ಮಂಗಳವಾರ, ನವೆಂಬರ್ 19, 2019
27 °C
ನ್ಯಾಯಾಲಯದಲ್ಲಿ ಸಿಬಿಐ ಅಧಿಕಾರಿ ಹೇಳಿಕೆ

ಅಪ್ಪ-ಅಮ್ಮನಿಂದಲೇ ಆರುಷಿ ಕೊಲೆ

Published:
Updated:

ಗಾಜಿಯಾಬಾದ್ (ಪಿಟಿಐ): ಇಡೀ ರಾಷ್ಟ್ರದ ಗಮನ ಸೆಳೆದ ಆರುಷಿ ಕೊಲೆ ಪ್ರಕರಣದಲ್ಲಿ, ಬಾಲಕಿಯ ಪೋಷಕರೇ ಮಗಳ ಕೊಲೆ ಎಸಗಿದ್ದಾರೆ ಎಂದು ಸಿಬಿಐ ಮಂಗಳವಾರ ನ್ಯಾಯಾಲಯದಲ್ಲಿ ಹೇಳಿದೆ.ಕೊಲೆಯಾದ ರಾತ್ರಿ ಆರುಷಿ ನಿವಾಸವನ್ನು ಬೇರಾವುದೇ ವ್ಯಕ್ತಿ ಪ್ರವೇಶಿಸಿರುವ ಕುರುಹುಗಳಿಲ್ಲ. ಆರುಷಿಯ ತಂದೆ-ತಾಯಿಯರಾದ ರಾಜೇಶ್- ನೂಪುರ್ ತಲ್ವಾರ್ ದಂಪತಿಯೇ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ತನಿಖೆಯ ನೇತೃತ್ವ ವಹಿಸಿದ್ದ ಎ.ಜಿ.ಎಲ್.ಕೌಲ್ ಅವರು ಹೇಳಿದರು.ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ನ್ಯಾಯಾಧೀಶ ಎಸ್.ಲಾಲ್ ಅವರ ಮುಂದೆ ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿ ಅವರು ಈ ಹೇಳಿಕೆ ನೀಡಿದರು.2008ರ ಮೇ 15-16ರ ನಡು ರಾತ್ರಿ, ಆರುಷಿ ಮತ್ತು  ಮನೆಗೆಲಸಗಾರ ಹೇಮರಾಜ್ ಅವರ ಕೊಲೆ ನಡೆದ ಸಂದರ್ಭದಲ್ಲಿ ರಾಜೇಶ್- ನೂಪುರ್ ದಂಪತಿ ಮಾತ್ರ ಮನೆಯಲ್ಲಿದ್ದರು ಎಂದರು.ಹೇಮರಾಜ್ ಶವವನ್ನು ಮೇಲ್ಛಾವಣಿ ಮೇಲಕ್ಕೆ ಎಳೆದು ಹಾಕಿದ್ದು, ಅದನ್ನು ಕೂಲರ್‌ನ ಫೈಬರ್ ಶೀಟ್‌ಗಳಿಂದ ಮುಚ್ಚಿದ್ದು, ಆರುಷಿ ಮಲಗಿದ್ದ ಕೋಣೆಯನ್ನು ಹೊರಗಿನಿಂದ ಭದ್ರವಾಗಿ ಹಾಕಿದ್ದು, ಕೊಲೆ ನಡೆದ ಜಾಗವನ್ನು ಒಪ್ಪ ಓರಣವಾಗುವಂತೆ ಇರಿಸಿದ್ದು- ಹೀಗೆ ಹಲವು ಸುಳಿವುಗಳು ದುಷ್ಕೃತ್ಯವನ್ನು ಎಸಗಿದ್ದು ರಾಜೇಶ್-ನೂಪುರ್ ದಂಪತಿಯೇ ಎಂಬುದನ್ನು ಬೆಟ್ಟು ಮಾಡುತ್ತವೆ. ಆದರೆ ಇದನ್ನು ಪುಷ್ಟೀಕರಿಸಲು ಸಾಕಷ್ಟು ಸಾಕ್ಷ್ಯಗಳು ಸಿಗುತ್ತಿಲ್ಲ ಎಂದು ಅವರು ಹೇಳಿದರು.ಈ ಮುನ್ನ, ಕೌಲ್ ಅವರು 2010ರ ಡಿಸೆಂಬರ್‌ನಲ್ಲಿ ಪ್ರಕರಣ ಕುರಿತು ಪರಿಸಮಾಪ್ತಿ ವರದಿ ಸಲ್ಲಿಸಿದ್ದರು. ಪೋಷಕರೇ ಮಗಳ ಕೊಲೆ ಎಸಗಿದ್ದಾರೆ ಎಂಬುದನ್ನು ಪುಷ್ಟೀಕರಿಸಲು ಹಲವು ಸಾಂದರ್ಭಿಕ ಸಾಕ್ಷ್ಯಗಳು ಇದ್ದರೂ, ಅದನ್ನು ದೃಢಪಡಿಸುವಂತಹ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಅವರು ವರದಿಯಲ್ಲಿ ಹೇಳಿದ್ದರು. ಆದರೆ ಈ ಪರಿಸಮಾಪ್ತಿ ವರದಿಯನ್ನು ತಿರಸ್ಕರಿಸಿದ್ದ ನ್ಯಾಯಾಧೀಶರು, ತಲ್ವಾರ್ ದಂಪತಿಗೆ ವಿಚಾರಣೆ ಎದುರಿಸುವಂತೆ ನಿರ್ದೇಶಿಸಿದ್ದರು.

ಪ್ರತಿಕ್ರಿಯಿಸಿ (+)