ಅಪೌಷ್ಟಿಕ ಮಕ್ಕಳ ಪತ್ತೆಯಲ್ಲಿ ವಂಚನೆ?

7

ಅಪೌಷ್ಟಿಕ ಮಕ್ಕಳ ಪತ್ತೆಯಲ್ಲಿ ವಂಚನೆ?

Published:
Updated:

ಶಹಾಪುರ: ರಾಜ್ಯದ ಗಮನ ಸೆಳೆದ ಅಪೌಷ್ಟಿಕಾಂಶ ಕೊರತೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾದ ಕುರಿತು ಸರ್ಕಾರ ಇನ್ನಿಲ್ಲದ ಕಾಳಜಿ ವ್ಯಕ್ತಪಡಿಸಿ ಮೊಸಳೆ ಕಣ್ಣೀರು ಹಾಕಿತು. ತ್ವರಿತ ಕ್ರಮಗಳ ಬಗ್ಗೆ ಕೇವಲ ದಾಖಲೆಯಲ್ಲಿ ಮಾತ್ರ ಉಳಿದುಕೊಂಡ ಅಂಶ ಬೆಳಕಿಗೆ ಬಂದಿದೆ.ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎನ್.ಕೆ.ಪಾಟೀಲ್ ನೇತೃತ್ವದ ಸಮಿತಿ ರಚಿಸಿ ವರದಿಗೆ ಶಿಫಾರಸು ಮಾಡಿಲಾಗಿತ್ತು.ಅದರಂತೆ ಪ್ರತಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೆ ತಪಾಸಣೆ ತಂಡ ಆಗಮಿಸಿದಾಗ ಎಲ್ಲವನ್ನು ಚೊಕ್ಕಟ್ಟಾಗಿ ನಿರ್ವಹಿಸಿ ಅಂಗನವಾಡಿ ಕೇಂದ್ರವು ತಪಾಸಣಾ ತಂಡದ ಮುಂದೆ ಸೈ ಎನಿಸಿಕೊಂಡಿತು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಲ್ಲಯ್ಯ ಪೊಲಂಪಲ್ಲಿ.ತಾಲ್ಲೂಕಿನಲ್ಲಿ 367 ಅಂಗನವಾಡಿ ಕೇಂದ್ರಗಳಿವೆ. ಅಪೌಷ್ಟಿಕತೆ ಇರುವ 7,552 ಮಕ್ಕಳ ಎಂದು ಗುರುತಿಸಲಾಗಿದೆ. ಅದರಲ್ಲಿ ಕೇವಲ 741 ಮಕ್ಕಳಿಗೆ ಮಾತ್ರ ಹಾಲು ಹಾಗೂ ಮೊಟ್ಟೆಯನ್ನು ನೀಡಲಾಗುತ್ತದೆ. 4 ದಿನ ಮೊಟ್ಟೆ, 6ದಿನ ಹಾಲು ವಿತರಿಸಲಾಗುತ್ತದೆ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ.ವಾಸ್ತವಾಗಿ ಅಪೌಷ್ಟಿಕತೆ ಕೊರತೆಯಿಂದ ಬಳಲುವ ಮಕ್ಕಳಲ್ಲಿ ಕೂದಲು ಕೆಂಪು, ಹಲ್ಲಿನ ಮೇಲೆ ಕಂದು ಬಣ್ಣ, ಕೈಕಾಲು ಸಣ್ಣ ಹೊಟ್ಟೆ ಡುಮ್ಮದಂತೆ ಕಾಣುತ್ತಾರೆ. ತಾಲ್ಲೂಕಿನ ಶಿಶು ಅಭಿವೃದ್ಧಿ ಇಲಾಖೆಯಿಂದ ಅಲಿಖಿತವಾದ ಫರ್ಮಾನು ಅಂಗನವಾಡಿ ಕೇಂದ್ರಗಳಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.ಒಂದು ಕೇಂದ್ರದಿಂದ ಕೇವಲ 2ರಿಂದ 3 ಮಕ್ಕಳು ಮಾತ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ವರದಿಯನ್ನು ನೀಡಬೇಕೆಂಬ ಕಟ್ಟಪ್ಪಣೆ ಇದೆ. ತಾಲ್ಲೂಕಿನ ಬಹುತೇಕ ಕೇಂದ್ರಗಳಲ್ಲಿ ಇದೇ ನಿಯಮವನ್ನು ಅನ್ವಯಿಸಲಾಗುತ್ತಿದೆ. ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರವನ್ನು ನೀಡುತ್ತಾ ಬರಲಾಗುತ್ತಿರುವ ಬಗ್ಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿರುವಾಗ ಅಪೌಷ್ಟಿಕಾಂಶ ಕೊರತೆಯಿಂದ ಮಕ್ಕಳು ಬಳಲು ಸಾಧ್ಯವಿಲ್ಲವೆಂಬ ವರದಿ ಸರ್ಕಾರ ಕೈಯಲ್ಲಿದೆ. ಸತ್ಯಾಂಶವನ್ನು ಮರೆಮಾಚಿ ಅನಿವಾರ್ಯವಾಗಿ ಅಂಗನವಾಡಿ ಕೇಂದ್ರದಲ್ಲಿ 2-3 ಮಾತ್ರ ಸಂಖ್ಯೆಯನ್ನು ತೋರಿಸುತ್ತಿದ್ದೇವೆ. ಇದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಇದೆ ಸಮಸ್ಯೆ ಅಡಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು  ನಿಜಸ್ಥಿತಿಯನ್ನು ಹೊರ ಹಾಕಿದ್ದಾರೆ.ವಿಚಿತ್ರವೆಂದರೆ ಅಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳ್ಳಿಗೆ ಮೊಟ್ಟೆ, ಹಾಲು ನೀಡಲಾಗುತ್ತದೆ ಎಂದು ದಾಖಲೆಯಲ್ಲಿ ಮಾತ್ರ ಇದೆ. ಅಂಗನವಾಡಿ ಕೇಂದ್ರಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಮೊಟ್ಟೆ ಖರೀದಿಸಿದ ರಸೀದಿ ಹಾಗೂ ಇನ್ನಿತರ ವಸ್ತುಗಳ ದಾಖಲೆಗಳನ್ನು ಮಾತ್ರ ಜಮಾಯಿಸುವ ಕಾರ್ಯ ನಡೆದಿದೆ ಎಂದು `ಪ್ರಜಾವಾಣಿ' ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಕಂಡು ಬಂದಿತು.ಅಲ್ಲದೆ ಪ್ರತಿ ಅಂಗನವಾಡಿ ಕೇಂದ್ರದಲ್ಲಿ ತಲಾ 10ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರನ್ನು ಆಯ್ಕೆ ಮಾಡಿ ದಾಖಲೆಯನ್ನು ಸಿದ್ದಪಡಿಸಲಾಗುತ್ತಿದೆ. 10ಕ್ಕಿಂತಲೂ ಹೆಚ್ಚು ಫಲಾನುಭವಿಗಳು ಇದ್ದರೆ ಇಲ್ಲದ ಸಬೂಬು ಹೇಳಿ ಹೆಸರು ನಮೂದಿಸಿಕೊಳ್ಳದೆ ಜಾರಿಕೊಳ್ಳುವ ದುಸ್ಥಿತಿ ಬಂದಿದೆ ಎನ್ನುತ್ತಾರೆ ಕಾರ್ಯಕರ್ತೆಯರು.ಅಪೌಷ್ಟಿಕಾಂಶ ಮಕ್ಕಳು ಹೆಚ್ಚು ಇದ್ದರು ಸಹ ಯಾವುದೇ ಕಾರಣಕ್ಕೂ ಹೆಚ್ಚಿನ ಸಂಖ್ಯೆ ತೋರಿಸಬೇಡಿ.  ಮಕ್ಕಳ ಸಂಖ್ಯೆ ಜಾಸ್ತಿಯಿದ್ದ ಬಗ್ಗೆ ವಾಸ್ತವ ಚಿತ್ರವನ್ನು  ನಮೂದಿಸಿದರೆ ಮೇಲಾಧಿಕಾರಿಯವರು ತಪಾಸಣೆ ಹಾಗೂ ಇನ್ನಿತರ ರಗಳೆ ಶುರುವಾಗುತ್ತದೆ. ನೀವೇ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತಿರಿ ಎಂದು ಶಿಶು ಅಭಿವೃದ್ಧಿ ಇಲಾಖೆಯ ಮೇಲಾಧಿಕಾರಿಯ ಒತ್ತಡವು ನಮಗಿದೆ. ಅಸಹಾಯಕರಾಗಿ ನಾವು ಅನ್ಯಾಯ ಮಡುತ್ತಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆ ಒಪ್ಪಿಕೊಳ್ಳುತ್ತಾರೆ.ಸತ್ಯಾಂಶವನ್ನು ಬಯಲಿಗೆ ಬರಬೇಕಾದರೆ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು. ಇಲ್ಲದಿದ್ದರೆ ಹೈಕೋರ್ಟ್‌ನ ತಪಾಸಣೆ ತಂಡದ ಮುಂದೆ ದೂರು ಸಲ್ಲಿಸಲಾಗುವುದೆಂದು ನಿಸರ್ಗ ಸಂಸ್ಥೆಯ ಸಂಚಾಲಕ ಮಲ್ಲಯ್ಯ ಪೊಲಂಪಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry