ಅಪ್ಪಚ್ಚುರಂಜನ್ ವರದಿಗೆ ವಿರೋಧ

7

ಅಪ್ಪಚ್ಚುರಂಜನ್ ವರದಿಗೆ ವಿರೋಧ

Published:
Updated:

ತುಮಕೂರು: ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಅಪ್ಪಚ್ಚುರಂಜನ್ ಸದನ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ಕೈಬಿಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಗ್ರಹಿಸಿದರು.ವಿಶ್ವಾಸಮತ ಕೋರಿಕೆ ಸಂದರ್ಭದಲ್ಲಿ ನಡೆದ ಅಧಿವೇಶನವೆ ಅಸಿಂಧು ಎಂದು ಪರಿಗಣಿಸಿ ರಾಜ್ಯಪಾಲರು ಸರ್ಕಾರಕ್ಕೆ ಮತ್ತೊಮ್ಮೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಿರುವುದರಿಂದ ಅಂದಿನ ಗದ್ದಲದ ವಿಚಾರದಲ್ಲಿ ಕ್ರಮಕೈಗೊಳ್ಳುವುದು ಸರಿಯಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.ಸರ್ಕಾರ ವರದಿಯನ್ನು ಕೈಬಿಡುವಂತೆ ಒತ್ತಾಯಿಸಿ ಅಮಾನತುಗೊಂಡಿರುವ 15 ಶಾಸಕರೊಂದಿಗೆ ವಿಧಾನಸೌಧದ ಮುಂದೆ ಮುಂದಿನ ವಾರ ಪ್ರತಿಭಟನಾ ಧರಣಿ ನಡೆಸಲಾಗುವುದು.ತಮ್ಮನ್ನು ಅಮಾನತುಪಡಿಸಲು ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲ. ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಈ ರೀತಿಯ ವಾಮಮಾರ್ಗ ಅನುಸರಿಸುತ್ತಿದೆ ಎಂದು ಅವರು ಆಪಾದಿಸಿದರು.ಗಲಭೆಗೆ ಕುಮ್ಮಕ್ಕು ನೀಡಿದರು ಎಂದು ಶಾಸಕರಾದ ಸಿದ್ದರಾಮಯ್ಯ, ಸಾ.ರಾ.ಮಹೇಶ್, ಅಭಯಚಂದ್ರ, ಟಿ.ಬಿ.ಜಯಚಂದ್ರ, ಡಿ.ಕೆ.ಶಿವಕುಮಾರ್, ರೋಷನ್‌ಬೇಗ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಸೂಚಿಸಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಗಲಾಟೆ ನಡೆದಿರುವ ಚಿತ್ರೀಕರಣ ಸಿಡಿಯನ್ನು ಎಡಿಟ್ ಮಾಡಲಾಗಿದೆ ಎಂದು ಸಮಿತಿಯೇ ಅಭಿಪ್ರಾಯಪಟ್ಟಿದೆ. ಆದರೂ ನಿಯಮ ಬಾಹಿರವಾಗಿ ತಮ್ಮ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಟೀಕಿಸಿದರು.ವಿಧಾನಸೌಧದ 14 ಮಂದಿ ಸಿಬ್ಬಂದಿಗೆ ಗಲಾಟೆಯಿಂದ ಗಾಯವಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಯಾರೂ ಪೊಲೀಸರಿಗೆ ದೂರು ನೀಡಿಲ್ಲ ಅಥವಾ ಚಿಕಿತ್ಸೆ ಪಡೆದಿರುವುದಕ್ಕೆ ವೈದ್ಯರ ಪ್ರಮಾಣಪತ್ರ ನೀಡಿಲ್ಲ. ಆದರೂ ಆಡಳಿತ ಪಕ್ಷದ ಶಾಸಕರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಸಮಿತಿ ವರದಿ ನೀಡಿರುವುದು ಸರಿಯಲ್ಲ. ಸಮಿತಿ ರಚನೆಯೇ ಕಾನೂನು ಬಾಹಿರವಾಗಿದ್ದು, ಸಮಿತಿಯ ಶಿಫಾರಸ್ಸುಗಳನ್ನು ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry