ಭಾನುವಾರ, ಮೇ 22, 2022
21 °C

ಅಪ್ಪ ಅಪ್ಪ.. ನನಗೆ ನೀನೂ ಬೇಕಪ್ಪಾ...

ಸವಿತಾ ಎಸ್. Updated:

ಅಕ್ಷರ ಗಾತ್ರ : | |

ಆತನ ವಯಸ್ಸು 32. ಮಗಳು ದಿವ್ಯಾಳನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ. ವೈಯಕ್ತಿಕ ಕಾರಣಗಳಿಂದ ಗಂಡ ಹೆಂಡತಿ ವಿಚ್ಛೇದನದ ಮೊರೆ ಹೋದರು. ಮಗುವನ್ನಾದರೂ ನನಗೆ ಬಿಟ್ಟುಕೊಡು ಎಂದು ವಿನಂತಿಸಿದ. `ಮಗು ಇನ್ನೂ ಅಪ್ರಾಪ್ತ ವಯಸ್ಸಿನದು. ಹೀಗಾಗಿ ಅದು ತಾಯಿಯ ತೆಕ್ಕೆಯಲ್ಲೇ ಇರಬೇಕು~ ಎಂದಿತು ಕೋರ್ಟು. ಮಗಳಿಲ್ಲದ ಬದುಕು ಕಲ್ಪಿಸಿಕೊಳ್ಳಲೂ ಅಸಾಧ್ಯವಾಗಿ ಆತ ಆತ್ಮಹತ್ಯೆಗೆ ಶರಣಾದ.

***

ಆತ ಇನ್ಫೋಸಿಸ್ ಉದ್ಯೋಗಿ. ತರಬೇತಿಗಾಗಿ ಆರು ತಿಂಗಳು ಅಮೆರಿಕಾಗೆ ತೆರಳಿದವನು ಹಿಂದಿರುಗಿದಾಗ ಮಡದಿ ಸಂಪೂರ್ಣ ಬದಲಾಗಿದ್ದಳು. ಗಂಡನ ಮೇಲೆ ವಿನಾಕಾರಣ ಸೆಟ್ಟು-ಸೆಡವು. ಇಬ್ಬರೂ ಕೋರ್ಟ್ ಮೆಟ್ಟಿಲೇರಿದರು. ವಿಚ್ಛೇದನಕ್ಕೆ ಒಪ್ಪಿದ ಕೋರ್ಟ್ ವಾರಕ್ಕೆ ಎರಡು ಗಂಟೆ ಮಗಳನ್ನು ತಂದೆ ಬಳಿ ಬಿಡಬೇಕು ಎಂದಿತು. ಒಂದೆರಡು ತಿಂಗಳಲ್ಲಿ (ಮಾಜಿ) ಹೆಂಡತಿ ಮತ್ತೆ ತಿರುಗಿ ಬಿದ್ದಳು. ಹುಡುಕಿ ಬಂದ ಮಾಜಿ ಪತಿಗೆ `ಮಗು ಮನೆಯಲ್ಲಿಲ್ಲ~ ಎಂದು ಸುಳ್ಳು ಹೇಳಿ ಸಾಗಹಾಕುತ್ತಿದ್ದಳು. ಬಲಾತ್ಕಾರವಾಗಿ ಮಗು ಎತ್ತಿಕೊಳ್ಳಲು ಹೋದರೆ ಮೈಕೈ ಪರಚಿ ಹಿಂಸಿಸುತ್ತಿದ್ದಳು. ಮಗುವಿಗಾಗಿ ಇದೀಗ ಆತ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾನೆ.

***

ಮದುವೆಯಾದಂದಿನಿಂದಲೂ ವೈಮನಸ್ಸು ಹೊಂದಿದ್ದ ದಂಪತಿ ನಾಲ್ಕು ವರ್ಷಗಳ ಬಳಿಕ ವಿಚ್ಛೇದನ ಪಡೆದರು. ಮಗುವಿನ ಭೇಟಿಗೂ ಅವಕಾಶ ಕೊಡದ ಆಕೆ ತವರು ಮನೆಯಲ್ಲೇ ತಳವೂರಿದ್ದಳು. ಮಗುವನ್ನು ನೋಡಲು ಹೋದರೆ, `ನೀನು ಈ ಮಗುವಿನ ಅಪ್ಪನಲ್ಲ, ಹೋಗು~ ಎಂದು ನಿಂದಿಸಿದಳು. ಆ ಮಾತಿನ ಆಘಾತದಿಂದ ಅವನಿನ್ನೂ ಹೊರಬಂದಿಲ್ಲ. ಮಗುವಿನ ಪ್ರೀತಿಗಾಗಿ ಕಾಯುತ್ತಲೇ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ....ಹೀಗೆ, ವಿಚ್ಛೇದನದ ನಂತರ ಮಕ್ಕಳಿಂದಲೂ ದೂರವಾಗುವ ಅಪ್ಪಂದಿರ ಗೋಳು ಒಂದೆರಡಲ್ಲ. ಕರುಳಕುಡಿಯ ಪ್ರೀತಿಗಾಗಿ ಹಂಬಲಿಸುವ ಇಂತಹ ಅಸಹಾಯಕರದ್ದೇ ಒಂದು ಸಂಘಟನೆ ನಗರದಲ್ಲಿದೆ. ತಮ್ಮ `ಹಕ್ಕು~ಗಳಿಗಾಗಿ ಅವರೆಲ್ಲ ಬೀದಿಗಿಳಿಯಲೂ ಮುಂದಾಗಿದ್ದಾರೆ.ಅಪ್ಪ ಮಗುವನ್ನು ಪ್ರೀತಿಸುವುದು, ಜೊತೆಯಲ್ಲಿರುವಂತೆ ಬಯಸುವುದೇ ತಪ್ಪೇ? ಹೊತ್ತು ಹೆತ್ತ ತಾಯಿಯಷ್ಟೇ ಜವಾಬ್ದಾರಿ ತಂದೆಗೂ ಇಲ್ಲವೇ. ಮಗುವಿಗೆ ಆತನೂ ಸಮಾನ ಪಾಲುದಾರನಲ್ಲವೇ...  ಇವೇ ಮೊದಲಾದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕ್ರಿಸ್ಪ್ (ಇಜ್ಝಿ ್ಕಜಿಜಠಿ ಐ್ಞಜಿಠಿಜಿಠಿಜಿಛಿ ್ಛಟ್ಟ ಖಚ್ಟಛಿ ಚ್ಟಛ್ಞಿಠಿಜ್ಞಿಜ) ಕಳೆದ ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಗಂಡ ಹೆಂಡತಿ ಕಿತ್ತಾಟದಲ್ಲಿ ಮಗುವಿಗೇಕೆ ಶಿಕ್ಷೆ? ವಿಚ್ಛೇದನ ಪತಿ-ಪತ್ನಿಯರಿಗೇ ಹೊರತು ಮಗುವಿಗಲ್ಲವಲ್ಲ ಎಂಬುದು ಕ್ರಿಸ್ಪ್ ಎತ್ತಿರುವ ಪ್ರಶ್ನೆ.`ಮಕ್ಕಳ ಪಾಲಿಗೆ ಭಯ, ಭದ್ರತೆ, ಮಾರ್ಗದರ್ಶಕ, ಗೆಳೆಯ, ಗುರು... ಹೀಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಅಪ್ಪ, ತನ್ನ ಹೆಂಡತಿ ಅಂದರೆ ಮಗುವಿನ ತಾಯಿಯಿಂದ ದೂರವಾದ ತಕ್ಷಣ (ಬಹುತೇಕ ಪ್ರಕರಣಗಳಲ್ಲಿ) ಮಗುವಿನಿಂದಲೂ ದೂರವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಿರುವ ಕಾನೂನುಗಳು ಈ ಸಂಬಂಧವನ್ನು ಗಟ್ಟಿಯಾಗಿಸುತ್ತಿಲ್ಲ. ವಿಚ್ಛೇದನದ ನಂತರ ಮಕ್ಕಳ ಸುಪರ್ದಿ ವಿಷಯದಲ್ಲಿ  ಕಾನೂನು ಮಹಿಳೆಯರನ್ನೇ ಬೆಂಬಲಿಸುತ್ತದೆ. ಇದು ಮಕ್ಕಳ ಮನೋವಿಕಾಸಕ್ಕೂ ಮಾರಕ ಎನ್ನುವುದು ಕ್ರಿಸ್ಪ್ ವಾದ.ಸಂಸ್ಥೆ ಅಧ್ಯಕ್ಷ ಕುಮಾರ್ ಜಹಂಗೀರ್ದಾರ್ ಪ್ರಕಾರ, `ವಿಚ್ಛೇದನ ವೇಳೆ ತಂದೆ ತಾಯಿ ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆಯೇ ಹೊರತು ಮಕ್ಕಳ ಬಗೆಗಲ್ಲ. ನಗರದ ಕೌಟುಂಬಿಕ ನ್ಯಾಯಾಲಯವೊಂದರಲ್ಲೇ 20,000ಕ್ಕೂ ಅಧಿಕ ವಿಚ್ಛೇದನ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಪ್ರತಿ ವರ್ಷ ಶೇ.30ರಷ್ಟು ಹೆಚ್ಚು ಪ್ರಕರಣಗಳು ದಾಖಲಾದರೆ ಶೇ. 5ರಿಂದ 10 ಪ್ರಕರಣಗಳಷ್ಟೇ ಬಗೆಹರಿಯುತ್ತಿವೆ. ವಿಚ್ಛೇದನ ಪ್ರಕರಣಗಳಂತೂ 3ರಿಂದ 15 ವರ್ಷದವರೆಗೆ ಮುಂದುವರೆದಿದ್ದೂ ಇದೆ. ಪ್ರತಿ ಬಾರಿಯೂ ಮಗುವನ್ನು ಕೋರ್ಟ್‌ಗೆ ಒಯ್ಯುವುದರಿಂದ ಮಗುವಿನ ಮೇಲೂ ಕೆಟ್ಟ ಪರಿಣಾಮ ಬೀಳುತ್ತದೆ~.`ಆರರಿಂದ ಹತ್ತು ವರ್ಷದ ಅವಧಿಯಲ್ಲಿ ಮಗುವಿನ ಮನಸ್ಸಿನಲ್ಲಿ ಏನು ಬಿತ್ತುತ್ತೇವೆಯೋ ಅದೇ ಅಚ್ಚಳಿಯದೆ ಉಳಿಯುವ ಸಾಧ್ಯತೆಗಳು ಹೆಚ್ಚಿರುವುದರಿಂದ ತಂದೆ-ತಾಯಿ ಇಬ್ಬರೂ ಮುಖ್ಯ. ಮಕ್ಕಳು ತಂದೆಯನ್ನೇ ಆದರ್ಶವಾಗಿಟ್ಟುಕೊಳ್ಳುವುದಿದೆ. ಆದರೆ ಇಂದು ಹೆಚ್ಚುತ್ತಿರುವ ವಿಚ್ಛೇದನಗಳು ಮಗುವಿಗೆ ಮಾನಸಿಕ ಆಘಾತ ನೀಡಬಹುದು. ಅಪ್ಪನಿಂದ ದೂರವಿರುವುದರಿಂದ ಕೀಳರಿಮೆ ಮನೋಭಾವ ಬೆಳೆಸಿಕೊಳ್ಳಬಹುದು~ ಎನ್ನುತ್ತಾರೆ ಅವರು.

ನೋವು ಮರೆಯಲು...`ಪ್ರೀತಿ ಮಾಡುವ ಹಕ್ಕು ಇಬ್ಬರಿಗೂ ಸಮಾನವಾಗಿರಬೇಕು. ಅಮ್ಮನಂತೆ ಅಪ್ಪನಿಗೂ ಮಗುವಿನೊಂದಿಗೆ ಭಾವನಾತ್ಮಕ ಸಂಬಂಧ ಇರುತ್ತದೆ. ಅದು ಕಡಿದು ಹೋದಾಗ ಅವರು ಖಿನ್ನತೆಗೊಳಗಾಗುತ್ತಾರೆ. ವಾರಕ್ಕೆ ಮೂರು-ನಾಲ್ಕು ಮಂದಿ ಇಂತಹುದೇ ದೂರಿನೊಂದಿಗೆ ನಮ್ಮ ಬಳಿ ಬರುತ್ತಾರೆ. ಅವರಿಗೆ ಮಾನಸಿಕ ಸ್ಥೈರ್ಯ ನೀಡಿ ಮಕ್ಕಳೊಂದಿಗೆ ಒಂದಷ್ಟು ಸಮಯ ಕಳೆಯಲು ಅವಕಾಶ ಮಾಡಿಕೊಡುವುದು, ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸುವುದು ನಮ್ಮ ಕೆಲಸ~ ಎಂದು ವಿವರಿಸುತ್ತಾರೆ, ನೊಂದ ಅಪ್ಪಂದಿರ ಆಪ್ತ ಸಮಾಲೋಚಕ ಜೈರಾಜ್ ಪ್ರಕಾಶ್.ಕ್ರಿಸ್ಪ್‌ನಿಂದ ಇಂದು ಪ್ರತಿಭಟನೆ

ಚೈಲ್ಡ್ ರೈಟ್ಸ್ ಇನಿಷಿಯೇಟಿವ್‌ಫಾರ್ ಶೇರ್ಡ್ ಪೇರೆಂಟಿಗ್(ಕ್ರಿಸ್ಪ್) ಪೋಷಕರಿಂದ ಬೇರ್ಪಟ್ಟ ಮಕ್ಕಳ ಮೇಲಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ಸಲುವಾಗಿ ನಾಲ್ಕು ವರ್ಷಗಳ ಹಿಂದೆ ಜಾರಿಗೆ ಬಂದ ಸಂಸ್ಥೆ.ಕುಟುಂಬ ಸಂಸ್ಕೃತಿಯನ್ನು ಒಡೆದು ವಿಚ್ಛೇದನಗಳನ್ನು ಹೆಚ್ಚಿಸಿ ಮಕ್ಕಳನ್ನು ಅನಾಥರನ್ನಾಗಿಸುವ ಕಾಯ್ದೆಗೆ ತಿದ್ದುಪಡಿ ಮಾಡಿ ಸುಖಿಕುಟುಂಬ ವ್ಯವಸ್ಥೆ ಜಾರಿಗೆ ಬರುವಂತೆ ಮಾಡುವುದು ಸಂಸ್ಥೆಯ ಉದ್ದೇಶ. ಮಕ್ಕಳನ್ನು ಸಹಪೋಷಣೆಗೆ ಪ್ರೇರೇಪಿಸಿ ಸಮನಾದ ಹೊಣೆಗಾರಿಕೆ ನೀಡಬೇಕು, ದಾವೆ ಹೂಡಿದ ಆರು ತಿಂಗಳೊಳಗೆ ತೀರ್ಪು ದೊರೆಯುವಂತೆ ಮಾಡಬೇಕು, ಕಾನೂನು ದುರುಪಯೋಗಪಡಿಸಿಕೊಳ್ಳುವ ಪೋಷಕರನ್ನು ಶಿಕ್ಷಿಸಬೇಕು, ಇಂತಹ ಪ್ರಕರಣಗಳಿಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಿ ಆಪ್ತ ಸಮಾಲೋಚನೆಗೆ ಅವಕಾಶ ನೀಡಬೇಕು ಎಂಬುದು ಕ್ರಿಸ್ಪ್ ಬೇಡಿಕೆ. ಕೌಟುಂಬಿಕ ಕಾಯಿದೆಗೆ ತಿದ್ದುಪಡಿ ತರಬೇಕೆಂದು ಇಂದು (ಶನಿವಾರ) ಬೆಳಿಗ್ಗೆ 10ಕ್ಕೆ ಪುರಭವನದ ಎದುರು ಪ್ರತಿಭಟನೆಯನ್ನೂ ನಡೆಸಲಿದೆ. 

 ಜವಾಬ್ದಾರಿ ಹಂಚಿಕೊಳ್ಳಿ
ವಿಚ್ಛೇದನ ಪ್ರಕರಣಗಳಲ್ಲಿ ಮಗುವನ್ನು ಭೇಟಿಯಾಗಲು ತಾಯಿ ಬಿಡುತ್ತಿಲ್ಲ ಎಂದು ದೂರಿ ದಾಖಲಾಗುವ ಪ್ರಕರಣಗಳ ಸಂಖ್ಯೆಯೂ ಕಡಿಮೆಯೇನಿಲ್ಲ.ಮಗುವನ್ನು ಹಂಚಿಕೊಳ್ಳುವ ಬದಲು `ಶೇರ್ಡ್ ಕಾನ್ಸೆಪ್ಟ್~ಗೆ ಇಬ್ಬರೂ ಬದ್ಧರಾಗುವುದು ಉತ್ತಮ. ಪ್ರಕರಣ ದಾಖಲಾಗುವ ಸಂದರ್ಭದಲ್ಲೇ ಪತಿ ಪತ್ನಿ ಇಬ್ಬರೂ ಕಾರ್ಯಸಿಂಧು ಪರಿಹಾರ (ವರ್ಕೇಬಲ್ ಸೊಲ್ಯೂಷನ್) ತಯಾರು ಮಾಡಿ ಕೋರ್ಟ್‌ನ ಮುಂದಿಡುವುದು ಉತ್ತಮ. ಇದನ್ನು ಕೋರ್ಟ್ ಪರಿಶೀಲಿಸಿ ಮೂರನೇ ಸುಲಭ ಪರಿಹಾರ ನೀಡುವುದರಿಂದ ತಂದೆ ತಾಯಿಯರಿಬ್ಬಗೂ ಅನುಕೂಲ. ಮಕ್ಕಳ ಪಾಲನೆ ಬಗ್ಗೆ ನಮ್ಮ ಸಂವಿಧಾನದಲ್ಲಿ ಪ್ರತ್ಯೇಕ ಕಾನೂನು ಇಲ್ಲವಾದ್ದರಿಂದ ಯಾರು ಜವಾಬ್ದಾರಿ ಹೊರಬೇಕು ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

-ಸುಶೀಲಾ, ನ್ಯಾಯವಾದಿ
ತಂದೆಯಿಂದ ಬೇರ್ಪಟ್ಟ ಮಕ್ಕಳ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದ ಕೆಲವು ಅಂಶಗಳು:

* ತಂದೆ ಇಲ್ಲದ ಮಕ್ಕಳು ಐದು ಪಟ್ಟು ಹೆಚ್ಚು ಆತ್ಮಹತ್ಯೆಗೆ ಗುರಿಯಾಗುತ್ತಾರೆ.

* ಒಂಬತ್ತು ಪಟ್ಟು ಹೆಚ್ಚು ಮಕ್ಕಳು ಪ್ರೌಢ ಶಿಕ್ಷಣದಿಂದ ವಂಚಿತರಾಗುತ್ತಾರೆ.

* 14 ಪಟ್ಟು ಮಕ್ಕಳು ಅತ್ಯಾಚಾರಿಗಳಾಗುತ್ತಾರೆ.

* 20 ಪಟ್ಟು ಹೆಚ್ಚು ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಾರೆ ಹಾಗೂ 432 ಪಟ್ಟು ಹೆಚ್ಚು ಮಕ್ಕಳು ಮನೆಯಿಂದ ದೂರವಾಗಿ ಸಮಾಜಘಾತುಕ ವ್ಯಕ್ತಿಗಳಾಗುತ್ತಾರೆ.
ಇತಿಹಾಸ...

ಅಮ್ಮನಂತೆಯೇ ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಹೊತ್ತಿರುವ ಅಪ್ಪನನ್ನೂ ಗೌರವಿಸುವ ಉದ್ದೇಶದಿಂದ ಒಂದು ದಿನವನ್ನು ಅಪ್ಪಂದಿರಿಗೆ ಮೀಸಲಿಡುವಂತೆ ನಿರ್ಧರಿಸಲಾಯಿತು. ಅದು ಮುಂದುವರಿದು ಅಪ್ಪಂದಿರ ದಿನವಾಗಿ ಆಚರಣೆಗೆ ಬಂದಿತು.1910ರಲ್ಲಿ ಮೊದಲು ಅಪ್ಪಂದಿರ ದಿನ ಆಚರಣೆಯಾಗಿದ್ದು ವಾಷಿಂಗ್ಟನ್‌ನಲ್ಲಿ. ಜೂನ್ 5ರಂದು ತಂದೆ ವಿಲಿಯಂ ಜಾನ್ ಸ್ಮಾರ್ಟ್ ಹುಟ್ಟುಹಬ್ಬವಾಗಿದ್ದರೂ ತಯಾರಿಗೆ ಸಾಕಷ್ಟು ಸಮಯವಿಲ್ಲದ ಕಾರಣ ಮೂರನೇ ಭಾನುವಾರದಂದು ಮಗಳು ಸನೋರಾ ಸ್ಮಾರ್ಟ್ ಡೊಡ್ ಅಪ್ಪನ ದಿನ ಆಚರಿಸಿದಳು. ಅಂದಿನಿಂದ ಜೂನ್ ತಿಂಗಳ ಮೂರನೇ ಭಾನುವಾರವನ್ನು ಅಪ್ಪಂದಿರ ದಿನವನ್ನಾಗಿ ಆಚರಿಸುತ್ತಾ ಬರಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.