ಭಾನುವಾರ, ಜೂನ್ 13, 2021
25 °C
ಮೋದಿ ಗೆಲುವಿಗೆ ಕಾರ್ಯತಂತ್ರ

ಅಪ್ನಾ ದಳಕ್ಕೆ ಬಿಜೆಪಿ ಗಾಳ

ಸಂಜಯ್ ಪಾಂಡೆ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ವಾರಾಣಸಿಯಿಂದ ಸ್ಪರ್ಧಿಸುತ್ತಿರುವ ನರೇಂದ್ರ ಮೋದಿ ಅವರ ಗೆಲುವನ್ನು ಸುಲಭಗೊಳಿಸಲು ಬಿಜೆಪಿ ಎಲ್ಲ ತಂತ್ರಗಳನ್ನೂ ಪ್ರಯೋಗಿಸುತ್ತಿದೆ.ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಮತದಾರರನ್ನು ಹೊಂದಿರುವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು  ಮುಂದಾಗಿದೆ.  ವಾರಾಣಸಿ ಸೇರಿದಂತೆ ರಾಜ್ಯದ ಪೂರ್ವ ಭಾಗದಲ್ಲಿ ಕೇಂದ್ರೀಕೃತವಾಗಿರುವ ಕುರ್ಮಿ ಜನಾಂಗದ ಬೆಂಬಲ ಹೊಂದಿರುವ ಅಪ್ನಾ ದಳದ ಜೊತೆ ಮೈತ್ರಿಗಾಗಿ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ. ವಾರಾಣಸಿ ಲೋಕಸಭೆ ಕ್ಷೇತ್ರವೊಂದರಲ್ಲೇ ಕುರ್ಮಿ ಜನಾಂಗದ ಎರಡು ಲಕ್ಷ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಮೋದಿ ಅವರಿಗೆ ಈ ಜನಾಂಗದ ಬೆಂಬಲ ದೊರೆತರೆ ಅರ್ಧ ಗೆದ್ದಂತೆಯೇ ಎಂಬ ಅಭಿಪ್ರಾಯ ಬಿಜೆಪಿಯಲ್ಲಿದೆ.ಅಪ್ನಾದಳ ಚೌಕಾಸಿ: ಆರಂಭದಲ್ಲಿ ಅಪ್ನಾ ದಳದೊಂದಿಗೆ ಹೊಂದಾಣಿಕೆಗೆ ಬಿಜೆಪಿ ಹೆಚ್ಚು ಉತ್ಸಾಹ   ತೋರಿರಲಿಲ್ಲ. ಆದರೆ ಮೋದಿ ಅವರು ವಾರಾಣಸಿಯಿಂದ ಸ್ಪರ್ಧಿಸಲು ನಿರ್ಧರಿಸಿದ ನಂತರ ಚಿತ್ರಣ ಸಂಪೂರ್ಣ ಬದಲಾಗಿದೆ. ಈ ಅಗತ್ಯವನ್ನು ಮನಗಂಡಿರುವ ಅಪ್ನಾ ದಳವೂ ದೊಡ್ಡ ಮಟ್ಟದಲ್ಲಿಯೇ ಚೌಕಾಸಿಗೆ ಇಳಿದಿದೆ.ವಾರಾಣಸಿ ಮತ್ತು ಇತರೆಡೆಗಳಲ್ಲಿ ಬಿಜೆಪಿಗೆ ನೀಡುವ ಬೆಂಬಲಕ್ಕೆ ಪ್ರತಿಯಾಗಿ  3 ಲೋಕಸಭಾ ಕ್ಷೇತ್ರ ಬಿಟ್ಟುಕೊಡಬೇಕು ಎಂದು ಅಪ್ನಾ ದಳ ಪಟ್ಟು ಹಿಡಿದಿದೆ.ಮೈತ್ರಿ ಇಲ್ಲದಿದ್ದರೆ ಮೋದಿ ವಿರುದ್ಧ ಸ್ಪರ್ಧೆ: ಬಿಜೆಪಿಯೊಂದಿಗೆ ಮೈತ್ರಿ ಸಾಧ್ಯ­ವಾಗದೇ ಇದ್ದರೆ ವಾರಾಣಸಿಯಿಂದಲೇ ಸ್ಪರ್ಧಿಸುವುದಾಗಿ ಅಪ್ನಾದಳದ ಏಕೈಕ ಶಾಸಕಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅನುಪ್ರಿಯಾ ಪಟೇಲ್‌ ಘೋಷಿಸಿ­ದ್ದಾರೆ. ಇದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪಟೇಲ್‌ ಅವರು ವಾರಾಣಸಿ  ಕ್ಷೇತ್ರ ವ್ಯಾಪ್ತಿಯಲ್ಲಿರುವ ರೋಹನಿಯ ವಿಧಾನಸಭಾ ಕ್ಷೇತ್ರದ ಶಾಸಕಿ. ಫುಲ್ಪುರ, ಮಿರ್ಜಾಪುರ ಮತ್ತು ಪ್ರತಾಪಗಡ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದು ಅಪ್ನಾ ದಳದ ಬೇಡಿಕೆ. ಆದರೆ ಸ್ಥಳೀಯ ಕಾರ್ಯಕರ್ತರು  ಹೊಂದಾ­ಣಿಕೆಗೆ ವಿರುದ್ಧವಾಗಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.