಟಗಾರರನ್ನು ಗುರುತಿಸಿ ಸನ್ಮಾನಿಸಲಾಯಿತು. ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಇದೊಂದು ಹಬ್ಬದ ದಿನದಂತೆ ಕಂಡುಬಂತು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಒ.ಆರ್.ಶ್ರೀರಂಗಪ್ಪ, ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಪಾಲಿಕೆ ಸದಸ್ಯ ಕೆ.ಭಾಸ್ಕರ ಮೊಯಿಲಿ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ್, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಸತ್ಯನಾರಾಯಣ ಸಹಿತ ಇತರ ನಿರ್ದೇಶಕರ ಸಮ್ಮುಖದಲ್ಲಿ ಗೋವುಗಳಿಗೆ ಪೂಜೆ ಮಾಡುವ ಮೂಲಕ ಇಡೀ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಮೇವು ಕತ್ತರಿಸುವ ಯಂತ್ರ ಗರಗರನೆ ತಿರುಗುತ್ತ ಹುಲ್ಲು ಕತ್ತರಿಸಿ ಹಾಕುತ್ತಿದ್ದರೆ, ಅಮ್ಮನ ಮೊಲೆಹಾಲು ಕುಡಿಯಲು ಪುಟ್ಟ ಕರುಗಳು ಕಾತರದಿಂದ ಕಾಯುತ್ತಿದ್ದ ದೃಶ್ಯ ವಿಶಿಷ್ಟ ವಾತಾವರಣ ನಿರ್ಮಿಸಿತು. ಹೈನುಗಾರಿಕೆ ಎಂದರೆ ಏನು? ಹಾಲು ಉತ್ಪಾದಿಸುವುದು ಎಷ್ಟು ಕಷ್ಟವೋ, ಅಷ್ಟೇ ಆಪ್ಯಾಯಮಾನ ಎಂಬ ಸೂಚ್ಯ ಸಂದೇಶ ಅಲ್ಲಿ ಅಡಗಿತ್ತು.ಹಾಲು ಅಮೃತ: ಅಪೌಷ್ಟಿಕತೆ ನಿವಾರಣೆಯಲ್ಲಿ ಹಾಲಿನ ಪಾತ್ರ ಬಹಳ ದೊಡ್ಡದು. ನಿಸರ್ಗದ ಪ್ರೊಟೀನ್, ಕ್ಯಾಲ್ಸಿಯಂ ಕಣಜ ಎಂದೇ ಗುರುತಿಸಲಾದ ಹಾಲನ್ನು ಮಕ್ಕಳಿಗೆ ಮಾತ್ರವಲ್ಲ ವಯಸ್ಕರು ಸಹ ನಿರಂತರ ಕುಡಿಯುತ್ತಿದ್ದರೆ ಆರೋಗ್ಯ ವೃದ್ಧಿ ನಿಶ್ಚಿತ. ಹಾಲು ಉತ್ಪಾದನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಇಲ್ಲವಾದರೆ ಸಾಕು ಜಾನುವಾರುಗಳಿಂದ ಕಾಯಿಲೆ ಬರುವ ಅಪಾಯವೂ ಇರುತ್ತದೆ ಎಂದು ಡಿಎಚ್‌ಒ ಡಾ.ಶ್ರೀರಂಗಪ್ಪ ಹೇಳಿದರು.ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ, ಜಿಲ್ಲೆಯಲ್ಲಿ ಇಂದು ಜನರು ಸರಾಸರಿ 180 ಮಿ.ಲೀ.ನಷ್ಟು ಹಾಲು ಸೇವಿಸುತ್ತಿದ್ದು, ಇದನ್ನು ಕನಿಷ್ಠ 250 ಮಿ.ಲೀಗೆ ಹೆಚ್ಚಿಸಬೇಕಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ 3.31ಲಕ್ಷ ಲೀಟರ್ ಹಾಲಿಗೆ ಬೇಡಿಕೆ ಇದ್ದು, ಇಲ್ಲಿನ ಸರಾಸರಿ ದಿನದ ಹಾಲಿನ ಸಂಗ್ರಹ 2.46 ಲಕ್ಷ ಲೀಟರ್‌ನಷ್ಟಿದೆ. ಔಷಧ ಅಂಗಡಿಗಳಲ್ಲಿ ಹಾಲಿನ ಪುಡಿ ಮಾರಾಟ ಕಡಿಮೆಯಾಗಿರುವುದು ಜಿಲ್ಲೆಯಲ್ಲಿ ಶುದ್ಧ ಹಾಲಿನ ಲಭ್ಯತೆ ಸಮರ್ಪಕವಾಗಿ ಇರುವುದನ್ನು ತೋರಿಸುತ್ತದೆ ಎಂದರು.ಪಾಲಿಕೆ ಸದಸ್ಯ ಕೆ.ಭಾಸ್ಕರ ಮೊಯಿಲಿ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ಎಂ.ಆರ್.ವಾಸುದೇವ್ ಇತರರು ಮಾತನಾಡಿದರು.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಸತ್ಯನಾರಾಯಣ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಹಲಗಪ್ಪ, ಒಕ್ಕೂಟದ ನಿರ್ದೇಶಕರಾದ ಸವಣೂರು ಸೀತಾರಾಮ ರೈ, ಕೆ.ದಿವಾಕರ ಶೆಟ್ಟಿ, ಸುಚರಿತ ಶೆಟ್ಟಿ, ಜಯರಾಂ ರೈ, ಕೃಷ್ಣ ಭಟ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.