ಅಪ್ಪನ ನೆನಪಿಸುವ ಫೆರಾರಿ

7

ಅಪ್ಪನ ನೆನಪಿಸುವ ಫೆರಾರಿ

Published:
Updated:
ಅಪ್ಪನ ನೆನಪಿಸುವ ಫೆರಾರಿ

`ಫೆರಾರಿ ಕಿ ಸವಾರಿ~ ಚಿತ್ರ ಈ ಶುಕ್ರವಾರ ತೆರೆ ಕಾಣಲಿದ್ದು, ಈಗಾಗಲೇ ಕುತೂಹಲ ಮೂಡಿಸಿದೆ. ಈಚೆಗೆ ಚಿತ್ರದ ಖಾಸಗಿ ಪ್ರದರ್ಶನವೊಂದರಲ್ಲಿ ಅಮಿತಾಬ್ ತಮ್ಮ ತಂದೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು.`ಇಲ್ಲಿಯ ಅಪ್ಪನ ಪ್ರೀತಿ, ನಮ್ಮಪ್ಪನನ್ನು ನೆನಪಿಸುತ್ತದೆ. ಜೊತೆಗೆ ಅಪ್ಪನಾಗಿ ನಾವು ಕಷ್ಟ ಪಟ್ಟಿದ್ದನ್ನೂ ನೆನಪಿಸುವಂತಿದೆ. ಅಪ್ಪನ ಮಮತೆ ಅಮ್ಮನಂತೆ ಕಂಡು ಬರುವುದಿಲ್ಲ. ಆದರೆ ಮಕ್ಕಳಿಗಾಗಿ ಅಪ್ಪ ಮಿಡಿಯುವುದು ಈ ಚಿತ್ರದಲ್ಲಿ ಸಹಜವಾಗಿ ಬಂದಿದೆ~ ಎಂದು ಅವರು ಅಭಿಪ್ರಾಯಪಟ್ಟಿದ್ದರು.ತಮ್ಮ ತಂದೆ ಕವಿ ಹರಿವಂಶರಾಯ್ ಬಚ್ಚನ್ ಅವರನ್ನು ನೆನಪಿಸಿಕೊಂಡ ಅಮಿತಾಬ್, ಬೋಫೋರ್ಸ್ ಹಗರಣದಲ್ಲಿ ತಮ್ಮ ಹೆಸರು ಸೇರಿದ್ದು, ಆಗ ಹರಿವಂಶರಾಯ್ ಅವರು ನೊಂದುಕೊಂಡಿದ್ದು, ಎಲ್ಲವನ್ನೂ ಬಿಡಿಸಿ ಹೇಳಿದ್ದಾರೆ.“ಇಪ್ಪತ್ತೈದು ವರ್ಷಗಳ ಹಿಂದೆ ನನಗೆ ನಾನು ಸರಿ ಇದ್ದೇನೆ, ಹೆದರುವ ಅಗತ್ಯವಿಲ್ಲ ಎಂಬ ಧೈರ್ಯವಿತ್ತು. ಆದರೆ ಅಪ್ಪ ಮಾತ್ರ ಈ ಅಪವಾದಗಳಿಂದ ಜರ್ಜರಿತಗೊಂಡಿದ್ದರು. ಮಗನ ಮೇಲೆ ವಿಶ್ವಾಸವಿದ್ದರೂ ದೇಶವಿಡೀ ಅನುಮಾನದ ದೃಷ್ಟಿಯಿಂದ ನೋಡುವುದನ್ನು ಅವರಿಗೆ ಸಹಿಸಿಕೊಳ್ಳಲಾಗಿರಲಿಲ್ಲ. ಅವರ ಮನದೊಳಗಿನ ದುಗುಡ ಒಂದು ದಿನ ಶಬ್ದಗಳಾಗಿ ಆಚೆ ಬಂದಿದ್ದವು: `ಬೇಟಾ, ತುಮ್ನೆ ಐಸಾತೊ ಕುಛ್ ನಹಿ ಕಿಯಾ ಹೈ ನಾ?~ (ಮಗನೇ, ನೀನು ಅಂಥ ಯಾವ ತಪ್ಪನ್ನೂ ಮಾಡಿಲ್ಲ ಅಲ್ಲವಾ?) ಎಂದಾಗಲೇ ಆ ಬಗ್ಗೆ ಸ್ಪಷ್ಟೀಕರಣ ಕೊಡಬೇಕಾದ ಅಗತ್ಯ ಮನವರಿಕೆಯಾಗಿತ್ತು. ಅಪ್ಪನ ಬೆಂಬಲ, ಅವರ ನೋವು ನನ್ನನ್ನು ಗಟ್ಟಿಗೊಳಿಸಿತ್ತು” ಎಂದು ಬಿಗ್ ಬಿ ನೆನಪಿಸಿಕೊಂಡಿದ್ದಾರೆ.ಬಿಗ್‌ಬಿಯೊಂದಿಗೆ ಅಪ್ಪನನ್ನು ಸ್ಮರಿಸಿಕೊಂಡು ಕಣ್ಣಪಸೆ ಒದ್ದೆ ಮಾಡಿಕೊಂಡವರು ಮುನ್ನಾ ಭಾಯ್. ಸಂಜೂ ಬಾಬಾಗೂ ಈ ಚಿತ್ರ ನೋಡಿದ ನಂತರ ಅವರ ತಂದೆ ಸುನಿಲ್ ದತ್ ನೆನಪು ಇನ್ನಿಲ್ಲದಂತೆ ಕಾಡಿತಂತೆ.`ಮುನ್ನಾಭಾಯಿ ಎಂಬಿಬಿಎಸ್~ ಅವರ ಕೊನೆಯ ಚಿತ್ರವಾಗಿತ್ತು. ಈ ಚಿತ್ರದಲ್ಲಿ ಅಪ್ಪ- ಮಗನ ಪಾತ್ರವನ್ನೇ ಸುನಿಲ್ ಹಾಗೂ ಸಂಜಯ್  ನಿರ್ವಹಿಸಿದ್ದರು. ಕೊನೆಯ ದೃಶ್ಯದಲ್ಲಿ ಅಪ್ಪ ಮಗನನ್ನು ಬರಸೆಳೆದು ಅಪ್ಪುವ ದೃಶ್ಯವಿದೆ. `ಆ ಅಪ್ಪುಗೆ ನನ್ನ ಜೀವನದಲ್ಲಿಯೇ ಮರೆಯಲಾಗದಂಥ ಅಪ್ಪುಗೆಯಾಗಿತ್ತು~ ಎಂದು ಸಂಜೂಬಾಬಾ ನೆನಪಿಸಿಕೊಂಡಿದ್ದಾರೆ.`ಮಕ್ಕಳ ಬಯಕೆಯನ್ನು ಈಡೇರಿಸಲು ತಂದೆ ಯಾವುದೇ ಕೆಲಸ ಮಾಡಲೂ ಹಿಂಜರಿಯುವುದಿಲ್ಲ. ಆದರೆ ಅಪ್ಪನೊಳಗಿನ ಅಮ್ಮನ ಹೃದಯ ಎಲ್ಲರಿಗೂ ಕಾಣುವುದಿಲ್ಲ. ಅದು ಅನುಭವಿಸುವಂಥದ್ದು. ನನ್ನೆಲ್ಲ ಸಮಯದಲ್ಲೂ ನನ್ನಪ್ಪ ನನ್ನೊಂದಿಗೆ ಇದ್ದರು.

ಬೆಂಬಲಿಸಿದ್ದರು. ಆದರೆ ತೋರಿಸುತ್ತಿರಲಿಲ್ಲ. ಈಗ ಅವರನ್ನು ಈ ಚಿತ್ರ ನೋಡಿದಾಗ ಅವರ ಪ್ರೀತಿ, ವಾತ್ಸಲ್ಯದ ನೆನಪಾಗುತ್ತಿದೆ~ ಎಂದು ಸಂಜೂ ತಮ್ಮ ತಂದೆಯನ್ನು ನೆನಪಿಸಿಕೊಂಡಿದ್ದಾರೆ.ಮಗನ ಆಕಾಂಕ್ಷೆ ಈಡೇರಿಸಲು ತಂದೆಯೊಬ್ಬನ ಹಪಹಪಿಯ ಸುತ್ತ ಈ ಚಿತ್ರವನ್ನು ಹೆಣೆಯಲಾಗಿದೆ. ಜೂನ್ 15ರಂದು ಈ ಚಿತ್ರ ತೆರೆಕಾಣಲಿದೆ. ಶರ್ಮನ್‌ಜೋಷಿ ಹಾಗೂ ಬೊಮನ್ ಇರಾನಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಾಜೇಶ್ ಮಾಪುಸ್ಕರ್ ಈ ಚಿತ್ರವನ್ನು ನಿರ್ದೇಶಿಸಿದ್ದು, ವಿಧು ವಿನೋದ್ ಚೋಪ್ರಾ ಚಿತ್ರವನ್ನು ನಿರ್ಮಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry