ಶುಕ್ರವಾರ, ಏಪ್ರಿಲ್ 23, 2021
31 °C

ಅಪ್ಪ, ಅಮ್ಮ ಮತ್ತು ಬಾಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪ್ಪ, ಅಮ್ಮ ಮತ್ತು ಬಾಲ್ಯ

ನೆನಪು ಆತ್ಮ ಸೀಮಿತ ಮಾತ್ರವಲ್ಲ. ನಮ್ಮ ಪ್ರೀತಿಪಾತ್ರರು, ಸುತ್ತಲಿನವರು ಆಗಾಗ ಮೆಲುಕು ಹಾಕುವ ಅನುಭವಗಳೂ ಗೊತ್ತೇ ಆಗದಂತೆ ನಮ್ಮ ಭಾಗವಾಗಿ ಸೇರಿಕೊಂಡಿರುತ್ತವೆ. ಈವರೆಗೆ- ಸುಮಾರು 60 ವರ್ಷ- ನಾನು ಬರೆದದ್ದು ಹಲವು ಓದುಗರಿಗೆ ಖುಷಿಕೊಟ್ಟಿದೆ.ಈ ಖುಷಿಗಾಗಿ ನಾನು ಆಗಿಹೋದ ಕಾಲವನ್ನು ಅಪ್ರಾಮಾಣಿಕವಾಗಿ ಮರುಕಳಿಸಿಕೊಂಡಿಲ್ಲ, ನಿಜ. ಆದರೆ ಆ ಅನುಭವಗಳೇ ನನಗೆ ಆಗುತ್ತಿರುವಾಗ ನನ್ನ ಬಾಲ್ಯದಲ್ಲಿ ಪಟ್ಟ ಆತಂಕಗಳು, ಕಷ್ಟಗಳು ಈ ಕಥನದಲ್ಲಿ ಮಸುಕಾಗುತ್ತವೆ. ನಾನು ನನ್ನ ಕಥೆಗಳಲ್ಲಿ ಬರೆಯುವಾಗ ಹೀಗಾಗುವುದಿಲ್ಲ.ಆಗ ನಾನು ಕೇವಲ ನಾನಲ್ಲ. ಆದ್ದರಿಂದಲೇ, ವಿಪರ್ಯಾಸವೆಂದರೆ, ಸದ್ಯದ ಸತ್ಯವೂ ಮಾತಿನಲ್ಲಿ ಇರುತ್ತದೆ. ಜೀವನ ಚರಿತ್ರೆ ಬರೆಯುವಾಗ ಗೊತ್ತಿಲ್ಲದಂತೆಯೇ ಹೇಳಿಕೊಳ್ಳುವುದರಲ್ಲಿ, ಕೇಳುಗ ಎದುರಿಗಿದ್ದರಂತೂ ಕೇಳುಗನನ್ನು ರಂಜಿಸಿ ಒಲಿಸಿಕೊಳ್ಳುವ ಆಸೆ ಅಡಗಿರುತ್ತದೆ. ಯಾವಾಗಲೂ ಅಲ್ಲ, ಆದರೆ ಹೆಚ್ಚು ಪಾಲು.ಮತ್ತೆ ಹುಟ್ಟಿ ಬಂದು ನಿನ್ನ ಹಿಂದಿನ ಬಾಲ್ಯವನ್ನು ನೀನು ಬದುಕುತ್ತೀಯ ಎಂದು ವಿಧಿಯೇನಾದರೂ ನನಗೆ ಕೇಳಿದರೆ ನಾನೇನು ಹೇಳುತ್ತೇನೆ? ಗೊತ್ತಿಲ್ಲ. ಬೆಳೆಯುವುದರಲ್ಲಿ ಇರುವ ಬಾಧೆ ಸುಖದ್ದು ಖಂಡಿತ ಅಲ್ಲ; ಕೇವಲ ನೋವಿನದೂ ಅಲ್ಲ. ಅದು ಇದೆ-ಅಷ್ಟೇ. ಮನುಷ್ಯ ಮಾತ್ರರಾದ ನಮಗೆಲ್ಲರಿಗೂ ಇದೆ.

***

ನಮ್ಮ ಅಜ್ಜ ವೈದಿಕ ಬ್ರಾಹ್ಮಣ. ಅವರು ಅಂಗಿಯನ್ನೂ ಹಾಕುತ್ತಿರಲಿಲ್ಲ, ಬರೀ ಒಂದು ವಸ್ತ್ರ ಹೊದ್ದುಕೊಳ್ಳುತ್ತಿದ್ದರು. ನನ್ನ ಅಪ್ಪ ಲೌಕಿಕ ಬ್ರಾಹ್ಮಣರು. ಲೌಕಿಕ ಬ್ರಾಹ್ಮಣರು ಶುಭಾಶುಭ ಸಂದರ್ಭಗಳಿಗೆಲ್ಲಾ ಪುರೋಹಿತರೊಬ್ಬರನ್ನು ಕರೆಯಿಸಿಕೊಳ್ಳಬೇಕೇ ಹೊರತು ಅವರೇ ಪುರೋಹಿತರಲ್ಲ. ಲೌಕಿಕ ಬ್ರಾಹ್ಮಣರಾಗಿದ್ದ ಅಪ್ಪ ಕ್ರಾಪ್ ಮಾಡಿಸಿಕೊಂಡಿದ್ದರು.ಇದೆಂಥಾ ಕ್ರಾಪ್ ಅಂದರೆ ಇದರ ಮರೆಯಲ್ಲೇ ಒಂದು ಸಣ್ಣ ಜುಟ್ಟೂ ಇರುತ್ತಿತ್ತು. ನಾನು ನನ್ನ ಅಪ್ಪನ ಬೆಳವಣಿಗೆಯನ್ನು ನೋಡುವುದು ಈ ಕ್ರಾಪು ಜುಟ್ಟುಗಳ ಸಂಕೇತದಲ್ಲಿ. ಒಮ್ಮಮ್ಮೆ ಜುಟ್ಟು ದೊಡ್ಡದಾಗುತ್ತಿತ್ತು. ಒಮ್ಮಮ್ಮೆ ಕ್ರಾಪು ದೊಡ್ಡದಾಗುತ್ತಿತ್ತು. ಅವರ ಆಲೋಚನಾ ಕ್ರಮದ ಬದಲಾವಣೆಗಳು ಈ ಜುಟ್ಟು-ಕ್ರಾಪುಗಳಲ್ಲಿ ಯಾವುದು ದೊಡ್ಡದಾಗುತ್ತಿದೆ ಎಂಬುದರಲ್ಲಿ ಗೊತ್ತಾಗುತ್ತಿತ್ತು.ಅಪ್ಪನಲ್ಲೂ ಒಂದು ಎಣ್ಣೆ ಹಚ್ಚಿ ಬಾಚಿಕೊಂಡ ತೋರುವ ಕ್ರಾಪು, ಹಾಗೇ ಮುಚ್ಚಿಟ್ಟುಕೊಂಡ `ಪುಳಿ ಜುಟ್ಟು~ ಇತ್ತು. ಆದರೆ ಅಜ್ಜನಿಗೆ ಗಂಟು ಹಾಕಿ ಕಟ್ಟುವ ಹೆಗಲಮೇಲೆ ಇಳಿಬಿಡುವಷ್ಟು ಉದ್ದದ ಜುಟ್ಟು ಮಾತ್ರ ಇತ್ತು.

ಅಪ್ಪ ತಮ್ಮ ಕಾಲಕ್ಕೆ ಬಹಳ ಆಧುನಿಕರಾಗಿದ್ದವರು.ನಾನು ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತಿದ್ದ ಹೊತ್ತಿನಲ್ಲೇ ಅವರೂ ಆ ವಿಚಾರಗಳಿಗೆ ತಮ್ಮನ್ನು ಮುಕ್ತವಾಗಿಟ್ಟುಕೊಂಡಿದ್ದರು. ಸ್ವಾಧ್ಯಾಯಿಯಾಗಿ ಓದಿಕೊಳ್ಳುತ್ತಲೇ ಅವರು ಗಾಂಧಿವಾದಿಯಾದವರು. ಆದರೆ ಆಸ್ತಿಯ ಹಕ್ಕು ಮುಂತಾದುವುಗಳಿಗೆ ಸಂಬಂಧಿಸಿದಂತೆ ಮಾತ್ರ ಅಪ್ಪನದ್ದು ಆ ಕಾಲದ ಶಾನುಭೋಗರ ನಿಲುವೇ ಇತ್ತು. ಅಪ್ಪನಿಗೆ ರಾಜಗೋಪಾಲಾಚಾರಿ ಎಂದರೆ ಬಹಳ ಇಷ್ಟ.ಅವರು ಬಹಳ ಬುದ್ಧಿವಂತರು, ಗಾಂಧೀಜಿಗೆ ಬೀಗರಾಗಿದ್ದವರು, ಅಂತರ್‌ಜಾತೀಯ ವಿವಾಹವನ್ನು ಮಾಡಿದ್ದವರು- ಹೀಗೆ ರಾಜಗೋಪಾಲಾಚಾರಿಯವರನ್ನು ಇಷ್ಟಪಡಲು ಅಪ್ಪನಿಗೆ ಇಂತಹ ಹಲವು ಕಾರಣಗಳಿದ್ದವು. ಜತೆಗೆ ಅಪ್ಪನಿಗೂ ಅವರ ಹೆಸರೇ ಇತ್ತು. ರಾಜಗೋಪಾಲಾಚಾರಿಯವರು ತಳೆದಿದ್ದ ಸಂಪ್ರದಾಯ ವಿರೋಧಿ ನಿಲುವುಗಳಿಗೂ ವೇದದಲ್ಲಿ ಪುರಾವೆಯಿದೆ ಎಂದು ತೋರಿಸಿಕೊಡಲು ಅಪ್ಪ ಸದಾ ಮುಂದಾಗುತ್ತಿದ್ದರು.ಅಪ್ಪನಿಗೆ ಸಂಸ್ಕೃತ ಎಂದರೆ ಬಹಳ ಪ್ರೀತಿ. ಆಧುನಿಕವಾದ ಎಲ್ಲವಕ್ಕೂ ಅದರಲ್ಲೊಂದು ಪುರಾವೆಯಿದೆ ಎಂಬ ನಂಬಿಕೆಯೂ ಜತೆಗಿತ್ತು. ಹಾಗೆಯೇ ಇಂಗ್ಲಿಷ್ ಎಂದರೂ ಪ್ರೀತಿ, ಇಂಗ್ಲಿಷ್ ಜನರ ಮೇಲೂ ಅವರಿಗೆ ಪ್ರೀತಿ, ಜತೆಗೆ ಗಾಂಧೀಜಿ ಎಂದರೆ ಇಷ್ಟ. ಆಸ್ತಿ ಹಕ್ಕು ಹೋಗಬಾರದೆಂದು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದರು.ಇದನ್ನು ಕಾನೂನಿನ ಪುಸ್ತಕಗಳಲ್ಲಿ ಹುಡುಕಿ ಸಾಬೀತು ಮಾಡುವುದು ಅವರ ಗಂಭೀರ ಹವ್ಯಾಸಗಳಲ್ಲಿ ಒಂದು. ಈ ಕೆಲಸವನ್ನು ಅವರೆಷ್ಟು ಗಂಭೀರವಾಗಿ ಮಾಡುತ್ತಿದ್ದರೆಂದರೆ ಶಿವಮೊಗ್ಗದಲ್ಲಿ ಆ ಕಾಲದಲಿದ್ದ ಎಲ್ಲಾ ಒಳ್ಳೆಯ ವಕೀಲರಷ್ಟೇ ಅವರೂ ಆಸ್ತಿ ಹಕ್ಕಿನ ಬಗ್ಗೆ ತಿಳಿದುಕೊಂಡಿದ್ದರು. ಈ ಕಾರಣದಿಂದಾಗಿಯೇ ಎಲ್ಲಾ ಜಮೀನ್ದಾರರೂ ನಮ್ಮ ಮನೆಗೆ ಬಂದು ಅಪ್ಪನ ಹತ್ತಿರ ಕಾನೂನು ಸಲಹೆ ಪಡೆಯುತ್ತಿದ್ದರು.ಅಪ್ಪನಲ್ಲಿದ್ದ ಭಾರತೀಯ ಸಂವಿಧಾನದ ಪ್ರತೀ ಹಾಳೆಯ ಬದಿಯಲ್ಲೂ ಅವರು ಬರೆದ ಅಭಿಪ್ರಾಯಗಳಿವೆ.ನಾನೊಬ್ಬ ಗಣಿತಜ್ಞನಾಗಬೇಕೆಂಬ ಆಸೆ ಅಪ್ಪನಿಗಿತ್ತು. ಅವರ ಈ ಆಸೆಗೆ ಒಂದು ಕಾರಣವಿತ್ತು. ಅಪ್ಪನಿಗೆ ಇದ್ದ ಹುಚ್ಚುಗಳಲ್ಲಿ ಮುಖ್ಯವಾದುದು ಆಕಾಶದ ಹುಚ್ಚು. ರಾತ್ರಿ ಅಂಗಳದಲ್ಲಿ ಅಂಗಾತ ಮಲಗಿ ನಕ್ಷತ್ರಗಳ ಸಂಚಾರವನ್ನು ಗುರುತಿಸುವುದಕ್ಕೆ ಪ್ರಯತ್ನಿಸುತ್ತಿದ್ದರು.ಮೊದಲಿಗೆ ಪಂಚಾಂಗವನ್ನೇ ಆಧಾರವಾಗಿಟ್ಟುಕೊಂಡು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಅವರು ಕೊನೆಕೊನೆಗೆ ಪಂಚಾಂಗ ಗಣಿತವನ್ನೇ ಕಲಿತು ತಾವೇ ಪಂಚಾಂಗ ರಚನೆಗೆ ಸಿದ್ಧರಾಗಿದ್ದರು. ಪಂಚಾಂಗದಲ್ಲಿ ಒದಗಿಸಲಾಗುವ ಗ್ರಹಣದ ದಿನಾಂಕಕ್ಕೂ ನಿಜವಾದ ಗ್ರಹಣದ ದಿನಕ್ಕೂ ಇರುವ ವ್ಯತ್ಯಾಸ ಅವರನ್ನು ಬಹಳ ಕಾಡಿತ್ತು. ಅವರ ತಲೆಯಲ್ಲಿ ಸದಾ ಎರಡು ಪಂಚಾಂಗಗಳಿರುತ್ತಿದ್ದವು.ಒಂದು ವೈಜ್ಞಾನಿಕ ಪಂಚಾಂಗವಾದರೆ ಮತ್ತೊಂದು ಸಾಂಪ್ರದಾಯಿಕ ಪಂಚಾಂಗ.

ಅಪ್ಪ ಇಂಗ್ಲಿಷ್‌ನಲ್ಲೇ ಸಹಿ ಮಾಡುತ್ತಿದ್ದರು. ಅವರಿಗೆ ಸಂಖ್ಯಾಶಾಸ್ತ್ರದಲ್ಲಿ ಬಹಳ ನಂಬಿಕೆ. ಯಾವ ಅಕ್ಷರಕ್ಕೆ ಎಷ್ಟು ಮೌಲ್ಯ ಎಂದು ಲೆಕ್ಕ ಹಾಕಿ ಹೆಸರನ್ನು `ಯು.ಪಿ.ರಾಜಗೋಪಾಲಾಚಾರ್~ ಎಂದು ಬರೆಯುತ್ತಿದ್ದರೇ ಹೊರತು ರಾಜಗೋಪಾಲಾಚಾರ್ಯ ಎಂದು ಬರೆಯುತ್ತಿರಲಿಲ್ಲ.ಅವರು ನ್ಯೂಮರಾಲಜಿಯ ಮೂಲಕ ತಮ್ಮ ಹೆಸರಿನಲ್ಲೇ ಆಂಗ್ಲೀಕರಣಗೊಂಡಿದ್ದರು! ಸಂಪ್ರದಾಯದಂತೆ ನನ್ನ ಹೆಸರು ಅನಂತಮೂರ್ತಿ ಆಚಾರ್ಯ ಆಗಬೇಕಾಗಿತ್ತು. ಆದರೆ ಅಪ್ಪನೇ ಆಚಾರ್ಯ ಬೇಡ ಎಂದು ತೀರ್ಮಾನಿಸಿ ನನ್ನ ಹೆಸರನ್ನು ಅನಂತಮೂರ್ತಿ ಎಂದು ಇಟ್ಟಿದ್ದರು. ಅಪ್ಪ ಹೀಗೆ ಸದಾ ಹೊಸತಾದುದಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದರು.ಅಪ್ಪನಿಗೆ ವೈಜ್ಞಾನಿಕತೆ ಮತ್ತು ಗ್ರಹಗತಿಯಲ್ಲಿ ಸಮಾನವಾದ ಆಸಕ್ತಿ ಮತ್ತು ನಂಬಿಕೆ ಹೇಗಿತ್ತು ಎನ್ನುವುದಕ್ಕೆ ಒಂದು ಘಟನೆ ಹೇಳುತ್ತೇನೆ. ಅವರು ಸಾಯುವ ಕೆಲವು ದಿನಗಳ ಮೊದಲಷ್ಟೆ ನಾನು ಇಂಗ್ಲೆಂಡ್‌ನಿಂದ ವಾಪಸಾಗಿದ್ದೆ. ಬಂದವನೆ ಅಪ್ಪನನ್ನು ನೋಡೋಣ ಎಂದು ನನ್ನ ಹೆಂಡತಿ ಎಸ್ತರ್‌ಳನ್ನೂ ಕರೆದುಕೊಂಡು ಊರಿಗೆ ಹೋದೆ.ಪಾರ್ಶ್ವವಾಯು ಆಗಿ ಅವರು ಮಲಗಿಬಿಟ್ಟಿದ್ದರು. ನನ್ನನ್ನು ಕಂಡವರೇ ತಮ್ಮ ದೈಹಿಕ ನೋವುಗಳ ಬಗ್ಗೆ ಹೇಳಿದರು. ಈ ಮಾತುಗಳು ಮುಗಿಯುತ್ತಿದ್ದಂತೇ ಅವರು `ಜಯಪ್ರಕಾಶ್ ನಾರಾಯಣ್ ಏನು ಹೇಳಿದ್ದಾರೆ ಗೊತ್ತಾ?~ ಎಂದು ರಾಜಕಾರಣದ ಬಗ್ಗೆ ಮಾತು ಆರಂಭಿಸಿದರು. ಅವರ ಪಕ್ಕದಲ್ಲಿ ಎರಡು ಪುಸ್ತಕಗಳಿದ್ದವು, ಒಂದು ಪೆಂಗ್ವಿನ್ ಪ್ರಕಾಶನದ Human body and its ailments (ಹ್ಯೂಮನ್ ಬಾಡಿ ಅಂಡ್ ಇಟ್ಸ್ ಏಲ್‌ಮೆಂಟ್ಸ್) ಎನ್ನುವ ಪುಸ್ತಕ, ಇನ್ನೊಂದು ಪಂಚಾಂಗ.ಆ ಪಂಚಾಂಗ ತೆಗೆದು ತನಗಿವತ್ತು ಯಾವ ದೋಷ ಇದೆ ಎಂದು ದಿನವೂ ಅಪ್ಪ ನೋಡಿಕೊಳ್ಳುತ್ತಿದ್ದರು, ಇಂಗ್ಲಿಷ್ ಪುಸ್ತಕ ತೆಗೆದು ಕಾಲು ಹೀಗಾಗುತ್ತಿದೆಯಲ್ಲ ಇದಕ್ಕೆ ಕಾರಣ ಏನು ಎಂದು ನೋಡುತ್ತಿದ್ದರು. ಪಂಚಾಂಗ ನೋಡಿ ತನ್ನ ಮೃತ್ಯುವಿಗೆ ಇದು ಒಳ್ಳೆಯ ನಕ್ಷತ್ರವೋ ಅಲ್ಲವೋ ಎಂದು ತಿಳಿದುಕೊಳ್ಳುತ್ತಿದ್ದರು. ನಾನು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇನೆ ಎಂದಾಗ ಅವರು `ನನಗೆ ಕೆಲವು ದಿನಗಳಲ್ಲಿ ಮೃತ್ಯುಯೋಗವಿದೆ.ಅದು ಮುಗಿದ ಮೇಲೆ ಕರೆದುಕೊಂಡು ಹೋಗು. ನನಗೆ ಆಸ್ಪತ್ರೆಯಲ್ಲಿ ಸಾಯುವುದಕ್ಕೆ ಇಷ್ಟವಿಲ್ಲ~ ಎಂದಿದ್ದರು. ಸಾವಿನ ಸಾಮಿಪ್ಯದಲ್ಲೂ ನನ್ನ ಹತ್ತಿರ ಅವರು ತುಂಬ ವಿಷಯಗಳನ್ನು ಚರ್ಚೆಮಾಡುತ್ತಿದ್ದರು. ಬದುಕಿನ ಕೊನೆಗಾಲದಲ್ಲಿ ಅವರಿಗೆ ಲೋಹಿಯಾ ತುಂಬ ಇಷ್ಟ ಆಗಿದ್ದರು.ಅಪ್ಪ ತೀರಿಹೋದ ಗಳಿಗೆ ನನಗೆ ಚೆನ್ನಾಗಿ ನೆನಪಿದೆ. ಅವರಿಗೆ ಮೆತ್ತಗಿರಬೇಕು ಎಂದು ನನ್ನ ತಂಗಿ ಕುಮಾರಿ ಸೊಗಸಾದ ಹತ್ತಿ ಹಾಸಿಗೆಯನ್ನು ಹೊಲೆಸಿ ಕೊಟ್ಟಿದ್ದಳು. ಅಲ್ಲಿವರೆಗೆ ನಮ್ಮ ಮನೆಯಲ್ಲಿದ್ದವೆಲ್ಲ ಗಂಟುಗಂಟಾದ ಹಾಸಿಗೆಗಳೆ. ಅಟ್ಟದ ಮೇಲೆ ಒಂದು ಬೆಕ್ಕು ಮರಿ ಹಾಕಿತ್ತು. ಅದು ಏನೋ ಕಿರಿಕಿರಿ ಮಾಡಿಕೊಂಡು ಮರಿ ಜೊತೆಗೆ ಜಗಳ ಆಡುತ್ತಿತ್ತು.ನನ್ನ ತಮ್ಮ ಗುರುರಾಜ ಅಟ್ಟಕ್ಕೆ ಹತ್ತಿ ಅದನ್ನು ಬಿಡಿಸಲು ಯತ್ನಿಸಿದ. ಆಗ ಅಪ್ಪ `ಆ ಬೆಕ್ಕಿಗ್ಯಾಕೋ ತೊಂದರೆ ಕೊಡ್ತಿಯ, ಇರಲಿ ಬಿಡು~ ಎಂದ ಕೆಲಹೊತ್ತಿನಲ್ಲಿ ಪ್ರಾಣ ಬಿಟ್ಟರು. ಅಪ್ಪ ತೀರಿ ಹೋದ ಕೆಲದಿನಗಳ ನಂತರದಲ್ಲಿ ನಾನು ಯಾವಾಗಲೋ ಒಮ್ಮಮ್ಮೆ ಬರೆದಿಟ್ಟುಕೊಂಡ ದಿನಚರಿ ಪುಸ್ತಕದಲ್ಲಿ ಗುರುತು ಮಾಡಿಕೊಂಡಿದ್ದ ಮಾತುಗಳು ಇವು:`ಅಪ್ಪನ ತೆರೆದುಕೊಂಡಿದ್ದ ಬಾಯಿಂದ ಸಡಿಲವಾಗಿ ಹೊರಬಂದ ಕೃತಕ ಹಲ್ಲುಗಳನ್ನು ಕಳಚಿಟ್ಟೆ. ಅಮ್ಮ ಚೀರಿದಳು, ತಲೆ ಚಚ್ಚಿಕೊಂಡಳು, ಬಾವಿಗೆ ಹಾರಲು ಓಡಿದಳು. ನೆಲದ ಮೇಲೆ ಮಲಗಿಸಿ, ತುದಿಬುಡಗಳಲ್ಲಿ ಕಾಯಿಹೋಳುಗಳಲ್ಲಿ ದೀಪ ಹತ್ತಿಸಿ, ಪುರೋಹಿತರಿಗಾಗಿ ಕಾದೆವು. ಅಳುತ್ತಿದ್ದ ಅಮ್ಮ ನಾನು ಜನಿವಾರ ಹಾಕಿಕೊಂಡಿದ್ದೇನೋ ಇಲ್ಲವೋ ಎಂದು ಗುಟ್ಟಾಗಿ ಅಕ್ಕಯ್ಯನನ್ನು ಕೇಳಿದಳಂತೆ. ಪುರೋಹಿತರು ಬರುವ ಮುಂಚೆ ನಾನು ಬಚ್ಚಲಿಗೆ ಹೋಗಿ ಯಾರೋ ಒಬ್ಬರ ಹಳೆಯ ಜನಿವಾರವನ್ನು ಹಾಕಿಕೊಂಡೆ.ಅಕ್ಕಯ್ಯ ಗುಟ್ಟಾಗಿ ನನ್ನನ್ನು ಕೊಟ್ಟಿಗೆಗೆ ಕರೆದು `ಜನಿವಾರ ಇದೆಯೇನೋ ಅನಂತು?~ ಎಂದು ಕೇಳಿದ್ದು, ನಾನು `ಇಲ್ಲ~ ಅಂದ ಮೇಲೆ ಮನೆಯಿಂದ ಹೊಸ ಜನಿವಾರ ತಂದು ಅದನ್ನು ಮಣ್ಣಲ್ಲಿ ಅದ್ದಿ ಒರೆಸಿ ಹಿಂಡಿ ನಾನು ಹಾಕಿಕೊಂಡದ್ದು, ಆದರೆ ನಾನು ಅಪ್ಪನ ಸಂಸ್ಕಾರ ಮಾಡುವುದೆಂದು ತಿಳಿದು ನಮ್ಮ ಕುಲಪುರೋಹಿತರು ಬರಲಿಲ್ಲ. ಇನ್ನೊಬ್ಬರನ್ನು ನನ್ನ ಅಮ್ಮ ಅವರ ಸಮಯಪ್ರಜ್ಞೆಯಿಂದ ಕರೆಸಿದರು.ಅಪ್ಪನಿಗೆ ಒಬ್ಬ ವೇಶ್ಯೆಯ ಜೊತೆಗೆ ಸಂಬಂಧ ಇತ್ತು ಎನ್ನುವುದು ಅವರು ಇಟ್ಟುಕೊಂಡಿದ್ದ ಒಂದು ನೋಟ್ ಬುಕ್ಕಿನಿಂದ ಅವರ ಸಾವಿನ ನಂತರ ನನಗೆ ಗೊತ್ತಾಯಿತು. ಆಕೆಗೆ ಅವರು ಆಗೀಗ ಖರ್ಚಿಗೆ ದುಡ್ಡು ಕೊಡುತ್ತಿದ್ದಿರಬಹುದು, ಆ ಬುಕ್ಕಿನಲ್ಲಿ ಅಲ್ಲ್ಲ್ಲಲಿ ಇದನ್ನು ಗುರುತು ಹಾಕಿದ್ದಾರೆ. ಈ ವಿಷಯವನ್ನು ನಾನು ನನ್ನ ಯಾವ ತಮ್ಮಂದಿರ ಜೊತೆಗೂ ಚರ್ಚೆ ಮಾಡಲು ಹೋಗಲಿಲ್ಲ, ತಾಯಿಯ ಬಳಿಯೂ ಹೇಳಲಿಲ್ಲ.ಆದರೆ ಇದು ಅಮ್ಮನಿಗೆ ಹೇಗೋ ಅರಿವಾಗಿದ್ದಿರಬೇಕು. ನನಗೆ ಸಿಕ್ಕ ಆ ಪುಸ್ತಕದಲ್ಲಿ `ಇಂದು ಹೋಗಿದ್ದೆ, ಇಷ್ಟು ಹಣ ಕೊಟ್ಟೆ~ ಎಂದು ಬರೆದಿದ್ದಾರೆ. ನನ್ನಪ್ಪನಿಗೆ ಸಾಯುವಾಗ ಸುಮಾರು ಮೂರುವರೆಸಾವಿರ ರೂಪಾಯಿಗಳಷ್ಟು ಸಾಲವಿತ್ತು. ನಾನು ಮನೆಗೆ ಹೋಗಿದ್ದಾಗ `ಅನಂತು ನೋಡಪ್ಪ ಒಂದು ಮೂರುವರೆ ಸಾವಿರದಷ್ಟು ಸಾಲ ಉಳಿದಿದೆ, ಅದನ್ನ ತೀರಿಸಬೇಕಲ್ಲಪ್ಪ~ ಅಂದರು.ನಾನು ಆಗ ಕೆಲವು ದಿನಗಳ ಹಿಂದಷ್ಟೆ ಇಂಗ್ಲೆಂಡ್‌ನಿಂದ ಬಂದಿದ್ದೆ, ನನ್ನ ಸಂಬಳವೇನು ಜಾಸ್ತಿ ಇರಲಿಲ್ಲ. ತಾನು ಯಾರ ಯಾರ ಹತ್ತಿರ ಸಾಲ ಮಾಡಿದ್ದೇನೆ ಅಂತ ಅಪ್ಪ ಹೇಳಿದರು, ಸ್ವಲ್ಪ ಸ್ವಲ್ಪವೆ ಹಣವನ್ನು ಕೂಡಿ ಹಾಕಿ ನಾನು ಮತ್ತು ನನ್ನ ತಮ್ಮ ಗುರುರಾಜ ಆ ಸಾಲವನ್ನು ತೀರಿಸಿದೆವು.ಅಪ್ಪನಿಗೊಂದು ಸ್ವಂತದ ಸಾಹಿತ್ಯ ಲೋಕವಿತ್ತು. ಇದರಲ್ಲಿ ಗೋಲ್ಡ್‌ಸ್ಮಿತ್ ಮಹಾ ಲೇಖಕನೇ ಹೊರತು ಷೇಕ್ಸ್‌ಪಿಯರ್ ಅಲ್ಲ. ಗೋಲ್ಡ್‌ಸ್ಮಿತ್ ಬರೆದ `ವಿಕಾರ್ ಆಫ್ ವೇಕ್‌ಫೀಲ್ಡ್~ ಅವರ ದೃಷ್ಟಿಯಲ್ಲಿ ಮಹತ್ಕೃತಿ. ಬಹುಶಃ ಒಂದು ಕಾಲಘಟ್ಟದಲ್ಲಿ ಬಹಳಷ್ಟು ಮಂದಿ ಹೀಗೆಯೇ ಚಿಂತಿಸುತ್ತಿದ್ದರು ಎನಿಸುತ್ತದೆ. ಕುವೆಂಪು ಅವರಿಗೂ ಷೇಕ್ಸ್‌ಪಿಯರ್‌ಗಿಂತ ವರ್ಡ್ಸ್‌ವರ್ತ್ ಮಹತ್ವದ ಕವಿ.ಏಕೆಂದರೆ ಅವರ ದೃಷ್ಟಿಯಲ್ಲಿ ವರ್ಡ್ಸ್‌ವರ್ತ್ ದಾರ್ಶನಿಕ ಕವಿಯಾಗಿದ್ದರೆ ಷೇಕ್ಸ್‌ಪಿಯರ್ ಕೇವಲ ಸಂತೆಯ ಕವಿ. ಅಪ್ಪ ಇಂಗ್ಲಿಷನ್ನು ತಾವೇ ಓದಿ ಕಲಿತವರು. ಇಂಗ್ಲಿಷ್ ಕುರಿತ ಅವರ ಆಸಕ್ತಿಗಳೂ ಕೂಡಾ ಕುತೂಹಲ ಹುಟ್ಟಿಸುವಂಥವು. ಅವರಿಗೆ ಪೀರಿಯಾಡಿಕ್ ವಾಕ್ಯಗಳೆಂದರೆ ಇಷ್ಟ. ಪೀರಿಯಾಡಿಕ್ ವಾಕ್ಯಗಳು ಇಡೀ ಪುಟವನ್ನೂ ವ್ಯಾಪಿಸಿಕೊಂಡಿರಬಹುದು.ಡಾಕ್ಟರ್ ಜಾನ್ಸನ್‌ನ ಇಂಗ್ಲಿಷ್ ಹೀಗೇ ಇರುತ್ತಿತ್ತು. ಗೋಲ್ಡ್‌ಸ್ಮಿತ್, ಎಡ್ಮಂಡ್ ಬರ್ಕ್ ಇಂಗ್ಲಿಷ್ ಕೂಡಾ ಇದೇ ಬಗೆಯದ್ದು. ಬರ್ಕ್‌ನ ಭಾಷಣವೊಂದನ್ನು ಅಪ್ಪ ನನಗೆ ಬಾಯಿಪಾಠ ಮಾಡಿಸಿದ್ದರು. ಎಡ್ಮಂಡ್ ಬರ್ಕ್‌ಗೆ ಭಾರತದ ಇತಿಹಾಸದಲ್ಲೂ ಒಂದು ಸ್ಥಾನವಿದೆ. ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸನ ಮೇಲಿದ್ದ ಆರೋಪಗಳ ಕುರಿತು ಇಂಗ್ಲೆಂಡ್‌ನ ಸಂಸತ್ತು ಒಂದು ವಿಚಾರಣೆ ನಡೆಸಿತು.ಬ್ರಿಟಿಷ್ ಆಧಿಪತ್ಯವನ್ನು ಸ್ಥಾಪಿಸುವುದಕ್ಕೆ ವಾರನ್ ಹೇಸ್ಟಿಂಗ್ಸ್ ಬಳಸಿದ ತಂತ್ರಗಳು ಮತ್ತು ಭ್ರಷ್ಟ ವಿಧಾನಗಳಿಗೆ ಸಂಬಂಧಿಸಿದ ಆರೋಪಗಳಿವೆ. ಇವನಿಗೂ ಮೊದಲಿದ್ದ ರಾಬರ್ಟ್ ಕ್ಲೈವ್ ಹಲವು ಕ್ರೂರ ಮತ್ತು ಭ್ರಷ್ಟ ವಿಧಾನಗಳನ್ನು ಬಳಸಿದ್ದ. ಆದರೆ ಈತನ ಕೃತ್ಯಗಳನ್ನು ಅದೇಕೋ ಬ್ರಿಟಿಷ್ ಪಾರ್ಲಿಮೆಂಟ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ವಾರನ್ ಹೇಸ್ಟಿಂಗ್ಸ್‌ಗೆ ಅಂಥ ಅದೃಷ್ಟವಿರಲಿಲ್ಲ.ಆ ಕಾಲದ ಪ್ರಮುಖ ರಾಜಕೀಯ ಸಿದ್ಧಾಂತಿ ಹಾಗೂ ಭಾಷಣಕಾರ ಎಡ್ಮಂಡ್ ಬರ್ಕ್ ಕಣ್ಣಿಗೆ ವಾರನ್ ಹೇಸ್ಟಿಂಗ್ಸ್ ಭ್ರಷ್ಟನಾಗಿ ಕಂಡಿದ್ದ. ಆತ ವಾರನ್ ಹೇಸ್ಟಿಂಗ್ಸ್‌ಗೆ ಛೀಮಾರಿ ಹಾಕಬೇಕೆಂದು ವಾದಿಸಿದ.ಇಂಗ್ಲೆಂಡ್ ಅಂದರೆ ಅಪ್ಪನಿಗೆ ಬಹಳ ಗೌರವ. ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದವನನ್ನೇ ಶಿಕ್ಷಿಸಲು ಅವರು ಹಿಂದೆಗೆಯಲಿಲ್ಲ ಎಂಬುದು ಅವರಿಗೆ ಇಂಗ್ಲೆಂಡ್‌ನ ಮೇಲಿದ್ದ ಗೌರವವನ್ನು ಮತ್ತಷ್ಟು ಹೆಚ್ಚಿಸಿತ್ತು. ಅಪ್ಪನ ಇಂಗ್ಲಿಷ್ ಕಲಿಕೆ ಕೂಡಾ ಬಾಯಿಪಾಠಾಧಾರಿತವಾಗಿತ್ತು. ಹಾಗಾಗಿ ನನಗೆ ಈ ಭಾಷಣವನ್ನು ಬಾಯಿಪಾಠ ಮಾಡು ಎಂದು ಒತ್ತಾಯಿಸುತ್ತಿದ್ದರು.ನಾನು ಎಸ್.ಎಸ್.ಎಲ್.ಸಿ ಮುಗಿಸುವ ಮೊದಲೇ ಎಡ್ಮಂಡ್ ಬರ್ಕ್ ಭಾಷಣವನ್ನು ಬಾಯಿಪಾಠ ಮಾಡಿದ್ದೆ. ನನಗೆ ಉಪನಯನ ಆದ ಮೇಲೆ `ಪುರುಷಸೂಕ್ತ~ವನ್ನು ಬಾಯಿಪಾಠ ಮಾಡುವುದಕ್ಕೆ ಇದ್ದ ಒತ್ತಡಕ್ಕಿಂತಲೂ ಹೆಚ್ಚಿನ ಒತ್ತಡವನ್ನು ಅಪ್ಪ ಎಡ್ಮಂಡ್ ಬರ್ಕ್ ಭಾಷಣವನ್ನು ಬಾಯಿಪಾಠ ಮಾಡಲು ಹೇರಿದ್ದರು. ಇಂಗ್ಲಿಷ್ ಉಚ್ಚಾರಣೆಯ ಬಗೆಗೆ ಏನೂ ತಿಳಿಯದ ನಾನು ಎಡ್ಮಂಡ್ ಬರ್ಕ್ ಭಾಷಣವನ್ನೂ `ಪುರುಷಸೂಕ್ತ~ದ ಶ್ಲೋಕಗಳ ಧಾಟಿಯಲ್ಲೇ ಹೇಳುತ್ತಿದ್ದೆ.ಅಷ್ಟೆಲ್ಲಾ ಇಂಗ್ಲಿಷ್ ಗೊತ್ತಿದ್ದರೂ ಅಪ್ಪನಿಗೆ ಇಂಗ್ಲಿಷ್ ಉಚ್ಚಾರಣೆಯ ಕುರಿತು ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಅವರ ಬರವಣಿಗೆಯನ್ನು ನೋಡಿದರೆ ಅವರಿಗೆ ಉಚ್ಚಾರಣೆಯ ಬಗ್ಗೆ ಏನು ತಿಳಿದಿರಲಾರದೆಂದು ಯಾರೂ ಭಾವಿಸುವಂತೆ ಇರಲಿಲ್ಲ. ಅವರ ವಾಕ್ಯಗಳೆಲ್ಲವೂ ವಿಶ್ಲೇಷಣೆಗೆ ಒಳಪಡಿಸುವಂಥವು. ಈಗಲೂ ಇಂಗ್ಲಿಷ್ ಕಲಿಯುವ ವಿದ್ಯಾರ್ಥಿಗಳು ಹೀಗೆ ವಾಕ್ಯಗಳನ್ನು ವಿಶ್ಲೇಷಿಸುತ್ತಾರೆ.ಒಂದು ವಾಕ್ಯದಲ್ಲಿರುವ noun clause, adverbial ಮತ್ತು noun clause, adverbial ಗಳನ್ನು ತೋರಿಸಿಕೊಡುವ ಕೆಲಸವಿದು. ನಮಗೆಲ್ಲಾ noun clause ಗೂ noun clause ಗಳಿಗೆ ವ್ಯತ್ಯಾಸ ತಿಳಿಯದೆ ಒದ್ದಾಡುತ್ತಿದ್ದುದೂ ಉಂಟು. noun clauseಅದನ್ನು ಪ್ರತ್ಯೇಕವಾಗಿ ವಿವರಿಸಬೇಕಿತ್ತು. ಇವನ್ನೆಲ್ಲಾ ಹೇಗೆ ಗುರುತಿಸುವುದೆಂದು ಅಪ್ಪ ಹೇಳಿಕೊಡುತ್ತಿದ್ದರು.ಅಪ್ಪನ ಮನಸ್ಸು ಹೇಗೆ ಕೆಲಸ ಮಾಡುತ್ತಿತ್ತು ಎನ್ನುವುದಕ್ಕೆ ಹೇಳುತ್ತೇನೆ: ಒಮ್ಮೆ ನನ್ನ ಗೆಳೆಯ ಶಾಂತವೇರಿ ಗೋಪಾಲಗೌಡನಿಗೂ ಅಪ್ಪನಿಗೂ ಒಂದು ಚರ್ಚೆ ಆಯಿತು. ಅಪ್ಪ ಹೇಳಿದರು, `ಗೌಡ್ರೆ ಈ ವಿಧವೆಯರಿಗೆ ಊಟಕ್ಕೆ ಗತಿಯಿರೋಲ್ಲ, ಅವರಿಗೆ ಅಂತ ಸ್ವಲ್ಪ ಜಮೀನಿರುತ್ತೆ. ಅವರದನ್ನು ಬಿಟ್ಟು ಇನ್ಯಾರದೋ ಮನೆಯಲ್ಲಿರ‌್ತಾರೆ, ಜಮೀನಿಂದ ಇಂತಿಷ್ಟು ಅಂತ ಗೇಣಿ ಬರುತ್ತಿರುತ್ತೆ.ಆ ಗೇಣಿ ಬರೋದೂ ನಿಂತು ಬಿಟ್ರೆ ಆ ವಿಧವೆಯ ಪಾಡೇನು ಹೇಳಿ.~ ಅದಕ್ಕೆ ಗೋಪಾಲ `ಆಚಾರ್ಯರೆ, ಈ ಜಗತ್ತಿನಲ್ಲಿ ಎರಡು ಥರದ ಜನ ಇರ‌್ತಾರೆ, ಒಂದು, ದಡ ಹತ್ತಿದವರು, ಮತ್ತೊಬ್ಬರು, ದಡ ಹತ್ತದೆ ಇರುವವರು. ನಿಮ್ಮ ವಿಧವೆಯರು ಕೂಡ ದಡ ಹತ್ತಿದವರು~. ಅಪ್ಪ ಈ ಮಾತು ಕೇಳಿ `ಹೌದಲ್ಲ!?~ ಅಂದರು.`ಆದರೆ ನಾನು ಮಾಡುವ ರಾಜಕೀಯ ದಡ ಹತ್ತಿದವರ ಬಗ್ಗೆ ಅಲ್ಲ, ಇನ್ನೂ ದಡ ಹತ್ತದೇ ಇರುವವರ ಬಗ್ಗೆ~ ಎಂದ ಗೋಪಾಲ. ಈ ಚರ್ಚೆಯನ್ನು ನಾನು ಮರೆಯಲು ಸಾಧ್ಯವೇ ಇಲ್ಲ.ಗಟ್ಟಿ ಧೋರಣೆಗಳನ್ನು ಹೊಂದಿದ್ದ ಮನುಷ್ಯ ಅಪ್ಪ. ಅವರ ಅಭಿಪ್ರಾಯಗಳ ವಿರುದ್ಧ ಮಾತನಾಡಿದರೆ ಅವರಿಂದ ಏಟು ತಿನ್ನಬೇಕಾಗುತ್ತಿತ್ತು. ರಷ್ಯಾದ ಝಾರ್‌ಗಳ ವಿಷಯಕ್ಕೆ ಸಂಬಂಧಿಸಿದಂತೆ ವಾದಿಸಿದ್ದಕ್ಕೆ ಅವರೊಮ್ಮೆ ನನಗೆ ಹೊಡೆದಿದ್ದರು. ಇದು ನಾನು ಚಿಕ್ಕವಾಗಿದ್ದಾಗಲೇನೂ ಅಲ್ಲ. ನನಗೆ ಗೋಪಾಲಗೌಡರಂಥವರೆಲ್ಲಾ ಗೆಳೆಯರಾದ ಮೇಲೆ ನಡೆದ ಘಟನೆ.ಆಗ ನನಗೆ ಶಂಕರನಾರಾಯಣ ಎಂಬ ಒಬ್ಬ ಗೆಳೆಯನಿದ್ದ. ನಾವು ಶಿವಮೊಗ್ಗದಲ್ಲಿದ್ದೆವು, ಆ ದಿನಗಳಲ್ಲಿ ಶಂಕರನಾರಾಯಣಭಟ್ಟ, ಗೋಪಾಲಗೌಡ ನಮ್ಮ ಮನೆಯಲ್ಲಿ ಊಟಕ್ಕೆ ಸೇರುತ್ತಿದ್ದುದು ಸಾಮಾನ್ಯ. ಒಂದು ದಿನ ನಾವೆಲ್ಲಾ ಒಟ್ಟಿಗೆ ಊಟಕ್ಕೆ ಕುಳಿತಿದ್ದೆವು. ಅಪ್ಪ ಕೂಡಾ ನಮ್ಮ ಜತೆಗೇ ಊಟಕ್ಕೆ ಕುಳಿತಿದ್ದರು. ಮಾತಿನ ಮಧ್ಯೆ ಅದು ಹೇಗೋ ರಷ್ಯಾದ ವಿಷಯ ಬಂತು.`ರಷ್ಯಾದಲ್ಲಿ ಕ್ರಾಂತಿಯಾಗಿದ್ದು ಘೋರ ಅಪರಾಧ~ ಎಂದು ಅಪ್ಪ ವಾದಿಸುತ್ತಿದ್ದರು. ನಾನು `ಇದು ಹಾಗಲ್ಲ ಅಪ್ಪಯ್ಯ. ಅಲ್ಲಿ ಬಹಳ ನೀಚರಾಗಿದ್ದ ಝಾರ್ ದೊರೆಗಳಿದ್ದರು. ಅವರ ಆಡಳಿತದಿಂದಾಗಿ ಬೇಸತ್ತ ಜನ ಕ್ರಾಂತಿಯನ್ನು ಮಾಡಿದರು~ ಎಂದು ನಾನು ಓದಿದ ಪಾಠವನ್ನು ಅವರಿಗೆ ಒಪ್ಪಿಸಿದೆ. ಆದರೆ ಅವರು ರಷ್ಯಾದಲ್ಲಿ ಕ್ರಾಂತಿಯಾದದ್ದು ಸರಿಯಲ್ಲ ಎಂಬ ವಾದವನ್ನು ಮುಂದುವರಿಸಿದರು.ನಾನೂ ಅಷ್ಟೇ, ಕಲಿತದ್ದನ್ನೆಲ್ಲಾ ನೆನಪಿಸಿಕೊಂಡು ರಷ್ಯಾದ ಕ್ರಾಂತಿ ಸರಿ ಎಂಬ ವಾದವನ್ನು ಬೆಳೆಸುತ್ತಾ ಹೋದೆ. ವಾದ ಬೆಳೆಯುತ್ತಾ ಹೋದಂತೆ ಅಪ್ಪನಿಗೆ ತಾನು ಸೋಲುತ್ತೇನೆ ಅನ್ನಿಸತೊಡಗಿತೇನೋ. ಅವರು ತಮ್ಮ ಎಂಜಲು ಕೈಯಲ್ಲಿ ನನ್ನ ಕಪಾಳಕ್ಕೆ ಹೊಡೆದು `ರಷ್ಯಾದಲ್ಲಿ ಕ್ರಾಂತಿಯಾದದ್ದು ತಪ್ಪು~ ಎಂದರು.`ಎಂಜಲು ಕೈಯಲ್ಲಿ ನನಗೆ ಹೊಡೆದರೆ ಅಲ್ಲಿ ಕ್ರಾಂತಿಯಾದದ್ದು ಸರಿಯೋ ತಪ್ಪೋ ಎಂಬುದು ನಿರ್ಧಾರವಾಗುವುದಿಲ್ಲ~ ಎಂದೆ ನಾನು. ಇದನ್ನು ಕೇಳಿ ಅಲ್ಲಿದ್ದವರೆಲ್ಲಾ ನಕ್ಕು ಬಿಟ್ಟರು. ಅಪ್ಪನಿಗೆ ಬಹಳ ನಾಚಿಕೆಯಾಯಿತು. ಇದಾದ ಮೇಲೆ ಅವರು ಯಾವ್ಯಾವುದೋ ಚರಿತ್ರೆಯ ಪುಸ್ತಕಗಳನ್ನು ತಂದು ಓದಿ ರಷ್ಯಾದ ಕ್ರಾಂತಿಯ ಬಗ್ಗೆ ಇನ್ನಷ್ಟು ತಿಳಿದುಕೊಂಡರು. ಒಂದು ದಿನ ಅವರು ಎಲ್ಲರ ಎದುರಿಗೇ `ನೀನು ಅವತ್ತು ಹೇಳಿದ್ದು ಕರೆಕ್ಟ್, ಅಲ್ಲಿ ಕ್ರಾಂತಿಯಾಗಬೇಕಿದ್ದು ಸಹಜವೇ ಆಗಿತ್ತು~ ಎಂದು ಒಪ್ಪಿಕೊಂಡರು.ಇಂತಹ ಚರ್ಚೆಗಳು ನಮ್ಮ ಮನೆಯಲ್ಲಿ ಬರಿಯ ಚರ್ಚೆಯಾಗಿ ಉಳಿಯದೆ ಬದುಕಿನ ಭಾಗವಾಗಿದ್ದವು. ಅದಕ್ಕೆ ಒಂದು ಘಟನೆ ಹೇಳುತ್ತೇನೆ, ಗೋಪಾಲ ಬಹಳ ಕಾಲವನ್ನು ನಮ್ಮ ಮನೆಯಲ್ಲೆ ಕಳೆಯುತ್ತಿದ್ದ, ಊಟ ಮಾಡುತ್ತಿದ್ದ. ಆರಂಭದಿಂದಲೂ ಅವನು ಉಂಡ ಎಲೆಯನ್ನು ನಾನು ತೆಗೆಯುತ್ತಿದ್ದೆ, ಅಮ್ಮ ತೆಗೆಯುವ ಹಾಗಿರಲಿಲ್ಲ. ಸ್ವಲ್ಪ ದಿನಗಳ ನಂತರದಲ್ಲಿ ಒಂದು ದಿನ ನಾನು ಎಲೆ ತೆಗೆಯಲು ಹೋದಾಗ ಅಮ್ಮ `ಬಿಡೋ ಅನಂತು ನಾನು ತೆಗಿತಿನಿ~ ಅಂದರು.`ಅಮ್ಮ ನೀನು ತೆಗೆಯೋ ಹಾಗಿಲ್ಲಬಿಡು ನಾನೇ ತೆಗಿತೀನಿ~ ಅಂದೆ, `ಯೇ ಬಿಡೋ ಯಾರೂ ನೋಡಲ್ಲ ನಾನೇ ಹೊರಗೆ ಹಾಕ್ತಿನಿ~ ಎಂದು ಅಮ್ಮ ಅಂದದ್ದನ್ನು ನಾನು ಮರೆಯಲಾರೆ. ಅಂದಿನಿಂದ ಅಮ್ಮನೇ ಅವನ ಎಲೆ ಎತ್ತುತ್ತಿದ್ದರು. ಅಮ್ಮನಲ್ಲಿ ಕ್ರಮೇಣ ಶೂದ್ರ-ಬ್ರಾಹ್ಮಣ ಬೇಧಭಾವ ಕಳೆದುಹೋಯಿತು.ನಾವಾಗ ಬೇಗವಳ್ಳಿಯಲ್ಲಿದ್ದೆವು. ಬೇಗವಳ್ಳಿ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಅಪ್ಪ ಆಗಿನ್ನೂ ಶಾನುಭೋಗರಾಗಿಯೇ ಇದ್ದರು. ಅವರಿಗೆ ಗ್ಯಾಡ್ಜೆಟ್‌ಗಳ ಮೇಲೆ ಬಹಳ ಪ್ರೀತಿ. ಅಪ್ಪನ ಬಳಿ ಅನೇಕ ಗ್ಯಾಡ್ಜೆಟ್‌ಗಳು ಇದ್ದವು. ಒಂದು ದಿನ ಅವರೊಂದು ಪೆನ್ ತಂದರು. ಅದನ್ನು ನೋಡಿದ ನನಗೆ ಬಹಳ ಇಷ್ಟವಾಗಿಬಿಟ್ಟಿತು.ನಾನು `ಅಪ್ಪಯ್ಯ ಇದು ಎಂಥಾ ಪೆನ್ನು~ ಎಂದೆ. ಅದಕ್ಕವರು `ಇದು ಉತ್ತರಮುಖಿ ಪೆನ್ನು~ ಅಂದರು. `ಉತ್ತರಮುಖಿ ಪೆನ್ನು?~ ಅಂದರೆ ಪೆನ್ನಿನ ಕ್ಯಾಪಿನ ಮೇಲೆ ಒಂದು ಸಣ್ಣ ಗಾಜಿನ ಕವಚದೊಳಗೆ ಒಂದು ಮ್ಯಾಗ್ನೆಟ್ ಇರುತ್ತಿತ್ತು.ಪೆನ್ನನ್ನು ಹೇಗೆ ತಿರುಗಿಸಿದರೂ ಈ ಮ್ಯಾಗ್ನೆಟ್ ಮಾತ್ರ ಉತ್ತರ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತಿತ್ತು-ಅಂದರೆ ಪೆನ್ನಿನಲ್ಲೊಂದು ಕಂಪಾಸ್ ಅಥವಾ ದಿಕ್ಸೂಚಿ ಇತ್ತು. ಈ ಪೆನ್ನು ನನಗೆ ಬೇಕು ಎಂದು ಅನಿಸಿ ಭಯದಲ್ಲೇ ಅಪ್ಪನನ್ನು ಕೇಳಿದೆ. `ನೀನಿನ್ನೂ ಬಳಪದಲ್ಲಿ ಬರೆಯುವುದಕ್ಕೇ ಕಲಿತಿಲ್ಲ. ನಿನಗೆ ಪೆನ್ ಯಾಕೆ?~ ಎಂದು ಗದರಿಸಿದರು. (ಮುಂದುವರೆಯುವುದು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.