ಅಪೌಷ್ಟಿಕ ಮಕ್ಕಳಿಗೆ ಬಿಪಿಎಲ್ ಕಾರ್ಡ್

7

ಅಪೌಷ್ಟಿಕ ಮಕ್ಕಳಿಗೆ ಬಿಪಿಎಲ್ ಕಾರ್ಡ್

Published:
Updated:

ಕೋಲಾರ:  ಜಿಲ್ಲೆಯಲ್ಲಿ ಒಟ್ಟು 824 ಅಪೌಷ್ಟಿಕ ಮಕ್ಕಳನ್ನು ಗುರುತಿಸಿದ್ದು, ಅವರಲ್ಲಿ 701 ಮಕ್ಕಳಿಗೆ ಈಗಾಗಲೇ ಬಿಪಿಎಲ್ ಪಡಿತರ ಚೀಟಿ ನೀಡಲಾಗಿದೆ. ಇನ್ನುಳಿದ 123 ಮಕ್ಕಳಿಗೆ ಬಿಪಿಎಲ್ ಪಡಿತರ ಚೀಟಿಯನ್ನು ಈ ತಿಂಗಳ ಕೊನೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್.ವಿಶ್ವನಾಥ್ ಸೂಚಿಸಿದರು.ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಹೈಕೋರ್ಟ್ ಕೋರ್ ಕಮಿಟಿ ನೀಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವ ಸಂಬಂಧ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಶಿಶು ಅಭಿವೃದ್ಧಿ ಯೋಜನೆ ಅನುಷ್ಠಾನ ಮೇಲ್ವಿಚಾರಣಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ಪ್ರತಿ ಮೂರು ತಿಂಗಳಿಗೆ ಯೋಜನೆ ಅನುಷ್ಠಾನದಿಂದಾದ ಬದಲಾವಣೆ ವರದಿಯನ್ನು ನ್ಯಾಯಾಲಯಕ್ಕೆ ನೀಡುತ್ತಿದ್ದು, ಐಸಿಡಿಎಸ್ ವ್ಯಾಪ್ತಿಯ ಹೊರಗಿನ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ವಿವಿಧ ರೀತಿಯಲ್ಲಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.ಜಿಲ್ಲೆಯಲ್ಲಿ 6-14ವರ್ಷ ವಯೋಮಾನದ 716 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಅವರಲ್ಲಿ ಬಹುತೇಕರು ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳು.  ಶೀಘ್ರವೇ ಅಲ್ಲಿ ಟೆಂಟ್ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ ಬಾಲ ಸಂಜೀವಿನಿ ಕಾರ್ಯಕ್ರಮದ ಕುರಿತು ಜನರಿಗೆ ಮಾಹಿತಿ ಇಲ್ಲ, ಮಕ್ಕಳು ಅನಾರೋಗ್ಯವಾಗಿದ್ದರೆ, ಬಾಲಸಂಜೀವಿನಿ ಯೋಜನೆಯಲ್ಲಿ ರೂ.35 ಸಾವಿರದವರೆಗೆ ಉಚಿತ ಚಿಕಿತ್ಸೆ ನೀಡಲಾಗುವುದು, ಕೋಲಾರದಲ್ಲಿ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿಯೂ ಯೋಜನೆಯ ಫಲವನ್ನು ಪಡೆಯಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 2031 ಅಂಗನವಾಡಿಗಳಲ್ಲಿ 91005 ಮಕ್ಕಳು ದಾಖಲಾಗಿದ್ದಾರೆ.

 

ಆದರೆ, ಶೇ.50ರಷ್ಟು ಮಕ್ಕಳಿಗೆ ಮಾತ್ರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ತಿಳಿದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, 3-6 ವರ್ಷದ ಮಕ್ಕಳ ತೂಕ ತಪಾಸಣೆ ಮಾಡಲು ಸ್ಕೇಲ್ ಇದೆ, ಆದರೆ 0-3ವರ್ಷದ ಮಕ್ಕಳನ್ನು ತೂಕ ಮಾಡಲು  ಶಿಶು ಅಳತೆಗೋಲು ಇಲ್ಲ. ಹಾಗಾಗಿ ತಪಾಸಣೆ ಅಥವಾ ಅಪೌಷ್ಟಿಕತೆ ಕುರಿತು ಸ್ಪಷ್ಟವಾಗಿ ಸಂಖ್ಯೆ ನೀಡಲಾಗುತ್ತಿಲ್ಲ ಎಂದು ವಿವರಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝುಲ್ಫಿಕರ್ ಉಲ್ಲಾ, ಉಪ ಕಾರ್ಯದರ್ಶಿ ಬದನೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವಿಜಯಲಕ್ಷ್ಮಿ , ಯೋಜನಾಧಿಕಾರಿ ನಾಗೇಶ್‌ಬಿಲ್ವಾ ಹಾಜರಿದ್ದರು.ಕೇಂದ್ರ ಸ್ಥಾನ ಬಿಡದಿರಿ: ಎಚ್ಚರಿಕೆ

ಸಭೆಯಲ್ಲಿ ಕೆಲವು ಅಧಿಕಾರಿಗಳು ಹಾಜರಾಗದೇ ತಮ್ಮ ಪರವಾಗಿ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ, ಅನುಮತಿಯಿಲ್ಲದೆ ಯಾವುದೇ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಮಾಹಿತಿ ಇಲ್ಲದೆ ಹಾಜರಾಗಿದ್ದ ಅಧಿಕಾರಿಗಳನ್ನು ಕುರಿತು ಮಾತನಾಡಿದ ಅವರು, ನಿಮ್ಮಲ್ಲಿ ನಿಜವಾಗಲೂ ಸರಿಯಾದ ಮಾಹಿತಿ ಇದ್ದರೆ ಮಾತ್ರ ಮಾಹಿತಿ ನೀಡಿ. ಸುಳ್ಳು ಹೇಳಬೇಡಿ, ಜಿಲ್ಲೆಯಲ್ಲಿ  ಸಾವಿರಾರು ಸಂಖ್ಯೆಯಲ್ಲಿ ಅಪೌಷ್ಟಿಕತೆಯಿಂದ ಕಿಶೋರಿಯರು ನರಳುತ್ತಿದ್ದಾರೆ. ಅವರಲ್ಲಿ ಶೇ.01ರಷ್ಟಾದರೂ ಆರೋಗ್ಯ ತಪಾಸಣೆ ಮಾಡಿಸಲು ಆಗಲಿಲ್ಲವೆ? ಎಂದು ತರಾಟೆಗೆ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry