ಸೋಮವಾರ, ಜನವರಿ 27, 2020
28 °C

ಅಪ್ಪಾ ಯಯಾತಿಗಳೇ, ನಮ್ಮದೇನೂ ತಪ್ಪಿಲ್ಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತಿನ ತಾಪಮಾನ ಹೆಚ್ಚುತ್ತಿದೆ. ಧ್ರುವ ಪ್ರದೇಶಗಳ ಮಂಜು ಕರಗುತ್ತಿದೆ. ಸ್ಥಿತಿ ಹೀಗೆಯೇ ಮುಂದುವರಿದರೆ ಸಾಗರಗಳ ನೀರಿನ ಮಟ್ಟ ಹೆಚ್ಚುತ್ತಿದೆ. ಅದನ್ನು ತಡೆಯಲು ಯುವಕರು ಮುಂದಾಗಬೇಕು. ಭಾರತೀಯ ಸಂಸ್ಕೃತಿ ಅಳಿಯುತ್ತಿದೆ. ಪಾಶ್ಚಾತ್ಯ ಪ್ರಭಾವ ಹೆಚ್ಚುತ್ತಿದೆ.ಇದರಿಂದ ಸಂಸ್ಕೃತಿಯನ್ನು ಕಾಪಾಡಲು ಯುವಕರಿಂದಷ್ಟೇ ಸಾಧ್ಯ. ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಅದನ್ನು ನಿವಾರಿಸಲು ಹಳೆಯ ತಲೆಮಾರಿಗೆ ಸಾಧ್ಯವಾಗಲಿಲ್ಲ. ಹೊಸ ತಲೆಮಾರು ಈ ಶಾಪದಿಂದ ದೇಶವನ್ನು ಮುಕ್ತಗೊಳಿಸಬೇಕು.ಕನ್ನಡ ಶಾಲೆಗಳು ಮುಚ್ಚುತ್ತಿವೆ. ಅವುಗಳನ್ನು ಉಳಿಸಬೇಕೆಂದರೆ ಯುವಕರು ಕನ್ನಡ ಕಲಿಯಬೇಕು. ಎಲ್ಲಿ ನೋಡಿದರೂ ಕಸವೇ ತುಂಬಿ ತುಳುಕುತ್ತಿದೆ. ಭಾರತವೆಂದರೆ ಕಸಭರಿತ ದೇಶವಾಗುವ ಮೊದಲು ಅದನ್ನು ಶುಚಿಗೊಳಿಸಬೇಕು. ವರದಕ್ಷಿಣೆಯಿಂದಾಗಿ ಅನೇಕಾನೇಕ ಹೆಣ್ಣುಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಪಿಡುಗನ್ನು ನಿವಾರಿಸಲು ವರದಕ್ಷಿಣೆಯಿಲ್ಲದೆ ಮದುವೆಯಾಗಲು ಯುವಕರು ಮುಂದಾಗಬೇಕು.ಹೀಗೆ ಪಟ್ಟಿ ಮಾಡುತ್ತಾ ಹೋದರೆ ಯುವಕರ ಮೇಲಿರುವ ಹೊರೆ ಸಣ್ಣದೇನಲ್ಲ. ಇಲ್ಲಿಯ ತನಕ ಎಲ್ಲರೂ ಮಾಡಿದ ತಪ್ಪನ್ನು ಸರಿಪಡಿಸುವ ಎಲ್ಲಾ ಜವಾಬ್ದಾರಿಯೂ ನಮ್ಮ ಮೇಲೆಯೇ ಇದೆ. ಇದಕ್ಕಾಗಿ ನಾವು ಹೋರಾಡಬೇಕು, ಕಷ್ಟಪಟ್ಟು ದುಡಿಯಬೇಕು, ಹಣದ ಹಿಂದೆ ಹೋಗದೆ ಸೇವೆಗಾಗಿ ಜೀವನವನ್ನು ಮುಡಿಪಿಡಬೇಕು. ಸುಭಾಷ್ ಚಂದ್ರ ಭೋಸ್, ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಹೀಗೆ ನಾವು ಹುಟ್ಟುವುದಕ್ಕಿಂತ ಮೊದಲೇ ಇಹಲೋಕ ತ್ಯಜಿಸಿದ ಅನಾಕಾನೇಕ ಮಹನೀಯರ ಬದುಕನ್ನೆಲ್ಲಾ ಉದಾಹರಣೆಯಾಗಿ ನಮ್ಮ ಮುಂದೆ ಚೆಲ್ಲಲಾಗುತ್ತಿದೆ.ಇದೆಲ್ಲಾ ಸರಿಯೇ. ಈ ಮಹನೀಯರೆಲ್ಲಾ ನಮಗೆ ಅನುಕರಣೀಯರೇ. ಆದರೆ, ಇವರ ಉದಾಹರಣೆಗಳನ್ನು ನಮ್ಮ ಮುಂದೆ ಇಡುತ್ತಿರುವ ಹಿರಿಯರಿಗೂ ಇವರೆಲ್ಲಾ ಅನುಕರಣೀಯರೇ ಆಗಿದ್ದರಲ್ಲವೇ? ಈ ಜಗತ್ತಿನ ತಾಪಮಾನ ಏರುವುದಕ್ಕೆ ನಾವಂತೂ ಕಾರಣರಲ್ಲ. ನಾವು ಹುಟ್ಟುವ ಹೊತ್ತಿಗಾಗಲೇ ಜಗತ್ತಿನ ತಾಪಮಾನವನ್ನು ಏರಿಸುವ ಎಲ್ಲಾ ಕೃತ್ಯಗಳನ್ನು ನಮಗೆ ಬುದ್ಧಿಮಾತು ಹೇಳುತ್ತಿರುವ ಹಿರಿಯರು ಮಾಡಿಯಾಗಿತ್ತು. ಚಾರ್ಲ್ಸ್ ಡಾರ್ವಿನ್ ಯಾವತ್ತೂ ಬಳಸದ `ಸರ‌್ವೈವಲ್ ಆಫ್ ದ ಫಿಟ್ಟೆಸ್ಟ್~ ಎಂಬ ತತ್ವವನ್ನು ಅವನ ಮೇಲೆ ಆರೋಪಿಸಿ ಸಿಕ್ಕಿದ್ದೆಲ್ಲವನ್ನೂ ನಾಶ ಮಾಡಿ ತನ್ನ ಒಳಿತನ್ನು ಮಾತ್ರ ಸಾಧಿಸಲು ಹೊರಟದ್ದು ಖಂಡಿತಾ ನಾವಲ್ಲ. ನಾವು ಬದುಕು ಆರಂಭಿಸುವ ಹೊತ್ತಿಗೆ ನಮ್ಮ ಮುಂದೆ ಇದ್ದದ್ದು ಮಹಾತ್ಮಾ ಗಾಂಧಿಯ ಮಾದರಿ ಅಲ್ಲ. ಶೂಮಾಕರ್‌ನ ಸಣ್ಣದು ಸುಂದರ ಎಂಬ ಅರ್ಥಶಾಸ್ತ್ರವೂ ಅಲ್ಲ. ನಮ್ಮ ಮುಂದೆ ಇದ್ದದ್ದು ನೀವು.ನಾವು ಯಾವತ್ತೂ ಇಂಗ್ಲಿಷ್ ಶಾಲೆಗೇ ಹೋಗಬೇಕೆಂದು ಹಟ ಮಾಡಿಲ್ಲ. ನಮಗೆ ಪ್ರತಿಷ್ಠಿತ ಶಾಲೆ ಬೇಕೆಂದು ಕೇಳಲಾದರೂ ನಮಗೆಲ್ಲಿ ಗೊತ್ತಿತ್ತು. ಅವೆಲ್ಲವೂ ವಿಶ್ವವನ್ನು ಕಾಪಾಡುವ ಹೊಣೆಯನ್ನು ಈಗ ನಮ್ಮ ಮೇಲೆ ಹೊರಿಸುತ್ತಿರುವ ಹಿರಿಯರ ಆಸೆಗಳೇ ಆಗಿದ್ದವು. `ನನ್ನ ಮಗ ಇಂಗ್ಲಿಷ್‌ನಲ್ಲಿ ಅರಳು ಹುರಿದಂತೆ ಮಾತನಾಡಿದರೆ ನನ್ನ ಪ್ರತಿಷ್ಠೆ ಹೆಚ್ಚುತ್ತದೆ~ ಎಂಬುದು ನಮ್ಮ ಕಲ್ಪನೆಯಾಗಿರಲಿಲ್ಲ. ಲಂಚ ಎಂದರೇನೆಂದೇ ನಮಗೆ ಗೊತ್ತಿರಲಿಲ್ಲ.ಅದನ್ನೂ ಕಲಿಸಿದ್ದು ನಮ್ಮ ಹಿರಿಯರಾದ ನೀವೇ. ಅಳಿಯನನ್ನು ಹುಡುಕುವಾಗ ಸಂಬಳದ ಜೊತೆಗೆ ಮೇಲು ಸಂಪಾದನೆ ಎಷ್ಟಿದೆಯೆಂದು ಲೆಕ್ಕ ಹಾಕುತ್ತೀರೆಂದು ನಮಗೆ ತಿಳಿದ ಮೇಲೆ ತಾನೇ ನಾವು ಈ ಮೇಲು ಸಂಪಾದನೆಯತ್ತ ಗಮನಹರಿಸಿದ್ದು. ನಿಮಗೆ ಬೇಸರವಾಗುವುದು ನೀವು ಲಂಚ ಕೊಡುವಾಗ ಮಾತ್ರ. ಆದರೆ ನೀವು ಲಂಚ ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ನಿಮಗೆಂದೂ ದುಃಖವಾದದ್ದಿಲ್ಲ.ನೀವು ಶಿಕ್ಷಕರಾಗಿ ಕೆಲಸ ಮಾಡುವುದನ್ನು ನಾವು ನೋಡಿದ್ದೆವು. ಹೌದು... ನಾವು ನೋಡಿದ್ದೆವು ಎಂದೇ ಹೇಳಬೇಕಾಗಿದೆ. ಏಕೆಂದರೆ ನಿಮ್ಮ ಮಕ್ಕಳಿಗೆ ನೀವು ಕೆಲಸ ಮಾಡುವ ಶಾಲೆಯಲ್ಲಿ ಪ್ರವೇಶವಿರಲಿಲ್ಲ. ಅದನ್ನೇನು ಸರ್ಕಾರ ನಿರಾಕರಿಸಿರಲಿಲ್ಲ. ಅದನ್ನೂ ನೀವೇ ನಿರಾಕರಿಸಿದ್ದು. ಅದಕ್ಕೆ ನೀವು ನೀಡಿದ ಕಾರಣ ಅಲ್ಲಿ ಶಿಕ್ಷಣದ ಮಟ್ಟದ ಒಳ್ಳೆಯದಿಲ್ಲ. ನಾವಿನ್ನೂ ಮಕ್ಕಳಾಗಿದ್ದೆವು. ಅಲ್ಲಿ ನೀವೇ ಪಾಠ ಮಾಡುತ್ತಿದ್ದೀರಲ್ಲ ಎಂದು ಕೇಳುವ ಸ್ವಾತಂತ್ರ್ಯ ನಮಗೆಲ್ಲಿತ್ತು...? ಆಗ ನಾವಿನ್ನೂ ಮಕ್ಕಳು.ಮೆಡಿಕಲ್ ಕಾಲೇಜಿನಲ್ಲಿ ಸೀಟು ಬೇಕೆಂಬ ಆಸೆ ನಮಗೆಲ್ಲಿತ್ತು? ಇಂಜಿನಿಯರಿಂಗ್ ಮಾಡಿದರಷ್ಟೇ ಭವಿಷ್ಯ ಎಂಬ ಅರಿವು ನಮ್ಮದಂತೂ ಆಗಿರಲಿಲ್ಲ. ಅದನ್ನೆಲ್ಲಾ ನೀವೇ ಕಂಡುಕೊಂಡದ್ದು. ನಾವು ಆ ಕೋರ್ಸ್‌ಗಳನ್ನು ಮಾಡಿದೆವು. ಮಾಡಿದ ಮೇಲಾದರೂ ನಮಗಿಷ್ಟ ಬಂದದ್ದನ್ನು ಮಾಡಲು ನೀವು ಬಿಟ್ಟಿರಾ? ಬ್ಯಾಂಕ್‌ನಲ್ಲಿ ಮಾಡಿದ ಸಾಲ ತೀರಿಸಲು ನನಗಿಷ್ಟವಿಲ್ಲದ ಕೆಲಸವನ್ನೇ ಒಪ್ಪಿಕೊಳ್ಳಬೇಕಾಯಿತು. ಸಾಲ ತೀರಿಸುತ್ತಿರುವಾಗಲೇ ಮತ್ತೆ ಸಾಲ ಮಾಡುವಷ್ಟು ದೊಡ್ಡ ದೊಡ್ಡ ಹೊಣೆಗಾರಿಕೆಯನ್ನೆಲ್ಲಾ ಪ್ರತಿಷ್ಠೆಯ ಹೆಸರಿನಲ್ಲಿ ಹೇರಿದ್ದೂ ನೀವೇ ತಾನೇ. ಮದುವೆ ಕೂಡಾ ನಿಮ್ಮ ಪ್ರತಿಷ್ಠೆ ಮೆರೆಸುವ ಕ್ರಿಯೆಯಾಯಿತು. ವರದಕ್ಷಿಣೆ ಬೇಡ ಎಂದರೆ ನಿನ್ನಲ್ಲೇನೋ ಐಬಿರಬಹುದೆಂದು ಸಮಾಜ ಭಾವಿಸುತ್ತದೆ ಎಂಬ ಹೆದರಿಕೆ ಹುಟ್ಟಿಸಿದ್ದೂ ನೀವೇ. ಏನನ್ನೋ ಹೇಳಲು ನಾವು ಪ್ರಯತ್ನಿಸಿದಾಗಲೆಲ್ಲ, `ಸುಮ್ಮನಿರಿ, ನಿಮ್ಮದು ಅನನುಭವದ ಆಡಿನ ಮರಿಯ ಕೂಗು~ ಎಂದು ಬಾಯಿ ಮುಚ್ಚಿಸಿದ್ದು ನೀವೇ.ನೀವು ಕಟ್ಟಿಕೊಟ್ಟ ಜಗತ್ತಿನಲ್ಲಿ ನಾನು ಬದುಕಬೇಕಾದರೆ ಪರಿಸರವನ್ನು ಶೋಷಿಸಲೇ ಬೇಕಿತ್ತು. ಲಂಚ ಪಡೆಯಲೇ ಬೇಕಿತ್ತು. ಮತ್ತೆ ನೀವು ಮಾಡಿದಂತೆಯೇ ಲಂಚವನ್ನು ಕೊಡಲೂ ಬೇಕಿತ್ತು. ಇಷ್ಟಾದ ಮೇಲೆ ಈಗ ನೀವು ನಮ್ಮ ಮೇಲೆ ಜಗತ್ತನ್ನು ಕಾಪಾಡುವ ಜವಾಬ್ದಾರಿ ಹೇರುತ್ತಿದ್ದೀರಿ. ಅದನ್ನು ಹೊರಲು ಸಿದ್ಧರಾದರೆ ಮತ್ತೆ ನಿಮ್ಮದೇ ಸಮಸ್ಯೆ. ನಮಗೆ ಅನುಭವವಿಲ್ಲ, ನಿಮ್ಮ ಮಾರ್ಗದರ್ಶನದಲ್ಲಿಯೇ ನಡೆಯೋಣ ಎಂದು ಹೊರಟೆವು.ಸಂಸ್ಕೃತಿಯ ರಕ್ಷಣೆಗೆ ಮುಂದಾದ ನಮ್ಮನ್ನು ನೀವು ಗೂಂಡಾಗಳನ್ನಾಗಿಸಿಬಿಟ್ಟಿರಿ. ಅದೂ ನಮಗಾಗಿ ಅಲ್ಲ. ನೀವು ಏರಿ ಕುಳಿತಿದ್ದ ಸ್ಥಾನಗಳನ್ನು ಉಳಿಸಿಕೊಳ್ಳಲು ಅದು ನಿಮಗೊಂದು ಮಾರ್ಗವಾಯಿತು. ನಾವು ನಮ್ಮಷ್ಟೇ ಮುಗ್ಧರಾಗಿ, ನಿಮ್ಮಂಥ ಹಿರಿಯರು ಸೂಚಿಸಿದ ಹಾದಿಯಲ್ಲಿ ನಡೆಯುತ್ತಿದ್ದ ನಮ್ಮದೇ ಗೆಳೆಯ/ಗೆಳತಿಯರನ್ನು ಥಳಿಸಿಬಿಟ್ಟೆವು. ಪೊಲೀಸರು ಕೇಸು ಹಾಕಿದ ಮೇಲೆ ನಾವು ರೌಡಿಗಳಾಗಿಯೇ ಉಳಿಯಲು ಬೇಕಾದ ವ್ಯವಸ್ಥೆಯನ್ನು ಹೇಗೂ ನೀವೇ ಮಾಡಿಕೊಟ್ಟಿರಲ್ಲ. ಅದಕ್ಕೇನೂ ಬೇಸರವಿಲ್ಲ. ಆದರೆ ಜಗತ್ತನ್ನು ನಾವು ರಕ್ಷಿಸಬೇಕೆಂದು ನೀವೇಕೆ ಕಿವಿಮಾತು ಹೇಳುತ್ತಿದ್ದೀರಿ.ನಮಗೆ ಈ ಜಗತ್ತನ್ನು ರಕ್ಷಿಸುವ ಹೊಣೆಗಾರಿಕೆ ಬೇಡ. ಇದು ನೀವು ಕಟ್ಟಿದ ಜಗತ್ತು. ಅದು ನಾಶವಾಗುವುದಿದ್ದರೆ ಆಗಲಿ ಬಿಡಿ. ಅದರೊಂದಿಗೆ ನಾವೂ ನಾಶವಾಗುತ್ತೇವೆಂಬ ನಿಮ್ಮ ಬೆದರಿಕೆ ನಮಗೂ ಕೇಳಿಸುತ್ತಿದೆ. ಆದರೆ ನಮಗೀಗ ಹೆದರಿಕೆಯಾಗುತ್ತಿಲ್ಲ. ಏಕೆಂದರೆ ನಮ್ಮನ್ನು ಹೀಗೆ ಮಾಡಿದ್ದೂ ನೀವೇ ತಾನೇ. ನಾವು ನಾಶವಾಗುವುದು ಸಹಜವೇ ಅಲ್ಲವೇ.

ಪ್ರತಿಕ್ರಿಯಿಸಿ (+)