ಅಪ್ಪೆ ಮಾವಿನಮಿಡಿ ತಳಿ ಸಂರಕ್ಷಣೆ ಅಗತ್ಯ

7

ಅಪ್ಪೆ ಮಾವಿನಮಿಡಿ ತಳಿ ಸಂರಕ್ಷಣೆ ಅಗತ್ಯ

Published:
Updated:
ಅಪ್ಪೆ ಮಾವಿನಮಿಡಿ ತಳಿ ಸಂರಕ್ಷಣೆ ಅಗತ್ಯ

ಸಾಗರ: ಹೆಚ್ಚು ಕಾಲ ಬಾಳುವ ಮತ್ತು ಅತ್ಯಂತ ರುಚಿಕಟ್ಟಾದ ಅಪ್ಪೆ ಮಾವಿನಮಿಡಿ ತಳಿಯನ್ನು ಸಂರಕ್ಷಿಸಿಕೊಳ್ಳುವ ಕುರಿತು ವಿಶೇಷ ಪ್ರಯತ್ನ ನಡೆಯಬೇಕಿದೆ ಎಂದು ಕಸಿತಜ್ಞ ಬೇಳೂರು ಸುಬ್ರಾವ್ ಹೇಳಿದರು. ಸಹ್ಯಾದ್ರಿ ಶ್ರೇಣಿಯ ಅಪ್ಪೆ ಮಾವಿನಮಿಡಿ ಬೆಳೆಗಾರರ ಸಂಘ ಮಂಗಳವಾರ ಏರ್ಪಡಿಸಿದ್ದ ‘ಮಿಡಿಮಾವು ಸಂತೆ- 2011’ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾವಿನಮಿಡಿ ಋತುವಿನಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ಮಿಡಿ ಸಂತೆಯನ್ನು ಆಯೋಜಿಸುವ ಮೂಲಕ ಮಾವಿನ ಮಿಡಿಯ ವ್ಯವಸ್ಥಿತ ಮಾರುಕಟ್ಟೆಯ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಮಲೆನಾಡಿನ ರೈತರು ಮನಸ್ಸು ಮಾಡಿದರೆ ಇಡೀ ರಾಜ್ಯಕ್ಕೆ ಪೂರೈಸುವಷ್ಟು ಮಾವಿನ ಮಿಡಿಯನ್ನು ಈ ಪ್ರದೇಶದಲ್ಲೇ ಬೆಳೆಯಬಹುದು. ಆದರೆ, ಈಗಾಗಲೇ ನಾವು ಮಾವಿನ ಅನೇಕ ವಿಶಿಷ್ಟ ತಳಿಗಳನ್ನು ನಾಶ ಮಾಡಿದ್ದು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಈಗ ತಳಿ ಸಂರಕ್ಷಣೆ ಕುರಿತು ಮಾತನಾಡುತ್ತಿದ್ದೇವೆ ಎಂದರು.ಮಾವಿನ ಮಿಡಿಯ ವಿಶೇಷ ತಳಿಗಳ ಸಂರಕ್ಷಣೆಗೆ ನಾವು ತೋರಿಸಿದ ಅನಾಸಕ್ತಿಯಿಂದಾಗಿ ಮಿಡಿಯ ತಳಿಗಳ ಪರಿಚಯವೇ ಇಲ್ಲದವರು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ವ್ಯವಸ್ಥಿತವಾಗಿ ವಂಚಿಸುತ್ತಿದ್ದಾರೆ. ಇಂದಿನ ಪೀಳಿಗೆಗೆ ತಳಿಗಳ ಪರಿಚಯ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.ಸಹ್ಯಾದ್ರಿ ಶ್ರೇಣಿಯ ಅಪ್ಪೆ ಮಾವಿನಮಿಡಿ ಬೆಳೆಗಾರರ ಸಂಘದ ಗಣೇಶ್ ಕಾಕಲ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವಿನ ಮಿಡಿ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಪ್ಪಿನಕಾಯಿ ಮಾಡಲು ಮಾವಿನ ಮಿಡಿ ಸಿಗದ ಪರಿಸ್ಥಿತಿ ನಿರ್ಮಾಣವಾದರೆ ಆಶ್ಚರ್ಯವಿಲ್ಲ ಎಂದರು. ಪ್ರಗತಿಪರ ಕೃಷಿಕ ಆನೆಗುಳಿ ಸುಬ್ರಾವ್ ಮಾತನಾಡಿ, ಮಾವಿನ ಮಿಡಿ ತಳಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ ಇನ್ನಿತರ ಜಿಲ್ಲೆಗಳಲ್ಲೂ ತೋಟಗಾರಿಕಾ ಸಹಕಾರದೊಂದಿಗೆ ಸಂಘಟನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ವಿವಿಧ ತಳಿಗಳ ಮಾವಿನ ಬೆಳಗಾರ ಗೊರಮನೆ ಮಹಾಬಲಯ್ಯ ವಿವಿಧ ತಳಿಗಳ ಮಾವಿನಮಿಡಿ ವಿತರಿಸುವ ಮೂಲಕ ಮಾವಿನಮಿಡಿ ಸಂತೆ ಉದ್ಘಾಟಿಸಿದರು.ಪರಮೇಶ್ವರಿ ಪ್ರಾರ್ಥಿಸಿದರು. ಕೆ. ರಾಘವೇಂದ್ರ ಸ್ವಾಗತಿಸಿದರು. ವಸಂತ ನೀಚಡಿ ವಂದಿಸಿದರು. ವ.ಶಂ. ರಾಮಚಂದ್ರಭಟ್ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry