ಸೋಮವಾರ, ಮೇ 10, 2021
21 °C
ನನ್ನ ಕಥೆ

ಅಪ್ಪನ ನೆನಪುಗಳ ತೊಟ್ಟಿಲಲ್ಲಿ...

ನಿರೂಪಣೆ : ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಅಪ್ಪನ ನೆನಪುಗಳ ತೊಟ್ಟಿಲಲ್ಲಿ...

ಹೆಣ್ಣು ಮಕ್ಕಳಿಗೆ ಕೊಂಚ ಭಾವುಕತೆ ಜಾಸ್ತಿ ಅಂತ ಹೇಳುತ್ತಾರೆ. ಅದು ಯಾರ ವಿಷಯದಲ್ಲಿ ಹೇಗೋ ಏನೋ. ಆದರೆ, ನಾನು ತುಂಬಾ ಭಾವುಕಳು. ಅದರಲ್ಲೂ ಅಪ್ಪನ ವಿಷಯದಲ್ಲಿ. ಅತ್ಯುತ್ತಮ ಗೆಳೆಯ, ಮಾರ್ಗದರ್ಶಕ, ಪೋಷಕ, ಪ್ರೇರಕ, ಗಾಡ್‌ಫಾದರ್ ಹಾಗೂ ಸ್ಫೂರ್ತಿ ಎಲ್ಲವೂ ಅಪ್ಪನೇ ಆಗಿದ್ದರು. ಬಾಲ್ಯದಿಂದಲೂ ಹಾಗೆ. ಅಮ್ಮನ ಮಡಿಲಿಗಿಂತ ಹೆಚ್ಚಾಗಿ ಅಪ್ಪನ ಆಸರೆಯನ್ನೇ ನೆಚ್ಚಿಕೊಂಡಿದ್ದೆ.2007ರಿಂದ ಭಾರತ ಕಬಡ್ಡಿ ತಂಡದ ನಾಯಕಿಯಾಗಿದ್ದೇನೆ. 2010ರಲ್ಲಿ ಚೀನಾದ ಗುವಾಂಗ್ ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಬಂಗಾರ ಜಯಿಸಿತ್ತು. ಆಗಲೂ ರಾಷ್ಟ್ರವನ್ನು ಮುನ್ನಡೆಸಿದ್ದೆ. ಹತ್ತು ಸಲ ರಾಷ್ಟ್ರೀಯ ಟೂರ್ನಿಯಲ್ಲಿ ನನ್ನ ನಾಯಕತ್ವದಲ್ಲಿ ರೈಲ್ವೆಸ್ ತಂಡ ಬಂಗಾರ ಜಯಿಸಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಅಪ್ಪ ವೆಂಕಟ್‌ರಾವ್ ಮತ್ತು ಅಮ್ಮ ವಿಜಯಾಭಾಯಿ ಅವರ ಬೆಂಬಲ.ನನ್ನ ಸಾಧನೆ ಅಪ್ಪನ ಬದುಕಿನ ಕನಸಾಗಿತ್ತು. ಅವರ ಆಸೆ ಈಡೇರಿಸುವುದೇ ನನ್ನ ಬದುಕಾಗಿತ್ತು. ನಾನು ಕಬಡ್ಡಿ ಆಟಗಾರ್ತಿಯಾಗಬೇಕು ಎಂಬುದು ಅವರ ಅದಮ್ಯ ಬಯಕೆ. `ಕಬಡ್ಡಿ ಆಟಗಾರ್ತಿಯಾಗು, ದೇಶಕ್ಕೋಸ್ಕರ ಆಡುವುದನ್ನು ಕಣ್ಣಾರೆ ನೋಡಬೇಕು ಮಗಳೇ' ಎಂದು ಅಪ್ಪ ಪದೇ ಪದೇ ಹೇಳುತ್ತಿದ್ದರು.ಆರಂಭದಲ್ಲಿ ವಿಜಯನಗರ ಕ್ಲಬ್ ಪರ ಆಡುತ್ತಿದ್ದೆ. ಎಷ್ಟೇ ಕಷ್ಟವಾದರೂ, ದಣಿವಾದರೂ ನಿತ್ಯ ಅಭ್ಯಾಸ ಮಾತ್ರ ತಪ್ಪಿಸುತ್ತಿರಲಿಲ್ಲ. ಹೀಗೆ ಅಪ್ಪನ ಕನಸನ್ನು ನನಸು ಮಾಡುವ ಹಾದಿಯಲ್ಲಿ ಮೊದಲ  ಹೆಜ್ಜೆ ಇಟ್ಟಿದ್ದೆ. 2003ರಲ್ಲಿ ಮೊದಲ ಸಲ ರಾಷ್ಟ್ರೀಯ ಟೂರ್ನಿಯಲ್ಲಿ ಆಡಿದ್ದೆ. ಎಲ್ಲಿಯೇ ಟೂರ್ನಿಯನ್ನಾಡಲು ಹೋದರೂ ಪಾಲಕರು ಜೊತೆಗೆ ಬರುತ್ತಿದ್ದರು.

ಆಟವನ್ನು ನೋಡಿ ಹುರಿದುಂಬಿಸುತ್ತಿದ್ದರು. ನಮ್ಮ ತಂಡ ಗೆದ್ದಾಗ ಆಟಗಾರ್ತಿಯರೆಲ್ಲಾ ಸಂಭ್ರಮಿಸಿದ್ದಕ್ಕಿಂತ ಹೆಚ್ಚಾಗಿ ಅಪ್ಪ ಸಂಭ್ರಮ ಪಡುತ್ತಿದ್ದರು. ಪ್ರತಿ ಟೂರ್ನಿ ಗೆದ್ದಾಗಲೂ ಭೇಷ್... ಎಂದು ಬೆನ್ನು ತಟ್ಟುತ್ತಿದ್ದರು.ಆಗೆಲ್ಲಾ ಸಂಭ್ರಮವೇ ಬದುಕಾಗಿತ್ತು. ಸಹೋದರಿ ಸವಿತಾ ಭಾಯಿ ಹಾಗೂ ಅವರ ಪತಿ ವೈಭವ್ ಕಾಲೆ ಕೂಡಾ ಕಬಡ್ಡಿಯಾಡುತ್ತಾರೆ. ಹೀಗಾಗಿ ಒಂದಲ್ಲೊಂದು ಟೂರ್ನಿಗಳಲ್ಲಿ ಗೆದ್ದ ಪದಕ, ಟ್ರೋಫಿ, ಪ್ರಶಸ್ತಿ ಪತ್ರಗಳು ಮನೆಯ ಮಡಿಲು ಸೇರುತ್ತಿದ್ದವು. ಈ ಕಾರಣದಿಂದ ಮನೆಯಲ್ಲಿ ಸದಾ ಖುಷಿಯ ವಾತಾವರಣ ಮತ್ತು ಅಪರಿಮಿತ ಉತ್ಸಾಹ ತುಂಬಿರುತ್ತಿತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಾಧನೆ ಅಪ್ಪನ ಬದುಕಿನ ಚೈತನ್ಯವನ್ನು ಹೆಚ್ಚಿಸಿತ್ತು.ಯಾವಾಗಲೂ ಸಂಭ್ರಮದಿಂದ ಇರುತ್ತಿದ್ದರು. ತಮ್ಮ ಸ್ನೇಹಿತರ ವಲಯದಲ್ಲಿ, ಸಂಬಂಧಿಕರ ಬಳಿ ನಮ್ಮ ಸಾಧನೆಯನ್ನು ಮನತುಂಬಿ ಮಾತನಾಡುತ್ತಿದ್ದರು.

ಹೀಗೆ ಮನೆಯ ತುಂಬಾ ಸಂತೋಷ ನೆಲೆಸಿದ್ದಾಗಲೇ ಮತ್ತೊಂದು ಸಂಭ್ರಮ ಜೊತೆಯಾಗಿತ್ತು. ನನಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕು, ರೈಲ್ವೆ ಪರ ಆಡಲು ಅವಕಾಶವೂ ಲಭಿಸಿತು. ಹೀಗೆ ಎಲ್ಲಾ ಸಂಭ್ರಮ ಕೂಡಿದಾಗಲೇ ಆಘಾತ ಎದುರಾಗಿತ್ತು. ಅದೊಂದು ದಿನ ಅಪ್ಪ ತೀರಿ ಹೋದರು. ಆಗ ಅಪ್ಪನಿಗೆ 45. ನನಗೆ 18!ಅಪ್ಪ ತೀರಿಕೊಳ್ಳುವ ಒಂದು ವರ್ಷದ ಮುನ್ನ ಆಡಲು ಶುರುಮಾಡಿದ್ದೆ. ಕೆಲ ಟೂರ್ನಿಗಳಲ್ಲಿ ಆಡುವುದನ್ನು ಮಾತ್ರ ನೋಡಿದ್ದರು ಅಪ್ಪ. 2005ರಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸಲ ಭಾರತ ತಂಡಕ್ಕೆ ಆಡಿದ್ದೆ. ದೇಶವನ್ನು ಪ್ರತಿನಿಧಿಸಬೇಕೆನ್ನುವ ಅವರ ಕನಸನ್ನು ನನಸು ಮಾಡಿದಾಗ ಅದನ್ನು ನೋಡಿ ಖುಷಿ ಪಡಲು ಅಪ್ಪನೇ ಇರಲಿಲ್ಲ.

ಅಪ್ಪನ ಕನಸು, ಕಬಡ್ಡಿ ಬಗೆಗಿನ ಪ್ರೀತಿ, ಮಗಳು ಎತ್ತರಕ್ಕೇರಿ ಅನನ್ಯ ಸಾಧನೆ ಮಾಡಬೇಕು, ಅದನ್ನೆಲ್ಲಾ ಕಣ್ತುಂಬಿಕೊಳ್ಳಬೇಕು ಎಂದು ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು. ಆದರೆ, ಗುರಿ ಮುಟ್ಟುವ ಹಾದಿಯಲ್ಲಿ ನನ್ನನ್ನು ಒಬ್ಬಂಟಿಯನ್ನಾಗಿ ಮಾಡಿ ಹೋಗಿದ್ದರು.ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಸಿಕ್ಕಿದ್ದಕ್ಕೆ ಖುಷಿ ಪಡಬೇಕೋ, ಅಪ್ಪನ ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿ ಒಂಟಿಯಾಗಿ ಹೋದೆ ಎಂದು ಬೇಸರಿಸಿಕೊಳ್ಳಬೇಕೋ ಒಂದೂ ಗೊತ್ತಾಗುತ್ತಿರಲಿಲ್ಲ. ಆಗ, ತುಂಬಾ ಖಿನ್ನಳಾಗಿರುತ್ತಿದ್ದೆ. ಸಹಜ ಬದುಕಿಗೆ ಮರಳುವುದೇ ಸವಾಲಾಗಿತ್ತು. ಆಗ, ಬೆಂಬಲಕ್ಕೆ ನಿಂತಿದ್ದೇ ಅಮ್ಮ. ಅಪ್ಪನ ನೆನಪಲ್ಲಿ ಮಗಳ ಬದುಕು ಹಾದಿ ತಪ್ಪಬಾರದು.

ಗುರಿ ಮುಟ್ಟುವ ಹಾದಿಯಲ್ಲಿ ಇಟ್ಟ ಹೆಜ್ಜೆ ಹಿಂದೆ ತೆಗೆಯಬಾರದು ಎನ್ನುವ ಕಾರಣಕ್ಕಾಗಿ ಅಮ್ಮ ನಾನೆಲ್ಲಿಯೇ ಟೂರ್ನಿಯನ್ನಾಡಲು ಹೋದರೂ ಜೊತೆಗೆ ಬರುತ್ತಾರೆ. ಅಪ್ಪ ತೀರಿ ಹೋದ ಮೇಲೆ ಅಮ್ಮನೇ ಎಲ್ಲ.ತಾಳ ತಪ್ಪಿದ ಬದುಕು:

ಅದು 2010. ರಾಷ್ಟ್ರೀಯ ಟೂರ್ನಿಯೊಂದಕ್ಕೆ ಸಜ್ಜುಗೊಳ್ಳಲು ಶಿಬಿರ ನಡೆಯುತ್ತಿತ್ತು. ಶಿಬಿರದ ವೇಳೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರುವಂತಾಯಿತು. ಆಗ ಆಪರೇಷನ್ ಸಹ ಆಯಿತು. `ನೀನು  ಒಂದು ವರ್ಷ ಕಬಡ್ಡಿ ಆಡುವಂತಿಲ್ಲ' ಎಂದರು ವೈದ್ಯರು. ಆಗ ಅನುಭವಿಸಿದ ಯಾತನೆ, ಬೇಸರ, ಒಂಟಿತನ ಮಾತ್ರ ಯಾರಿಗೂ ಬರಬಾರದು.

ಆ ವೇಳೆ ಅಪ್ಪ ಪದೇ ಪದೇ ನೆನಪಾಗುತ್ತಿದ್ದರು. ಅದರೆ, `ನಿನ್ನಪ್ಪನ ಕನಸೇ ನನ್ನ ಬದುಕು' ಎನ್ನುತ್ತಿದ್ದ ಅಮ್ಮನ ಮುಖಭಾವ ಕಣ್ಣ ಮುಂದೆ ಬರುತ್ತಿತ್ತು. ಅಮ್ಮನ ಕಣ್ಣಲ್ಲಿಯೇ ಅಪ್ಪನನ್ನು ಕಾಣುತ್ತಿದ್ದೆ. `ತೇಜಸ್ವಿನಿಯ ಕಬಡ್ಡಿ ಆಟದ ಬದುಕು ಮುಗಿದು ಹೋಯಿತು. ಆಕೆ ಇನ್ನೆಂದಿಗೂ ಅಂಗಣದಲ್ಲಿ ಕಾಣಿಸಿಕೊಳ್ಳಲಾರಳು' ಎಂದು ಎಷ್ಟೋ ಜನ ನನ್ನೆದುರೇ ಕೊಂಕು ನುಡಿದರು. ಇನ್ನು ಕೆಲವರು ಬೆನ್ನ ಹಿಂದೆ ಮಾತನಾಡಿಕೊಂಡರು.

ಅವರಿಗೆಲ್ಲಾ ನನ್ನ ಸಾಮರ್ಥ್ಯವೇನೆಂಬುದನ್ನು ತೋರಿಸಿ ಕೊಡಬೇಕು, ನನ್ನ ಕಬಡ್ಡಿ ಬದುಕಿನ್ನು ಮುಗಿದಿಲ್ಲ ಎಂದು ಆಟದ ಮೂಲಕವೇ ತಿರುಗೇಟು ನೀಡಬೇಕು ಎಂದು ಮನಸ್ಸು ಚಡಪಡಿಸುತ್ತಿತ್ತು. ಆದರೆ. ವೈದ್ಯರ ಸೂಚನೆಯನ್ನು ಮೀರುವಂತಿರಲಿಲ್ಲ.ವಿಶ್ರಾಂತಿ ಪಡೆಯುತ್ತಿದ್ದ ಆ ಒಂದು ವರ್ಷ ತುಂಬಾ ಖಿನ್ನಳಾಗಿ ಬಿಟ್ಟೆ. ಎನೆಲ್ಲಾ ಸಂತೋಷಗಳನ್ನು ಕೊಟ್ಟ ಬದುಕು ಎಲ್ಲಿಗೆ ಬಂದು ನಿಂತು ಬಿಟ್ಟಿತು ಎಂದು ಮೇಲಿಂದ ಮೇಲೆ ಅನ್ನಿಸುತ್ತಿತ್ತು. ಇದೇ ವೇಳೆ ಹೇಗಾದರೂ ಸರಿ ಮತ್ತೆ ಕಬಡ್ಡಿ... ಕಬಡ್ಡಿ... ಅನ್ನಲೇಬೇಕು. ಅಂಗಣದಲ್ಲಿ ಮೊದಲಿನಂತೆ ಆಡಬೇಕು ಎಂದು ಹಟ ತೊಟ್ಟೆ. ಅಮ್ಮ ತಡೆದರು.

ಮುಂದೆ ಮತ್ತಷ್ಟು ಅಪಾಯ ಕಾಡದಿರಲಿ ಎನ್ನುವ ಎಚ್ಚರಿಕೆ ಅದು. ಆದರೂ, ನಾನು ಹಟ ಸಡಿಲಿಸಲಿಲ್ಲ. ಒಂದು ವರ್ಷದ ಅವಧಿಯಲ್ಲಿ ಬದುಕು ಸಾಕಷ್ಟು ಪಾಠಗಳನ್ನು ಕಲಿಸಿತ್ತು. ಮುಖ್ಯವಾಗಿ ವಿಶ್ವಕಪ್ ಆಡುವ ಅವಕಾಶ ತಪ್ಪಿಸಿಕೊಂಡಿದ್ದೆ. ಈಗ ಮೊದಲಿನಂತಾಗಿದ್ದೇನೆ. ಎಷ್ಟೆಲ್ಲಾ ನೋವಾದರೂ ಅದನ್ನೆಲ್ಲಾ ಸಹಿಸಿಕೊಳ್ಳುವ ಶಕ್ತಿ ತುಂಬಿದ್ದು ಅಪ್ಪನ ನೆನಪುಗಳು.ಚಿಕ್ಕವಳಿದ್ದಾಗ ಅಪ್ಪನಿಲ್ಲದೇ ಬದುಕೇ ಇಲ್ಲ ಎಂದುಕೊಂಡಿದ್ದೆ. ಆದರೀಗ ಅಪ್ಪ ಇಲ್ಲ. ಆದರೆ, ನನ್ನ ಬದುಕಿನ ಸುತ್ತ ಹರಡಿಕೊಂಡಿರುವುದು ಕೇವಲ ಅಪ್ಪನ ನೆನಪುಗಳು ಮತ್ತು ಅಮ್ಮನ ಬೆಂಬಲ ಮಾತ್ರ. 2003ರಲ್ಲಿ ಮೊದಲ ಸಲ ರಾಷ್ಟ್ರೀಯ ಟೂರ್ನಿಯಲ್ಲಿ ಆಡಿದ್ದೆ. ಇದುವರೆಗೆ ಹತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ನಮ್ಮ ತಂಡ ಬಂಗಾರ ಜಯಿಸಿದೆ.ಬದುಕಿನಲ್ಲಿ ಎತ್ತರಕ್ಕೇರುವ ಕನಸು, ಅಂದುಕೊಂಡಿದ್ದನ್ನು ಸಾಧಿಸುವ ಛಲ ಮೂಡಿಸಿದ್ದೇ ನನ್ನಪ್ಪ. ಅವರ ಬದುಕಿನ ಆಸೆ ಈಡೇರಿಸಿದ್ದೇನೆ. ಸಾಕಷ್ಟು ಗೌರವ, ಸನ್ಮಾನಗಳಾಗಿವೆ. ಮನೆಯಲ್ಲಿ ಯಾವ ದಿಕ್ಕಿನತ್ತ ನೋಡಿದರೂ ಟೂರ್ನಿಯಲ್ಲಿ ಗೆದ್ದ ಪ್ರಶಸ್ತಿ, ಪದಕ, ಟ್ರೋಫಿಗಳೇ ಎದ್ದು ಕಾಣುತ್ತವೆ. ನನ್ನ ಜೀವನದ ಗುರಿಯಾಗಿದ್ದ `ಅರ್ಜುನ' ಪ್ರಶಸ್ತಿ ಪಡೆಯುವ ಆಸೆಯೂ ಈಡೇರಿದೆ.

ಇದಕ್ಕೆಲ್ಲಾ ಕಾರಣವಾಗಿದ್ದು ಅಪ್ಪ. ಇವತ್ತಿಗೂ ಅವರ ಫೋಟೊಗೆ ನಮಸ್ಕರಿಸದೇ ಯಾವ ಟೂರ್ನಿಗೂ ಹೋಗುವುದಿಲ್ಲ. ಏಕೆಂದರೆ, ಅಪ್ಪ ನಾನಾಡುವುದನ್ನು ನೋಡುತ್ತಿರುತ್ತಾರೆ ಹಾಗೂ ಗೆದ್ದು ಬಾ ಮಗಳೇ ಎಂದು ಪ್ರೀತಿಯಿಂದ ಹಾರೈಸುತ್ತಾರೆ ಎನ್ನುವ ನಂಬಿಕೆಯಿಂದ.

ನಿರೂಪಣೆ  : ಪ್ರಮೋದ್ ಜಿ.ಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.